Tuesday, May 24, 2016

ನಿಜಕ್ಕೂ ಸೈರಾಟ್ ಅದ್ಭುತ್ ಸಿನಿಮಾವೇ...!?

ಈಗ ಇಡೀ ದೇಶದಲ್ಲಿ ಕೇವಲ ಎರಡು ಹೆಸರುಗಳು ತುಂಬಾ ಫೇಮಸ್ ಆಗಿ ಬಿಟ್ಟಿವೆ. ಫೇಸಬುಕ್, ವಾಟ್ಸಾಪ್, ಟ್ವಿಟರ್‌ಗಳಲ್ಲಂತೂ ಇದೇ ದೊಡ್ಡ ಹವಾ... ಒಂದು ಐಪಿಲ್ ಕಾರಣಕ್ಕೆ ವಿರಾಟ್(ಕೊಹ್ಲಿ), ಮತ್ತೊಂದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಜನರ ಮನಸ್ಸು ಗೆಲ್ಲುತ್ತಿರುವ ಕಾರಣಕ್ಕೆ ಮರಾಠಿಯ ‘ಸೈರಾಟ್’. ಈ ಹವಾವನ್ನು ಮನಸ್ಸಿನಲ್ಲಿಟ್ಟುಕೊಂಡು ‘ಸೈರಾಟ್’ನಲ್ಲಿ ಅಂಥಾದೇನೈತಿ ಅಂತಾ ನೋಡಿದಾಗ ನನಗನಿಸಿದ್ದು ಇಷ್ಟು-ಚೆಲುವಿನ ಚಿತ್ತಾರ, ಜಯಂ, ಬೃಂದಾವನ ಕಾಲನಿ ಜೊತೆಗೆ ಇತ್ತೀಚೆಗೆ ತೆರೆಕಂಡಿದ್ದ ಮಂಜು ಮಿತ್ರ ನಿರ್ದೇಶನದ ಗೀತಾ ಬ್ಯಾಂಗಲ್ ಸ್ಟೋರ್ ಸೇರಿದಂತೆ ಹಲವು ಎಳೆ ಹುಡುಗ-ಹುಡುಗಿಯರ ಪ್ರೇಮ ಕಥೆಗಳ ಸಿನಿಮಾಗಳನ್ನೇ ಸೇರಿಸಿ ಹೂರಣ ಮಾಡಿ, ತುಂಬಿದ ಕಡುಬಿನಂತಿದೆ. ಇಷ್ಟಾದರೂ, ಕೂಡ ಚಿತ್ರ ನಿಮ್ಮನ್ನು ಹುಚ್ಚೆಬ್ಬಿಸದೇ ಬಿಡದು. ಮನಸ್ಸು ಸೆಳೆದು, ಕಾಡದೇ ಇರದು. ಏಕೆಂದರೆ ಇಲ್ಲಿ ನಾವು ನೋಡಿದ ಸಿನಿಮಾಗಳೆಲ್ಲವನ್ನೂ ಮೀರಿದ ಹೊಸತನ ಮತ್ತು ಹಳ್ಳಿತನ ಇದೆ. ಅಪ್ಪಟ್ಟ ಆಕರ್ಷಕ ಶೈಲಿಯ ನಟನೆ ಇದೆ. ಹಳ್ಳಿ ಸೊಗಡಿನ ಶ್ರೀಮಂತಿಕೆಯನ್ನೂ ಅಷ್ಟೇ ಚೆನ್ನಾಗಿ ಸೆರೆ ಹಿಡಿದಿರುವ ಕ್ಯಾಮೆರಾ ಕೈ ಚಳಕ ಇದೆ.
