Wednesday, May 4, 2016

ಬರಗಾಲಕ್ಕೆ ಬೆಂಡಾಗದ ಇವರಿಗೆ ಧಿಕ್ಕಾರವಿರಲಿ...!!!

ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದುಕೊಂಡು ಸುಮಾರು ನೂರಾರು ಸಾಹಿತಿಗಳು ಕೆಲ ತಿಂಗಳ ಹಿಂದೆ ತಾವು ಪಡೆದುಕೊಂಡಿದ್ದ ಪ್ರಶಸ್ತಿಗಳನ್ನು ವಾಪಸ್ ಕೊಟ್ಟಿದ್ದೆ ಕೊಟ್ಟಿದ್ದು. ಪತ್ರಿಕೆ ಮತ್ತು ಟಿವಿಗಳಲ್ಲಿ ದೊಡ್ಡ ಸುದ್ದಿಯಾಗಿ ಮಿಂಚಿದರು. ಇದನ್ನು ನೋಡಿ ನಾವೇನು ಕಮ್ಮಿ ಎನ್ನುವಂತೆ ರಾಜ್ಯದಲ್ಲಿಯೂ ಕೂಡ ಹತ್ತಿರತ್ತಿರ 20ಕ್ಕೂ ಹೆಚ್ಚು ಸಾಹಿತಿಗಳು ತಾವು ಪ್ರತಿಷ್ಠಿತ ಅಂದುಕೊಂಡು ಇಟ್ಟುಕೊಂಡಿದ್ದ ಪ್ರಶಸ್ತಿಗಳನ್ನು ವಾಪಸ್ ಮಾಡಿದ್ದರು. ಆದರೆ ಅವರ‌್ಯಾರಿಗೂ ಈಗ ಪ್ರಕೃತಿಯ ಅಸಹನೆಯಿಂದ ಉಂಟಾಗಿರುವ ಬರಗಾಲ ಕಾಣುವುದೇ ಇಲ್ಲವೇ? ದೇಶದಲ್ಲಿ ಏನಾದರೊಂದು ಘಟನೆ ನಡೆದರೂ ಅದನ್ನು ಅಸಹಿಷ್ಣುತೆ ಎಂದು ಬಾಯಿ ಬಡೆದುಕೊಳ್ಳುವವರಿಗೆ ‘ಬರಗಾಲ’ ಎಂಬ ಪದ ಕೇಳಿದಾಗ ಏನು ಅನಿಸುವುದೇ ಇಲ್ಲವೇ? ಹಾಗಾದರೆ ಇಂಥವರನ್ನು ಅದು ಹೇಗೆ ಸಮಾಜಮುಖಿ ಸಾಹಿತಿಗಳು, ಬುದ್ಧಿಜೀವಿಗಳು ಎಂದು ಒಪ್ಪಿಕೊಳ್ಳಬೇಕು!!! ಬಹುತೇಕವಾಗಿ ಈಗ ಪ್ರಶಸ್ತಿಗಳನ್ನು ಪಡೆದುಕೊಂಡು ಸಾಧಕರಾದವರು ಹಾಗೂ ಈ ಹಿಂದೆ ಪ್ರಶಸ್ತಿ ವಾಪಸ್ ಮಾಡಿದವರೆಲ್ಲರೂ ಆ ಮಟ್ಟಕ್ಕೆ ಬೆಳೆಯಬೇಕಾದರೆ ಅದಕ್ಕೆ ಆಧಾರವಾಗಿದ್ದು, ಪ್ರೋತ್ಸಾಹಿಸಿ ಬೆಳೆಸಿದ್ದು ಸಮಾಜದ ಸಾಮಾನ್ಯ ಜನರಲ್ಲದೇ ಬೇರೆ ಏನು ಅಲ್ಲ! ಅದರಲ್ಲಿ ಬಹುತೇಕರು ಭೂಮಿ, ಒಕ್ಕಲುತನ, ರೈತ, ನದಿ ಹೀಗೆ ಇಂದು ಬರಡಾಗಿ ಹೋಗಿರುವ ಪ್ರಕೃತಿ ಮೂಲವನ್ನೇ ಆಧಾರವಾಗಿಟ್ಟುಕೊಂಡು ಬರೆದವರು. ಅದರಿಂದಲೇ ತಮ್ಮ ಆದಾಯ ಬೆಳೆಸಿಕೊಂಡವರು. ಆದರೆ ರಾಜ್ಯದಲ್ಲಿ ತಲೆದೋರಿರುವ ಭೀಕರ ಬರದ ಬಗ್ಗೆ ಇಲ್ಲಿಯವರೆಗೆ ಒಬ್ಬನೇ ಒಬ್ಬ ಸಾಹಿತಿಯೂ ಬಾಯಿ ಬಿಚ್ಚಿಲ್ಲ. ಸ್ಪಂದಿಸುವ ಕನಿಷ್ಠ ಸೌಜನ್ಯ ತೋರಿಲ್ಲ. ಆಳುವ ಸರ್ಕಾರದ ಮೇಲೆ ಒತ್ತಡ ಹಾಕುವ ಎದೆಗಾರಿಕೆ ಪ್ರದರ್ಶಿಸಿಲ್ಲ(ಹಾಗೇನಾದ್ರೂ ಮಾಡಿದ್ರೆ ಮುಂದೆ ಬರಲಿರುವ ಪ್ರಶಸ್ತಿಗಳಿಗೆ ಅಡ್ಡಿಯಾದಿತೆಂಬ ಭಯ ಇರಬೇಕು). ಯಾಕೆ? ಇವರ‌್ಯಾರಿಗೂ ರೈತರ ಗೋಳು ಕಾಣುವುದೇ ಇಲ್ಲವೆ? ಇವರು ಬರೆಯುವುದೂ ಕೂಡ ಜನರ ನೋವು-ನಲಿವು, ಕಷ್ಟ-ನಷ್ಟದ ಕಥೆಗಳೇ ಅಲ್ಲವೇ. ಆ ಕಥೆ ಬರೆದು ಹಣ, ಪ್ರಶಸ್ತಿ, ಬಿರುದು ಪಡೆದುಕೊಳ್ಳುವುದಷ್ಟೇ ನಮ್ಮ ಹೊಣೆಗಾರಿಕೆ ಉಳಿದಿದ್ದಾೃವುದು ನಮಗೆ ಗೊತ್ತೇ ಇಲ್ಲ ಎನ್ನುವುದೇ ಇವರ ಸಿದ್ಧಾಂತವೆ? ಪ್ರಶಸ್ತಿ ಜೊತೆಗೆ ಅದರ ನಗದು ಮೌಲ್ಯವನ್ನು ವಾಪಸ್ ಕೊಟ್ಟವರೆಲ್ಲ. ಈಗ ಬರಗಾಲದಲ್ಲಿ ರೈತರಿಗೆ ನೆರವಾಗಲು ತಮ್ಮ ಪ್ರಶಸ್ತಿ ಮೊತ್ತವನ್ನು ಸರ್ಕಾರದ ಪರಿಹಾರ ನಿಧಿಗೆ ಕೊಡಬಾರದೇಕೆ? ಈ ಸಾಧಕರೆಲ್ಲ ಈ ಹಿಂದೆ ಯಾವ ಉದ್ದೇಶಕ್ಕಾಗಿ ಪ್ರಶಸ್ತಿ ವಾಪಸ್ ಕೊಟ್ಟಿದ್ದರೋ ಅದೇನಾಯಿತು ಎಂದು ನೋಡಹೊರಟರೇ ಏನೆಂದರೆ ಏನು ಆಗಿಲ್ಲ. ಈಗ ಆ ಚೆಕ್‌ಗಳು ಕೂಡ ಅಸಿಂಧುವಾಗಿ ಹೋಗುತ್ತಿವೆಯಂತೆ. ಕಲಬುರ್ಗಿ ಹಂತಕರು, ಗೋವಿಂದ ಪಾನ್ಸಾರೆ, ದಾಬೋಲ್ಕರ ಹಂತಕರು ಸಿಕ್ಕರೆ? ಎಂಬುದು ಇಂದಿಗೂ ದೊಡ್ಡ ಪ್ರಶ್ನೆ. ಕಾರಣ ಇವರೆಲ್ಲ ಆ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶಸ್ತಿ ವಾಪಸ್ ಕೊಟ್ಟು ಮನೆಯಲ್ಲಿ ಕುಳಿತುಕೊಂಡು ಬಿಟ್ಟರು. ಕೆಲವರು ವೇದಿಕೆ ಸಿಕ್ಕಲ್ಲಿ ದೊಡ್ಡದಾಗಿ ಮಾತನಾಡಿ, ಮಾಧ್ಯಮಗಳಲ್ಲಿ ಸುದ್ದಿಯಾದರು. ಆದರೆ ಯಾರೊಬ್ಬರೂ ಕೂಡ ಈ ಬಗ್ಗೆ ಸಮಾಜದಲ್ಲಿ ಸಣ್ಣದೊಂದು ಜಾಗೃತಿ ಮೂಡಿಸುವ ಕಾರ್ಯ ಮಾಡಲಿಲ್ಲ. ಸರ್ಕಾರದ ಮೇಲೆ ನಿರೀಕ್ಷಿತ ಒತ್ತಡ ಹಾಕಲಿಲ್ಲ. ಇವರ ಕಾರ್ಯವನ್ನು ಬೆಂಬಲಿಸಿ ಜನರೂ ಕೂಡ ಬೀದಿಗಿಳಿದು ಹೋರಾಟ ಮಾಡಲಿಲ್ಲ. ಹಾಗಾದರೆ ಇವರ ಸಾಹಿತ್ಯ ಮತ್ತು ವಿಚಾರಗಳು ಇಷ್ಟು ದಿನ ಮಾಡಿದ್ದೇನು? ಜನರಲ್ಲಂತೂ ಜಾಗೃತಿ ಮಾಡಿಲ್ಲ ಅಂತಾಯ್ತು ಅಲ್ಲವೇ? ದೇಶದಲ್ಲಿ ಅಸಹಿಷ್ಣುತೆ ಇದೆ ಎಂದುಕೊಂಡು ದೇಶ ಬಿಟ್ಟು ಹೋಗುವುದಾಗಿ ನಟ ಅಮೀರಖಾನ್ ಹೇಳಿಕೊಂಡರು. ಆ ನಟ ಮಹಾಶಯ ಇದೇ ದೇಶದಲ್ಲಿ ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ. ಆದರೆ ಬರಗಾಲದ ಸಂದರ್ಭದಲ್ಲಿ ರೈತರಿಗೆ ನೆರವಾಗುವ ಸಣ್ಣದೊಂದು ಮಾತು ಹೇಳಿಲ್ಲ. ಇಂಥವರು ನಮ್ಮ ದೇಶದಲ್ಲಿ ಇರುವುದಾದರೂ ಏಕೆ? ಹೋಗುವುದಾದರೆ ಹೋಗಿ ಬಿಡಲಿ ದೇಶ ಬಿಟ್ಟು. ಆದರೆ ನಾನಾ ಪಾಟೇಕರ ಮಾಡುತ್ತಿರುವ ಕಾರ್ಯವನ್ನೊಮ್ಮೆ ನೋಡಿ, ಓರ್ವ ಪ್ರತಿಷ್ಠಿತ ವ್ಯಕ್ತಿ ಹೇಗಿರಬೇಕು ಎಂಬುದನ್ನು ತೋರಿಸಿಕೊಡುತ್ತಿದ್ದಾರೆ. ಎಲ್ಲಿಯೂ ವ್ಯವಸ್ಥೆಯ ಬಗ್ಗೆ ಬಾಯಿ ಚಪಲ ತೀರಿಸಿಕೊಳ್ಳುವವರಂತೆ ಮಾತನಾಡುತ್ತಿಲ್ಲ. ಪ್ರಚಾರ ಪಡೆದುಕೊಳ್ಳುವ ಗೋಜಿಗೆ ಹೋಗುತ್ತಿಲ್ಲ. ತಾವು