Sunday, June 26, 2016

ಹುಬ್ಬಳ್ಳಿಯಲ್ಲಿ ಮತ್ತೇ ದಾಖಲೆ ಮಾಡಲಿದೆಯೇ ‘ಪೊಲೀಸನ ಮಗಳು’


ಬೆಂಗಳೂರಿನಲ್ಲಿ 1500, ಹುಬ್ಬಳ್ಳಿಯಲ್ಲಿಯೇ ಈ ಹಿಂದೆ 500 ದಾಖಲೆಗಳ ಪ್ರಯೋಗಗಳನ್ನು ಕಂಡಿರುವ ‘ಪೊಲೀಸನ ಮಗಳು’ ನಾಟಕ ಈಗ ಹುಬ್ಬಳ್ಳಿಯಲ್ಲಿ ಮತ್ತೊಂದು ದಾಖಲೆಗೆ ಮುಂದಾಗುತ್ತಿದೆ. ಹೌದು ಕೆಬಿಆರ್ ಡ್ರಾಮಾ ಕಂಪನಿಗೆ ಒಂದು ಖ್ಯಾತಿ ತಂದುಕೊಟ್ಟ ಈ ಪ್ರಖ್ಯಾತ ನಾಟಕ ಈಗ ಮತ್ತೇ ಹುಬ್ಬಳ್ಳಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಕಥೆ ಹಳೆಯದಾಗಿದ್ದರೂ ಹೊಸ ಚೈತನ್ಯದಿಂದಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಕರ್ತವ್ಯ ನಿಷ್ಠೆಯನ್ನೇ ತನ್ನ ಉಸಿರಾಗಿಸಿಕೊಂಡಿರುವ ಪೊಲೀಸ್ ಅಧಿಕಾರಿ ಚಂದ್ರಶೇಖರ, ಯಾವತ್ತಿಗೂ ಅಧಿಕಾರದ ಗತ್ತು, ಪ್ರಾಮಾಣಿಕ ಬದ್ಧತೆಯಲ್ಲಿ ರಾಜಿಯಾಗದವನು. ಆದರೆ ಇಂತಹ ಅಧಿಕಾರಿಯ ಮಗಳು, ತಾನೇ ಬಂಧಿಸಿ ಜೈಲಿಗಟ್ಟಿದ ಖದೀಮನ ಮಗಳ ಮೋಸದ ಪ್ರೇಮಪಾಶದಲ್ಲಿ ಬಿದ್ದಾಗ, ಅನುಭವಿಸುವ ಯಾತನೆ, ಅವಮಾನ, ನಿಷ್ಠೆ-ಸ್ವಾಭಿಮಾನವನ್ನೂ ಬಿಟ್ಟು, ತಾನೇ ಬೇಡಿ ಹಾಕಿದ್ದ ಕೈಗಳನ್ನು ಹಿಡಿದು ತನ್ನ ಮಗಳನ್ನು ನಿಮ್ಮ ಮನೆ ತುಂಬಿಸಿಕೊಳ್ಳಿ ಎಂದು ಹೇಳುವಾಗಿನ ಭಾವನಾತ್ಮಕ ಸನ್ನಿವೇಶ ಒಂದು ಕ್ಷಣ ನಮ್ಮ ಹೃದಯವನ್ನೇ ಕಲುಕಿಬಿಡುವಂತಿದೆ. ದರ್ಪದ ಅಧಿಕಾರಿಯ ಒಳಮನಸ್ಸಿನ ತೋಳಲಾಟ, ಬೇಗುದಿಗಳಿಗೆ ಪ್ರೇಕ್ಷಕರ ಮನಸ್ಸು ಕರಗಿ, ಕಣ್ಣೀರು ಬಂದೇ ಬಿಡುವಂತಿದೆ. ಈ ಪಾತ್ರಧಾರಿಯ ಅಭಿನಯ.
ಇನ್ನೂ ಖಳನಾಯಕ ಕಾಳಿಂಗನ ಪಾತ್ರದ ಕ್ರೌರ್ಯತೆಯ ಅಭಿನಯದಲ್ಲಿ ಗತ್ತಿನ ಕಳೆ ಇದೆ. ಈ ಪಾತ್ರದ ರೋಷಾವೇಷಗಳು ಮುಖಭಾವ, ಆಂಗಿಕ ಅಭಿನಯದಲ್ಲಿ ಶ್ರೀಮಂತವಾಗಿ ಮೂಡಿ ಬಂದಿವೆ.  ಇನ್ನೂ ಚಿತ್ರನಟರೂ ಆಗಿರುವ ಚಿಂದೋಡಿ ವಿಜಯಕುಮಾರರನ್ನು ಮುದುಕನ ಪಾತ್ರದಲ್ಲಿ ನೋಡುವುದೇ ಚೆಂದವೇನೋ. ಏಕೆಂದರೆ ಈ ಹಿಂದಿನ ಅನೇಕ ನಾಟಕಗಳಲ್ಲಿ ಮುದುಕನ ಹಾಸ್ಯ ಪಾತ್ರದ ಮೂಲಕವೇ ಹುಬ್ಬಳ್ಳಿಗರ ಮನಸ್ಸು ಗೆದ್ದಿರುವ ಅವರು ಇಲ್ಲಿಯೂ ಮೂದಿ ಕಾಮಣ್ಣನ ಪಾತ್ರದಲ್ಲಿ ಭರ್ಜರಿ ಕಾಮಿಡಿಯುಕ್ಕಿಸುತ್ತಾರೆ.
ಅಷ್ಟೇನೂ ಅಶ್ಲೀಲವಲ್ಲದ ದ್ವಂದ್ವಾರ್ಥದ ಸಂಭಾಷಣೆಗಳಿರುವ ಕಾರಣಕ್ಕೆ ಯಾವುದೇ ಮುಜುಗರಕ್ಕೆ ಒಳಗಾಗದೇ ಈ ನಾಟಕ ನೋಡಬಹುದು.
ಒಂದೇಡೆ ಹಾಸ್ಯ, ಮತ್ತೊಂದೆಡೆ ಕಳ್ಳರ ಅಟ್ಟಹಾಸ, ತಂದೆ-ಮಗಳ ಬಾಂಧವ್ಯದ ದುರುಪಯೋಗ, ನಿಷ್ಠಾವಂತ ಅಧಿಕಾರಿಗಳ ಸಾಹಸ. ಪ್ರೀತಿ ಮೋಸ ಎಂದರಿತೂ ಕೂಡ ಕಳ್ಳನ ಕೈಹಿಡಿದು ಅನುಭವಿಸಬಾರದಷ್ಟು ಕಷ್ಟಗಳನ್ನು ಅನುಭವಿಸುವ ಯುವತಿಯ ನೋವು. ಹೀಗೆ ವಿವಿಧ ಮಜಲುಗಳಲ್ಲಿ ಸಾಗುವ ನಾಟಕದ ಕಥೆ ಏನು ಅಂತಾ ಇಲ್ಲಿ ಬರೆಯುವುದಕ್ಕಿಂತ ನೀವೆ ಹೋಗಿ ನೋಡಿ ಬಂದರೆ ಒಳಿತು.

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...