Thursday, November 12, 2015

ಪ್ರಶಸ್ತಿ ಪ್ರಹಸನ : ಸಾಹಿತಿಗಳಿಗೂ ಸಾಲ ಯೋಜನೆ ಜಾರಿ ಮಾಡಬೇಕಾದೀತು?

ಪ್ರಶಸ್ತಿ ವಾಪಸಾತಿ ಒಂದು ರೀತಿ ಸಮೂಹ ಸನ್ನಿಯಾಗಿರುವಾಗ ಕೆಲವು ಸಾಹಿತಿಗಳ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿಯೂ ಪರಿಣಮಿಸಿದೆ. ಇಂತಿಪ್ಪ ಬಣದೊಂದಿಗೆ ಗುರುತಿಸಿಕೊಂಡವರು, ಇಂತಿಂಥವರ ಶಿಷ್ಯರು ಎಂದು ಹೇಳಿಕೊಳ್ಳುವವರೆಲ್ಲ ತಮ್ಮ ಬಣ ಮತ್ತು ತಮ್ಮ ಗುರುಗಳ ಪ್ರಶಸ್ತಿ ವಾಪಸು ಕೊಟ್ಟ ಬಳಿಕ ತಾವು ಅನಿವಾರ್ಯವಾಗಿ ವಾಪಸು ಕೊಡಬೇಕಾಗುತ್ತದೆ. ಇದು ಕೆಲವರನ್ನು ಯಾವ ರೀತಿ ಪೇಚಾಡಕ್ಕೆ ಸಿಲುಕಿಸಿದೆ ಎಂದರೆ, ಈ ಹಿಂದೆ ಪ್ರಶಸ್ತಿಯ ಜೊತೆಗೆ ಪಡೆದುಕೊಂಡಿದ್ದ ಮೊತ್ತವನ್ನು ಹೊಂದಿಸಲು ಪರಿದಾಡುವ ಪ್ರಸಂಗಗಳು ನಡೆಯುತ್ತಿದೆ. ಇನ್ನೂ ಕೆಲವರು ಸಾಲಕ್ಕೂ ಮುಂದಾಗುತ್ತಿರಬಹುದು! ಇತ್ತೀಚೆಗೆ ಸಿಕ್ಕಿದ್ದ ಯುವ ಸಾಹಿತಿಯೊಬ್ಬರು ಹೇಳುತ್ತಿದ್ದರು ‘ಪ್ರಶಸ್ತಿಯನ್ನೆನೋ ವಾಪಸು ಕೊಟ್ಟು ಬಂದೆ. ನಾಡಿನ ಜನರ ಕೂಗನ್ನೇ ಕೇಳದ ಆಳುವ ದೊರೆಗಳು ಸೌಮ್ಯರ ಸಾಲಿಗೆ ಸೇರಿಕೊಂಡಿರುವ ಸಾತ್ವಿಕ ಸಾಹಿತಿಗಳ ಪ್ರಶಸ್ತಿ ವಾಪಸಾತಿಗೆ ಸೊಪ್ಪು ಹಾಕುವರೋ? ಇಲ್ವೋ? ಗೊತ್ತಿಲ್ಲ. ಆದರೆ ನನ್ನ ಹೆಂಡತಿ ಈಗ ಸಾರಿನಲ್ಲಿ ಸೊಪ್ಪೆ ಇಲ್ಲದಂತೆ ಮಾಡಿದ್ದಾಳೆ’ ಎಂದು ವ್ಯಂಗ್ಯವಾಗಿ ಹೇಳಿದರು. ಹೀಗ್ಯಾಕೆ ಅಂತಾ ಕೇಳಿದೆ ‘ಏನ್ ಮಾಡಲಿ ನನ್ನ ಪ್ರಶಸ್ತಿ ಜೊತೆಗೆ ಬಂದಿದ್ದು, 10,000ರೂ. ನಗದು. ಆ ಹಣ ಬಂದಾಗ, ತಡಮಾಡದೆ ಆಗಷ್ಟೇ ಬರೆದು ಮುಗಿಸಿದ್ದ ಮತ್ತೊಂದು