ಗಳಿಸಿದ್ದರಲ್ಲಿ ಒಂದಿಷ್ಟನ್ನು ರೈತರ ನೆರವಿಗೆ ನೀಡುತ್ತಿದ್ದಾರೆ. ಹಳ್ಳಿ-ಹಳ್ಳಿ ಸುತ್ತುತ್ತಿದ್ದಾರೆ. ಬರಗಾಲದಲ್ಲಿ ಬರಡಾಗಿ ಹೋಗಿರುವ ಬಡವರ ಬಾಳಲ್ಲಿ ಹೊಸ ಭರವಸೆ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಅವರನ್ನು ಬಿಟ್ಟರೇ ಮತ್ತಾರು? ಎಂದು ಹುಡುಕ ಹೊರಟರೇ ಬಾಲಿವುಡ್ ಹೋಗಲಿ. ನಮ್ಮ ಕರ್ನಾಟಕದ ಚಂದನವನದಲ್ಲಿಯೂ ಅಂತಹ ಒಬ್ಬನೇ ಒಬ್ಬ ನಟ ಸಿಗುವುದಿಲ್ಲ. ಈಗಷ್ಟೇ ನಟ ಯಶ ಸಣ್ಣದಾಗಿ ಅಂತಹ ಕಾರ್ಯ ಮಾಡುತ್ತಿರುವುದು, ಚಕ್ರವ್ಯೆಹ ತಂಡವೂ ಈ ಕಾರ್ಯ ಮಡುವುದಾಗಿ ಹೇಳಿರುವುದು ಉತ್ತಮ ಬೆಳವಣಿಗೆ. ಆದರೆ ನಮ್ಮ ರಾಜ್ಯದಲ್ಲಿ ಬಹುಬೇಡಿಕೆಯ ಎಂದು ಕರೆಯಿಸಿಕೊಳ್ಳುವ ನಟರ ಹೆಸರಿನ ಹಿಂದೆ ಇರುವ ಬಿರುದುಗಳನ್ನು ಒಂದು ಸಲ ನೋಡಿದಾಗ, ಅವರಿಗೆ ಇರುವ ಕಾಳಜಿಗೂ, ಬಿರುದುಗಳಿಗೂ ಜೀರಿಗೆ ಕಾಳಿನಷ್ಟು ನಂಟಿಲ್ಲ. ಇಂಥವರಿಗೆಲ್ಲ ಹಣ ಗಳಿಸಲು ಬಿರುದು ಬೇಕು. ಜನ ಬೇಕು, ರೈತರು ಬೇಕು, ರೈತರ ಗೋಳಿನ ಕಥೆಗಳು ಬೇಕು. ಆದರೆ ರೈತರ ಸಂಕಷ್ಟಗಳಿಗೆ ನೆರವಾಗುವುದು ಮಾತ್ರ ಬೇಡ. ಇಂಥವರಿಗೆಲ್ಲ ಬುದ್ಧಿ ಬರುವುದಾದರೂ ಯಾವಾಗ?, ಜನ ಬುದ್ಧಿ ಕಲಿಸುವುದಾದರೂ ಯಾವಾಗ? ನಾವೇ ಮಹಾನ್ ಬುದ್ಧಿವಂತರೂ ಎಂದು ಹೇಳಿಕೊಳ್ಳುವ ಬುದ್ಧಿಜೀವಿಗಳಿಗೂ ಬರ ಎಂದರೆ ಏನೆಂದರೆ ಏನು ಅಲ್ಲ ಎನ್ನುವಂತೆ ಮೌನಿಯಾಗಿದ್ದಾರೆ. ಧಿಕ್ಕಾರವಿರಲಿ ಇವರಿಗೆಲ್ಲ....!!

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...