Wednesday, December 28, 2022

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ

ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು 3ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು  ಡಿಸೆಂಬರ್ 31 ರಂದು ಕೈಗೊಳ್ಳಲಿದೆ.  

ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಎತ್ತಿನಗುಡ್ಡ, ಅಗ್ರಿ ಯೂನಿರ್ವಸಿಟಿ ಕ್ಯಾಂಪಸ್, ಕುಮಾರೇಶ್ವರ ನಗರ, ಸೈದಾಪೂರ, ಬೆಳಗಾವಿ ಮೇನ್ ರೋಡ್, ನಾರಾಯಣಪುರ, ಸಿ.ಐ.ಟಿ.ಬಿ, ಕೆ.ಹೆಚ್.ಬಿ ಕಾಲೋನಿ, ಸಂಪಿಗೆ ನಗರ, ತಾವರಗೇರಿ ಹಾಸ್ಪಿಟಲ್, ಸನ್ಮತಿ ನಗರ, ಜಿ.ಟಿ.ಸಿ ಕ್ಯಾಂಪಸ್, ಮೆಹಬೂಬ ನಗರ, ಹಶ್ಮಿ ನಗರ, ಮಾಳಾಪುರ, ಏರಟೆಕ್, ಜಯಲಕ್ಷ್ಮೀ ಇಂಡಸ್ಟ್ರಿಸ್, ಬಸವ ಕಾಲೋನಿ, ಪವರ್ ಗ್ರಿಡ್, ಪೆಪ್ಸಿ, ಕಿಲ್ಲಾ, ಸಾಧುನವರ ಎಸ್ಟೆಟ್, ನರೇಂದ್ರ, ಮಮ್ಮಿಗಟ್ಟಿ, ಚಿಕ್ಕಮಲ್ಲಿಗವಾಡ, ಹಿರೇಮಲ್ಲಿಗವಾಡ, ಶಿರಡಿನಗರ, ತಾಜನಗರ, ಬಿ.ಎಸ್.ಕೆ ಲೇಔಟ, ಮಾಳಾಪುರ ಲಾಸ್ಟ್ ಬಸ್ಟಾಪ್, ರಾಜನಗರ, ತಮದಂಡಿ ಪ್ಲಾಟ್, ಹರಿಜನಕೇರಿ, ಎಪಿಎಂಸಿ, ಫೈರ ಸ್ಟೇಶನ್, ರಾಮನಗೌಡಾ ಹಾಸ್ಪಿಟಲ್, ದುರ್ಗಾದೇವಿ ದೇವಸ್ಥಾನ, ಮರಾಠ ಕಾಲೋನಿ, ಕೊಪ್ಪದಕೇರಿ, ಗುಲಗಂಜಿಕೊಪ್ಪ, ಎಂ.ಬಿ ನಗರ, ಸಿವಿಲ್ ಹಾಸ್ಪಿಟಲ್, ನಿತಿನ್ ನಗರ ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.


Thursday, January 28, 2021

ಹಸಿರು ಟಾವೇಲ್ ಅಕ್ಕಿ ಗಂಟು ಮತ್ತು ಪೊಲೀಸ್ ಏಟು



ಇವತ್ತು ನಮ್ಮ ದೇಶದಲ್ಲಿ ರೈತ ಹೋರಾಟ ತೀವ್ರ ಚರ್ಚೆಗೆ ಬಂದಿದೆ. ಹೋರಾಟದ ಹಾದಿಯಲ್ಲಿ ಹಿಂಸಾಚಾರಗಳು ಶುರುವಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಒಂದು ಕಾಲಕ್ಕೆ ರೈತ ಹೋರಾಟ ಜೋರಾಗಿಯೇ ಇತ್ತು. ಅಂದು ಕೂಡ ಹೋರಾಟ ಹಿಂಸಾ ರೂಪ ಪಡೆದಿದ್ದು, ಇದೆ. ಆದರೆ ಆಗೆಲ್ಲ ರೈತರೇ ಹೆಚ್ಚು ಏಟು ತಿಂದಿದ್ದು ಜಾಸ್ತಿ, ನಂಜುಡಸ್ವಾಮಿಯವರ ಮಾತು ಎಂದರೆ ಆಗೆಲ್ಲ ರೈತರ ಹೋರಾಟಕ್ಕೆ ವೇದ ವಾಕ್ಯ ಆಗುತ್ತಿತ್ತು. ವಿಷಯ ಒತ್ತೆಟ್ಟಿಗಿರಲಿ.. ಅಂದಿನ ಒಂದು ಘಟನೆ ಇಲ್ಲಿದೆ ನೋಡಿ.. ಇದು ಮುಂದೆ ಬರಬೇಕಿರೋ ನನ್ನ ಪುಸ್ತಕದ ಒಂದು ಭಾಗ...

ಸರ್ಕಾರದಿಂದ ಬಂದಿದ್ದ ರೇಷನ್ ಅಕ್ಕಿ ಪಾರಿಶ್ವಾಡ ಸಂತ್ಯಾಗ ಮಾರಿ ಮಕ್ಕಳಿಗೆ ನೋಟ್‍ಬುಕ್ ಕೊಡಿಸಿದ್ದ ಕಸ್ತೂರೆವ್ವನಿಗೆ ಮನ್ಯಾಗ್ ಇರೋ ಅಕ್ಕಿ ತೀರಾಕ ಬಂದಾವ್ ಅನ್ನೋದು ಖಬರಿಗೆ ಬಂದಿರೇ ಇಲ್ಲ. ಇನ್ನ ಏನ್ ಮಾಡ್ಲಿ ಅನ್ನೋ ಚಿಂತ್ಯಾಗ್ ಇದ್ದಾಗಲೇ ಎಂ.ಕೆ. ಹುಬ್ಬಳಿ ಬಳಿಗಾರ ದೇವರಂಗ ಬಂದ ಸುದ್ದಿ ಹೇಳಿದ್ದ. ಅದು ಕಸ್ತೂರೆವ್ವನ ತವರು ಮನೆ ಕರೆಯಾಗಿತ್ತು. ಕಸ್ತೂರೆವ್ವನ ಅವ್ವ, ಅಕ್ಕಿ ಮಾಡಿಸೇವಿ ಬಂದ ತಗೊಂಡ ಹೋಗು ಎಂದು ಹೇಳಿ ಕಳುಹಿಸಿದ್ದಳು. ಇತ್ತ ಮನೆಯಲ್ಲಿ ಅಕ್ಕಿ ತೀರಿದ್ದು ನೋಡಿ ತನ್ನ ಮಕ್ಕಳ ಹೊಟ್ಟಿ ಗತಿ ಏನು ಎಂದು ಚಿಂತೆ ಮಾಡುತ್ತಿದ್ದಾಗಲೆ, ಅತ್ತ ಇವರವ್ವ ಮಗಳ ಬಗ್ಗೆ ಚಿಂತೆ ಮಾಡಿ ಸಹಾಯದ ಸಂದೇಶ ಕಳುಹಿಸಿದ್ದಳು. 

ಈ ಕೂಡಲೇ ಪಕ್ಕದಲ್ಲೆ ಇರುವ ತವರಿಗೆ ಹೋಗಿ ಕಸ್ತೂರೆವ್ವ ಅಕ್ಕಿ ತರಬೇಕು ಅಂತಾ ಮುಂದಾಗಿಯೇ ಬಿಟ್ಟಳು. ಏಕೆಂದರೆ ಅತ್ತ ಹಮಾಲಿ ಮಾಡಾಕ್ ಹೋಗಿದ್ದ ಗಂಡ ಇವತ್ತ್ ಬರ್ತಾನೋ ಇಲ್ವೋ ಅನ್ನೋ ನಿಕ್ಕಿ ಇಲ್ಲ. ಮಕ್ಕಳನ್ನ ಏನ್ ಮಾಡ್ಲಿ ಅಂತಾ ಚಿಂತಿ ಹತ್ತಿದಾಗ ಅಕೀಗೆ ಹೊಳೆದಿದ್ದು ಕಮ್ಮಾರ ಸಾಲಿ. ಕಮ್ಮಾರ ಸಾಲ್ಯಾಗ್ ಹುಡುಗೋರನ್ ಬಿಟ್ಟ್ಟು ಕಮ್ಮಾರ ನಾಗಪ್ಪಗ ತಿದಿ ಊದಾಕ ಸಹಾಯ ಆಗ್ತಾರ ನಾ ಬರೋ ಮಟಾ ಇಲ್ಲೇ ಇಟಕೋ ಅಂತಾ ಹೇಳೀ ಬೀರ ಬೀರನೆ ನಡೆದ ಕಸ್ತೂರೆವ್ವ ಹಳ್ಳ ದಾಟಿ ತನ್ನ ತವರು ಸೇರೋ ಹೊತ್ತಿಗೆ ಸಂಜೀ ಐದಾಗಿತ್ತು..

