Thursday, March 17, 2016

ಮಹದಾಯಿ ಮೇಲೆ ಮಮಕಾರವೇ ಇಲ್ಲವೇ...

ಇನ್ನು ಎಷ್ಟು ದಿನಾ ಅಂತಾ ನಾವು ಈ ತ್ರಾಸ್ ತಗೋಬೇಕು... ಖಬರ್ ಇಲ್ಲದ ರಾಜಕಾರಣಿಗಳಿಗೆ ಕರುಣೆ ಬರುವುದ್ಯಾವಾಗ? ಕಳಸಾ-ಬಂಡೂರಿ ನಾಲಾ ತಿರುವು ಮತ್ತು ಮಹದಾಯಿ ಜೋಡಣೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಆಗಾಗ ಆಕ್ರೋಶ ಭುಗಿಲೇಳುತ್ತಲೇ ಇದೆ. ರಾಜಕೀಯ ನಾಯಕರಂತೂ ಕೇವಲ ಹೇಳಿಕೆಗಳಿಗೆ ಮಾತ್ರ ಸಿಮೀತವಾಗಿದ್ದಾರೆ. ಆಗಾಗ ಹುಬ್ಬಳ್ಳಿ ಜನಜೀವನ ಮತ್ತು ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಲೇ ಇದ್ದಾರೆ. ಇದರಿಂದ ಹಲವರು ರೋಸಿಯೂ ಹೋಗಿದ್ದಾರೆ. ಆ ಎಲ್ಲ ಮನಸ್ಸುಗಳ ಒಟ್ಟಾರೆ ಭಾವ ಇಲ್ಲಿದೆ.... -------------- ತಿಂಗಳಾದಾಗ ಹತ್ತ ಸಲ ರಸ್ತಾ ಬಂದ್ ಆಕ್ಕವು. ರೈತರ ಹೊಟ್ಯಾಗಿನ್ ಉರಿ ರಸ್ತಾದಾಗ ಧಗ್ ಧಗಿಸಾಕ ಹತ್ತಿದ್ರ್ ನಾವ ಹತ್ತಿದ ಬಸ್ ಮುಂದ ಹೋಗಾಂಗಿಲ್ಲ. ಜನ ಮತ್ತು ವಾಹನ ನಿಂತಲ್ಲೆ ನಿಲ್ಲಬೇಕು. ಅಂಬ್ಯುಲೆನ್ಸ್‌ದಾಗ ಇದ್ದವರಂತೂ ಅಲ್ಲೇ ಜೀವ ಬಿಡೋ ಯಮಸಂಕಟದೊಳಗ ಹೊರಳಾಡಬೇಕು...! ಇಷ್ಟೆಲ್ಲ ಆದ್ರೂ ‘ಚಿಂತಿ ಇಲ್ಲದ ಮೂಳ ಸಂತ್ಯಾಗ ನಿದ್ದಿ ಮಾಡಿದ್ದ’ ಅನ್ನುವಂಗ ಮಾಡಾಕತ್ತರ ಜನಸೇವಕರು ಎಂದು ಕರೆಸಿಕೊಂಡರೂ ಆ ಅರ್ಹತೆ ಉಳಿಸಿಕೊಳ್ಳಲಾಗದ ಜನಪ್ರತಿನಿಧಿ ಮಹಾಶಯರು. ಇನ್ನೊಂದೆರಡ್ಮೂರ ತಿಂಗಳ ಕಳೆದ್ರ ರೈತರ ಮಾಡೋ ಹೋರಾಟಕ್ಕ ವರ್ಷ ಆಗಾಕ ಬಂತು. ಒಂದು ಮಳೆಗಾಲ ಹೋಗಿ ಮತ್ತೊಂದು ಮಳೆಗಾಲ ಬಂತು. ಆದರೆ ನೀರು ತರುವ ಕಾಳಜಿ ಮಾತ್ರ ರಾಜಕಾರಣಿಗಳಿಗೆ ಬರವತ್ತು. ಒಬ್ಬೇ ಒಬ್ಬ ರಾಜಕೀಯ ನಾಯಕ ಈ ಸಮಸ್ಯೆದಾಗ ದಳಪಾಯಿ ಆಗಿ ಮುಂದ ಬರವಲ್ಲ. ಬ್ಯಾರೇ ಕಡೆ ಇದೇ ಆಗಿದ್ದರೇ ಇಷ್ಟೊತ್ತಿಗೆ ಒಬ್ಬ ಸಮರ್ಥ ನಾಯಕ ಹೊರಹೊಮ್ಮಿ ಬರತಿದ್ದ. ಆದರೆ ಒಂದೇ ಒಂದು ಪಕ್ಷದಲ್ಲಿ ಅಂಥಹ ನಾಯಕ ಬೆಳೆಯಲೇ ಇಲ್ಲವೇ!? ಒಬ್ಬರಿಗೂ ಖಬರೇ ಇಲ್ಲವೇ!!! ಒಂದು ಕಡೆ ಪ್ರತಿಭಟನೆ ಮಾಡೋರು ಮಾಡಕೊಂಥ ಹೊಂಟಾರು. ಹುಬ್ಬಳ್ಳಿ, ನರಗುಂದ, ನವಲಗುಂದ ಸೇರಿದಂಗ ಈ ಭಾಗದ ಊರುಗೋಳ ಆಗಾಗ ಉರ‌್ಯಾಕ್ ಕುಂತಾವು. ಒಂದೊಂದ ಹಳ್ಯಾಗ ಕೊಡ ನೀರಿಗೂ ಜನ ಪಡಬಾರದ ಕಷ್ಟ ಪಡಕತ್ತಾರು. ಆದರ ಏನೂ ಆಗೇ ಇಲ್ಲ ಅನ್ನುವಂಗ ರಾಜಕಾರಣಿಗಳು ಎಲ್ಲ ಬಿಟ್ಟು ವಾಚು... ಅದು.. ಇದು ಅಂತಾ ಬೇರೆ ಬೇರೆ ಗಲಾಟೆಗಳೊಳಗ ಮುಳುಗಿ ಹೋಗ್ಯಾರು. ಪರಸ್ಪರ ಕೆಸೆರೆಚಾಟದ ರಾಜಕಾರಣ ಬಿಟ್ಟರೇ ನಮಗೆ ಬ್ಯಾರೇ ಗೊತ್ತಿಲ್ಲ. ಜನ ಸತ್ತರೂ ನಾವ ಕೇಳೊರಲ್ಲ ಅನ್ನೊ ಹಂಗ ಎಲ್ಲ ಮರೆತು ಕುಂತಾರು. ಮೊದಮೊದಲಿಗೆ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಾಗ ವಾರಗಟ್ಟಲೇ ಹುಬ್ಬಳ್ಳಿಯಲ್ಲಿ ದಿನ ಬೆಳಗಾದರು ಹೋರಾಟಗಳು ಕಾಣಸಿಗುತ್ತಿದ್ದವು. ಕೆಲವೊಂದು ಸಲ ಮಾತ್ರವೇ ನಗರದಲ್ಲಿರುವ ಜನ ಈ ಹೋರಾಟಗಳಿಗೆಲ್ಲ ಬೆಂಬಲ ಕೊಟ್ರು. ಉಳಿದಂತೆ ಪ್ರತಿ ಸಲ ನಡೆದ ಪ್ರತಿಭಟನೆಯಲ್ಲಿಯೂ ಹುಬ್ಬಳ್ಳಿ ಸುತ್ತಮುತ್ತಲಿನ ರೈತರೇ ಚನ್ನಮ್ಮ ವೃತ್ತದಲ್ಲಿ ಕಾಣ ಸಿಗುತ್ತಾರೆ. ಅಷ್ಟಕ್ಕೂ ರೈತರು ಕೇಳುತ್ತಿರುವುದು ತಮಗಷ್ಟೇ ಅಲ್ಲ. ನಗರದ ಜನಕ್ಕೂ ಕುಡಿಯುವುದಕ್ಕೆ ನೀರು ಕೇಳುತ್ತಿದ್ದಾರೆ. ಹಾಗೇ ನೋಡಿದರೆ ಈಗಾಗಲೇ ರೈತರ ಪಾಲಿನ ನೀರನ್ನೇ ಅಲ್ಲವೇ ಹುಬ್ಬಳ್ಳಿ ಮಂದಿ ಕಸಿದುಕೊಂಡು ಕುಡಿಯುತ್ತಿರುವುದು. ರೈತರ ಹೊಲಕ್ಕೆ ಹೋಗಬೇಕಾಗಿದ್ದ ನೀರು, ಜಲಮಂಡಳಿ ಪೈಪ್‌ಲೈನ್ ಮೂಲಕ ಹುಬ್ಬಳ್ಳಿ ಮಂದಿ ಮನೆಗಳಿಗೆ ಬರುತ್ತಿದೆ. ಹೀಗಾಗಿ ರೈತರ ಪಾಲಿನ ನೀರನ್ನೇ ಕುಡಿಯುತ್ತಿರುವ ನಗರದ ಮಂದಿಗೆ ಸ್ವಾಭಿಮಾನ ಇದಿದ್ದರೇ, ರೈತರ ಹೋರಾಟಕ್ಕೆ ಸಮರ್ಥವಾಗಿ ಕೈ ಜೋಡಿಸುತ್ತಿದ್ದರೆನೋ? ಒಂದು ವೇಳೇ ಹಾಗೇನಾದರೂ ಇದ್ದಿದ್ದರೇ ಇಷ್ಟೊತ್ತಿಗೆ ಈ ಭಾಗದ ರಾಜಕಾರಣಿಗಳನ್ನು ಪ್ರಶ್ನಿಸಿ ಕೇಳುತ್ತಿದ್ದರು. ಬುದ್ಧಿ ಕಲಿಸುತ್ತಿದ್ದರು. ಆದರೆ ಜನರಲ್ಲಿಯೂ ಸ್ವಾಭಿಮಾನ ಕಡಿಮೆ ಆಗಿ ಹೋಗೇತಿ. ಒಂದು ವೇಳೆ ರೈತರು ಹಠ ಹಿಡಿದು, ನಗರಕ್ಕೆ ಹೋಗುತ್ತಿರುವ ನಮ್ಮ ಪಾಲಿನ ನೀರು ನಮಗೆ ಕೊಟ್ಟು ಬಿಡಿ ಎಂದು ಪಟ್ಟು ಹಿಡಿದರೇ ನಗರದ ಮಂದಿಯ ಗತಿ ಏನಾದೀತು? ವಿಚಾರ ಮಾಡುವವರೇ ಇಲ್ಲ. ಆದರೆ ರೈತನಿಗೆ ಅಂತಹ ಬುದ್ಧಿ ಇಲ್ಲ. ಅದೇ ಕಾರಣಕ್ಕೆ ಅಲ್ಲವೇ ಅಂವಾ ಇಂದಿಗೂ ಕಷ್ಟ ಪಡುತ್ತಲೇ ಇದ್ದಾನೆ.... ಮಂಗಳವಾರ ಚನ್ನಮ್ಮ ವೃತ್ತದಲ್ಲಿ ರೈತರು ಧರಣಿ ಕುಳಿತ ಕಾರಣಕ್ಕೆ ಎರಡು ತಾಸಿಗೂ ಹೆಚ್ಚು ಕಾಲ ಸಂಚಾರ ಸ್ತಬ್ಧಗೊಂಡಾಗ ಬಹುತೇಕ ಮಂದಿ, ‘ಅಯ್ಯೋ ಬೇಗ ಮನೆಗೆ ಹೋಗಬೇಕು ಇಂಡಿಯಾ-ನ್ಯೂಜಿಲ್ಯಾಂಡ್ ಮ್ಯಾಚ್ ಶುರುವಾಗುತ್ತೆ’ ಎಂದುಕೊಂಡವರಿದ್ದರೇ ಹೊರತು, ಪಾಪ ರೈತರ ಕಷ್ಟ ಬೇಗ ಪರಿಹಾರ ಆಗಲಿ ಎನ್ನುವವವರು ಕಾಣಲಿಲ್ಲ. ‘ಮನೆಗೆ ಹೋಗು ಟೈಮದಾಗ್ ಇವರದೇನ್ ಶುರುವಾತೋ? ಎಂದು ಶಪಿಸಿದವರು ಅನೇಕರಿದ್ದರು. ಎಲ್ಲ ರಾಜಕೀಯ ಪಕ್ಷದವರೂ ನಾವ ಮಹದಾಯಿ ಪರವಾಗಿಯೇ ಇದ್ದೇವೆ ಎಂದು ಹೇಳುತ್ತಿದ್ದಾರೆ ಹೊರತು, ಎಲ್ಲರೂ ಒಮ್ಮತದ ಪ್ರಯತ್ನ ಮಾಡುತ್ತಿಲ್ಲ. ಇಡೀ ರಾಜ್ಯದ ನಾಯಕರು ಹೋಗಲಿ. ಇದೇ ಭಾಗದಲ್ಲಿರುವ ನಾಯಕರಲ್ಲಿ ಯಾರಿಗೂ ‘ಒಂದಾಗೋಣ ಬಾ’ ಎನ್ನುವ ಮನಸ್ಥಿತಿ ಇಲ್ಲ. ಏಕೆಂದರೆ ಇದು ಬಗೆಹರಿದು ಬಿಟ್ಟರೇ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಕ್ರೆಡಿಟ್ ಹೋಗುತ್ತದೆಂಬುದು ಒಂದು ಪಕ್ಷಕ್ಕಿದ್ದರೇ, ಕೇಂದ್ರದಲ್ಲಿರುವುದು ನಮ್ಮ ಸರ್ಕಾರ ನಾವೇ ಇದನ್ನು ಬಗೆಹರಿಸಿದ್ದು ಎಂದು ರಾಜ್ಯದಲ್ಲಿ ಪ್ರತಿಪಕ್ಷವಾದರೂ ಹೇಳಿಕೊಂಡು ಮುಂದಿನ ಸಲ ನಮ್ಮ ಅಧಿಕಾರ ಕಸಿದುಕೊಂಡಾರು ಎಂಬ ತಹತಹಿಕೆ ಮತ್ತೊಂದು ಪಕ್ಷಕ್ಕೆ. ಹೀಗಾಗಿ ಈ ಪಕ್ಷಗಳ ಕೊಳಕು ರಾಜಕಾರಣಕ್ಕೆ ಜನರೇ ಜಾಗೃತಗೊಂಡು ಬುದ್ಧಿ ಕಲಿಸಬೇಕಿದೆ. ಆದರೆ ಆ ರೀತಿ ಬುದ್ಧಿ ಕಲಿಸಲು ಒಗ್ಗಟ್ಟಾಗುವವರನ್ನೂ ಮತ್ತೇ ಬೇರ್ಪಡಿಸಿರುವ ಜಾಣ ರಾಜಕರಾಣವನ್ನೇ ಬಲ್ಲವರು ಇಲ್ಲಿ ಅನೇಕರಿದ್ದಾರೆ. ಅದು ಪದೇ ಪದೇ ನಡೆಯುತ್ತಲೇ ಇದೆ. ಇನ್ನೂ ಎಷ್ಟು ದಿನ ಅಂತಾ ಈ ತ್ರಾಸ್ ತಡಕೊಂದು ಹೋಗೋದೇನೋ... * ಡಿ.ವಿ. ಕಮ್ಮಾರ

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...