Thursday, January 28, 2021

ಹಸಿರು ಟಾವೇಲ್ ಅಕ್ಕಿ ಗಂಟು ಮತ್ತು ಪೊಲೀಸ್ ಏಟು



ಇವತ್ತು ನಮ್ಮ ದೇಶದಲ್ಲಿ ರೈತ ಹೋರಾಟ ತೀವ್ರ ಚರ್ಚೆಗೆ ಬಂದಿದೆ. ಹೋರಾಟದ ಹಾದಿಯಲ್ಲಿ ಹಿಂಸಾಚಾರಗಳು ಶುರುವಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಒಂದು ಕಾಲಕ್ಕೆ ರೈತ ಹೋರಾಟ ಜೋರಾಗಿಯೇ ಇತ್ತು. ಅಂದು ಕೂಡ ಹೋರಾಟ ಹಿಂಸಾ ರೂಪ ಪಡೆದಿದ್ದು, ಇದೆ. ಆದರೆ ಆಗೆಲ್ಲ ರೈತರೇ ಹೆಚ್ಚು ಏಟು ತಿಂದಿದ್ದು ಜಾಸ್ತಿ, ನಂಜುಡಸ್ವಾಮಿಯವರ ಮಾತು ಎಂದರೆ ಆಗೆಲ್ಲ ರೈತರ ಹೋರಾಟಕ್ಕೆ ವೇದ ವಾಕ್ಯ ಆಗುತ್ತಿತ್ತು. ವಿಷಯ ಒತ್ತೆಟ್ಟಿಗಿರಲಿ.. ಅಂದಿನ ಒಂದು ಘಟನೆ ಇಲ್ಲಿದೆ ನೋಡಿ.. ಇದು ಮುಂದೆ ಬರಬೇಕಿರೋ ನನ್ನ ಪುಸ್ತಕದ ಒಂದು ಭಾಗ...

ಸರ್ಕಾರದಿಂದ ಬಂದಿದ್ದ ರೇಷನ್ ಅಕ್ಕಿ ಪಾರಿಶ್ವಾಡ ಸಂತ್ಯಾಗ ಮಾರಿ ಮಕ್ಕಳಿಗೆ ನೋಟ್‍ಬುಕ್ ಕೊಡಿಸಿದ್ದ ಕಸ್ತೂರೆವ್ವನಿಗೆ ಮನ್ಯಾಗ್ ಇರೋ ಅಕ್ಕಿ ತೀರಾಕ ಬಂದಾವ್ ಅನ್ನೋದು ಖಬರಿಗೆ ಬಂದಿರೇ ಇಲ್ಲ. ಇನ್ನ ಏನ್ ಮಾಡ್ಲಿ ಅನ್ನೋ ಚಿಂತ್ಯಾಗ್ ಇದ್ದಾಗಲೇ ಎಂ.ಕೆ. ಹುಬ್ಬಳಿ ಬಳಿಗಾರ ದೇವರಂಗ ಬಂದ ಸುದ್ದಿ ಹೇಳಿದ್ದ. ಅದು ಕಸ್ತೂರೆವ್ವನ ತವರು ಮನೆ ಕರೆಯಾಗಿತ್ತು. ಕಸ್ತೂರೆವ್ವನ ಅವ್ವ, ಅಕ್ಕಿ ಮಾಡಿಸೇವಿ ಬಂದ ತಗೊಂಡ ಹೋಗು ಎಂದು ಹೇಳಿ ಕಳುಹಿಸಿದ್ದಳು. ಇತ್ತ ಮನೆಯಲ್ಲಿ ಅಕ್ಕಿ ತೀರಿದ್ದು ನೋಡಿ ತನ್ನ ಮಕ್ಕಳ ಹೊಟ್ಟಿ ಗತಿ ಏನು ಎಂದು ಚಿಂತೆ ಮಾಡುತ್ತಿದ್ದಾಗಲೆ, ಅತ್ತ ಇವರವ್ವ ಮಗಳ ಬಗ್ಗೆ ಚಿಂತೆ ಮಾಡಿ ಸಹಾಯದ ಸಂದೇಶ ಕಳುಹಿಸಿದ್ದಳು. 