ತವರು ಮನೆ ಸೇರಿ ತಾಯಿನ ಭೇಟಿಯಾದ್ಳು. ಆದ್ರ್ ಅಕ್ಕಿ ಕೊಡಾಕ್ ಒಂದೇ ಒಂದ ಚೀಲ ಆ ಕ್ಷಣಕ್ಕೆ ಕೈಗೆ ಸಿಗಲಿಲ್ಲ. ಕಸ್ತೂರೆವ್ವಗೆ ಭಾಳ ಅಕ್ಕಿನೂ ಬೇಕಾಗಿರಲಿಲ್ಲ. ವಾರಕ್ಕಾಗೋವಷ್ಟ ಸಿಕ್ರ ಸಾಕಿತ್ತು. ಅದು ಕೂಡ ಮೂರ ಮಕ್ಕಳ ಹೊಟ್ಟಿಗೆ. ಆಗ ಅವರವ್ವಗ ಕಂಡಿದ್ದು ತನ್ನ ಹಿರಿಮಗನ ಹಸಿರು ಟಾವೆಲ್. ಅದೇನ್ ಸಣ್ಣ ಟಾವೆಲ್ಲ? ಹಾಸಿಕೊಂಡೂ ಮಲಗಬಹುದು. ಹೊದ್ದು ಮಲಗಬಹುದು. ಮೊದಲೆಲ್ಲ ರೈತರು ಅಂತಹ ಟಾವೆಲ್‍ಗಳನ್ನೆ ಬಳಸುತ್ತಿದ್ದರು. ಅದೇ ಟಾವೆಲ್‍ದಲ್ಲಿ ಅಕ್ಕಿ ಗಂಟು ಕಟ್ಟಿಕೊಂಡ ಕಸ್ತೂರೆವ್ವ ಬಂದ ವೇಗದಲ್ಲೇ ಹಳ್ಳದ ದಂಡಿ ಹಿಡಿದು ಹೊಂಟ್ಳು. ಹಳ್ಳ ಏರಿ ಆಚೇ ದಡ ಹತ್ತಿ ಕಲ್ಮೇಶ್ವರ ಗುಡಿಯ ಕೆರೆಯ ಏರಿಯಿಂದ ಇನ್ನೆನ್ನು ರಸ್ತೆ ಕೂಡಬೇಕಿತ್ತು ಆಗ ಬರ್ರನೇ ಬಂತೊಂದು ಪೊಲೀಸ್ಪೆ ಜೀಪು. ಸುಮ್ಮನೆ ಹೊರಟಿದ್ದ ಅದರಲ್ಲಿನ ಪೊಲೀಸ್ ಒಬ್ಬನಿಗೆ  ಹಸಿರು ಟಾವೆಲ್ ಕಂಡಿದ್ದೆ ತಡ, "ನಿಲ್ಲಿಸ್ರೋ ಇಲ್ಲೊಬ್ರ ಅದಾರ್" ಎನ್ನುವ ಪೇದೆ ಮಾತು ಇನ್ನು ಮುಗಿದಿರಲೇ ಇಲ್ಲ. ಜೀಪ್ ನಿಂತೆ ಬಿಟ್ಟಿತ್ತು. ಜೀಪ್ ಇಳಿದು ಬಂದ ಪೊಲೀಸರು ಕಸ್ತೂರೆವ್ವನನ್ನು ಏನೆಂದರೆ ಏನು ಕೇಳಲಿಲ್ಲ. ಮೊದಲ ರಫಾ.. ರಫಾ.. ಹೊಡೆದ್ರು. ಕಳ್ಳ ರೈತರಿಗೆ ಅಕ್ಕಿ ಕೊಡಾಕ್ ಹೊಂಟಿ. ನೀನು ರೈತ ಸಂಘದಾಕೀನ್ ಅದೀ ಏನು? ನಮ್ಮ ಗಾಡಿಗೋಳಗೆ ಬೆಂಕಿ ಹಚ್ಚತೀರೇನ್.. ಅಂತಾ ಹೊಡೆದು ಕೈಯೊಳಗಿನ ಹಸಿರು ಟಾವೆಲ್ದೊಳಗಿನ ಅಕ್ಕಿ ಗಂಟು ಕಸಕೊಂಡ ಬಿಟ್ರು. ಇಲ್ರಿ ನನ್ನ ತವರು ಮನಿಂದ ಅಕ್ಕಿ ತರಾತೇನ್ ಅಂತ ಒದರಿ ಒದರಿ ಹೇಳಿದ್ರು. ಅದನ್ನ ಕೇಳಿಸಿಕೊಳ್ಳೋ ವ್ಯವಧಾನ ಆ ಪೊಲೀಸರಿಗೆ ಇರಲೇ ಇಲ್ಲ. ಹಸಿರು ಟಾವೆಲ್‍ನಲ್ಲಿನ ಅಕ್ಕಿ ಗಂಟಿನ ಸಮೇತ ಕಸ್ತೂರೆವ್ವನನ್ನು ಠಾಣೆಗೆ ಕರೆದುಕೊಂಡೇ ಹೋದರು. ಇತ್ತ ಕಮ್ಮಾರ ನಾಗಪ್ಪನ ಜೊತೆ ಕುಳಿತಿದ್ದ ಕಸ್ತೂರೆವ್ವನ ಮಕ್ಕಳು ಅವ್ವನಿಗಾಗಿ ಕಾದು ಕಾದು ಅಲ್ಲೇ ಸೋತು ಹೋಗಿದ್ದವು. ಆಗ ಈ ಮೂರು ಮಕ್ಕಳಿಗೆ ಇನ್ನೊಬ್ಬ ಕಸ್ತೂರೆವ್ವ ಅಂದ್ರೆ ಕಮ್ಮಾರ ಕಸ್ತೂರೆವ್ವ ಆ ದಿನ ತಾಯಿಯಾಗಿದ್ದಳು. ಹೌದು, ತನ್ನ ಮಕ್ಕಳ ಜೊತೆಗೆ ರೊಟ್ಟಿ ತಿನಿಸಿ ಮಲಗಿಸಿದ್ದಳು. ಅತ್ತ ಆ ಕಸ್ತೂರೆವ್ವ ಠಾಣೆಯಿಂದ ಮರುದಿನ ಬಿಡುಗಡೆಯಾಗಿ ಬಂದಳು. ಇಷ್ಟೆಲ್ಲ ಆದ್ರೂ ಅತ್ತ ಹಿರೇಬಾಗೇವಾಡಿ ಹೈವೇದಾಗ ರೈತರು ಹೋರಾಟ ಮಾಡಿದ ಬಳಿಕ ಭುಗಿಲೆದಿದ್ದ ಕಿಚ್ಚಿನ ಹೋರಾಟ ಮಾತ್ರ ನಿಲ್ಲಲೇ ಇಲ್ಲ. ಅಂದಿನ ಆ ರೈತ ಹೋರಾಟದ ದಿನಗಳಲ್ಲಿ ಇದೇ ರೀತಿ ಅದೇಷ್ಟೋ ತಾಯಂದಿರು, ಅದೆಷ್ಟೋ ಅಮಾಯಕ ರೈತರು ಪೊಲೀಸರ ಲಾಠಿ ಏಟು, ಬೂಟಿನ ಏಟು ತಿಂದಿದ್ದಕ್ಕೆ ಲೆಕ್ಕವೇ ಇಲ್ಲ. ಇನ್ನು ಆಗ ಹೋರಾಟದ ಕಿಚ್ಚು ಸಹ ಹಾಗೆಯೇ ಇತ್ತು. ರೈತರು ಜೀವ ಕೊಡುವುದಕ್ಕೂ ಹಿಂಜರಿಯುತ್ತಿರಲಿಲ್ಲ. ಅಂತಹ ಸಂದರ್ಭದಲ್ಲೇ ನಡೆದ ಒಂದು ಘಟನೆಯನ್ನು ಆಧರಿಸಿ ಒಂದಷ್ಟು ಕಲ್ಪನೆ ಸೇರಿಸಿ ಬರೆದ ಪ್ರಸಂಗ ಇದು.




