Monday, August 24, 2020

ಅಂದಿನ ಪ್ರಸಾದ ಇಂದಿನ ವಿಷಾದ...

ನಾನು ಸುಳ್ಳುಗಾರ ಒಪ್ಪಿಕೊಳ್ಳುತ್ತೇನೆ; ಆಗಾಗ ಸುಳ್ಳು ಹೇಳುವ ರೂಢಿ ಇದ್ದೇ ಇದೆ. ಆದರೆ ಮಾಟ-ಮಂತ್ರ-ತಾಯತದ ಮಾಟಗಾರನಂತೂ ಅಲ್ಲವೇ ಅಲ್ಲ. ಅದೂ ಒಂದು ಹೆಣ್ಣು ಒಲಿಸಿಕೊಳ್ಳುವುದಕ್ಕೆ ಛೇ... ವಿಚಾರ ಮಾಡುವುದಕ್ಕೂ ಆಗದಂತಹ ಮಾತು. 

ಆದರೆ...ಆದರೆ... ಅಂದು ಅವಳ ಬಾಯಿಂದ ಆ ಮಾತು ಏಕೆ ಬಂತೋ! ಇಂದಿಗೂ ಗೊತ್ತಿಲ್ಲ. ಆ ಬಳಿಕ ಎಷ್ಟೋ ಸಲ ಸಿಕ್ಕರೂ ಅವಳು ಹೇಳಲೇ ಇಲ್ಲ. ಆದರೆ ಅಂದು ಕೊಟ್ಟ ಪ್ರಸಾದವನ್ನೂ ಕೈಯಲ್ಲಿ ತೆಗೆದುಕೊಂಡು ಕೆಲವೇ ಕ್ಷಣಗಳಲ್ಲಿ ಆಕೆ  ಮಲಪ್ರಭೆಗೆ ಎಸೆದು ಬಿಟ್ಟಿದ್ದಳು. ಯಾಕೆ??? ಇಂದಿಗೂ ಉತ್ತರ ಗೊತ್ತಿಲ್ಲ? ಕೇಳುವ ಗೊಡವೆಗೂ ನಾ ಹೋಗಿಲ್ಲ.

ಅಂದು ಆ ದಿನ:

ಅಂದು ನಾನು ಪುಣ್ಯ ಕ್ಷೇತ್ರಗಳ ದರ್ಶನ ಮಾಡಿಕೊಂಡು ಬಂದಿದ್ದೆ. ಎಲ್ಲ ಸ್ನೇಹಿತರಿಗೂ ಪ್ರಸಾದ ಕೊಡುತ್ತಿದ್ದೆ. ನನ್ನ ಸ್ನೇಹಿತೆ ಅಲ್ವಾ ಎಂದುಕೊಂಡು  ಅವಳಿಗೂ ಪ್ರಸಾದ ಕೊಡುವಂತೆ ಮನದಿಂಗಿಂತ ಚಟಪಡಿಸಿತ್ತು. ಆಗಲೇ ಅವಳ ಮನೆಯ ಟೆಲಿಫೋನ್​ಗೆ ಕ್ವಾಯಿ ಬಾಕ್ಸ್​ದಿಂದ ಫೋನಾಯಿಸಿ -ಮಲಪ್ರಭೆ ದಂಡೆಯ ಕಡೆ ಬಂದರೆ ಸಿಗು- ಅಂದೆ. ಅದಕ್ಕೆ ಅವಳು ‘ಸಂಜೆ ನಾನು ವಗ್ಯಾನ್ ಒಗಿಯಾಕ್ (ಬಟ್ಟೆ ವಾಷ್) ಬರುವವಳಿದ್ದೇನೆ. ಅಲ್ಲಿ ಸಿಗು’ ಅಂತಾ ಫೋನ್ ಇಟ್ಟಳು.

ನಾನು ಸಂಜೆ 4ರ ಹೊತ್ತು ಕೈಯಲ್ಲಿ ಒಂದು ಬ್ಯಾಗ್ ಹಿಡಿದುಕೊಂಡು  ಅಲ್ಲಿ ಹೋದೆ. ಅವಳು ಬಟ್ಟೆಯ ಬುಟ್ಟಿ ಹೊತ್ತುಕೊಂಡು ಮನೆಯಿಂದ ಬಂದಳು. ಆಗ ಅವಳ ಕೈಗೆ ಪ್ರಸಾದದ ಚೀಲ ಕೊಟ್ಟೆ. ಅದರಲ್ಲಿ ಚಿಕ್ಕ ಚಿಕ್ಕ ಸಕ್ಕರೆ ತುಂಡಿನ ಪ್ರಸಾದ, ಕುಂಕುಮ, ಲಾಡು ಇತ್ತು. ಅದನ್ನು ಕೈಗೆ ತೆಗೆದುಕೊಂಡು ನೋಡಿದ ಅವಳಿಗೆ ಮೊದಲು ಕಂಡಿದ್ದೇ ಕುಂಕುಮ ಮತ್ತು ಲಾಡು ಚೀಟಿ ಅದನ್ನು ಆಕೆ ಏನೆಂದು ತಿಳಿದುಕೊಂಡಳೋ ಗೊತ್ತಿಲ್ಲ. ತೆಗೆದುಕೊಂಡವಳೇ ಮಲಪ್ರಭಾ ನದಿಗೆ ಎಸೆದು ಬಿಟ್ಟಳು.

ಅಷ್ಟಕ್ಕೆ ಸುಮ್ಮನಾಗದ ಅವಳು ‘ಏನೋ ನನ್ನ ಜೊತೆ ಇದೆಲ್ಲಾ ಇಟ್ಟುಕೊಳ್ಳಬೇಡ. ನೀನು ಒಳ್ಳೆಯ ಸ್ನೇಹಿತ ಆಗಿ ಇರ್ತಿಯಾ ಅಂದುಕೊಂಡಿದ್ದೆ. ಆದರೆ ಈಗ ನೋಡಿದರೆ ನನನ್ನು ಒಲಿಸಿಕೊಳ್ಳಬೇಕು ಎಂದುಕೊಂಡು ಮಾಟ ಮಾಡಕೊಂಡು ಬಂದಿ ಏನ್; ಮಾಡಕಿ (ವಾಮಾಚಾರ) ಮಾಡಿಸ್ತೀಯಾ. ಪಾಪಿ.!! ಕುಂಕುಮ-ಲಿಂಬೆಕಾಯಿ ಮಂತ್ರಿಸಿಕೊಂಡು ಬಂದೀ ಏನು’ ಎಂದವಳು ಮುಖದ ಮೇಲೆ ಉಗಿದು ಬರ... ಬರ ಹೋಗಿಯೇ ಬಿಟ್ಟಳು.

ನಾನು ಅಲ್ಲಿ ನಿಲ್ಲಲಾಗದೇ ನನ್ನ ಕಟ್ಟಿಗೆ ಪೇಡಲ್ನ ಬ್ರೇಕ್ ಇಲ್ಲದ ಸೈಕಲ್ (ಬಹುಷಃ ನನ್ನ ಲೈಫ್‌ಗೂ ಆವಾಗ ಯಾವುದೇ ಬ್ರೇಕ್ ಸಿಕ್ಕಿರಲಿಲ್ಲ) ತುಳಿಯುತ್ತಾ ಮನೆ ಕಡೆಗೆ ಬಂದೆ. ನಾನು ಇವತ್ತಿಗೂ ಅವಳಿಗೆ ಅದೇ ಹೇಳೊದು. ನಾನು ಸುಳ್ಳು ಹೇಳುತ್ತೇನೆ. ನಿಜ ಕೆಲವೊಂದು ವಿಷಯದಲ್ಲಿ ಶುದ್ಧ ಶಕುನಿಯೂ ಆಗಿ ಬಿಡುತ್ತೇನೆ. ಇನ್ನು ಸುಳ್ಳಿನ ವಿಷಯದಲ್ಲಿ ಸ್ನೇಹಿತರು ನೀನು ಸಾವಿರ ಸುಳ್ಳಿನ ಸರದಾರ ಬೀಡಲೇ...!’ ಎಂದು ಲೇವಡಿಯೂ ಮಾಡುತ್ತಾರೆ. ಅದನ್ನೆಲ್ಲಾ ಒಪ್ಪಿಕೊಳ್ಳುತ್ತೇನೆ. ಆದರೆ ಯಾವತ್ತಿಗೂ ಮಾಟ-ಮಂತ್ರದಂತಹ ಹೊಲಸು ಕೆಲಸಕ್ಕೆ ನಾನು ಕೈ ಹಾಕಿರಲಿಲ್ಲ.

ಒಂದೇಡೆ ನನ್ನ ಮನದೊಳಗೆ ಇಷ್ಟೆಲ್ಲ ಸ್ವಗತಃಗಳು ಗುದಮುರಗಿ ಹಿಡಿದಾಗಲೇ, ಅತ್ತ ಅವಳು ಅಷ್ಟಕ್ಕೆ ಆ ವಿಷಯ ಬಿಡಲಿಲ್ಲ. ನನಗೆ ಅಂವಾ ಮಾಡಕಿ ಮಾಡಿಸ್ಯಾನ್  ಅಂತಾ ತನ್ನ ಸೋದರ ಮಾವನಿಗೆ ದೂರು ಹೇಳಿ ಬಿಟ್ಟಿದ್ದಳು. ಅವನೋ ದೊಡ್ಡ ಪುಡಿ ರೌಡಿ, ಮರುದಿನದ ಆ ಇಳಿ ಸಂಜೆ ಹೊತ್ತಿನಲ್ಲಿ ನಾನು ಅದೇ ಮಲಪ್ರಭೆಯ ದಡದಲ್ಲಿ ಯಾರಿಗೋ ಗ್ಯಾಸ್​ಮೆಂಟ್ (ಬಯೋಗ್ಯಾಸ್ ಘಟಕ) ಕಟ್ಟಿ ಕೊಡೊವುದಕ್ಕೆ ಉಸುಕು (ಮರಳು) ಕಡಿಮೆಯಾಗಿದೆ ಅಂತಾ ಟ್ರ್ಯಾಕ್ಟರ್​ಗೆ ಮರಳು ತುಂಬುತ್ತಿದ್ದೆ.

ಆ ಕಡೆಯಿಂದ ಅವರ ಸೋದರ ಮಾವ್ ಎಂ80 ಏರಿ ಬಂದೇ ಬಿಟ್ಟನಲ್ಲ. ಆತ ಹೊಳಿ(ನದಿ) ದಂಡಿ ಮ್ಯಾಲ್ ನಿಂತು ಅವಾಜು ಹಾಕಿದ್ದೆ ಹಾಕಿದ್ದು.... ಎಲ್ಲಿ ನನ್ನ ಕೊಂದ ಬಿಡ್ತಾನೇನೂ ಅಂತಾ ಹೆದರಿಯೇ ಬಿಟ್ಟಿದ್ದೆ. ಆದ್ರೆ ಬಿಟ್ಟರೇ ಆತನನ್ನು ಗುದ್ದಿಯೇ ಕೊಲ್ಲಬಲ್ಲಷ್ಟು ನಾನು ಬಲಾಢ್ಯ. ನನ್ನ ಅಳೇತ್ತರ, ನನ್ನ ದೇಹ ನೋಡಿ ಆತ ಆ ಧೈರ್ಯ ಮಾಡುವುದಿಲ್ಲ ಎಂಬ ನಂಬಿಕೆ ನನಗಿತ್ತು. ಆದರೆ ಆಕೆ ಹೇಳಿದ್ದ ಮಾಡಕಿ ಮಾಡಿಸ್ಯಾನ ಅನ್ನೋ ಅಪವಾದ ನನ್ನ ಶಕ್ತಿಯನ್ನೆಲ್ಲ ಅಂದು ಹೊಸಕಿ ಹಾಕಿತ್ತು. ಆತ ಸಾಕಷ್ಟು ಬೈದು. ನಮ್ಮ ಹುಡುಗಿ ಉಸಾಬರಿಗೆ ಬಂದ್ರ ಮಗನ ಗುಂಡ ಹಾಕಿ ಕೊಂದ ಬಿಡ್ತೇನಿ ಅಂದಾ. ನನ್ನ ಪುಣ್ಯಕ್ಕೆ ಆತ ಮನೆಯಿಂದ ಅವತ್ತು ಬಂದೂಕು ತಂದಿರಲಿಲ್ಲ. ಸೇಫ್ ಆದೆ ಅಂತಾ ನಿಟ್ಟುಸಿರು ಬಿಟ್ಟೆ.

ಆದ್ರೆ ಇದು ಬೆಳೆಯುತ್ತ ಹೋದರೆ... ನಾನು ಮಾಡದ ತಪ್ಪಿಗೆ ಏನೋ ಅನುಭವಿಸಬೇಕಾಗುತ್ತದೆ. ಮೊದಲೆ ಗಡಿಗೆಯ ಬಾಯಿ ಮುಚ್ಚಬಹುದು. ಆದ್ರೆ ಜನರೆ ಬಾಯಿ. ಅದು ಕಿವಿಯಿಂದ ಕಿವಿಗೆ ಬಾಯಿಂದ ಬಾಯಿಗೆ ಹರಡಿ ಬಿಟ್ರೆ ಗತಿ ಏನು? ಅದರಲ್ಲಿಯೂ ಮನೆಯಲ್ಲಿ ಈ ವಿಷಯ ಗೊತ್ತಾದ್ರೆ ಊರು ಹಿರೇತನ ಮಾಡುವ ಅಪ್ಪನ ಮರ್ಯಾದೆ ಏನಾಗಬೇಡ? ಅನ್ನೋ ಹೆದರಿಕೆಯೋ ಹುಟ್ಟಿತು. ಆ ಕ್ಷಣವೇ ಅವತ್ತೇ ಅವತ್ತೇ ಅಲ್ಲಿಂದಲೇ ಊರು ಬಿಟ್ಟು, ಮಲಪ್ರಭೆಯ ಆಚೆ ದಡದಿಂದ ಈಚೆ ಉಟ್ಟ ಬಟ್ಟೆಯಲ್ಲೇ ಬಂದು ಬಿಟ್ಟೆ. ಅವತ್ತು ಯಾರ ಗ್ಯಾಸಮೆಂಟ್ ಕಟ್ಟೋಕೆ ಉಸುಕು ತುಂಬುತ್ತಿದ್ದೆ ಇಂದಿಗೂ ನೆನಪಿಲ್ಲ. ನನ್ನ ಆ ಸೈಕಲ್ ಅಲ್ಲೇ ಉಳಿದು ಹೋಯ್ತು. ಅದನ್ನು ಯಾರಾದ್ರೂ ಮನೆಗೆ ಒಯ್ದರಾ? ಏನು ಎತ್ತ ಗೊತ್ತಿಲ್ಲ. ಊರಲ್ಲಿ ಕಲಿಯಬೇಕಿದ್ದ ನನ್ನ ಇಷ್ಟದ ಗೌಂಡಿ ಕೆಲಸವೂ ಅರ್ಧೋಟ್ (ಅರ್ಧ) ಆಗ್ಹೋಯ್ತು.