ಎಲ್ಲಕ್ಕಿಂತಲೂ ಮುಖ್ಯವಾಗಿ ಮತ್ತೊಂದಿದೆ. ಅದೇ ಅದು-ಎಲ್ಲರ ಮನಸ್ಸನ್ನು ತನ್ನ ನೋಟದಲ್ಲೇ ಕದಿಯಬಲ್ಲ ಹುಡಗಿ-ಅರ್ಚಿ ಉರ್ಫ ಅರ್ಚನಾ. ಹೌದು, ತನ್ನ ಭಾವಾಭಿನಯದಿಂದ ಹಾಗೂ ಮೋಹಕ ಕಣ್ಣ ದೃಷ್ಟಿಯಲ್ಲಿಯೇ ಪ್ರೇಕ್ಷಕರನ್ನು ಫೀದಾ ಮಾಡಿಕೊಂಡು ಬಿಡುತ್ತಾಳೆ ಅದ್ಭುತ ನಟಿ ರಿಂಕು ರಾಜಗುರು. ಈ ಚಿತ್ರದ ಯಶಸ್ಸಿಗೆ ಕಥೆ, ನಿರ್ದೇಶನ, ಛಾಯಾಗ್ರಹಣ ಮತ್ತು ಸಂಗೀತ ಎಷ್ಟು ಮುಖ್ಯವಾಗಿದೆಯೋ ಅದೆಲ್ಲದರ ಒಂದು ತೂಕದಷ್ಟು ರಿಂಕು ಎಂಬ ಹೊಸ ನಟಿ ಮಾಡಿರುವ ಅರ್ಚನಾ ಪಾತ್ರದ ಅಭಿನಯವಿದೆ. ಹಾಗಂತ ಉಳಿದ ನಟರೇನೂ ಕಮ್ಮಿ ಇಲ್ಲ. ನಾಯಕ ಪ್ರಶಾಂತನ ಪಾತ್ರ ನಿರ್ವಹಿಸಿರುವ ಆಕಾಶ ಠೋಸರ್ ಸಹ ಅದ್ಭುತ ನಟ. ಸಂಗೀತವಂತೂ ಇನ್ನೂ ಅದ್ಭುತ್. ಇಷ್ಟೆಲ್ಲ ಇದ್ದರೂ ಕೂಡ ಹಲವು ನ್ಯೂನತೆಗಳು ಚಿತ್ರದಲ್ಲಿ ಎದ್ದು ಕಾಣುತ್ತವೆ. ಆದರೆ ಅದೆಲ್ಲವನ್ನೂ ಹೊಸಕಿ ಹಾಕುವ ಅಂತ್ಯವಿದೆ. ಚಿತ್ರದ ಕಥೆಯನ್ನು ಎಳೆಲಾಯಿತು ಎಂಬ ಬೇಸರದಲ್ಲಿರುವ ಪ್ರೇಕ್ಷಕ ಕೊನೆಗೆ ಮೌನಿಯಾಗಿ, ಇನ್ನೂ ಕೆಲವರು ಕಣ್ಣೀರು ಹಾಕುತ್ತಲೇ ಹೊರಬರುವಂತಹ ಸೆಂಟಿಮೆಂಟ್ ಕ್ಲೈಮ್ಯಾಕ್ಸ್ ಇದೆ. ಅದೆನಂತ ನೋಡಬೇಕಾದರೆ ಸಿನಿಮಾವನ್ನೇ ನೋಡಬೇಕು.
ಅದೊಂದು ಊರು, ಅಲ್ಲೊಬ್ಬ ಪಾಟೀಲ, ಆತನಿಗೊಬ್ಬಳು ಸುಂದರ ಮಗಳು ಅರ್ಚನಾ. ಅಷ್ಟೇ ಗರ್ವಿ. ರಾಯಲ್ ಎನ್‌ಫಿಲ್ಡ್, ಟ್ರಾೃಕ್ಟರ್ ಹೊಡೆಯೊದೆಲ್ಲ ಅವಳಿಗೆ ಸಲೀಸು. ಅಷ್ಟೇ ಬಿಂದಾಸು. ಅಂತಹ ಹುಡುಗಿಯ ಮೋಹಕ್ಕೆ ಬೀಳ್ತಾನೆ ಆಟ-ಪಾಠ ಎರಡರಲ್ಲಿಯೂ ಮುಂದಿರುವ, ಸಾಮಾನ್ಯ ವರ್ಗದ ಹುಡುಗ ಪ್ರಶಾಂತ. ಇಬ್ಬರೂ ಪಿಯುಸಿ ಮುಗಿಸಿದ ಬಳಿಕ ಬಿಎಗಾಗಿ ತಮ್ಮ ಹೋಬಳಿಯಲ್ಲಿರುವ ಕಾಲೇಜ್‌ಗೆ ಸೇರುತ್ತಾರೆ. ಅಲ್ಲಿ ಇಬ್ಬರ ಮಧ್ಯೆ ಪ್ರೀತಿ ಅಂಕುರಿಸುತ್ತದೆ. ಅದು ಪಾಟೀಲನ ಮನೆಯವರಿಗೆ ಗೊತ್ತಾಗುತ್ತದೆ. ಪ್ರಶಾಂತ ಮತ್ತು ಇವರಿಗೆ ಸಹಾಯ ಮಾಡಿದ ಸ್ನೇಹಿತರಿಗೆ ಏಟು ಬೀಳುತ್ತವೆ. ಕೊನೆಗೆ ಹೈದ್ರಾಬಾದ್‌ಗೆ ಓಡಿ ಹೋಗ್ತಾರೆ. ಅಲ್ಲಿಯೇ ಶುರುವಾಗುತ್ತೆ ನೋಡಿ ಬೋರಿಂಗು... ಹಳ್ಳಿಯಲ್ಲಿದ್ದಾಗ ಚೆಂದ ಅನಿಸುತ್ತಿದ್ದ ಸಿನಿಮಾ ಎಪ್ಪಾ ಮುಗಿದರೇ ಸಾಕು ಅನಿಸಲು ಶುರುವಾಗೋದ ಹೈದ್ರಾಬಾದ್ ಸನ್ನಿವೇಶಗಳಲ್ಲಿ. ನಾವ ನೋಡ್ತಾ ಇರೋದು ಒಂದೇ ಸಿನಿಮಾನಾ ಅಥವಾ ಎರಡು ಸಿನಿಮಾನಾ? ಅಂತಾನೂ ಅನಿಸುತ್ತದೆ. ಹೀಗೆ ಅನಿಸುತ್ತಿರುವಾಗಲೇ ಸಡನ್ನಾಗಿ ನಾಯಕ-ನಾಯಕಿ ಕೈಗೆ ಎರಡ್ಮೂರು ವರ್ಷದ ಮಗು ಕೊಟ್ಟು ಬಿಟ್ಟಿದ್ದಾರೆ ನಿರ್ದೇಶಕರು. ಆಗ ಮತ್ತೇ ಹೊಸ ಕುತೂಹಲ ಶುರುವಾಗುತ್ತಿರುವಾಗಲೇ ಅಷ್ಟೇ ಬೇಗ ಮನಸ್ಸು ಕಣ್ಣೀರಾಗಿ ಬಿಡುತ್ತದೆ. ಕಾರಣ ಕ್ಲೈಮ್ಯಾಕ್ಸ್ ಹಾಗಿದೆ. ಹೈದ್ರಾಬಾದ್ ಸನ್ನಿವೇಶಗಳ ಮೇಲೆ ನಿರ್ದೇಶಕ ಹಿಡಿತ ತಪ್ಪಿ ಹೋಗಿದ್ದಂತೂ ಸತ್ಯ.
ಗಮನ ಸೆಳೆಯೋದೇನು: ಇಂತಿಪ್ಪ ಚಿತ್ರದಲ್ಲಿ ತುಂಬಾ ಗಮನ ಸೆಳೆಯೋದು ಹಳ್ಳಿಯಲ್ಲಿ ನಡೆಯುವ ಪ್ರೀತಿಯ ಪರದಾಟಗಳು. ಪ್ರಶಾಂತ, ಅರ್ಚನಾಳಿಗೆ ಪ್ರೀತಿಯ ಚೀಟಿ ಕೊಡಲು ಪರದಾಡೋದು. ಅವಳನ್ನು ಭೇಟಿಯಾಗೋದು.. ಹಳ್ಳಿಯ ಜನಜೀವನ, ಮೇಲ್ವರ್ಗದವರ ದರ್ಪ, ರಾಜಕಾರಣಿಗಳ ದೌಲತ್ತು, ಕೆಳವರ್ಗದ ಶ್ರಮಿಕ ಜೀವಿಗಳ ಶೋಷಣೆಯ ದಿನಗಳು ಹೀಗೆ ಹಲವು ಮಗ್ಗಲುಗಳಲ್ಲಿ ಚಿತ್ರ ಇಷ್ಟವಾಗುತ್ತ ಹೋಗುತ್ತದೆ. ಮುಖ್ಯವಾಗಿ ರಿಂಕುಳ ಕೊಂದು ಬಿಡುವಂತಹ ಕಣ್ಣೋಟ. ಎಷ್ಟೋ ಜನರಿಗೆ ಹಳ್ಳಿಯಲ್ಲಿ ತಾವು ಕಳೆದುಕೊಂಡ ಬಾಲ್ಯದ ನೆನಪುಗಳು ನೆನಪಿಗೆ ಬರದೇ ಇರದು. ನಿರ್ದೇಶಕರು