Monday, August 24, 2020

ಅಂದಿನ ಪ್ರಸಾದ ಇಂದಿನ ವಿಷಾದ...

ನಾನು ಸುಳ್ಳುಗಾರ ಒಪ್ಪಿಕೊಳ್ಳುತ್ತೇನೆ; ಆಗಾಗ ಸುಳ್ಳು ಹೇಳುವ ರೂಢಿ ಇದ್ದೇ ಇದೆ. ಆದರೆ ಮಾಟ-ಮಂತ್ರ-ತಾಯತದ ಮಾಟಗಾರನಂತೂ ಅಲ್ಲವೇ ಅಲ್ಲ. ಅದೂ ಒಂದು ಹೆಣ್ಣು ಒಲಿಸಿಕೊಳ್ಳುವುದಕ್ಕೆ ಛೇ... ವಿಚಾರ ಮಾಡುವುದಕ್ಕೂ ಆಗದಂತಹ ಮಾತು. 

ಆದರೆ...ಆದರೆ... ಅಂದು ಅವಳ ಬಾಯಿಂದ ಆ ಮಾತು ಏಕೆ ಬಂತೋ! ಇಂದಿಗೂ ಗೊತ್ತಿಲ್ಲ. ಆ ಬಳಿಕ ಎಷ್ಟೋ ಸಲ ಸಿಕ್ಕರೂ ಅವಳು ಹೇಳಲೇ ಇಲ್ಲ. ಆದರೆ ಅಂದು ಕೊಟ್ಟ ಪ್ರಸಾದವನ್ನೂ ಕೈಯಲ್ಲಿ ತೆಗೆದುಕೊಂಡು ಕೆಲವೇ ಕ್ಷಣಗಳಲ್ಲಿ ಆಕೆ  ಮಲಪ್ರಭೆಗೆ ಎಸೆದು ಬಿಟ್ಟಿದ್ದಳು. ಯಾಕೆ??? ಇಂದಿಗೂ ಉತ್ತರ ಗೊತ್ತಿಲ್ಲ? ಕೇಳುವ ಗೊಡವೆಗೂ ನಾ ಹೋಗಿಲ್ಲ.

ಅಂದು ಆ ದಿನ:

ಅಂದು ನಾನು ಪುಣ್ಯ ಕ್ಷೇತ್ರಗಳ ದರ್ಶನ ಮಾಡಿಕೊಂಡು ಬಂದಿದ್ದೆ. ಎಲ್ಲ ಸ್ನೇಹಿತರಿಗೂ ಪ್ರಸಾದ ಕೊಡುತ್ತಿದ್ದೆ. ನನ್ನ ಸ್ನೇಹಿತೆ ಅಲ್ವಾ ಎಂದುಕೊಂಡು  ಅವಳಿಗೂ ಪ್ರಸಾದ ಕೊಡುವಂತೆ ಮನದಿಂಗಿಂತ ಚಟಪಡಿಸಿತ್ತು. ಆಗಲೇ ಅವಳ ಮನೆಯ ಟೆಲಿಫೋನ್​ಗೆ ಕ್ವಾಯಿ ಬಾಕ್ಸ್​ದಿಂದ ಫೋನಾಯಿಸಿ -ಮಲಪ್ರಭೆ ದಂಡೆಯ ಕಡೆ ಬಂದರೆ ಸಿಗು- ಅಂದೆ. ಅದಕ್ಕೆ ಅವಳು ‘ಸಂಜೆ ನಾನು ವಗ್ಯಾನ್ ಒಗಿಯಾಕ್ (ಬಟ್ಟೆ ವಾಷ್) ಬರುವವಳಿದ್ದೇನೆ. ಅಲ್ಲಿ ಸಿಗು’ ಅಂತಾ ಫೋನ್ ಇಟ್ಟಳು.

ನಾನು ಸಂಜೆ 4ರ ಹೊತ್ತು ಕೈಯಲ್ಲಿ ಒಂದು ಬ್ಯಾಗ್ ಹಿಡಿದುಕೊಂಡು  ಅಲ್ಲಿ ಹೋದೆ. ಅವಳು ಬಟ್ಟೆಯ ಬುಟ್ಟಿ ಹೊತ್ತುಕೊಂಡು ಮನೆಯಿಂದ ಬಂದಳು. ಆಗ ಅವಳ ಕೈಗೆ ಪ್ರಸಾದದ ಚೀಲ ಕೊಟ್ಟೆ. ಅದರಲ್ಲಿ ಚಿಕ್ಕ ಚಿಕ್ಕ ಸಕ್ಕರೆ ತುಂಡಿನ ಪ್ರಸಾದ, ಕುಂಕುಮ, ಲಾಡು ಇತ್ತು. ಅದನ್ನು ಕೈಗೆ ತೆಗೆದುಕೊಂಡು ನೋಡಿದ ಅವಳಿಗೆ ಮೊದಲು ಕಂಡಿದ್ದೇ ಕುಂಕುಮ ಮತ್ತು ಲಾಡು ಚೀಟಿ ಅದನ್ನು ಆಕೆ ಏನೆಂದು ತಿಳಿದುಕೊಂಡಳೋ ಗೊತ್ತಿಲ್ಲ. ತೆಗೆದುಕೊಂಡವಳೇ ಮಲಪ್ರಭಾ ನದಿಗೆ ಎಸೆದು ಬಿಟ್ಟಳು.

ಅಷ್ಟಕ್ಕೆ ಸುಮ್ಮನಾಗದ ಅವಳು ‘ಏನೋ ನನ್ನ ಜೊತೆ ಇದೆಲ್ಲಾ ಇಟ್ಟುಕೊಳ್ಳಬೇಡ. ನೀನು ಒಳ್ಳೆಯ ಸ್ನೇಹಿತ ಆಗಿ ಇರ್ತಿಯಾ ಅಂದುಕೊಂಡಿದ್ದೆ. ಆದರೆ ಈಗ ನೋಡಿದರೆ ನನನ್ನು ಒಲಿಸಿಕೊಳ್ಳಬೇಕು ಎಂದುಕೊಂಡು ಮಾಟ ಮಾಡಕೊಂಡು ಬಂದಿ ಏನ್; ಮಾಡಕಿ (ವಾಮಾಚಾರ) ಮಾಡಿಸ್ತೀಯಾ. ಪಾಪಿ.!! ಕುಂಕುಮ-ಲಿಂಬೆಕಾಯಿ ಮಂತ್ರಿಸಿಕೊಂಡು ಬಂದೀ ಏನು’ ಎಂದವಳು ಮುಖದ ಮೇಲೆ ಉಗಿದು ಬರ... ಬರ ಹೋಗಿಯೇ ಬಿಟ್ಟಳು.

ನಾನು ಅಲ್ಲಿ ನಿಲ್ಲಲಾಗದೇ ನನ್ನ ಕಟ್ಟಿಗೆ ಪೇಡಲ್ನ ಬ್ರೇಕ್ ಇಲ್ಲದ ಸೈಕಲ್ (ಬಹುಷಃ ನನ್ನ ಲೈಫ್‌ಗೂ ಆವಾಗ ಯಾವುದೇ ಬ್ರೇಕ್ ಸಿಕ್ಕಿರಲಿಲ್ಲ) ತುಳಿಯುತ್ತಾ ಮನೆ ಕಡೆಗೆ ಬಂದೆ. ನಾನು ಇವತ್ತಿಗೂ ಅವಳಿಗೆ ಅದೇ ಹೇಳೊದು. ನಾನು ಸುಳ್ಳು ಹೇಳುತ್ತೇನೆ. ನಿಜ ಕೆಲವೊಂದು ವಿಷಯದಲ್ಲಿ ಶುದ್ಧ ಶಕುನಿಯೂ ಆಗಿ ಬಿಡುತ್ತೇನೆ. ಇನ್ನು ಸುಳ್ಳಿನ ವಿಷಯದಲ್ಲಿ ಸ್ನೇಹಿತರು ನೀನು ಸಾವಿರ ಸುಳ್ಳಿನ ಸರದಾರ ಬೀಡಲೇ...!’ ಎಂದು ಲೇವಡಿಯೂ ಮಾಡುತ್ತಾರೆ. ಅದನ್ನೆಲ್ಲಾ ಒಪ್ಪಿಕೊಳ್ಳುತ್ತೇನೆ. ಆದರೆ ಯಾವತ್ತಿಗೂ ಮಾಟ-ಮಂತ್ರದಂತಹ ಹೊಲಸು ಕೆಲಸಕ್ಕೆ ನಾನು ಕೈ ಹಾಕಿರಲಿಲ್ಲ.

ಒಂದೇಡೆ ನನ್ನ ಮನದೊಳಗೆ ಇಷ್ಟೆಲ್ಲ ಸ್ವಗತಃಗಳು ಗುದಮುರಗಿ ಹಿಡಿದಾಗಲೇ, ಅತ್ತ ಅವಳು ಅಷ್ಟಕ್ಕೆ ಆ ವಿಷಯ ಬಿಡಲಿಲ್ಲ. ನನಗೆ ಅಂವಾ ಮಾಡಕಿ ಮಾಡಿಸ್ಯಾನ್  ಅಂತಾ ತನ್ನ ಸೋದರ ಮಾವನಿಗೆ ದೂರು ಹೇಳಿ ಬಿಟ್ಟಿದ್ದಳು. ಅವನೋ ದೊಡ್ಡ ಪುಡಿ ರೌಡಿ, ಮರುದಿನದ ಆ ಇಳಿ ಸಂಜೆ ಹೊತ್ತಿನಲ್ಲಿ ನಾನು ಅದೇ ಮಲಪ್ರಭೆಯ ದಡದಲ್ಲಿ ಯಾರಿಗೋ ಗ್ಯಾಸ್​ಮೆಂಟ್ (ಬಯೋಗ್ಯಾಸ್ ಘಟಕ) ಕಟ್ಟಿ ಕೊಡೊವುದಕ್ಕೆ ಉಸುಕು (ಮರಳು) ಕಡಿಮೆಯಾಗಿದೆ ಅಂತಾ ಟ್ರ್ಯಾಕ್ಟರ್​ಗೆ ಮರಳು ತುಂಬುತ್ತಿದ್ದೆ.

ಆ ಕಡೆಯಿಂದ ಅವರ ಸೋದರ ಮಾವ್ ಎಂ80 ಏರಿ ಬಂದೇ ಬಿಟ್ಟನಲ್ಲ. ಆತ ಹೊಳಿ(ನದಿ) ದಂಡಿ ಮ್ಯಾಲ್ ನಿಂತು ಅವಾಜು ಹಾಕಿದ್ದೆ ಹಾಕಿದ್ದು.... ಎಲ್ಲಿ ನನ್ನ ಕೊಂದ ಬಿಡ್ತಾನೇನೂ ಅಂತಾ ಹೆದರಿಯೇ ಬಿಟ್ಟಿದ್ದೆ. ಆದ್ರೆ ಬಿಟ್ಟರೇ ಆತನನ್ನು ಗುದ್ದಿಯೇ ಕೊಲ್ಲಬಲ್ಲಷ್ಟು ನಾನು ಬಲಾಢ್ಯ. ನನ್ನ ಅಳೇತ್ತರ, ನನ್ನ ದೇಹ ನೋಡಿ ಆತ ಆ ಧೈರ್ಯ ಮಾಡುವುದಿಲ್ಲ ಎಂಬ ನಂಬಿಕೆ ನನಗಿತ್ತು. ಆದರೆ ಆಕೆ ಹೇಳಿದ್ದ ಮಾಡಕಿ ಮಾಡಿಸ್ಯಾನ ಅನ್ನೋ ಅಪವಾದ ನನ್ನ ಶಕ್ತಿಯನ್ನೆಲ್ಲ ಅಂದು ಹೊಸಕಿ ಹಾಕಿತ್ತು. ಆತ ಸಾಕಷ್ಟು ಬೈದು. ನಮ್ಮ ಹುಡುಗಿ ಉಸಾಬರಿಗೆ ಬಂದ್ರ ಮಗನ ಗುಂಡ ಹಾಕಿ ಕೊಂದ ಬಿಡ್ತೇನಿ ಅಂದಾ. ನನ್ನ ಪುಣ್ಯಕ್ಕೆ ಆತ ಮನೆಯಿಂದ ಅವತ್ತು ಬಂದೂಕು ತಂದಿರಲಿಲ್ಲ. ಸೇಫ್ ಆದೆ ಅಂತಾ ನಿಟ್ಟುಸಿರು ಬಿಟ್ಟೆ.

ಆದ್ರೆ ಇದು ಬೆಳೆಯುತ್ತ ಹೋದರೆ... ನಾನು ಮಾಡದ ತಪ್ಪಿಗೆ ಏನೋ ಅನುಭವಿಸಬೇಕಾಗುತ್ತದೆ. ಮೊದಲೆ ಗಡಿಗೆಯ ಬಾಯಿ ಮುಚ್ಚಬಹುದು. ಆದ್ರೆ ಜನರೆ ಬಾಯಿ. ಅದು ಕಿವಿಯಿಂದ ಕಿವಿಗೆ ಬಾಯಿಂದ ಬಾಯಿಗೆ ಹರಡಿ ಬಿಟ್ರೆ ಗತಿ ಏನು? ಅದರಲ್ಲಿಯೂ ಮನೆಯಲ್ಲಿ ಈ ವಿಷಯ ಗೊತ್ತಾದ್ರೆ ಊರು ಹಿರೇತನ ಮಾಡುವ ಅಪ್ಪನ ಮರ್ಯಾದೆ ಏನಾಗಬೇಡ? ಅನ್ನೋ ಹೆದರಿಕೆಯೋ ಹುಟ್ಟಿತು. ಆ ಕ್ಷಣವೇ ಅವತ್ತೇ ಅವತ್ತೇ ಅಲ್ಲಿಂದಲೇ ಊರು ಬಿಟ್ಟು, ಮಲಪ್ರಭೆಯ ಆಚೆ ದಡದಿಂದ ಈಚೆ ಉಟ್ಟ ಬಟ್ಟೆಯಲ್ಲೇ ಬಂದು ಬಿಟ್ಟೆ. ಅವತ್ತು ಯಾರ ಗ್ಯಾಸಮೆಂಟ್ ಕಟ್ಟೋಕೆ ಉಸುಕು ತುಂಬುತ್ತಿದ್ದೆ ಇಂದಿಗೂ ನೆನಪಿಲ್ಲ. ನನ್ನ ಆ ಸೈಕಲ್ ಅಲ್ಲೇ ಉಳಿದು ಹೋಯ್ತು. ಅದನ್ನು ಯಾರಾದ್ರೂ ಮನೆಗೆ ಒಯ್ದರಾ? ಏನು ಎತ್ತ ಗೊತ್ತಿಲ್ಲ. ಊರಲ್ಲಿ ಕಲಿಯಬೇಕಿದ್ದ ನನ್ನ ಇಷ್ಟದ ಗೌಂಡಿ ಕೆಲಸವೂ ಅರ್ಧೋಟ್ (ಅರ್ಧ) ಆಗ್ಹೋಯ್ತು.