ಅಂದು ಊರಿನಿಂದ ಓಡಿದವನೇ ನಿಲ್ಲಲೇ ಇಲ್ಲ. ಓಡಿದ್ದೇ ಓಡಿದ್ದು. ಆ ಓಟ ಮುಂಬೈವರೆಗೂ ನಿಲ್ಲಲೇ ಇಲ್ಲ. ಅಲ್ಲಿ ಊರೊಳಗೆ ಗೌಂಡಿಗಳ ಕೈಯಲ್ಲಿ ಮಾಡಿದ್ದ ಕೆಲಸವೇ ಕೈ ಹಿಡಿಯಿತು. ಕೊನೆಗೂ ಗೌಂಡಿಯಾದೆ. ಅಲ್ಲಲ್ಲ. ಈಗ ನಾನೇ ಮನೆಗಳನ್ನು ಕಟ್ಟಿಸಿಕೊಡುವವನು ಅಂದ್ರೆ ನಮ್ಮೂರ ಭಾಷೆಯಲ್ಲಿ ನಾನೀಗ ಶ್ರೀಮಂತ ಮೇಸ್ತ್ರಿ. ಮುಂಬೈಗೆ ಹೋದ ನಾನು ಮೇಸ್ತ್ರಿಯಾಗಿ,  ಬೆಳೆದು ಕೊಲ್ಲಾಪುರಕ್ಕೆ ಮರಳಿ ಬಂದು ಹತ್ತಾರು ಹುಡುಗರನ್ನು ಕೆಲಸಕ್ಕೆ ಇಟ್ಟುಕೊಂಡು ಕಾರಿನಲ್ಲಿ ಓಡಾಡುತ್ತಿದ್ದೇನೆ. ಆಗೊಮ್ಮೆ, ಅಲ್ಲಲ್ಲ ಆಗಾಗ ಅವಳು ಕೊಲ್ಲಾಪುರದ ಬೀದಿಗಳಲ್ಲಿ ಇಂದಿಗೂ ಸಿಗ್ತಾಳೆ. ಯಾಕಂದ್ರೆ ಕಾಕತಾಳೀಯ ಎಂಬಂತೆ ಆಕೆಯನ್ನು ನಾನು ಬದುಕು ಕೊಟ್ಟಿಕೊಂಡಿರುವ ಕೊಲ್ಲಾಪುರಕ್ಕೆ ಮದುವೆ ಮಾಡಿಕೊಟ್ಟಿದ್ದಾರೆ. ಅಂದು ಅವಳಿಂದ ಊರ ಬಿಟ್ಟ ನಾನು ಮರಳಿ ಮಲಪ್ರಭೆಯ ಈಚೆ ದಂಡೆ ದಾಟಿ ಆಚೆಗೆ ಹೋಗಿಲ್ಲ. ಆದ್ರೆ ಅವಳು ನಾನಿರೋ ಊರಿನಲ್ಲಿಯೇ ಬಂದು ಬಿಟ್ಟಿದ್ದಾಳೆ.  ಅಷ್ಟೇ ಏಕೆ! ಅವಳ ಗಂಡನದೊಂದು ಬಟ್ಟೆ ಅಂಗಡಿ ಇದೆ. ಸಾಕಷ್ಟು ಗಳಿಸಿದ್ದಾನೆ(ನನ್ನಷ್ಟು ಅಲ್ಲ ಅನ್ನೋದು ನನ್ನ ಅಹಂ) ಅವರ ಮನೆಯನ್ನೂ ಸಹ ನಾನೇ ಡಿಸೈನ್ ಮಾಡಿ, ನನ್ನದೇ ಫ್ಲ್ಯಾನಿಂಗ್​ನಲ್ಲಿ ಕಟ್ಟಿಕೊಟ್ಟೆ. ಆದರೆ ಇಂದಿಗೂ ಅವಳು ಮಾತಿಗೆ ಸಿಕ್ಕಾಗ ಅಂದ್ಯಾಕೇ ನೀ ನಂಗೆ ಮಾಡಾಕಿ ಮಾಡಸಾಂವ ಅಂದೇ ಕೇಳಬೇಕು ಅನ್ಸುತ್ತೆ. ಆದ್ರೆ ಅದು ಈಗ ಬೇಕಾ ಎಂದವನೇ ಮುಂದೆ ಹೋಗ್ತಿನಿ.

ಯಾಕಂದ್ರೆ ಅಂದಿನ ಪ್ರಸಾದದ ವಿಷಯ ಇಂದಿಗೆ ವಿಷಾದದ ನೆನಪು.

ಅಂದಿನ ಪ್ರಸ್ತುತ ಇಂದಿಗೆ ಅಪ್ರಸ್ತುತ.


No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...