Monday, March 7, 2016

ಮಲ್ಟಿಪ್ಲೆಕ್ಸ್‌ಗಳ ಮೊಂಡುವಾದಕ್ಕೆ ಲಗಾಮು ಹಾಕುವವರ‌್ಯಾರು

ರಾಜ್ಯದಲ್ಲಿ ತನ್ನ ಖಜಾನೆ ತುಂಬಿಸಿಕೊಳ್ಳುತ್ತಿರುವ ಮಲ್ಟಿಪ್ಲೆಕ್ಸ್‌ಗಳು, ಒಂದಲ್ಲ ಒಂದು ರೀತಿಯಲ್ಲಿ ಕನ್ನಡ ಚಿತ್ರಗಳಿಗೆ ಧಕ್ಕೆ ಮಾಡುತ್ತಲೇ ಬರುತ್ತಿವೆ. ಕನ್ನಡ ಸಿನಿಮಾಗಳ ವಿಷಯದಲ್ಲಿ ಮೊಂಡುವಾದ ಪ್ರದರ್ಶಿಸುತ್ತಿವೆ ಎಂಬ ಆರೋಪ ಆಗಾಗ ಕೇಳುತ್ತಲೇ ಇದೆ. ಈಗ ಅದಕ್ಕೆ ಹೊಸ ಸೇರ್ಪಡೆ ಬುಕ್ ಮೈ ಶೋ ಹೈ ಡ್ರಾಮಾ. ಏತನ್ಮಧ್ಯೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ಬೆಲೆ ನಿಗದಿಯಾಗಬೇಕೆಂಬ ದೊಡ್ಡ ಕೂಗು ಹೋರಾಟದ ಸ್ವರೂಪ ಪಡೆದುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಇಷ್ಟೆಲ್ಲ ನಡೆಯುತ್ತಿದ್ದರೂ ಮಲ್ಟಿಪ್ಲೆಕ್ಸ್‌ಗಳನ್ನು ನಿಯಂತ್ರಿಸಬೇಕಾದ ಸರ್ಕಾರ ಮಾತ್ರ ಸುಮ್ಮನೆ ಕುಳಿತಿದೆ. ಆದರೆ ಮಹಾರಾಷ್ಟ್ರದಲ್ಲಿ ಹೀಗಿಲ್ಲ. ಅಲ್ಲಿರುವ ಮಲ್ಟಿಪ್ಲೆಕ್ಸ್‌ಗಳು ಸರ್ಕಾರದ ಬಿಡಿ ಹಿಡಿತದಲ್ಲಿದೆ. ಪಡ್ನವೀಸ್ ಮುಖ್ಯಮಂತ್ರಿಯಾದ ಬಳಿಕ ಹಲವು ಕಠಿಣ ನಿಯಮಗಳನ್ನು ಅಲ್ಲಿ ಜಾರಿಗೆ ತಂದಿದ್ದಾರೆ. ಮುಖ್ಯವಾಗಿ ಮರಾಠಿ ಭಾಷೆಯ ಸಿನಿಮಾಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದು(ಪ್ರೈಮ್ ಟೈಮ್‌ನಲ್ಲಿ ಪ್ರದರ್ಶನ) ಟಿಕೆಟ್ ಬೆಲೆಯಲ್ಲಿ ಅಜಗಜಾಂತರ ವ್ಯತ್ಯಾಸ ಮಾಡಕೂಡದರು. ಆಹಾರ ಪದಾರ್ಥಗಳು ಹಾಗೂ ನೀರಿನ ಬಾಟಲಿಗಳಿಗೆ ನಿಗದಿತ ಬೆಲೆಗಿಂತ ಹೆಚ್ಚು ಹಣ ಪಡೆದುಕೊಳ್ಳುವಂತಿಲ್ಲ. ಆಹಾರ ಪದಾರ್ಥ ಮಾರಾಟಕ್ಕೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳಿಂದ (ಮಹಾನಗರ ಪಾಲಿಕೆ) ಪಡೆದ ಅನುಮತಿ ಪತ್ರ ಹಾಗೂ ದರಪಟ್ಟಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಆದೇಶಿಸಿದೆ. ಜೊತೆಗೆ ಇದರ ಮೇಲೆ ನಿಗಾ ಇಡುವುದಕ್ಕೆ ಕೆಲ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ ಇಂತಹ ದಿಟ್ಟತನ ಮಾತ್ರ ಕರ್ನಾಟಕ ಸರ್ಕಾರದಲ್ಲಿ ಕಂಡು ಬರುತ್ತಿಲ್ಲ. ಕನ್ನಡ ಸಿನಿಮಾಗಳ ಟಿಕೆಟ್‌ಗಾಗಿ ಬುಕ್ ಮೈ ಶೋದಲ್ಲಿ ನೋಡಿದಾಗ ಸೋಲ್ಡ್ ಔಟ್ ತೋರಿಸಿ ಕನ್ನಡ ಸಿನಿಮಾಗಳ ಎತ್ತಂಗಡಿ ಮಾಡಿಸುತ್ತಿರುವ ಜೊತೆ ಜೊತೆಗೆ ಕೆಲವರು ಕಡೆ, ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾ ಟಿಕೆಟ್ ಪಡೆದುಕೊಳ್ಳಬೇಕಾದರೆ, ಟಿಕೆಟ್ ಜೊತೆಗೆ ಕಾಂಬೋ ಫುಡ್ ಕೂಪನ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂಬ ನಿಯಮವೂ ಇದೆ(ಹುಬ್ಬಳ್ಳಿಯ ಮಲ್ಟಿಪ್ಲೆಕ್ಸ್ ಒಂದರಲ್ಲಿ ಈ ರೀತಿ ನಡೆಯುತ್ತಿರುವುದನ್ನು ಈ ಹಿಂದೆ ವಿಜಯವಾಣಿಯಲ್ಲಿ ವರದಿ ಮಾಡಲಾಗಿತ್ತು) ಫುಡ್ ಕೂಪನ್ ಇಲ್ಲದೇ ಟಿಕೆಟ್ ಸಿಗುವುದೇ ಇಲ್ಲ. ಹೀಗಾಗಿ ಮೂಲ ಟಿಕೆಟ್ ಬೆಲೆಗಿಂತ ಕಾಂಬೋ ಕೂಪನ್‌ಗೆ ಇರುವ ಮತ್ತಷ್ಟು ಹಣವನ್ನೂ ಕೊಟ್ಟು ಸಿನಿಮಾ ನೋಡಬೇಕಾದ ಅನಿವಾರ್ಯತೆ ಕನ್ನಡ ಪ್ರೇಕ್ಷಕರಿಗೆ ಆಗಾಗ ಎದುರಾಗುತ್ತಿದೆ. ಈ ಮೂಲಕ ಪ್ರೇಕ್ಷಕರ ಸುಲಿಗೆಯನ್ನೂ ಮಾಡುತ್ತಿದ್ದಾರೆ. ಇಲ್ಲೊಬ್ಬ ದಿಟ್ಟ ಜಿಲ್ಲಾಧಿಕಾರಿ ಬೆಳಗಾವಿ ಜಿಲ್ಲಾಧಿಕಾರಿ ಎನ್. ಜಯರಾಂ ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ದಿಟ್ಟ ನಿಲುವು ಪ್ರದರ್ಶಿಸಿದ್ದಾರೆ. ತಿಂಗಳಿಗೊಮ್ಮೆ ಸಭೆ ನಡೆಸುವ ಅವರು, ಆಹಾರ ಪದಾರ್ಥಗಳು ಹಾಗೂ ನೀರಿನ ಬಾಟಲಿಗಳಿಗೆ ಹೆಚ್ಚು ಹಣ ಪಡೆದುಕೊಳ್ಳದಂತೆ ತಾಕೀತು ಮಾಡಿದ್ದಾರೆ. ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ ದುಬಾರಿ ಪಾರ್ಕಿಂಗ್ ಶುಲ್ಕವನ್ನು ಕಡಿಮೆ ಮಾಡಿದ್ದಾರೆ. ತಮ್ಮ ಆದೇಶವನ್ನು ಮಲ್ಟಿಪ್ಲೆಕ್ಸ್‌ಗಳು ಪಾಲನೆ ಮಾಡುತ್ತಿವೆಯೇ ಎನ್ನುವುದರ ಮೇಲೆ ಖುದ್ದು ನಿಗಾ ಇಟ್ಟಿದ್ದಾರೆ. ಆದರೆ ಈ ಕಾಳಜಿ ಬೇರೆ ಜಿಲ್ಲೆಗಳಲ್ಲಿ ಕಂಡು ಬಂದಿಲ್ಲ. ಏಕೆಂದರೆ ಪ್ರತಿಯೊಂದು ಜಿಲ್ಲೆಯ ಚಿತ್ರ ಪ್ರದರ್ಶಕರು ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯೊಂದರ ಅಡಿಯಲ್ಲಿ ಬರುತ್ತಾರೆ. ಆಗಾಗ ಸಭೆ ನಡೆಸಿ, ನಿಯಮಗಳ ಉಲ್ಲಂಘನೆ ಬಗ್ಗೆ ಪುನರ್ ಮನನ ಆಗುತ್ತಿರಬೇಕು. ಆದರೆ ಎಲ್ಲಿಯೂ ಅದು ಆಗುತ್ತಿಲ್ಲ. ಈಗ ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್‌ಗಳ ಮೊಂಡುವಾದದ ವಿರುದ್ಧ ಆಕ್ರೋಶಗಳು ಭುಗಿಲೇಳುತ್ತಿದ್ದು, ಇನ್ನಾದರೂ ಸರ್ಕಾರ ಕನ್ನಡ ಚಲನಚಿತ್ರಗಳನ್ನು ಉಳಿಸುವ ವಿಷಯದಲ್ಲಿ ಕಾಳಜಿ ತೋರಬೇಕಿದೆ. ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಮಲ್ಟಿಪ್ಲೆಕ್ಸ್‌ಗಳು ಸರ್ಕಾರದ ನಿಯಂತ್ರಣಕ್ಕೆ ಬರಬೇಕಿದೆ. ನಿರ್ದೇಶಕ ದಯಾಳ ಪದ್ಮನಾಭನ್ ಆನ್‌ಲೈನ್‌ನಲ್ಲಿ ಫಿಟಿಸೆನ್ ಪೇಜ್ ಆರಂಭಿಸುತ್ತಿದ್ದಂತೆಯೇ ಚಿತ್ರರಂಗದ ಗಣ್ಯರೆನಿಸಿಕೊಂಡವರೂ ಎಚ್ಚೆತ್ತುಕೊಂಡಿದ್ದಾರೆ. ಆದರೆ ಇಲ್ಲಿಯವರೆಗೆ ಸರ್ಕಾರ ಮಾತ್ರ ಏನು ಮಾಡಿಲ್ಲ. ಇನ್ನೂ ಕನ್ನಡಪರ ಸಂಘಟನೆಗಳು, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ರಾಜ್ಯ ಚಲನಚಿತ್ರ ಅಕಾಡೆಮಿಯೂ ಜಾಣ ಮೌನ ವಹಿಸಿವೆ. ಚಿತ್ರರಂಗದ ಮೂಲಕವೇ ಬೆಳೆದು ವಿಧಾನ ಪರಿಷತ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡವರೂ ಮೌನವಾಗಿದ್ದಾರೆ. ದಯಾಳರ ಪ್ರಯತ್ನದಿಂದಾಗಿಯಾದರೂ ಚಿತ್ರರಂಗದ ದೊಡ್ಡ ದೊಡ್ಡ ಮಂದಿ ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದಾರೆ. ಆದರೆ ಇದು ತೋರಿಕೆಗೆ ಆಗದಿರಲಿ. ದಯಾಳ ಅವರು ಆರಂಭಿಸಿರುವ ಹೋರಾಟದ ಲಿಂಕ್. ನೀವೂ ಬೆಂಬಲಿಸಿ... https://www.change.org/p/goverment-of-karnataka-multiplexes-in-karnataka-should-be-ordered-to-fix-the-ticket-cost-as-120-for-all-films?recruiter=502175783&utm_source=share_petition&utm_medium=sms

1 comment:

  1. ನಿಮ್ಮ ಬರಹವು ಅತ್ಯಂತ ಕಾಳಜಿ ದಾಯಕದ ಕಡೆ ಇರುತ್ತದೆ..

    ReplyDelete

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...