Friday, November 6, 2015

ಹಳ್ಳಿಯೊಂದರ ಮುತ್ತಿನಂತಹ ಕಥೆ ‘ವಂಶೋದ್ಧಾರಕ’

ವಂಶೋದ್ಧಾರಕ ಸಿನಿಮಾ ನೋಡ್ತಾ ಇದ್ರೆ ನಮಗೆಲ್ಲ ಒಂದು ಕ್ಷಣ ಹೊಟ್ಟೆ ಉರಿದು ಬಿಡುತ್ತೆ ಕಣ್ರಿ. ಕಾರಣ ನಮ್ಮ ಹೊಲದಲ್ಲಿ ಬೆಳೆಯೆಲ್ಲ ಬರಗಾಲದಿಂದ ಒಣಗಿ ಹೋಗಿದ್ದನ್ನೆ ನೋಡಿ ನೋಡಿ ಕಂಗೆಟ್ಟು ಹೋಗಿರುವ ನಮ್ಮ ಕಣ್ಣುಗಳಿಗೆ ಭೂತಾಯಿಯ ಹಸಿರು ಸಿರಿಯ ವೈಭವವನ್ನು ಅತ್ಯದ್ಭುತವಾಗಿ ತೋರಿಸಿಕೊಟ್ಟಿದ್ದಾರೆ ಈ ಸಿನಿಮಾದಲ್ಲಿ. ಹೀಗಾಗಿ ಇಲ್ಲಿ ಬಂದಿರುವ ಭತ್ತದ ಬೆಳೆಯ ಹಸಿರು ವೈಭವನನ್ನು ನೋಡಿದಾಗ ಸಹಜವಾಗಿ ನಮಗೆ ಹೊಟ್ಟೆ ಉರಿಯದೇ ಇರುತ್ತಾ!?. ಅಷ್ಟೊಂದು ಚೆನ್ನಾಗಿದೆ ಪಿಕೆಎಚ್ ದಾಸರ ಸಿನಿಮಾಟ್ರೋಗ್ರಫಿ. ಚಿತ್ರದ ಆರಂಭದಲ್ಲಿಯೇ ಬರುವ ನಾಯಕನ ಪರಿಚಯಾತ್ಮಕ ಹಾಡು ‘ರೈತ ಭೂಮಿಯ ಚೊಚ್ಚಲ ಮಗ’ ಗೀತೆಯಂತೂ ಎಷ್ಟು ಅದ್ಭುತವಾಗಿ ಸಂಗೀತ ಹೊಂದಿದೆಯೋ ಅಷ್ಟೇ ಚೆಂದದ ದೃಶ್ಯಾವಳಿ ಬಂದಿದೆ. ಚಿತ್ರದಲ್ಲಿನ ಬಹುತೇಕ ದೃಶ್ಯ ಮತ್ತು ಸನ್ನಿವೇಶಗಳು ಮರೆತು ಹೋದ ನಮ್ಮ ಹಳ್ಳಿ ನೆನಪುಗಳು ಕಣ್ಣ ಮುಂದೆ ಬರುವಂತೆ ಮಾಡುತ್ತವೆ. ಹೀಗಾಗಿ ಹಳ್ಳಿ ಬಿಟ್ಟು ನಗರದಲ್ಲ ನೆಲೆಸಿರುವ ಪ್ರತಿಯೊಬ್ಬ ಹಳ್ಳಿಗನೂ ನೋಡಲೇಬೇಕಾದ ಸಿನಿಮಾ ಎಂದರೆ ಅತಿಶಯೋಕ್ತಿ ಆಗಲಾರದು. ಆದಿತ್ಯ ಚಿಕ್ಕಣ್ಣನರ ನಿರ್ದೇಶನ ನಿರೂಪಣೆ ನಯವಾಗಿದೆ. ಹಳ್ಳಿಯಲ್ಲಿರುವ ಮುಗ್ಧರು ಮೋಸದಾಟಗಳಿಗೆ ಬಲಿಯಾಗುವುದು, ಹಳ್ಳಿಯಲ್ಲೊಬ್ಬ ಒಳ್ಳೆಯ ಮುಖಂಡ ಅವನಿಗೊಬ್ಬ ವಿರೋಧಿ ದುಷ್ಟ ಮುಖಂಡ. ಕುಟೀಲ ಕಾರಸ್ಥಾನಗಳು, ಮೋಹ-ಮೋಸದಾಟಗಳು, ಸಣ್ಣ ಸಣ್ಣ ಛಾಡಿ ಮಾತುಗಳೇ ಗುಡ್ಡವಾಗಿ ಕುಳಿತುಕೊಂಡು ಬಹಿಷ್ಕಾರದವರೆಗೂ ಬಂದು ನಿಲ್ಲುವ ಪ್ರಸಂಗಗಳು, ಹಳ್ಳಿ ಶಾಲೆಯ ಪರಿಸ್ಥಿತಿ, ನಿದ್ದೆ ಮಾಡುವ ಹಾಗೂ ಮಕ್ಕಳಿಂದ ಮಜ್ಜಗಿ ಮತ್ತು ಇತರೆ ಪದಾರ್ಥ ತರಿಸಿಕೊಂಡು ಹಾಜರಿ ಹಾಕುವ ಹಳ್ಳಿ ಶಾಲೆಯ ಮೇಷ್ಟ್ರು, ದುಬಾರಿ ಬೆಲೆಗೆ ರಸಾಯನಿಕ ಗೊಬ್ಬರ ಮಾರಿ ರೈತರಿಗೆ ಮೋಸ ಮಾಡುವ ವ್ಯಾಪಾರಿ, ಅಮಾಯಕರ ತಾಳಿ ಕಿತ್ತುಕೊಂಡರೂ ಚಿಂತಿಯಿಲ್ಲ ತಾನು ಹಣ ಪಡೆದುಕೊಂಡೇ ಆಶ್ರಯ ಮನೆ ಕೊಡಿಸುತ್ತೇನೆಂದು ಪುಸಲಾಯಿಸುವ ಗ್ರಾಪಂ ಅಧಿಕಾರಿ(ಬ್ಯಾಂಕ್ ಜನಾರ್ಧನ್)- ಅವನಿಗೊಬ್ಬ ಎಡಬಿಡಂಗಿ ಏಜೆಂಟ್(ರಂಗಾಯಣ ರಘು), ಷೋಕಿಲಾಲ್ ಪೌರುಷದಾಟದ ಹಾಸ್ಯ(ಕುಂಯಿ ಕುಂಯಿ ಸಾಧು ಕೋಕಿಲಾ), ನಗರದೆಡೆಗಿನ ಆಕರ್ಷಣೆಗಳು, ಕೈಗಾರಿಕೆಗಳ ಪ್ರಭಾವಗಳು....! ಹೀಗೆ ಹಳ್ಳಿಯ ಹಲವು ಮಗ್ಗಲುಗಳು ಸಿನಿಮಾವನ್ನು ಆವರಿಸಿಕೊಂಡಿದ್ದರೂ ಅದ್ಭುತವಾಗಿವೆ. ಇತ್ತೀಚೆಗೆ ಚಲನಚಿತ್ರಗಳಿಂದ ದೂರವೇ ಉಳಿದಿರುವ ಹಾಗೂ ಧಾರವಾಹಿಗಳಿಗೆ ಮಾತ್ರವೇ ಸೀಮಿತವಾಗಿರುವ ಒಂದು ಕಾಲದ ಖ್ಯಾತ ಹಾಸ್ಯ ನಟರು, ಪೋಷಕ ಪಾತ್ರಧಾರಿಗಳೆಲ್ಲರ ಒಂದು ದೊಡ್ಡ ದಂಡು ಈ ಚಿತ್ರದಲ್ಲಿ ಅಭಿನಯಿಸಿದ್ದು, ವಂಶೋದ್ಧಾರಕ್ಕೆ ಪ್ರೇಕ್ಷಕರನ್ನು ವಶ ಮಾಡಿಸಿಕೊಳ್ಳುವಲ್ಲಿನ ಅಂದವನ್ನು ಹೆಚ್ಚಿಸಿದ್ದಾರೆ. ಇನ್ನೂ ಸಿನಿಮಾದಲ್ಲಿ ಬರವಿಲ್ಲದ ಹೊಲವಿದೆಯೋ ಅದೇ ರೀತಿ ಇಲ್ಲಿ ಹಾಸ್ಯಕ್ಕೂ ಯಾವುದೇ ಬರವಿಲ್ಲ. ಭರಫೂರ್ ಕಾಮಿಡಿ ದೃಶ್ಯಗಳಿವೆ. ನಾಯಕ ನಟ ವಿಶ್ವ(ವಿಜಯ ರಾಘವೇಂದ್ರ)ನಿಗೆ ಕೊಟ್ಟಿರುವಷ್ಟೇ ಸಮತೂಕದ ಒತ್ತು ಇಲ್ಲಿ ರಂಗಾಯಣ ರಘು ಪಾತ್ರಕ್ಕೂ ಇದೆ. ಯಾಕಂದ್ರೆ ರಘುರ ಪಾತ್ರಕ್ಕಾಗಿಯೇ ಎರಡು ಹಾಡು ಇಲ್ಲಿ ಸೀಮಿತ (ಅಲೆಮನೆಯಲ್ಲಿ-ಐಟ್‌ಂ ಸಾಂಗ್... ಹಾಗೂ ನಾಥ ನಾಥ್...) ಹಳ್ಳಿಯ ಸಮಸ್ಯೆಗಳನ್ನು ಇನ್ನೊಂದಿಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿತ್ತು. ಚಿತ್ರದಲ್ಲಿ ನಾಯಕ ವಿಶ್ವ ನಾವೆಲ್ಲ ಸಾವಯವ ಕೃಷಿ ಮಾಡೋಣ ಎಂದು ಉಪದೇಶ ಹೇಳುತ್ತಾನೆ. ಅದಾದ ಬಳಿಕ ರಂಗಾಯಣ ರಘು ಸನ್ನಿವೇಶವೊಂದರಲ್ಲಿ ಸಾವಯವ ಕೃಷಿ ಸಾಧಕ ಎಂದೂ ವಿಶ್ವನನ್ನು ಕರೆಯುತ್ತಾನೆ. ಆದರೆ ಸಾವಯವ ಕೃಷಿ ಸಾಧನೆಯ ದೃಶ್ಯಗಳಾಗಲಿ, ಪ್ರಸ್ತಾಪವಾಗಲಿ ಬಂದೇ ಇಲ್ಲ. ಸಾವಯವ ಕೃಷಿಗೆ ಸಂಬಂಧಿಸಿದ ಅಂಶಗಳಿದಿದ್ದರೇ, ಇಂದು ರೈತರಲ್ಲಿ ಹೆಚ್ಚು ಜಾಗೃತಿ ಮೂಡಿಸುತ್ತಿರುವ ಸಾವಯವ ಕೃಷಿ ಪದ್ಧತಿಯ ಮೇಲೆ ಬೆಳಕು ಚೆಲ್ಲಿದಂತಾಗುತ್ತಿತ್ತು.

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...