ಅಂದು ಊರಿನಿಂದ ಓಡಿದವನೇ ನಿಲ್ಲಲೇ ಇಲ್ಲ. ಓಡಿದ್ದೇ ಓಡಿದ್ದು. ಆ ಓಟ ಮುಂಬೈವರೆಗೂ ನಿಲ್ಲಲೇ ಇಲ್ಲ. ಅಲ್ಲಿ ಊರೊಳಗೆ ಗೌಂಡಿಗಳ ಕೈಯಲ್ಲಿ ಮಾಡಿದ್ದ ಕೆಲಸವೇ ಕೈ ಹಿಡಿಯಿತು. ಕೊನೆಗೂ ಗೌಂಡಿಯಾದೆ. ಅಲ್ಲಲ್ಲ. ಈಗ ನಾನೇ ಮನೆಗಳನ್ನು ಕಟ್ಟಿಸಿಕೊಡುವವನು ಅಂದ್ರೆ ನಮ್ಮೂರ ಭಾಷೆಯಲ್ಲಿ ನಾನೀಗ ಶ್ರೀಮಂತ ಮೇಸ್ತ್ರಿ. ಮುಂಬೈಗೆ ಹೋದ ನಾನು ಮೇಸ್ತ್ರಿಯಾಗಿ,  ಬೆಳೆದು ಕೊಲ್ಲಾಪುರಕ್ಕೆ ಮರಳಿ ಬಂದು ಹತ್ತಾರು ಹುಡುಗರನ್ನು ಕೆಲಸಕ್ಕೆ ಇಟ್ಟುಕೊಂಡು ಕಾರಿನಲ್ಲಿ ಓಡಾಡುತ್ತಿದ್ದೇನೆ. ಆಗೊಮ್ಮೆ, ಅಲ್ಲಲ್ಲ ಆಗಾಗ ಅವಳು ಕೊಲ್ಲಾಪುರದ ಬೀದಿಗಳಲ್ಲಿ ಇಂದಿಗೂ ಸಿಗ್ತಾಳೆ. ಯಾಕಂದ್ರೆ ಕಾಕತಾಳೀಯ ಎಂಬಂತೆ ಆಕೆಯನ್ನು ನಾನು ಬದುಕು ಕೊಟ್ಟಿಕೊಂಡಿರುವ ಕೊಲ್ಲಾಪುರಕ್ಕೆ ಮದುವೆ ಮಾಡಿಕೊಟ್ಟಿದ್ದಾರೆ. ಅಂದು ಅವಳಿಂದ ಊರ ಬಿಟ್ಟ ನಾನು ಮರಳಿ ಮಲಪ್ರಭೆಯ ಈಚೆ ದಂಡೆ ದಾಟಿ ಆಚೆಗೆ ಹೋಗಿಲ್ಲ. ಆದ್ರೆ ಅವಳು ನಾನಿರೋ ಊರಿನಲ್ಲಿಯೇ ಬಂದು ಬಿಟ್ಟಿದ್ದಾಳೆ.  ಅಷ್ಟೇ ಏಕೆ! ಅವಳ ಗಂಡನದೊಂದು ಬಟ್ಟೆ ಅಂಗಡಿ ಇದೆ. ಸಾಕಷ್ಟು ಗಳಿಸಿದ್ದಾನೆ(ನನ್ನಷ್ಟು ಅಲ್ಲ ಅನ್ನೋದು ನನ್ನ ಅಹಂ) ಅವರ ಮನೆಯನ್ನೂ ಸಹ ನಾನೇ ಡಿಸೈನ್ ಮಾಡಿ, ನನ್ನದೇ ಫ್ಲ್ಯಾನಿಂಗ್​ನಲ್ಲಿ ಕಟ್ಟಿಕೊಟ್ಟೆ. ಆದರೆ ಇಂದಿಗೂ ಅವಳು ಮಾತಿಗೆ ಸಿಕ್ಕಾಗ ಅಂದ್ಯಾಕೇ ನೀ ನಂಗೆ ಮಾಡಾಕಿ ಮಾಡಸಾಂವ ಅಂದೇ ಕೇಳಬೇಕು ಅನ್ಸುತ್ತೆ. ಆದ್ರೆ ಅದು ಈಗ ಬೇಕಾ ಎಂದವನೇ ಮುಂದೆ ಹೋಗ್ತಿನಿ.

ಯಾಕಂದ್ರೆ ಅಂದಿನ ಪ್ರಸಾದದ ವಿಷಯ ಇಂದಿಗೆ ವಿಷಾದದ ನೆನಪು.

ಅಂದಿನ ಪ್ರಸ್ತುತ ಇಂದಿಗೆ ಅಪ್ರಸ್ತುತ.


ಸಿದ್ದಾರೂಢರ ಸನ್ನಿಧಿ : ಗುರುದತ್_ರಾಜ್‌ಕುಮಾರ_ಕಾಜೋಲ್


ಸಿದ್ದಾರೂಢರ ಸನ್ನಿಧಿ

ಸಿದ್ದಾರೂಢರ ಜೋಳಿಗೆ ಲೋಕಕ್ಕೆಲ್ಲ ಹೋಳಿಗೆ ಅನ್ನೋದು ಜಗಜನ್ನಿತ್ ವೇದವಾಕ್ಯ..
ಇಂದು ಬಾಲಿವುಡ್ ನಟಿ ಕಾಜೋಲ್ ಸಿದ್ದಾರೂಢರ ಮಠಕ್ಕೆ ಭೇಟಿ ನೀಡಿದಾಗ ದೊಡ್ಡ ಸುದ್ದಿಯಾಯ್ತು. ಹಾಗೆ ನೋಡಿದ್ರೆ ಸಿದ್ದಾರೂಢರ ಪಾದ ಸ್ಪರ್ಶಿಸಿ ಸಾಕ್ಷಾತ್ ದರ್ಶನ ಪಡೆದ ಕೀರ್ತಿ ಬಾಲಿವುಡ್ ಲೆಜಂಡ್ರಿ ಗುರುದತ್ ಅವರಿಗೆ ಸಲ್ಲುತ್ತೇ..
ಹೌದು..
ಗುರುದತ್ ಇನ್ನೂ ಪುಟ್ಟ ಬಾಲಕ ಆಗಿದ್ರು ಆಗ ಅವರ ತಾಯಿ ವಾಸಂತಿ ಪಡುಕೋಣೆಯವರು ಒಂದಷ್ಟು ದಿನ ಹುಬ್ಬಳ್ಳಿಯ ಸಂಬಂಧಿಗಳ ಮನೆಯಲ್ಲಿ ಉಳಿದಿರತಾರೆ.
ಆಗ ತಮಗೆ ಎದುರಾದ ಕಷ್ಟ ಪರಿಹಾರ ಆಗ್ಲಿ ಅಂತಾ ವಾಸಂತಿ ಅಮ್ಮ ಪುಟ್ಟ ಮಗು ಗುರುದತ್‌ನ ಕರಕೊಂಡು ಸಿದ್ದಾರೂಢರ ದರ್ಶನಕ್ಕೆ ಹೋಗ್ತಾರೆ.
ಸರತಿ ಸಾಲಿನಲ್ಲಿ‌ ಜನ ನಿಂತಿರತಾರೆ ಅತ್ತ ಸಿದ್ಧಾರೂಢರು ಶಾಂತಚಿತ್ತರಾಗಿ ಕುಳಿತು‌ ಬಂದ ಭಕ್ತರಿಗೆ ಆಶೀರ್ವಾದಮಾಡ್ತಾ ಇರ್ತಾರೆ ಆಗ ಇವರ ಪಾಳಿ ಬರುತ್ತೆ ಪುಟ್ಟ ಬಾಲಕ ಗುರುದತ್ ಶ್ರೀಗಳ ಪಾದಕ್ಕೆರಗುತ್ತಿದ್ದಂತೆ ಅಷ್ಟ ಅಷ್ಟೊತ್ತಿನವರೆಗೂ ಶಾಂತಚಿತ್ತರಾಗಿದ್ದ ಶ್ರೀಗಳು ಮಗುವಿನ ಮುಖ ನೋಡಿ ನಗಲಾರಂಭಿಸಿದರೆ ಆಗಲೇ ಇವನೊಬ್ಬ ಲೆಂಜಡ್ರಿ ಆಗ್ತಾನೆ ಅನ್ನೋ ಸೂಚನೆಯನ್ನ ಸಿದ್ದಾರೂಢರು ನೀಡಿದ್ರಂತೆ( ವಾಸಂತಿ ಪಡುಕೋಣೆಯವರು "ನನ್ನ ಮಗ ಗುರುದತ್" ಪುಸ್ತಕದಲ್ಲಿ ಇದನ್ನು ಪ್ರಸ್ತಾಪಿಸಿದ್ದಾರೆ)