ಈ ಕೂಡಲೇ ಪಕ್ಕದಲ್ಲೆ ಇರುವ ತವರಿಗೆ ಹೋಗಿ ಕಸ್ತೂರೆವ್ವ ಅಕ್ಕಿ ತರಬೇಕು ಅಂತಾ ಮುಂದಾಗಿಯೇ ಬಿಟ್ಟಳು. ಏಕೆಂದರೆ ಅತ್ತ ಹಮಾಲಿ ಮಾಡಾಕ್ ಹೋಗಿದ್ದ ಗಂಡ ಇವತ್ತ್ ಬರ್ತಾನೋ ಇಲ್ವೋ ಅನ್ನೋ ನಿಕ್ಕಿ ಇಲ್ಲ. ಮಕ್ಕಳನ್ನ ಏನ್ ಮಾಡ್ಲಿ ಅಂತಾ ಚಿಂತಿ ಹತ್ತಿದಾಗ ಅಕೀಗೆ ಹೊಳೆದಿದ್ದು ಕಮ್ಮಾರ ಸಾಲಿ. ಕಮ್ಮಾರ ಸಾಲ್ಯಾಗ್ ಹುಡುಗೋರನ್ ಬಿಟ್ಟ್ಟು ಕಮ್ಮಾರ ನಾಗಪ್ಪಗ ತಿದಿ ಊದಾಕ ಸಹಾಯ ಆಗ್ತಾರ ನಾ ಬರೋ ಮಟಾ ಇಲ್ಲೇ ಇಟಕೋ ಅಂತಾ ಹೇಳೀ ಬೀರ ಬೀರನೆ ನಡೆದ ಕಸ್ತೂರೆವ್ವ ಹಳ್ಳ ದಾಟಿ ತನ್ನ ತವರು ಸೇರೋ ಹೊತ್ತಿಗೆ ಸಂಜೀ ಐದಾಗಿತ್ತು..

