Friday, November 20, 2015

ಬಡಿದಾಟದ ಆರ್ಭಟವಿಲ್ಲದ ಸೌಮ್ಯ ಪ್ರೀತಿಯ ಬೆಸುಗೆಯ ಬಾಕ್ಸರ್...

ಊಟವೇನೋ ಭರ್ಜರಿಯಾಗಿದೆ... ತುಂಬಾ ಇಷ್ಟವೂ ಆಗುವಂತಿದೆ. ಆದರೆ ಆ ಊಟದ ಜೊತೆಗೆ ಅಗತ್ಯವಾಗಿ ಬೇಕಾದ ಉಪ್ಪಿನಕಾಯಿ ಇಲ್ಲದೇ ಹೋದ್ರೆ ಹೇಗೆ? ಈ ರೀತಿ ಬಾಕ್ಸರ್ ಚಿತ್ರವನ್ನು ವಿಮರ್ಶಿಸಬಹುದೇನೋ! ಚಿತ್ರ ಚೆನ್ನಾಗಿದೆ. ಬಾಕ್ಸರ್ ಎಂದಾಕ್ಷಣ ಹೊಡೆದಾಟಗಳ ಆರ್ಭಟವಿಲ್ಲರಬಹುದು ಎಂದುಕೊಂಡರೇ, ಅದು ಇಲ್ಲಿ ಗೌನವಾಗಿದೆ. ಬದಲಿಗೆ ಸೌಮ್ಯ ಪ್ರೀತಿಯ ಬೆಸುಗೆಯ ಕಥೆ ಇದೆ. ಆದರೆ ಚಿತ್ರ ಒಂದೇ ವೇಗದಲ್ಲಿ ಸಾಗುವುದರಿಂದ ಮಧ್ಯೆ ಹಾಸ್ಯ ಇರಬೇಕಿತ್ತು ಅನಿಸುತ್ತದೆ. ಆದರೆ ಎಲ್ಲಿಯೂ ಹಾಸ್ಯ ಸನ್ನಿವೇಶಗಳಿಲ್ಲ. ರಂಗಾಯಣ ರಘು ಇದ್ದರೂ. ಅತ್ತ ಹಾಸ್ಯವೂ ಅಲ್ಲದ... ಇತ್ತ ಗಂಭೀರವೂ ಅಲ್ಲದ ಮಧ್ಯಮ ಪಾತ್ರಧಾರಿಯಾಗಿ ಬಿಟ್ಟಿದ್ದಾರೆ. ಹೀಗಾಗಿ ಉಪ್ಪಿನಕಾಯಿಯೇ ಇಲ್ಲದ ಊಟದಂತೆ ಬಾಕ್ಸರ್. ಚಿತ್ರದ ಹೆಸರಿಗೆ ತಕ್ಕಂತೆ ನಾಯಕ ನಟ ಗಲ್ಲಿ ಗಲ್ಲಿಯ ಬೆಟ್ಟಿಂಗ್ ಬಾಕ್ಸಿಂಗ್‌ಗಳಲ್ಲಿ ಭಾಗವಹಿಸಿ ಹಣ ಪಡೆಯುವ ಅನಾಥ. ಆತನ ಜೀವನದಲ್ಲಿ ಅನಿರೀಕ್ಷಿತವಾಗಿ ಬರುವ ಮತ್ತೋರ್ವ ಅನಾಥೆ ಅಂಧೆಯ ಪ್ರೇಮಪಾಶದ ಪಂಚ್‌ಗೆ ಬಿದ್ದು ಹೋಗುವ, ರಾಜ್ ಮತ್ತು ಲಕ್ಷ್ಮೀ ಸ್ನೇಹ-ಪ್ರೇಮದಾಟದ ಭಾವ ಬಂಧ ಈ ಚಿತ್ರ. ಚಿತ್ರದ ಶೀರ್ಷಿಕೆ ಇಲ್ಲಿ ಪ್ರಧಾನವಾಗಿಲ್ಲ. ಪ್ರಧಾನತೆ ಪಡೆದುಕೊಂಡಿದ್ದು ಪ್ರೇಮಕಥೆ. ಇಲ್ಲಿರುವ ಪ್ರೇಮ ಪ್ರಸ್ತಾಪ ಹೊಸದೇನೂ ಅಲ್ಲವಾದರೂ ಒಂದಿಷ್ಟು ಇಷ್ಟವಾಗುತ್ತದೆ. ನಟಿ ಕೃತಿಕಾ, ರಾಧಿಕಾ ಪಂಡಿತ ಬಳಿಕ ಮತ್ತೋರ್ವ ಅಂತಹ ನಟಿ ಕನ್ನಡಕ್ಕೆ ಸಿಕ್ಕಂತಾಗಿದೆ. ನಟ ಧನಂಜಯ ಬಾಕ್ಸರ್ ಸ್ಟಂಟ್‌ಗಳಿಗಿಂತ ಪ್ರೇಮಿಯಾಗಿ ತುಂಬಾ ಇಷ್ಟವಾಗುತ್ತಾರೆ. ಬಾಕ್ಸರ್ ರಾಜ್‌ನನ್ನು ಬ್ಯಾಂಕಾಕ್ ಪೊಲೀಸರು ಬೆಂಗಳೂರು ಪೊಲೀಸರಿಗೆ ಒಪ್ಪಿಸಿದಾಗ, ಬ್ಯಾಂಕಾಕ್‌ದಲ್ಲಿ ಹಲ್ಲೆಯಾಗಿದ್ದರಿಂದ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸುತ್ತಾರೆ. ಆದರೆ ಕ್ಲೈಮಾಕ್ಸ್ ಸನ್ನಿವೇಶದಲ್ಲಿ ನಾಯಕಿಗೆ ಮುಖ ತೋರಿಸಬಾರದು ಎಂದುಕೊಂಡು ಆತ ತನ್ನಷ್ಟಕ್ಕೆ ತಾನು ಎದ್ದು ಹೊರಹೋಗಿ ಬಿಡುತ್ತಾನೆ. ಇದು ಹೇಗೆ ಸಾಧ್ಯ. ಯಾವುದೇ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಪೊಲೀಸ್ ಸುಪರ್ದಿಯಲ್ಲಿಯೇ ಇರುತ್ತಾನೆ. ಅದರಲ್ಲಿಯೂ ಬ್ಯಾಂಕಾಕ್ ಪೊಲೀಸ್‌ರ ದೃಷ್ಟಿಯಲ್ಲಿ ಸ್ಮಗಲರ್ ಆಗಿರುವ ವ್ಯಕ್ತಿ ತನ್ನಷ್ಟಕ್ಕೆ ತಾನು ಎದ್ದು ಹೋಗುತ್ತಾನೆ. ಇದು ಹೇಗೆ ಸಾಧ್ಯ...? ಮೊದಲಿದ್ದ ಪೊಲೀಸರು ಅಲ್ಲಿ ಇರುವುದೇ ಇಲ್ಲ. ಯಾರೂ ಆತನನ್ನು ತಡೆಯುವುದೂ ಇಲ್ಲ. ಬಾಕ್ಸಿಂಗ್‌ಗೆ ಆಹ್ವಾನಿಸುವ ನೆಪದಲ್ಲಿ ನಡೆಯುವ ಮೋಸದ ಬಗ್ಗೆ ನಿರ್ದೇಶಕರು ಬ್ಯಾಂಕಾಕ್ ಘಟನೆ ಇಟ್ಟುಕೊಂಡು ಪ್ರಸ್ತಾಪ ಮಾಡಿದ್ದಾರಾದರೂ ಅದಕ್ಕೆ ಒಂದು ಪೂರ್ಣವಿರಾಮ ಹೇಳಿಲ್ಲ. ಕಚೇರಿಗಳಲ್ಲಿ ಮಹಿಳಾ ಸಿಬ್ಬಂದಿಗಳ ಮೇಲೆ ನಡೆಯುವ ಕಿರುಕುಳ, ಮಿಷನರಿಗಳ ಸಮಾಜ ಸೇವೆ ಹೀಗೆ ಒಂದಿಷ್ಟು ಇತರೆ ದೃಶ್ಯಗಳಿವೆ. ಆದರೆ ಎಲ್ಲವೂ ರಾಜ-ಲಕ್ಷ್ಮೀಗೆ ಹೊಂದಿಕೊಂಡೇ ಇವೆ. ಸಂಪೂರ್ಣ ಚಿತ್ರದಲ್ಲಿ ಧನಂಜಯ ಇಲ್ಲದ ಸನ್ನಿವೇಶವೇ ಇಲ್ಲ. ಸರ್ವಂ ಧನಂಜಯ ಮಯಂ. ನಟಿ ಕೆಲಸ ಮಾಡುವ ಕಚೇರಿಯಲ್ಲಿ ಬಾಸ್ ನೀಡುವ ಕಿರುಕುಳದ ಎರಡು ದೃಶ್ಯದಲ್ಲಿ ಮಾತ್ರ ಧನಂಜಯ ಇಲ್ಲ!?

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...