ಇನ್ನೂ ಡಾ. ರಾಜ್‌ರ ಮೊದಲ ಚಿತ್ರ ಬೇಡರ ಕಣ್ಣಪ್ಪಗೆ ಆಫರ್ ಬಂದಿದ್ದು ಇದೇ ಮಠದಲ್ಲಿ ನೆಲೆಸಿದ್ದಾಗ. ಹೌದು ನಾಟಕಗಳಲ್ಲಿ ಪಾತ್ರ ಮಾಡತಿದ್ದ ರಾಜಕುಮಾರ ಅವರು, ಉತ್ತರ ಕರ್ನಾಟಕಕ್ಕೆ ಬಂದ್ರೆ ಶ್ರೀಮಠದಲ್ಲೆ‌ಇರ್ತಾ ಇದ್ರು. ಹಾಗೊಮ್ಮೆ ಬಂದು ಇಲ್ಲಿ ಇದ್ದಾಗಲೇ ಬೇಡರ ಕಣ್ಣಪ್ಪಗೆ ಆಫರ್ ಬಂತು ಆಗ ಗುರುನಾಥಾರೂಢರು ಇದ್ರು. ಅವರ ಆಶೀರ್ವಾದ ಪಡೆದು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ರು, ಅದು ಸಿದ್ಧಾರೂಢರ ಕೃಪೆ ಎಂದರಿತ ರಾಜಕುಮಾರ ಅವರು ಕೊನೆಯವರೆಗೂ ಮಠದ ಭಕ್ತರಾಗಿದ್ರು ಅವರ ಬಳಿಕ ಇವತ್ತಿಗೂ ರಾಜಕುಮಾರ ಕುಟುಂಬದ ಯಾರೇ ಸಹ ಹುಬ್ಬಳ್ಳಿ ದಾಟಿ ಹೊರಟ್ರೆ ಮಠಕ್ಕೆ ಮೊದಲ ಭೇಟಿ ನೀಡ್ತಾರೆ. ಇವರ ಕುಟುಂಬ ಇವತ್ತಿಗೂ ಮಠಕ್ಕೆ ಅಪಾರ ದೇಣಿಗೆ ನೀಡಿದೆ. ಇವತ್ತಿಗೂ ದೇಣಿಗೆ ನೀಡುತ್ತಲೇ ಇದ್ದಾರೆ.
ಇನ್ನೂ ಇವತ್ತು ಕಾಜೋಲ್ ಬಂದಿದ್ರು..
ಇನ್ನೂ ಮಠದ ಆವರಣದಲ್ಲಿ ಅಪಾರ ಚಿತ್ರಗಳ ಶೂಟಿಂಗ್ ನಡೆದಿದೆ..


ಕನ್ನಡೀಕರಣದಲ್ಲಿ ಸೈ ಅನಿಸಿಕೊಂಡ ಸೈರಾ


ಸೈರಾ ನರಸಿಂಹ ರೆಡ್ಡಿ ಸಿನಿಮಾ ಮೂಲ ತೆಲುಗು ಆಗಿದ್ರು ಕೂಡ ಕನ್ನಡದ ಡಬ್ಬಿಂಗ್ ತುಂಬಾ ಪರಿಪೂರ್ಣತೆ ಹೊಂದಿದೆ. ಮುಖ್ಯವಾಗಿ ಕಲಾವಿದರ ನಟನೆ, ತುಟಿಗಳ ಚಲನೆ ಮತ್ತು ಸಂಭಾಷಣೆ(ಡೈಲಾಗ್) ಮೂರಕ್ಕೂ ಸರಿಯಾದ ಸಂಯೋಜನೆ ಇದೆ. ಈ ಕಾರಣಕ್ಕೆ ಇದು ಡಬ್ಬಿಂಗ್ ಸಿನಿಮಾ ಅನಿಸದೇ ಅಪ್ಪಟ ಕನ್ನಡದ ಸಿನಿಮಾದಂತೆ ಅನಿಸುತ್ತದೆ.

ಇತ್ತೀಚೆಗೆ ಉದಯ ಟಿವಿಯಲ್ಲಿ ಈ ಸಿನಿಮಾ ನೋಡಿದಾಗ ಒಂದಷ್ಟು ಬರೆಯಬೇಕು ಅಂತಾ ಅನಿಸಿತ್ತು. ಆದ್ರೆ ಆಗ ಒಂದೇರಡು ಸಾಲು ಮಾತ್ರ ಫೇಸ್​ಬುಕ್​ಗಾಗಿ ಬರೆದಿಟ್ಟಿದ್ದೇ ಅಷ್ಟೆ. ಸೈರಾ ಸಿನಿಮಾ ಬಗ್ಗೆ ಈಗ ಸಮಗ್ರವಾಗಿ ಹೇಳಬೇಕು ಅಂದ್ರೆ ಈ ರೀತಿ ಪರಿಪಕ್ವವಾದ ಡಬ್ಬಿಂಗ್ ಸಿನಿಮಾಗಳಿಗೆ ಸದಾ ಸ್ವಾಗತ ನೀಡಬೇಕು. ಅಲ್ಲಿರುವ ಹೋರಾಟಗಾರನ ಕಥೆ, ಕಷ್ಟದ ಜನಗಳ ಜೀವನ ಎಲ್ಲವೂ ಕನ್ನಡೀಕರಣ ಪಕ್ಕಾ ಆಗಿಯೇ ಆಗಿದೆ. ನಮ್ಮದೇ ಭಾಷೆಯಲ್ಲೇ ಆಗಿರುವ ಕೆಲವೊಂದು ಇಂತಹುದೇ ಸಿನಿಮಾಗಳಲ್ಲಿ ಕನ್ನಡದವರೇ ಮಾಡಿ, ಕನ್ನಡದೇ ಸಂಭಾಷಣೆಗಳಿದ್ದರೂ ಎಷ್ಟೋ ಸಲ ತುಟಿ ಚಲನೆಗೂ ಸಂಭಾಷಣೆಗೂ ತಾಳ-ಮೇಳ ಇರೋದೆ ಇಲ್ಲ. ಅದಕ್ಕೆ ಸೈರಾ ನರಸಿಂಹ ರೆಡ್ಡಿ ಸಂದರ್ಭದಲ್ಲೇ ಬಂದ ಕುರುಕ್ಷೇತ್ರ ಚಿತ್ರವೇ ಸಾಕ್ಷಿ ಅನಬಹುದು. ಯಾಕಂದ್ರೆ ಈ ಸಿನಿಮಾದಲ್ಲಿ ರವಿಚಂದ್ರನ್ ಅಭಿನಯಿಸಿರುವ‌ ಶ್ರೀಕೃಷ್ಣನ ಪಾತ್ರದಲ್ಲಿ ಬೇರೊಬ್ಬರ ಧ್ವನಿ ಸಹಿಸಿಕೊಳ್ಳಲು ಆಗಿರಲಿಲ್ಲ. ಅದೇ ರೀತಿ ಕೆಲವು ಪಾತ್ರಧಾರಿಗಳ ತುಟಿ ಚಲನೆಗೂ ಸಂಭಾಷಣೆಯ ಧ್ವನಿಗೂ ತಾಳ ಮೇಳವೇ ಇರಲಿಲ್ಲ. ಅದೇನೇ ಇರಲಿ ಕುರುಕ್ಷೇತ್ರ ನಮ್ಮದೇ ಕನ್ನಡದ ಚಿತ್ರ. ಆದ್ರೆ ಸೈರಾ ಪರಭಾಷೆ ಸಿನಿಮಾ ಆಗಿದ್ರು ಕನ್ನಡೀಕರಣ ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ. ಇತ್ತೀಚೆಗೆ ಸಾಲು ಸಾಲು ಕನ್ನಡ ಡಿಬ್ಬಿಂಗ ಸಿನಿಮಾಗಳು ಕಿರುತೆರೆಯಲ್ಲಿ ಅಬ್ಬರಿಸುತ್ತಿದ್ದರೂ ಸಹ ಬಹುತೇಕವು ಡಬ್ಬಿಂಗ ಸರಿಯಾಗಿ ಇಲ್ಲದೆಯೇ ಸಪ್ಪೆಯಾಗಿ ಹೋಗಿವೆ. ಆದ್ರೆ ಸೈರಾ ಮಾತ್ರ ಸೂಪರ್ ಅನಬಹುದು.

Sunday, June 26, 2016

ಹುಬ್ಬಳ್ಳಿಯಲ್ಲಿ ಮತ್ತೇ ದಾಖಲೆ ಮಾಡಲಿದೆಯೇ ‘ಪೊಲೀಸನ ಮಗಳು’


