Friday, May 27, 2016

ಅಪೂರ್ವ... ಕಡ್ಡಾಯವಾಗಿ ಇಂಗ್ಲಿಷ್ ಬಲ್ಲವರಿಗಾಗಿ ಮಾತ್ರ....!!


 ಣ್ಣಯ್ಯ, ರಾಮಾಚಾರಿ, ಹಳ್ಳಿಮೇಷ್ಟ್ರು, ಮಲ್ಲದಿಂದ ದೃಶ್ಯದವರೆಗೆ ರವಿಚಂದ್ರನ್ ನಟಿಸಿರುವ ಸಿನಿಮಾಗಳು ಸಾಮಾನ್ಯ ವರ್ಗದ ಪ್ರೇಕ್ಷಕರು... ಅದರಲ್ಲಿಯೂ ಹಳ್ಳಿಜನರ ಪಾಲಿನ ಹಾರ್ಟ್ ಪೇವರೇಟ್. ಇಂತಹ ಸಿನಿಮಾಗಳ ಕಾರಣಕ್ಕಾಗಿಯೇ ರವಿಚಂದ್ರನ್ ಅವರಿಗೆ ಹಳ್ಳಿ ಭಾಗದಲ್ಲಿ ತುಂಬಾ ಪ್ರೇಕ್ಷಕ ವರ್ಗವಿದೆ. ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರು. ಇಂತಿಪ್ಪ ಪ್ರೇಕ್ಷಕರ ಮಧ್ಯೆ ಅಕ್ಷರ ಜ್ಞಾನ ಗೊತ್ತಿಲ್ಲದವರೇ ಅನೇಕರು. ಇನ್ನು ಇಂಗ್ಲಿಷ್ ಬರುತ್ತದೆ ಎಂದು ಊಹಿಸಿಕೊಳ್ಳುವುದು ದೂರದ ಮಾತು. ಆದರೆ ರವಿಚಂದ್ರನ್ ತಮ್ಮ ಹಿಂದಿನ ಪ್ರೇಕ್ಷಕ ವರ್ಗವನ್ನೆಲ್ಲ ಬದಿಗಿಟ್ಟು, ಹೊಸ ಟ್ರೆಂಡ್‌ನ ಅಭಿಮಾನಿ ಬಳಗವನ್ನು, ಯುವ ಸಮೂಹವನ್ನು, ಮುಖ್ಯವಾಗಿ ಇಂಗ್ಲಿಷ್ ಬಲ್ಲ ಪ್ರೇಕ್ಷಕ ವಲಯವನ್ನು ಸೃಷ್ಟಿ ಮಾಡಿಕೊಳ್ಳುವುದಕ್ಕಾಗಿಯೇ ಸೃಷ್ಟಿಸಿದಂತಿದೆ ಅಪೂರ್ವ.
ಏಕೆಂದರೆ ರವಿಚಂದ್ರನರ ಎಷ್ಟೋ ಅಭಿಮಾನಿಗಳ ಪಾಲಿಗೆ ಅಪೂರ್ವ ಅರ್ಥವಾಗದ ಅಪೂರ್ಣ ಸಿನಿಮಾ. ಚಿತ್ರದ ಆರಂಭದಿಂದ ಕೊನೆಯವರೆಗೂ ಸ್ಕ್ರೀನ್ ಮೇಲೆ ಪಾತ್ರಗಳಿಗಿಂತಲೂ ಹೆಚ್ಚು ಕಾಣಿಸಿಕೊಳ್ಳುವುದು ಜೀವನವೆಂಬ ಕ್ಯಾನ್‌ವ್ಯಾಸ್‌ದೊಳಗಿರುವ ದ್ವದಾರ್ಥಗಳನ್ನು ಭಾವನೆಗಳೆಂಬ ಬಣ್ಣದಲ್ಲಿ ತೋರ್ಪಡಿಸುವ ಇಂಗ್ಲಿಷ್ ಸ್ಲೋಗನ್‌ಗಳು. ಈ ಸ್ಲೋಗನ್‌ಗಳೇ ಚಿತ್ರದ ಪಾಲಿಗೆ ಗನ್ ಆಗಿ ಕಾಡಿದೆ.
ಒಂದು ಸಲ ಸ್ಕ್ರೀನ್ ಬಲಕ್ಕೆ, ಮತ್ತೊಮ್ಮೆ ಎಡಕ್ಕೆ, ಮೊಗದೊಮ್ಮೆ ಕೆಳಗೆ ಹೀಗೆ ಅತ್ತಿಂದಿತ್ತ ಪಾತ್ರಗಳಿಗಿಂತಲೂ ವೇಗವಾಗಿ ಓಡಾಡುವ ಈ ಬಣ್ಣ ಬಣ್ಣದ ಟ್ಯಾಗ್ ಲೈನ್‌ಗಳನ್ನು ಪ್ರೇಕ್ಷಕ ನೋಡುತ್ತ... ಓದುತ್ತ... ಅರ್ಥೈಸಿಕೊಳ್ಳುತ್ತ ತೆರೆ ಮೇಲೆ ಬರುವ ಪ್ರಮುಖ ದೃಶ್ಯಗಳನ್ನೇ ಬಿಟ್ಟು ಬಿಡುತ್ತಾರೆ. ಹೀಗಾಗಿ ಇಲ್ಲಿ ಅಭಿನಯ ಎಷ್ಟೆ ಚೆನ್ನಾಗಿದ್ದರೂ ಗೌನವಾಗಿದೆ. ಇಂಗ್ಲಿಷ್ ಅಕ್ಷರಗಳ ಆಟವೇ ಸಂಪೂರ್ಣ ಆವರಿಸಿಕೊಂಡು ಅಪೂರ್ವವನ್ನು ಅರ್ಥವಾಗ ಅಪೂರ್ಣ ಮಾಡಿಬಿಟ್ಟಿದೆ. ಈ ರೀತಿಯ ಟ್ಯಾಗ್ ಲೈನ್‌ಗಳ ಕಾರಣಕ್ಕೆ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲಿಯೇ ಅಪೂರ್ವ ಒಂದು ಅಪರೂಪದ ಪ್ರಯೋಗ ಎನ್ನಬಹುದು. ಆದರೆ ಅದು ರವಿಚಂದ್ರನ್‌ರನ್ನು ನೆಚ್ಚಿಕೊಂಡಿರುವ ಪ್ರೇಕ್ಷಕರು ಎಷ್ಟು ಜನ ಮೆಚ್ಚಬಹುದು ಎನ್ನುವುದೇ ಯಕ್ಷಪ್ರಶ್ನೆ. ಕೆಲವರಂತೂ ಇದು ಸಿನಿಮಾನೋ? ಇಲ್ಲ ಪಾವರ್ ಪಾಯಿಂಟ್ ಪ್ರೆಜೆಂಟೇಷನೋ? ಎಂದು ಗೊಂದಲಕ್ಕೀಡು ಆಗುತ್ತಿದ್ದಾರೆ.
ಇನ್ನೂ ಚಿತ್ರಕ್ಕೆ ಬಂದರೇ, 
ಇಡೀ ಜೀವನದಲ್ಲಿ ಪ್ರೀತಿಯಿಂದಲೇ ವಂಚಿತನಾದ ವೃದ್ಧನೋರ್ವನ ವ್ಯಥೆ, ಜೀವನದ ಸಂಧ್ಯಾ ಕಾಲದಲ್ಲಿ ಮೂಡುವ ಪ್ರೀತಿಯ ಭರವಸೆ, ಅದು ಹುಸಿಯಾದಾಗ ಉಂಟಾಗುವ ಹತಾಸೆ, ಉಗ್ರವಾದ, ರಾಜಕಾರಣ, ಪ್ರೌಢಾವಸ್ಥೆಯ ಹುಡುಗಿಯ ಹುಚ್ಚಾಟ ಹೀಗೆ ಅನೇಕ ಆಯಾಮಗಳಿವೆ. ಸುದೀಪ ಮತ್ತು ವಿಜಯ ರಾಘವೇಂದ್ರ ಹತ್ತೇ ನಿಮಿಷ ಇಲ್ಲಿ ಕಾಣುವುದು, ಅಷ್ಟೇ ನಿಮಿಷ ಕಾಣಿಸಿಕೊಳ್ಳುವ ಖಳನಟ ರವಿಶಂಕರ ಧ್ವನಿಯಲ್ಲಿಯೇ ಅಬ್ಬರಿಸುತ್ತಾರೆ. ಇನ್ನೂ ಪ್ರಕಾಶ ರೈ, ತಾರಾ, ಸಾಧುಕೋಕಿಲಾ ಸೇರಿದಂತೆ ಅನೇಕ ಪಾತ್ರಗಳಿವೆಯಾದರೂ ಅವರೆಲ್ಲರೂ ತೆರೆ(ಲಿಫ್ಟ್)ಯಾಚೆಗೆ ಕೇವಲ ಧ್ವನಿಯಾಗಿ ಮಾತ್ರ.
ಲಿಫ್ಟ್‌ನಲ್ಲಿಯೇ ಅರ್ಧ ಚಿತ್ರವಿರುವುದರಿಂದ ಆ ಸನ್ನಿವೇಶಗಳನ್ನು ಸೆರೆಹಿಡಿದ ಛಾಯಾಗ್ರಾಹಕರ ಕಾರ್ಯ ಮೆಚ್ಚಲೆಬೇಕು. ಇನ್ನು ಇಲ್ಲಿ ರವಿಚಂದ್ರನ್ ಸೆಂಟಿಮೆಂಟ್‌ಗಿಂತಲೂ ತಾಂತ್ರಿಕವಾಗಿಯೇ ತುಂಬಾ ಕಾಡುತ್ತಾರೆ. ಏಕೆಂದರೆ ಚಿತ್ರದ ಎಡಿಟಿಂಗ್ ಅಷ್ಟೊಂದು ಸೂಪರ್ ಆಗಿದೆ. ಏನೇ ಆಗಲಿ, ಇಂಗ್ಲಿಷ್ ಬಾರದೇ ಇದ್ದರೂ ಪರವಾಗಿಲ್ಲ. ತಾಂತ್ರಿಕವಾಗಿ ಅಪೂರ್ವ ಅದ್ಭುತ್ ಎಂದುಕೊಂಡು ನೋಡಿಬಿಡಿ. ಇಲ್ಲದೇ ಹೋದಲ್ಲಿ ಮತ್ತೊಂದು ಏಕಾಂಗಿಯಾಗುವುದು ಬೇಡ!?

1 comment:

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...