ತವರು ಮನೆ ಸೇರಿ ತಾಯಿನ ಭೇಟಿಯಾದ್ಳು. ಆದ್ರ್ ಅಕ್ಕಿ ಕೊಡಾಕ್ ಒಂದೇ ಒಂದ ಚೀಲ ಆ ಕ್ಷಣಕ್ಕೆ ಕೈಗೆ ಸಿಗಲಿಲ್ಲ. ಕಸ್ತೂರೆವ್ವಗೆ ಭಾಳ ಅಕ್ಕಿನೂ ಬೇಕಾಗಿರಲಿಲ್ಲ. ವಾರಕ್ಕಾಗೋವಷ್ಟ ಸಿಕ್ರ ಸಾಕಿತ್ತು. ಅದು ಕೂಡ ಮೂರ ಮಕ್ಕಳ ಹೊಟ್ಟಿಗೆ. ಆಗ ಅವರವ್ವಗ ಕಂಡಿದ್ದು ತನ್ನ ಹಿರಿಮಗನ ಹಸಿರು ಟಾವೆಲ್. ಅದೇನ್ ಸಣ್ಣ ಟಾವೆಲ್ಲ? ಹಾಸಿಕೊಂಡೂ ಮಲಗಬಹುದು. ಹೊದ್ದು ಮಲಗಬಹುದು. ಮೊದಲೆಲ್ಲ ರೈತರು ಅಂತಹ ಟಾವೆಲ್‍ಗಳನ್ನೆ ಬಳಸುತ್ತಿದ್ದರು. ಅದೇ ಟಾವೆಲ್‍ದಲ್ಲಿ ಅಕ್ಕಿ ಗಂಟು ಕಟ್ಟಿಕೊಂಡ ಕಸ್ತೂರೆವ್ವ ಬಂದ ವೇಗದಲ್ಲೇ ಹಳ್ಳದ ದಂಡಿ ಹಿಡಿದು ಹೊಂಟ್ಳು. ಹಳ್ಳ ಏರಿ ಆಚೇ ದಡ ಹತ್ತಿ ಕಲ್ಮೇಶ್ವರ ಗುಡಿಯ ಕೆರೆಯ ಏರಿಯಿಂದ ಇನ್ನೆನ್ನು ರಸ್ತೆ ಕೂಡಬೇಕಿತ್ತು ಆಗ ಬರ್ರನೇ ಬಂತೊಂದು ಪೊಲೀಸ್ಪೆ ಜೀಪು. ಸುಮ್ಮನೆ ಹೊರಟಿದ್ದ ಅದರಲ್ಲಿನ ಪೊಲೀಸ್ ಒಬ್ಬನಿಗೆ  ಹಸಿರು ಟಾವೆಲ್ ಕಂಡಿದ್ದೆ ತಡ, "ನಿಲ್ಲಿಸ್ರೋ ಇಲ್ಲೊಬ್ರ ಅದಾರ್" ಎನ್ನುವ ಪೇದೆ ಮಾತು ಇನ್ನು ಮುಗಿದಿರಲೇ ಇಲ್ಲ. ಜೀಪ್ ನಿಂತೆ ಬಿಟ್ಟಿತ್ತು. ಜೀಪ್ ಇಳಿದು ಬಂದ ಪೊಲೀಸರು ಕಸ್ತೂರೆವ್ವನನ್ನು ಏನೆಂದರೆ ಏನು ಕೇಳಲಿಲ್ಲ. ಮೊದಲ ರಫಾ.. ರಫಾ.. ಹೊಡೆದ್ರು. ಕಳ್ಳ ರೈತರಿಗೆ ಅಕ್ಕಿ ಕೊಡಾಕ್ ಹೊಂಟಿ. ನೀನು ರೈತ ಸಂಘದಾಕೀನ್ ಅದೀ ಏನು? ನಮ್ಮ ಗಾಡಿಗೋಳಗೆ ಬೆಂಕಿ ಹಚ್ಚತೀರೇನ್.. ಅಂತಾ ಹೊಡೆದು ಕೈಯೊಳಗಿನ ಹಸಿರು ಟಾವೆಲ್ದೊಳಗಿನ ಅಕ್ಕಿ ಗಂಟು ಕಸಕೊಂಡ ಬಿಟ್ರು. ಇಲ್ರಿ ನನ್ನ ತವರು ಮನಿಂದ ಅಕ್ಕಿ ತರಾತೇನ್ ಅಂತ ಒದರಿ ಒದರಿ ಹೇಳಿದ್ರು. ಅದನ್ನ ಕೇಳಿಸಿಕೊಳ್ಳೋ ವ್ಯವಧಾನ ಆ ಪೊಲೀಸರಿಗೆ ಇರಲೇ ಇಲ್ಲ. ಹಸಿರು ಟಾವೆಲ್‍ನಲ್ಲಿನ ಅಕ್ಕಿ ಗಂಟಿನ ಸಮೇತ ಕಸ್ತೂರೆವ್ವನನ್ನು ಠಾಣೆಗೆ ಕರೆದುಕೊಂಡೇ ಹೋದರು. ಇತ್ತ ಕಮ್ಮಾರ ನಾಗಪ್ಪನ ಜೊತೆ ಕುಳಿತಿದ್ದ ಕಸ್ತೂರೆವ್ವನ ಮಕ್ಕಳು ಅವ್ವನಿಗಾಗಿ ಕಾದು ಕಾದು ಅಲ್ಲೇ ಸೋತು ಹೋಗಿದ್ದವು. ಆಗ ಈ ಮೂರು ಮಕ್ಕಳಿಗೆ ಇನ್ನೊಬ್ಬ ಕಸ್ತೂರೆವ್ವ ಅಂದ್ರೆ ಕಮ್ಮಾರ ಕಸ್ತೂರೆವ್ವ ಆ ದಿನ ತಾಯಿಯಾಗಿದ್ದಳು. ಹೌದು, ತನ್ನ ಮಕ್ಕಳ ಜೊತೆಗೆ ರೊಟ್ಟಿ ತಿನಿಸಿ ಮಲಗಿಸಿದ್ದಳು. ಅತ್ತ ಆ ಕಸ್ತೂರೆವ್ವ ಠಾಣೆಯಿಂದ ಮರುದಿನ ಬಿಡುಗಡೆಯಾಗಿ ಬಂದಳು. ಇಷ್ಟೆಲ್ಲ ಆದ್ರೂ ಅತ್ತ ಹಿರೇಬಾಗೇವಾಡಿ ಹೈವೇದಾಗ ರೈತರು ಹೋರಾಟ ಮಾಡಿದ ಬಳಿಕ ಭುಗಿಲೆದಿದ್ದ ಕಿಚ್ಚಿನ ಹೋರಾಟ ಮಾತ್ರ ನಿಲ್ಲಲೇ ಇಲ್ಲ. ಅಂದಿನ ಆ ರೈತ ಹೋರಾಟದ ದಿನಗಳಲ್ಲಿ ಇದೇ ರೀತಿ ಅದೇಷ್ಟೋ ತಾಯಂದಿರು, ಅದೆಷ್ಟೋ ಅಮಾಯಕ ರೈತರು ಪೊಲೀಸರ ಲಾಠಿ ಏಟು, ಬೂಟಿನ ಏಟು ತಿಂದಿದ್ದಕ್ಕೆ ಲೆಕ್ಕವೇ ಇಲ್ಲ. ಇನ್ನು ಆಗ ಹೋರಾಟದ ಕಿಚ್ಚು ಸಹ ಹಾಗೆಯೇ ಇತ್ತು. ರೈತರು ಜೀವ ಕೊಡುವುದಕ್ಕೂ ಹಿಂಜರಿಯುತ್ತಿರಲಿಲ್ಲ. ಅಂತಹ ಸಂದರ್ಭದಲ್ಲೇ ನಡೆದ ಒಂದು ಘಟನೆಯನ್ನು ಆಧರಿಸಿ ಒಂದಷ್ಟು ಕಲ್ಪನೆ ಸೇರಿಸಿ ಬರೆದ ಪ್ರಸಂಗ ಇದು.




No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...