ಕವನ ಸಂಕಲನ ಮುದ್ರಣವನ್ನು ನನ್ನದೇ ಪ್ರಕಾಶನದಲ್ಲಿ ಪ್ರಕಟಿಸಿಬಿಟ್ಟೆ. ಅದರಿಂದ ಲಾಭವೇನೂ ಬರಲಿಲ್ಲ. ಈಗ ಹೇಗೋ ಜೀವನ ನಡೆಯುತ್ತಿತ್ತು. ಆದರೆ ಐದಾರು ವರ್ಷಗಳ ಹಿಂದೆ ಪಡೆದ ಪ್ರಶಸ್ತಿಯನ್ನು ವಾಪಸು ಕೊಡುವುದಕ್ಕೆ ಹೋಗೋಣ ಬಾ ಅಂತಾ ನಾನು ಗುರುತಿಸಿಕೊಂಡಿರುವ ಬಣದವರು ಹೇಳಿದರು. ಅದಕ್ಕೆ ಒಪ್ಪಿದೆ. ಆದರೆ ಅದರೊಂದಿಗೆ ಮೊತ್ತವನ್ನು ಕೊಡಬೇಕಿಲ್ಲ. ನನ್ನಂತಹ ಬಡ ಸಾಹಿತಿಗೆ 10,000 ರೂ. ಹೊಂದಿಸಬೇಕಾದರೆ ಸಾಕು ಸಾಕಾಯಿತು’ ಎಂದು ತಮ್ಮ ಅಳಲು ತೋಡಿಕೊಂಡಿದ್ದರು. ಈ ಒಂದು ಪ್ರಸಂಗ, ಬಡ ಸಾಹಿತಿಯೊಬ್ಬರ ನಗೆಪಾಟಲಿಯಂತೆ ಕಂಡು ಬಂದರೂ. ಇದರಲ್ಲೂ ವಾಸ್ತವ ಇದೆ. ಏಕೆಂದರೆ ಇಂದು ಧೀಮಂತ ಎಂದು ಕರೆಯಿಸಿಕೊಳ್ಳುವ ಬಹುತೇಕ ಸಾಹಿತಿಗಳು ಅಷ್ಟೇನೂ ಶ್ರೀಮಂತವಾಗಿಲ್ಲ. ಹೀಗಾಗಿ ನಿಲುವುಗಳ ಬೆನ್ನು ಹತ್ತಿ, ಪ್ರಶಸ್ತಿ ವಾಪಸು ಮಾಡುವ ಭರದಲ್ಲಿ ಯಾವಾಗಲೋ ಪಡೆದುಕೊಂಡು, ಖರ್ಚು ಮಾಡಿರುವ ಮೊತ್ತವನ್ನು ಹೊಂದಿಸಲು ಹೆಣಗಾಡುತ್ತಿದ್ದಾರೆ. ಇತ್ತೀಚೆಗೆ ಫೇಸ್‌ಬುಕ್‌ದಲ್ಲಿ ಸಾಹಿತಿಯೊಬ್ಬರು ಪ್ರಶಸ್ತಿ ವಾಪಸಾತಿ ಬಗ್ಗೆ ಶೇರ್ ಮಾಡಿಕೊಂಡಿದ್ದ ಪೋಸ್ಟ್‌ಗೆ ‘ನೀವ್ಯಾಕೆ ಪ್ರಶಸ್ತಿ ವಾಪಸು ಕೊಡಬಾರದು’ ಎಂದು ಸ್ನೇಹಿತರೊಬ್ಬರು ಕಾಮೆಂಟ್ ಮಾಡಿದ್ದರು. ‘ಪ್ರಶಸ್ತಿಯನ್ನೆನೋ ವಾಪಸು ಕೊಡಬಹುದು. ಆದರೆ ಬಂದ್ ದುಡ್ಡಲ್ಲಿ ಮಗಳ ಮದುವೆ ಮಾಡಿಬಿಟ್ಟಿದ್ದೇನೆ. ಈಗ ಮೊತ್ತ ಹೊಂದಿಸಬೇಕಾದರೆ ಸಾಲ ಯಾರು ಕೊಡುತ್ತಾರೆ?’ ಎಂದು ಆ ಸಾಹಿತಿ ಪ್ರತಿಕ್ರಿಯಿಸಿದ್ದರು. ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವಿಡಂಬನಾತ್ಮಕ ಹಾಗೂ ವೈಚಾರಿಕ ಚರ್ಚೆಗಳೂ ನಡೆಯುತ್ತಿವೆ. ಫೇಸ್‌ಬುಕ್‌ದಲ್ಲಿ ಕೆಲವರಿಗೆ ವ್ಯಂಗ್ಯ ಪೋಸ್ಟ್‌ಗಳಿಗೆ ಈ ಪ್ರಶಸ್ತಿ ವಾಪಸಾತಿ ಸಮೂಹ ಸನ್ನಿ ಆಹಾರವಾಗಿದೆ. ಸ್ಟೀಲ್ ಲೋಟದ ಫೋಟೋ ಹಾಕಿ ನಾನು ಸ್ಕೂಲ್‌ದಲ್ಲಿದ್ದಾಗ ಪಡೆದುಕೊಂಡಿದ್ದ ಪ್ರಶಸ್ತಿಯನ್ನು ವಾಪಸು ಕೊಡುತ್ತಿದ್ದೇನೆ ಎಂದೆಲ್ಲ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ‘ಸಾಹಿತಿಗಳು ಪ್ರಶಸ್ತಿಯ ಜೊತೆಗೆ ಅದರ ಮೊತ್ತವನ್ನೂ ವಾಪಸು ಕೊಡುತ್ತಿರುವುದು ಶ್ಲಾಘನೀಯ ಕಾರ್ಯ. ಸಾಹಿತಿಗಳು ಕೊಡುತ್ತಿರುವ ಆ ಮೊತ್ತವನ್ನು ರೈತರ ಆತ್ಮಹತ್ಯೆ ಪರಿಹಾರ ನಿಧಿಗೆ ಸೇರಿಸಿ ಬಿಡಬೇಕು. ಕೇವಲ ಅಕ್ಷರ ರೂಪದಲ್ಲಿ ಸಮಾಜ ಸೇವೆ ಮಾಡುತ್ತಿರುವ ಸಾಹಿತಿಗಳಿಂದ ಈ ಮೂಲಕವಾದರೂ ಆರ್ಥಿಕ ರೂಪದ ಸೇವೆ ದೊರೆಯಲಿ’ ಎಂಬುದಾಗಿಯೂ ಚರ್ಚೆಗಳು ನಡೆಯುತ್ತಿವೆ. ಪ್ರಶಸ್ತಿ ವಾಪಸಾತಿ ಸದ್ಯಕ್ಕಂತೂ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಇದು ಇದೇ ರೀತಿ ಮುಂದುವರೆದಲ್ಲಿ ಮುಂದೊಂದು ದಿನ ರೈತರ ಸಾಲದಂತೆ ಸಾಹಿತಿಗಳ ಸಾಲವನ್ನೂ ಮನ್ನಾ ಮಾಡಬೇಕೆಂಬ ಕೂಗು ಬರಬಹುದು. ಅದಕ್ಕೂ ಮುಂಚೆ ಪ್ರಶಸ್ತಿ ಮೊತ್ತ ಹೊಂದಿಸುವುದಕ್ಕಾಗಿ ಸಾಹಿತಿಗಳಿಗೂ ರೈತರಿಗೆ ನೀಡುವ ಬೆಳೆಸಾಲದಂತೆ ‘ಸಾಹಿತಿ ಸಾಲ’ ಎಂಬ ಯೋಜನೆ ಜಾರಿ ಮಾಡಿ ಎಂಬುದಾಗಿಯೂ ಆಗ್ರಹಗಳು ಕೇಳಿ ಬರಬಹುದು!?

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...