Monday, September 21, 2015

ನಮ್ಮಲ್ಲಿಯೂ ಹೋರಾಟಗಳಾಗೋದು ಯಾವಾಗ?

ಕರ್ನಾಟಕದಲ್ಲಿ ಕನ್ನಡ ಚಿತ್ರಗಳ ಕಗ್ಗೊಲೆ
ಗೀತಾ ಬ್ಯಾಂಗಲ್ ಸ್ಟೋರ್... ಅಪ್ಪಟ ಕನ್ನಡತನದ ಗ್ರಾಮೀಣ ಸೊಗಡಿನ ಚಿತ್ರ. ಈ ಸಿನಿಮಾವನ್ನು ಚೆನ್ನಾಗಿ ಓಡುತ್ತಿರುವಾಗಲೇ ಚಿತ್ರಮಂದಿರಗಳಿಂದ ಕಿತ್ತುಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೀತಾ ಇದೆ. ನಿರ್ದೇಶಕ ಮಂಜು ಮಿತ್ರ ಚಿತ್ರರಂಗ ಬಿಟ್ಟು ಊರಿಗೆ ಹೋಗಿ ಕ್ಯಾಮೆ ಮಾಡೋದು ವಾಸಿ ಎಂಬಂತೆ ನಿರಾಸರಾಗಿದ್ದಾರೆ. ಇಂತಿಪ್ಪ ಸಂದರ್ಭದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಗಾಗಿ ಹೋರಾಡುವವರು ಎಂದು ಹೇಳಿಕೊಳ್ಳುವ ಒಂದೇ ಒಂದು ಸಂಘಟನೆಯೂ ನಮ್ಮ ರಾಜ್ಯದಲ್ಲಿ ಇಲ್ಲಿಯವರೆಗೂ ಒಳ್ಳೆಯ ಚಿತ್ರಗಳ ಪರವಾಗಿ ನಿಲ್ಲದಿರುವುದು ದುರಂತವೇ ಸರಿ!? ಈ ಹಿಂದೆ ಮಹಾರಾಷ್ಟ್ರದಲ್ಲಿ ದುನಿಯಾದಾರಿ ಸಿನಿಮಾ ಚೆನ್ನಾಗಿ ನಡೆಯುತ್ತಿದ್ದಾಗ, ‘ಚೆನ್ನೈ ಎಕ್ಸ್‌ಪ್ರೆಸ್’ ಸಿನಿಮಾ ಅಪ್ಪಳಿಸೋಕೆ ಶುರುವಾಯಿತು. ಆಗ ಅಲ್ಲಿನ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಗೊಂಡರು. ತಡವೇ ಇಲ್ಲ-ಮಹಾರಾಷ್ಟ್ರ ನವನಿರ್ಮಾಣ ಸೇನೆ ‘ದುನಿಯಾದಾರಿ’ ಪರವಾಗಿ ನಿಂತಿತ್ತು. ಮುಖ್ಯವಾಗಿ ರಾಜ್ ಠಾಕ್ರೆ ಗುಡುಗಿದರು. ಆಗ ಎಷ್ಟೋ ಕಡೆ ಚೆನ್ನೈ ಎಕ್ಸ್‌ಪ್ರೆಸ್ ಚಿತ್ರಕ್ಕೆ ಚಿತ್ರಮಂದಿರಗಳು ಸಿಗಲಿಲ್ಲ. ತೆಗೆದು ಹಾಕಿದ್ದ ಕಡೆ ಮತ್ತೆ ದುನಿಯಾದಾರಿ ಪ್ರತಿಷ್ಠಾಪನೆಗೊಂಡಿತ್ತು.
