Sunday, June 19, 2016

ರಿಪ(RIP)ಗೆ ಸೀಮಿತವಾದ ಸಾಂತ್ವನ....



ಇಂದು ಬೇಕಾಗಿರುವುದು ಸಾಂತ್ವನ ಹೇಳುವ ಕೈಗಳೇ ಹೊರತು ಆರ್‌ಐಪಿ(RIP) ಎಂದು ಟೈಪ್ ಮಾಡುವ ರಿಪ್ ಕಾಮೆಂಟ್ಸ್ ಅಲ್ಲ. 

ಚಿತ್ರ ಕೃಪೆ : ಇಂಟರನೆಟ್

ಹೌದು...!? ಇಂದು ಸಾಮಾಜಿಕ ಜಾಲತಾಣಗಳ ಹಾವಳಿ ಹೆಚ್ಚಾದಂತೆ, ಮನುಷ್ಯ ಡ್ರಗ್ಸ್‌ಗಿಂತಲೂ ಅಪಾಯಕಾರಿಯಾಗಿ ಈ ಸೋಶಿಯಲ್ ಮೀಡಿಯಾಗಳಿಗೆ ಅಂಟಿಕೊಂಡಿರುವುದರಿಂದ, ಸಾಮಾಜಿಕ ಕಳಕಳಿ ಎಂಬುದು ಎಲ್ಲಿಯೋ ಕಳೆದುಹೋಗಿ ಬಿಟ್ಟಿದೆ. ಕೇವಲ ಒಂದು ಕಾಮೆಂಟ್ಸ್‌ದಲ್ಲಿಯೇ ಎಲ್ಲವನ್ನೂ ತುಂಬಿಕೊಡಲು ಹೊರಟಿದ್ದೇವೆ ಹೊರತು, ಕಾಮೆಂಟ್ಸ್ ಟೈಪ್ ಮಾಡುವ ಅದೇ ಕೈಯಿಂದ ದುಃಖದಲ್ಲಿದ್ದವರ ಬೆನ್ನು ಚಪ್ಪರಿಸಿ ಸಂತೈಸುವ ಕಾರ್ಯ ಮಾತ್ರ ಕಾಣೆಯಾಗುತ್ತ ಹೋಗುತ್ತಿದೆ.  ಸಾಮಾಜಿಕ ಜಾಲತಾಣಗಳ ಮಧ್ಯೆ ಸಾಮಾಜಿಕ ಜಾಣ್ಮೆಯನ್ನೇ ಕಳೆದುಕೊಂಡು ಬಿಡುತ್ತಿದ್ದೇವೆ. 
ಚಿತ್ರ ಕೃಪೆ : ಇಂಟರನೆಟ್
ಸಾವಿರ ಕಾಮಂಟ್ಸ್‌ಗಳ ಮಧ್ಯೆಯೇ ಸಾಂತ್ವನ ಹೇಳುವ ಒಂದೇ ಒಂದು ಕೈ ಇದ್ದರೇ ಸಾಕು. ಆದರೆ ಆ ಕೈಗಳೆಲ್ಲವೂ ಬಹುತೇಕ ಈಗ ರಿಪ್ (RIP) ಕಾಮೆಂಟ್ಸ್ ಮಾಡಿ, ಬೇರೆ ಇನ್ನಾವುದೂ ಫೋಟೋ ಲೈಕ್ ಮಾಡಲು, ಇನ್ನಾವುದೋ ಪೋಸ್ಟ್‌ಗೆ ಕಾಮೆಂಟ್ ಮಾಡಲು ಬ್ಯುಸಿಯಾಗಿ ಬಿಡುತ್ತವೆ.
ಎಷ್ಟೋ ಕಡೆ ತುಂಬಾ ಆತ್ಮೀಯರಾದವರೂ,,, ದೇವರಂತೆ ನಮ್ಮನ್ನು ಪೂಜಿಸುತ್ತ ನಿಷ್ಠೆ ತೋರಿಸಿ ಕೆಲಸ ಮಾಡುವವರೂ ದುಃಖದಲ್ಲಿದ್ದಾಗ ಕೂಡ ಅವರಿಂದ ಕೆಲಸ ಮಾಡಿಸಿಕೊಂಡವರು ಅವರಲ್ಲಿಗೆ ಹೋಗಿ ಒಂದೇ ಒಂದು ಸಾಂತ್ವನ ಹೇಳಿ ಬರುವುದಿಲ್ಲ. ಬದಲಿಗೆ ‘ಮೊನ್ನೆನೇ ಫೋನ್‌ನ್ಯಾಗ್ ಮಾತಾಡಿದೇನಿ...!’ ‘ರಿಪ್ (RIP) ಮೇಸೆಜ್ ಹಾಕಿದ್ದಿನಲ್ಲ  ನಾನೂ ಗ್ರುಪ್‌ದಾಗ’ ಸರಳವಾಗಿ ಹೇಳಿಬಿಡ್ತಾರೆ. ಆದರೆ ನಮ್ಮನ್ನೇ ನೆಚ್ಚಿಕೊಂಡು, ನಿಷ್ಠೆಯಿಂದ ಇದ್ದ ಆ ವ್ಯಕ್ತಿ ಬಳಿಗೆ ಹೋಗಿ ಸಣ್ಣದಾಗಿ ಬೆನ್ನು ಚಪ್ಪರಿಸಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡುವ ವಿಚಾರ ಬಹುತೇಕ ಜನರಲ್ಲಿ ಬರುವುದು ಕಡಿಮೆಯೇ?
ಇನ್ನೂ ಬಹುತೇಕ ಇತ್ತೀಚೆಗೆ ವಾಟ್ಸ್ ಆಪ್ ಬಂದ ಮೇಲೆ ಯಾರಾದರೂ ನಮಗೆ ಆತ್ಮೀಯರಿದ್ದವರ ಸಂಬಂಧಿಗಳು ತೀರಕೊಂಡಿದ್ದನ್ನು ಗ್ರುಪ್‌ಗೆ ಹಾಕಲಾಗುತ್ತದೆ. ಆ ರೀತಿ ಹಾಕುವುದು ರಿಪ್ ಮೆಸೇಜ್ ಮಾಡಿ ಸುಮ್ಮನೆ ಕುಳಿತುಕೊಳ್ಳಲಿ ಅಂತಲ್ಲ. ಇಂಥವರು ಹೀಗ್ಹೀಗೆ ದುಃಖದಲ್ಲಿದ್ದಾರೆ. ಸಾಧ್ಯವಾದರೇ ಹೋಗಿ ಸಾಂತ್ವನ ಹೇಳಿ ಬನ್ನಿ ಎಂಬ ಉದ್ದೇಶದಿಂದಲೇ ಪ್ರತಿಯೊಬ್ಬರು ಅಂತಹ ಮಾಹಿತಿಯನ್ನು ಶೇರ್ ಮಾಡುತ್ತಾರೆ. ಆದರೆ ಸಂಬಂಧಿಸಿದ ವ್ಯಕ್ತಿ ಗ್ರುಪ್‌ದಲ್ಲಿ ಇಲ್ಲದೇ ಹೋದರೂ ಬಹುತೇಕ ಜನ ರಿಪ್ ಮೆಸೇಜ್ ಮಾಡಿ ಸುಮ್ಮನೆ ಕುಳಿತುಬಿಡುತ್ತಾರೆ.
ಚಿತ್ರ ಕೃಪೆ : ಇಂಟರನೆಟ್
ಇತ್ತೀಚೆಗೆ ನಡೆದ ಘಟನೆ- ನಂಗೆ ಆತ್ಮೀಯರಾಗಿದ್ದ ಸ್ನೇಹಿತರೊಬ್ಬರೊಂದಿಗೆ ಅದ್ಯಾವುದೋ ವಿಷಯಕ್ಕೆ ಜಗಳ ಆಗಿ, ಮಾತುಗಳು ನಿಂತು ಹೋಗಿ ಒಂದೂವರೆ ತಿಂಗಳಾಗಿತ್ತು. ಎದುರಿಗೆ ಬಂದರೇ ಒಬ್ಬರ ಮುಖ ಒಬ್ಬರ ನೋಡುತ್ತಿರಲಿಲ್ಲ ಅಷ್ಟೊಂದು ವೈರತ್ವ ಸಾಧಿಸಿದ್ವಿ... ಇಬ್ಬರೂ ಸಾತ್ವಿಕರೇ ಆಗಿದ್ದ ಕಾರಣಕ್ಕೆ ಹೊಡೆದಾಟವೊಂದೇ ಆಗಿರಲಿಲ್ಲ ಅಷ್ಟೇ! ಹೀಗಿರಲು ಆ ವ್ಯಕ್ತಿಗೆ ಹಠಾತಾಗಿ ದುಃಖದ ಸನ್ನಿವೇಶ ಬಂತು. ಮಾತು ನಿಂತು ಹೋಗಿ, ವೈರಿಗಳೇ ಆಗಿದ್ದರೂ ಕೂಡ ಕೆಲ ಸ್ನೇಹಿತರೊಂದಿಗೆ ಸೇರಿಕೊಂಡು ನಾನು ಅವರ ಮನೆಗೆ ಹೋದೆ. ಕಾರಣ ಸ್ನೇಹದ ಸೆಳೆತ ಹಾಗಿತ್ತು. ನಾವು ಹೋದ ತಕ್ಷಣವೇ ಅಳುವುದಕ್ಕೆ ಶುರುವಿಟ್ಟುಕೊಂಡರು. ಅಷ್ಟು ದಿನದ ವೈರತ್ವ... ದ್ವೇಷ ಎಲ್ಲವನ್ನೂ ಮರೆತ ನಾನು ಎದೆಗಪ್ಪಿಕೊಂಡೆ.... ಇನ್ನೊಬ್ಬ ಸ್ನೇಹಿತರು ಬೆನ್ನ ಚಪ್ಪರಿಸಿದರು. ಹೀಗೆ ನಾವೆಲ್ಲರೂ ಸಾಂತ್ವನ ಹೇಳಿದ್ವಿ.. ಒಂದಿಷ್ಟು ಆತ್ಮಸ್ಥೈರ್ಯದ ಮಾತುಗಳನ್ನು ಹೇಳಿ ಬಂದ್ವಿ....
ಆಗ ನನಗೆ ಈ ಮೇಲಿನ ವಿಚಾರ ಹೊಳೆಯಿತು- ಸಮಾಜದಲ್ಲಿ ಈಗ ದುಃಖದಲ್ಲಿರುವವರ ಸಂತೈಸುವ ಕೈಗಳು ಬೇಕಾಗಿವೆ ಹೊರತು ರಿಪ್(RIP) ಮೆಸೇಜ್‌ಗಳಲ್ಲ...!!
ಸಾಮಾಜಿಕ ಜಾಲತಾಣಗಳ ಮಧ್ಯೆಯೂ ನಾವು ಸಾಮಾಜಿಕ ಜಾಣ್ಮೆಯನ್ನು ಉಳಿಸಿಕೊಳ್ಳಬೇಕಾಗಿದೆ ಈಗ.
ಚಿತ್ರ ಕೃಪೆ : ಇಂಟರನೆಟ್


No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...