ಬೆಂಗಳೂರಿನಲ್ಲಿ 1500, ಹುಬ್ಬಳ್ಳಿಯಲ್ಲಿಯೇ ಈ ಹಿಂದೆ 500 ದಾಖಲೆಗಳ ಪ್ರಯೋಗಗಳನ್ನು ಕಂಡಿರುವ ‘ಪೊಲೀಸನ ಮಗಳು’ ನಾಟಕ ಈಗ ಹುಬ್ಬಳ್ಳಿಯಲ್ಲಿ ಮತ್ತೊಂದು ದಾಖಲೆಗೆ ಮುಂದಾಗುತ್ತಿದೆ. ಹೌದು ಕೆಬಿಆರ್ ಡ್ರಾಮಾ ಕಂಪನಿಗೆ ಒಂದು ಖ್ಯಾತಿ ತಂದುಕೊಟ್ಟ ಈ ಪ್ರಖ್ಯಾತ ನಾಟಕ ಈಗ ಮತ್ತೇ ಹುಬ್ಬಳ್ಳಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಕಥೆ ಹಳೆಯದಾಗಿದ್ದರೂ ಹೊಸ ಚೈತನ್ಯದಿಂದಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಕರ್ತವ್ಯ ನಿಷ್ಠೆಯನ್ನೇ ತನ್ನ ಉಸಿರಾಗಿಸಿಕೊಂಡಿರುವ ಪೊಲೀಸ್ ಅಧಿಕಾರಿ ಚಂದ್ರಶೇಖರ, ಯಾವತ್ತಿಗೂ ಅಧಿಕಾರದ ಗತ್ತು, ಪ್ರಾಮಾಣಿಕ ಬದ್ಧತೆಯಲ್ಲಿ ರಾಜಿಯಾಗದವನು. ಆದರೆ ಇಂತಹ ಅಧಿಕಾರಿಯ ಮಗಳು, ತಾನೇ ಬಂಧಿಸಿ ಜೈಲಿಗಟ್ಟಿದ ಖದೀಮನ ಮಗಳ ಮೋಸದ ಪ್ರೇಮಪಾಶದಲ್ಲಿ ಬಿದ್ದಾಗ, ಅನುಭವಿಸುವ ಯಾತನೆ, ಅವಮಾನ, ನಿಷ್ಠೆ-ಸ್ವಾಭಿಮಾನವನ್ನೂ ಬಿಟ್ಟು, ತಾನೇ ಬೇಡಿ ಹಾಕಿದ್ದ ಕೈಗಳನ್ನು ಹಿಡಿದು ತನ್ನ ಮಗಳನ್ನು ನಿಮ್ಮ ಮನೆ ತುಂಬಿಸಿಕೊಳ್ಳಿ ಎಂದು ಹೇಳುವಾಗಿನ ಭಾವನಾತ್ಮಕ ಸನ್ನಿವೇಶ ಒಂದು ಕ್ಷಣ ನಮ್ಮ ಹೃದಯವನ್ನೇ ಕಲುಕಿಬಿಡುವಂತಿದೆ. ದರ್ಪದ ಅಧಿಕಾರಿಯ ಒಳಮನಸ್ಸಿನ ತೋಳಲಾಟ, ಬೇಗುದಿಗಳಿಗೆ ಪ್ರೇಕ್ಷಕರ ಮನಸ್ಸು ಕರಗಿ, ಕಣ್ಣೀರು ಬಂದೇ ಬಿಡುವಂತಿದೆ. ಈ ಪಾತ್ರಧಾರಿಯ ಅಭಿನಯ.
ಇನ್ನೂ ಖಳನಾಯಕ ಕಾಳಿಂಗನ ಪಾತ್ರದ ಕ್ರೌರ್ಯತೆಯ ಅಭಿನಯದಲ್ಲಿ ಗತ್ತಿನ ಕಳೆ ಇದೆ. ಈ ಪಾತ್ರದ ರೋಷಾವೇಷಗಳು ಮುಖಭಾವ, ಆಂಗಿಕ ಅಭಿನಯದಲ್ಲಿ ಶ್ರೀಮಂತವಾಗಿ ಮೂಡಿ ಬಂದಿವೆ.  ಇನ್ನೂ ಚಿತ್ರನಟರೂ ಆಗಿರುವ ಚಿಂದೋಡಿ ವಿಜಯಕುಮಾರರನ್ನು ಮುದುಕನ ಪಾತ್ರದಲ್ಲಿ ನೋಡುವುದೇ ಚೆಂದವೇನೋ. ಏಕೆಂದರೆ ಈ ಹಿಂದಿನ ಅನೇಕ ನಾಟಕಗಳಲ್ಲಿ ಮುದುಕನ ಹಾಸ್ಯ ಪಾತ್ರದ ಮೂಲಕವೇ ಹುಬ್ಬಳ್ಳಿಗರ ಮನಸ್ಸು ಗೆದ್ದಿರುವ ಅವರು ಇಲ್ಲಿಯೂ ಮೂದಿ ಕಾಮಣ್ಣನ ಪಾತ್ರದಲ್ಲಿ ಭರ್ಜರಿ ಕಾಮಿಡಿಯುಕ್ಕಿಸುತ್ತಾರೆ.
ಅಷ್ಟೇನೂ ಅಶ್ಲೀಲವಲ್ಲದ ದ್ವಂದ್ವಾರ್ಥದ ಸಂಭಾಷಣೆಗಳಿರುವ ಕಾರಣಕ್ಕೆ ಯಾವುದೇ ಮುಜುಗರಕ್ಕೆ ಒಳಗಾಗದೇ ಈ ನಾಟಕ ನೋಡಬಹುದು.
ಒಂದೇಡೆ ಹಾಸ್ಯ, ಮತ್ತೊಂದೆಡೆ ಕಳ್ಳರ ಅಟ್ಟಹಾಸ, ತಂದೆ-ಮಗಳ ಬಾಂಧವ್ಯದ ದುರುಪಯೋಗ, ನಿಷ್ಠಾವಂತ ಅಧಿಕಾರಿಗಳ ಸಾಹಸ. ಪ್ರೀತಿ ಮೋಸ ಎಂದರಿತೂ ಕೂಡ ಕಳ್ಳನ ಕೈಹಿಡಿದು ಅನುಭವಿಸಬಾರದಷ್ಟು ಕಷ್ಟಗಳನ್ನು ಅನುಭವಿಸುವ ಯುವತಿಯ ನೋವು. ಹೀಗೆ ವಿವಿಧ ಮಜಲುಗಳಲ್ಲಿ ಸಾಗುವ ನಾಟಕದ ಕಥೆ ಏನು ಅಂತಾ ಇಲ್ಲಿ ಬರೆಯುವುದಕ್ಕಿಂತ ನೀವೆ ಹೋಗಿ ನೋಡಿ ಬಂದರೆ ಒಳಿತು.

Sunday, June 19, 2016

ರಿಪ(RIP)ಗೆ ಸೀಮಿತವಾದ ಸಾಂತ್ವನ....



ಇಂದು ಬೇಕಾಗಿರುವುದು ಸಾಂತ್ವನ ಹೇಳುವ ಕೈಗಳೇ ಹೊರತು ಆರ್‌ಐಪಿ(RIP) ಎಂದು ಟೈಪ್ ಮಾಡುವ ರಿಪ್ ಕಾಮೆಂಟ್ಸ್ ಅಲ್ಲ. 