ನಮ್ಮದೇ ಕಥೆಯನ್ನು ಕಾಫಿ ಹೊಡೆದು ಕಥೆ ಮಾಡಿ ಬಿಟ್ಟಿದ್ದಾರೆ ಅನಿಸಲೂಬಹುದು. ಏಕೆಂದರೆ ತುಂಬಾ ಜನ ಅಯ್ಯೋ ಇದು ನಂದೆ ಕಥೆ! (ತಮ್ಮ ಹಳೇ ಲವ್ವರೋ... ತಾವು ತುಂಬಾ ಇಷ್ಟಪಟ್ಟವಳನ್ನು ಪಡೆಯಲು ಮಾಡಿದ ಸಾಹಸಗಳೋ ನೆನಪಾಗಿ) ಅಂತಾ ಚಿತ್ರಮಂದಿರದಲ್ಲಿಯೇ ಬೊಬ್ಬೆ ಹೊಡೆಯುತ್ತಿರುವ ದೃಶ್ಯಗಳು ಕಾಣ ಸಿಗುತ್ತಿವೆ.
ಇವರು ಮುಟ್ಟಿದ್ದೆಲ್ಲ ಚಿನ್ನ::::::::: ಮರಾಠಿ ಚಿತ್ರ ಸಾಹಿತ್ಯದಲ್ಲಿ ಹೊಸ ಛಾಪು ಮೂಡಿಸಿದವರು ಸೈರಾಟ್ ನಿರ್ದೇಶಕ ನಾಗರಾಜ ಮಂಜುಳೆ. ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಸೊಲ್ಲಾಪುರ ತಾಲೂಕಿನ ಜಿಯೂರ್ ಗ್ರಾಮದ ನಾಗರಾಜ ಬಾಲ್ಯದಲ್ಲಿ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಇವರ ಚೊಚ್ಚಲ ಪ್ರಯತ್ನದ ಕಿರುಚಿತ್ರ ‘ಪಿಸ್ತೂಲ್ಯಾ’ಗೆ ರಾಷ್ಟ್ರೀಯ ಪ್ರಶಸ್ತಿ ಬಂತು. ಅದಾದ ಬಳಿಕ ಮಾಡಿದ ಫಂಡ್ರಿಗೂ ರಾಷ್ಟ್ರೀಯ ಪ್ರಶಸ್ತಿ ಗೌರವ. ಈಗ ಮೂರನೇ ಪ್ರಯತ್ನ ‘ಸೈರಾಟ್’ ಸಹ ಪ್ರಶಸ್ತಿಗಳತ್ತ ಮುಖ ಮಾಡಿದೆ. ಇಷ್ಟೇ ಏಕೆ ಇವರು ಪ್ರಕಟಿಸಿದ ‘ಉಹ್ನಾಚ್ಯಾ ಕಟಾವಿರುದ್ಧ’ ಕವನ ಸಂಕಲವೂ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಫಂಡ್ರಿಯಂತೆಯೇ ಸೈರಾಟ್‌ನಲ್ಲಿಯೂ ಹಳ್ಳಿ ಬದಕನ್ನು ಚೆನ್ನಾಗಿ ಸಿನಿಮಾಗೆ ಒಗ್ಗಿಸುವಲ್ಲಿ ಗೆದ್ದಿದ್ದಾರೆ. ಅದೇ ಈಗ ಸಿನಿಮಾವನ್ನು ಗೆಲ್ಲಿಸುತ್ತಿರುವುದು.

2 comments:

  1. ಸೂಪರ್ ಆಗಿ ಬರೆದಿದ್ದೀರಾ.. ನಿಜಕ್ಕೂ ಅದ್ಭುತವಾಗಿದೆ ನಿಮ್ಮ ರಿವ್ಯೂ

    ReplyDelete

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...