Sunday, June 26, 2011

ಅವರೊಳ್ಳಿ-ಬಿಳಕಿ `ಮಳೆ ಜಾತ್ರೆ'

೨೪ ಗಂಟೆಗಳ ನಿರಂತರ ಹೊನ್ನಾಟ. ಕಾಲಲ್ಲಿ ಚಪ್ಪಲಿಯಿಲ್ಲದೇ ಆಬಾಲವೃದ್ಧರಾದಿಯಾಗಿ ದೇವಿಯರನ್ನು ಹೊತ್ತು ಓಡಾಡಿದ ಭಕ್ತರ ದಂಡು. ಇದನ್ನೆಲ್ಲಾ ನೋಡಿ ಅಬ್ಬರದಿಂದ ಸುರಿದ ವರುಣ. ಇದು ಖಾನಾಪುರ ತಾಲೂಕಿನ ಅವರೊಳ್ಳಿ-ಬಿಳಕಿ ಗ್ರಾಮದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ `ಮಳೆ ಜಾತ್ರೆ' ಎಂದೇ ಖ್ಯಾತಿ ಪಡೆದುಕೊಂಡಿರುವ ಗ್ರಾಮದೇವತೆಯರ ಜಾತ್ರಾ ಮಹೋತ್ಸವದ ದೃಶ್ಯ. ಅವರೊಳ್ಳಿ-ಬಿಳಕಿ ಗ್ರಾಮದೇವತೆಯರ ಜಾತ್ರಾ ಮಹೋತ್ಸವ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುತ್ತದೆ. ಈ ಜಾತ್ರೆಯ ವಿಶೇಷವೆಂದರೆ ಸುರಿಯುವ ಮಳೆಯ ಮಧ್ಯೆಯೇ ದೇವಿಯರ ಹೊನ್ನಾಟ ನಡೆಯುವುದು ಹಾಗೂ ಬೇರೆ ಕಡೆ ಗ್ರಾಮದೇವತೆಯರ ಜಾತ್ರೆ ಬಿಸಿಲಿನಲ್ಲಿ ನಡೆದರೆ ಈ ಜಾತ್ರೆ ಮಳೆಗಾಲದಲ್ಲಿಯೇ ನಡೆಯುತ್ತದೆ. ಅಲ್ಲದೇ ಬೇರೆ ಗ್ರಾಮಗಳಲ್ಲಿ ಹೊನ್ನಾಟ ಮುಗಿದ ಬಳಿಕ ದೇವಿಯರನ್ನು ಒಂದೇಡೆ ಪ್ರತಿಷ್ಠಾಪಿಸಲಾಗುತ್ತದೆ. ಅಲ್ಲಿಯೇ ಬಂದು ಜನ ದೇವಿಯರ ಉಡಿ ತುಂಬುತ್ತಾರೆ. ಆದರೆ ಈ ಗ್ರಾಮದಲ್ಲಿ ಹಾಗಿಲ್ಲ. ಹೊನ್ನಾಟಕ್ಕೆ ಹೊರಟ ದೇವಿಯರು ನಿರಂತರ ೨೪ ಗಂಟೆಗಳ ಕಾಲ ಎಲ್ಲಿಯೂ ಪ್ರತಿಷ್ಠಾಪನೆಗೊಳ್ಳುವುದಿಲ್ಲ. ಬದಲಿಗೆ ಸ್ವಂತಹ ದೇವಿಯರೇ ಹೊನ್ನಾಟದ ಮೂಲಕ ಭಕ್ತರ ಮನೆಗಳಿಗೆ ತೆರಳಿ ಉಡಿ ತುಂಬಿಸಿಕೊಳ್ಳುತ್ತಾರೆ. ಕಳೆದ ಮಂಗಳವಾರ (ದಿ.೨೧ ರಂದು) ಸಂಜೆ ಹೊನ್ನಾಟದೊಂದಿಗೆ ಆರಂಭಗೊಂಡ ಈ ಜಾತ್ರಾ ಮಹೋತ್ಸವದಲ್ಲಿ ಮರುದಿನ ಸಂಜೆಯವರೆಗೂ ನಿರಂತರ ೨೪ ಗಂಟೆಗಳ ಕಾಲ ದೇವಿಯರು ಹೊನ್ನಾಟವನ್ನಾಡಿದರು. ಬುಧವಾರ ಸಂಜೆದೇವಿಯರು ಸೀಮೆಗೆ ತೆರಳುವ ಮೂಲಕ ಜಾತ್ರಾ ಮಹೋತ್ಸವ ಸಮಾರೋಪಗೊಂಡಿತು. ಮಂಗಳವಾರ ಸಂಜೆ ದೇವಿಯರ ಹೊನ್ನಾಟ ಆರಂಭಗೊಳ್ಳುತ್ತಿದ್ದಂತೆಯೇ ಮಳೆಯೂ ಸಹ ಅಬ್ಬರ ಪಡೆದುಕೊಂಡಿತ್ತು. ಹೀಗಾಗಿ ದೇವಿಯರ ಪ್ರತಿಮೆಗಳಿಗೆ ಯಾವುದೇ ಧಕ್ಕೆಯಾಗದಂತೆ ಪ್ಲಾಸ್ಟಿಕ್ ಕವರ್‌ಗಳನ್ನು ಹಾಕಲಾಗಿತ್ತು. ಆದರೆ ಆಬಾಲವೃದ್ಧರಾದಿಯಾಗಿ ಭಕ್ತರು ಮಳೆಯಲ್ಲಿ ತೋಯಿಸಿಕೊಳ್ಳುತ್ತಲೇ ದೇವಿಯರನ್ನು ಹೊತ್ತುಕೊಂಡು ಹೊನ್ನಾಟದಲ್ಲಿ ಪಾಲ್ಗೊಂಡರು. ಈ ಸುರಿಯುವ ಮಳೆಯ ಮಧ್ಯೆಯೂ ಸಹ ಭಕ್ತ ಸಮೂಹಕ್ಕೆ ಕೊರತೆಯಿರಲಿಲ್ಲ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮಳೆಯಲ್ಲಿಯೇ ನಿಂತು ದೇವಿಯರ ಹೊನ್ನಾಟ ವೀಕ್ಷಿಸಿದರು.

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...