ಚಿತ್ರ ಕೃಪೆ : ಇಂಟರನೆಟ್

ಹೌದು...!? ಇಂದು ಸಾಮಾಜಿಕ ಜಾಲತಾಣಗಳ ಹಾವಳಿ ಹೆಚ್ಚಾದಂತೆ, ಮನುಷ್ಯ ಡ್ರಗ್ಸ್‌ಗಿಂತಲೂ ಅಪಾಯಕಾರಿಯಾಗಿ ಈ ಸೋಶಿಯಲ್ ಮೀಡಿಯಾಗಳಿಗೆ ಅಂಟಿಕೊಂಡಿರುವುದರಿಂದ, ಸಾಮಾಜಿಕ ಕಳಕಳಿ ಎಂಬುದು ಎಲ್ಲಿಯೋ ಕಳೆದುಹೋಗಿ ಬಿಟ್ಟಿದೆ. ಕೇವಲ ಒಂದು ಕಾಮೆಂಟ್ಸ್‌ದಲ್ಲಿಯೇ ಎಲ್ಲವನ್ನೂ ತುಂಬಿಕೊಡಲು ಹೊರಟಿದ್ದೇವೆ ಹೊರತು, ಕಾಮೆಂಟ್ಸ್ ಟೈಪ್ ಮಾಡುವ ಅದೇ ಕೈಯಿಂದ ದುಃಖದಲ್ಲಿದ್ದವರ ಬೆನ್ನು ಚಪ್ಪರಿಸಿ ಸಂತೈಸುವ ಕಾರ್ಯ ಮಾತ್ರ ಕಾಣೆಯಾಗುತ್ತ ಹೋಗುತ್ತಿದೆ.  ಸಾಮಾಜಿಕ ಜಾಲತಾಣಗಳ ಮಧ್ಯೆ ಸಾಮಾಜಿಕ ಜಾಣ್ಮೆಯನ್ನೇ ಕಳೆದುಕೊಂಡು ಬಿಡುತ್ತಿದ್ದೇವೆ. 
ಚಿತ್ರ ಕೃಪೆ : ಇಂಟರನೆಟ್
ಸಾವಿರ ಕಾಮಂಟ್ಸ್‌ಗಳ ಮಧ್ಯೆಯೇ ಸಾಂತ್ವನ ಹೇಳುವ ಒಂದೇ ಒಂದು ಕೈ ಇದ್ದರೇ ಸಾಕು. ಆದರೆ ಆ ಕೈಗಳೆಲ್ಲವೂ ಬಹುತೇಕ ಈಗ ರಿಪ್ (RIP) ಕಾಮೆಂಟ್ಸ್ ಮಾಡಿ, ಬೇರೆ ಇನ್ನಾವುದೂ ಫೋಟೋ ಲೈಕ್ ಮಾಡಲು, ಇನ್ನಾವುದೋ ಪೋಸ್ಟ್‌ಗೆ ಕಾಮೆಂಟ್ ಮಾಡಲು ಬ್ಯುಸಿಯಾಗಿ ಬಿಡುತ್ತವೆ.
ಎಷ್ಟೋ ಕಡೆ ತುಂಬಾ ಆತ್ಮೀಯರಾದವರೂ,,, ದೇವರಂತೆ ನಮ್ಮನ್ನು ಪೂಜಿಸುತ್ತ ನಿಷ್ಠೆ ತೋರಿಸಿ ಕೆಲಸ ಮಾಡುವವರೂ ದುಃಖದಲ್ಲಿದ್ದಾಗ ಕೂಡ ಅವರಿಂದ ಕೆಲಸ ಮಾಡಿಸಿಕೊಂಡವರು ಅವರಲ್ಲಿಗೆ ಹೋಗಿ ಒಂದೇ ಒಂದು ಸಾಂತ್ವನ ಹೇಳಿ ಬರುವುದಿಲ್ಲ. ಬದಲಿಗೆ ‘ಮೊನ್ನೆನೇ ಫೋನ್‌ನ್ಯಾಗ್ ಮಾತಾಡಿದೇನಿ...!’ ‘ರಿಪ್ (RIP) ಮೇಸೆಜ್ ಹಾಕಿದ್ದಿನಲ್ಲ  ನಾನೂ ಗ್ರುಪ್‌ದಾಗ’ ಸರಳವಾಗಿ ಹೇಳಿಬಿಡ್ತಾರೆ. ಆದರೆ ನಮ್ಮನ್ನೇ ನೆಚ್ಚಿಕೊಂಡು, ನಿಷ್ಠೆಯಿಂದ ಇದ್ದ ಆ ವ್ಯಕ್ತಿ ಬಳಿಗೆ ಹೋಗಿ ಸಣ್ಣದಾಗಿ ಬೆನ್ನು ಚಪ್ಪರಿಸಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡುವ ವಿಚಾರ ಬಹುತೇಕ ಜನರಲ್ಲಿ ಬರುವುದು ಕಡಿಮೆಯೇ?
ಇನ್ನೂ ಬಹುತೇಕ ಇತ್ತೀಚೆಗೆ ವಾಟ್ಸ್ ಆಪ್ ಬಂದ ಮೇಲೆ ಯಾರಾದರೂ ನಮಗೆ ಆತ್ಮೀಯರಿದ್ದವರ ಸಂಬಂಧಿಗಳು ತೀರಕೊಂಡಿದ್ದನ್ನು ಗ್ರುಪ್‌ಗೆ ಹಾಕಲಾಗುತ್ತದೆ. ಆ ರೀತಿ ಹಾಕುವುದು ರಿಪ್ ಮೆಸೇಜ್ ಮಾಡಿ ಸುಮ್ಮನೆ ಕುಳಿತುಕೊಳ್ಳಲಿ ಅಂತಲ್ಲ. ಇಂಥವರು ಹೀಗ್ಹೀಗೆ ದುಃಖದಲ್ಲಿದ್ದಾರೆ. ಸಾಧ್ಯವಾದರೇ ಹೋಗಿ ಸಾಂತ್ವನ ಹೇಳಿ ಬನ್ನಿ ಎಂಬ ಉದ್ದೇಶದಿಂದಲೇ ಪ್ರತಿಯೊಬ್ಬರು ಅಂತಹ ಮಾಹಿತಿಯನ್ನು ಶೇರ್ ಮಾಡುತ್ತಾರೆ. ಆದರೆ ಸಂಬಂಧಿಸಿದ ವ್ಯಕ್ತಿ ಗ್ರುಪ್‌ದಲ್ಲಿ ಇಲ್ಲದೇ ಹೋದರೂ ಬಹುತೇಕ ಜನ ರಿಪ್ ಮೆಸೇಜ್ ಮಾಡಿ ಸುಮ್ಮನೆ ಕುಳಿತುಬಿಡುತ್ತಾರೆ.
ಚಿತ್ರ ಕೃಪೆ : ಇಂಟರನೆಟ್
ಇತ್ತೀಚೆಗೆ ನಡೆದ ಘಟನೆ- ನಂಗೆ ಆತ್ಮೀಯರಾಗಿದ್ದ ಸ್ನೇಹಿತರೊಬ್ಬರೊಂದಿಗೆ ಅದ್ಯಾವುದೋ ವಿಷಯಕ್ಕೆ ಜಗಳ ಆಗಿ, ಮಾತುಗಳು ನಿಂತು ಹೋಗಿ ಒಂದೂವರೆ ತಿಂಗಳಾಗಿತ್ತು. ಎದುರಿಗೆ ಬಂದರೇ ಒಬ್ಬರ ಮುಖ ಒಬ್ಬರ ನೋಡುತ್ತಿರಲಿಲ್ಲ ಅಷ್ಟೊಂದು ವೈರತ್ವ ಸಾಧಿಸಿದ್ವಿ... ಇಬ್ಬರೂ ಸಾತ್ವಿಕರೇ ಆಗಿದ್ದ ಕಾರಣಕ್ಕೆ ಹೊಡೆದಾಟವೊಂದೇ ಆಗಿರಲಿಲ್ಲ ಅಷ್ಟೇ! ಹೀಗಿರಲು ಆ ವ್ಯಕ್ತಿಗೆ ಹಠಾತಾಗಿ ದುಃಖದ ಸನ್ನಿವೇಶ ಬಂತು. ಮಾತು ನಿಂತು ಹೋಗಿ, ವೈರಿಗಳೇ ಆಗಿದ್ದರೂ ಕೂಡ ಕೆಲ ಸ್ನೇಹಿತರೊಂದಿಗೆ ಸೇರಿಕೊಂಡು ನಾನು ಅವರ ಮನೆಗೆ ಹೋದೆ. ಕಾರಣ ಸ್ನೇಹದ ಸೆಳೆತ ಹಾಗಿತ್ತು. ನಾವು ಹೋದ ತಕ್ಷಣವೇ ಅಳುವುದಕ್ಕೆ ಶುರುವಿಟ್ಟುಕೊಂಡರು. ಅಷ್ಟು ದಿನದ ವೈರತ್ವ... ದ್ವೇಷ ಎಲ್ಲವನ್ನೂ ಮರೆತ ನಾನು ಎದೆಗಪ್ಪಿಕೊಂಡೆ.... ಇನ್ನೊಬ್ಬ ಸ್ನೇಹಿತರು ಬೆನ್ನ ಚಪ್ಪರಿಸಿದರು. ಹೀಗೆ ನಾವೆಲ್ಲರೂ ಸಾಂತ್ವನ ಹೇಳಿದ್ವಿ.. ಒಂದಿಷ್ಟು ಆತ್ಮಸ್ಥೈರ್ಯದ ಮಾತುಗಳನ್ನು ಹೇಳಿ ಬಂದ್ವಿ....
ಆಗ ನನಗೆ ಈ ಮೇಲಿನ ವಿಚಾರ ಹೊಳೆಯಿತು- ಸಮಾಜದಲ್ಲಿ ಈಗ ದುಃಖದಲ್ಲಿರುವವರ ಸಂತೈಸುವ ಕೈಗಳು ಬೇಕಾಗಿವೆ ಹೊರತು ರಿಪ್(RIP) ಮೆಸೇಜ್‌ಗಳಲ್ಲ...!!
ಸಾಮಾಜಿಕ ಜಾಲತಾಣಗಳ ಮಧ್ಯೆಯೂ ನಾವು ಸಾಮಾಜಿಕ ಜಾಣ್ಮೆಯನ್ನು ಉಳಿಸಿಕೊಳ್ಳಬೇಕಾಗಿದೆ ಈಗ.
ಚಿತ್ರ ಕೃಪೆ : ಇಂಟರನೆಟ್


ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...