ಚೆನ್ನೈ ಎಕ್ಸ್‌ಪ್ರೆಸ್ ಅಬ್ಬರದ ಬಳಿಕವೂ ಅತ್ಯುತ್ತಮ ಚಿತ್ರವಾಗಿದ್ದ ದುನಿಯಾದಾರಿ ಚಿತ್ರ ಮಂದುವರೆಯಿತು. ಇದೊಂದು ಸಂದರ್ಭವಲ್ಲ. ಮಹಾರಾಷ್ಟ್ರದಲ್ಲಿ ಹಲವು ಸಲ ಶಿವಸೇನೆ ಮತ್ತು ಎಂಎನ್‌ಎಸ್ ಸಂಘಟನೆಗಳು ಅಪ್ಪಟ ಮರಾಠಿ ಚಿತ್ರಗಳ ಪರವಾಗಿ ನಿಂತಿವೆ. ಆದರೆ ನಮ್ಮಲ್ಲಿ ? ಎಂಬುದೇ ದೊಡ್ಡ ಪ್ರಶ್ನೆ. ನಮ್ಮ ರಾಜ್ಯದಲ್ಲಿಯೂ ಹಳ್ಳಿಗೊಂದು, ಗಲ್ಲಿಗೊಂದು ಸಂಘಟನೆಗಳಿವೆ. ಆದರೂ ಅವುಗಳಿಗ್ಯಾಕೋ ಇವೆಲ್ಲ ಹೋರಾಟ ಮಾಡುವ ವಿಷಯಗಳೇ ಆಗುವುದಿಲ್ಲ. ಎಷ್ಟೋ ಸಂಘಟನೆಗಳಲ್ಲಿ ಚಿತ್ರರಂಗದವರೂ ಇದ್ದಾರೆ. ಅವರಿಗೂ ಕಾಳಜಿ ಕಾಣುತ್ತಿಲ್ಲ. ಇಲ್ಲಿ ಗೀತಾ ಬ್ಯಾಂಗಲ್ ಸ್ಟೋರ್ ಒಂದೇ ಅಲ್ಲ. ಇತ್ತೀಚೆಗೆ ರಂಗಿ ತರಂಗಕ್ಕೂ ಅದೇ ಗತಿಯಾಗಿತ್ತು. ಆದರೆ ಅದು ವಿದೇಶಗಳಲ್ಲಿ ಗಟ್ಟಿಯಾಗಿ ನಿಂತ ಪರಿಣಾಮ ಒಂದು ಮಾನ್ಯತೆ ದೊರೆಯಿತು. ಆದರೂ ಇನ್ನುವರೆಗೂ ಆ ಚಿತ್ರ ರಾಜ್ಯದ ಸಾಮಾನ್ಯ ಚಿತ್ರಮಂದಿರಗಳಲ್ಲಿ ಬಂದಿಲ್ಲ. ಆಟಗಾರ ಚಿತ್ರವೂ ಎದ್ದು ಹೋಯಿತು. ಈ ಹಿಂದೆ ಇದೇ ರೀತಿ ಸ್ವಮೇಕ್‌ನ ಒಳ್ಳೆಯ ಚಿತ್ರಗಳಿಗೆ ಅಧೋಗತಿ ಆಗಿದೆ. ಈಗ ಬರಲಿರುವ ‘ನಾನ ಅವನಲ್ಲ ಅವಳು’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿದೆ. ಆದರೆ ಅದಕ್ಕೆ ಸಿಗುತ್ತಿರುವ ಚಿತ್ರಮಂದಿರಗಳೆಷ್ಟು? ಎಂಬುವುದು ಬಿಗ್ ಪ್ರಶ್ನೆ. ಮಚ್ಚು, ಕೊಚ್ಚು. ರೊಚ್ಚಿನ ಹಿರೋಯಿಸಂನ ಬುರಡೆ ಬಿಲ್ಡಪ್ ಚಿತ್ರಗಳೇ ನಮ್ಮಲ್ಲಿ ಉತ್ತಮ ಎನ್ನುವಂತಹ ವಾತಾವರಣ ಬೆಳೆದು ಬಿಟ್ಟಿದೆ. ರಿಮೇಕ್ ಚಿತ್ರಗಳನ್ನೇ ನೋಡಿ ನೋಡಿ ಸ್ವಮೇಕ್‌ಗಳನ್ನು ಮೆಚ್ಚುವ ಮನಸ್ಸನ್ನು ಕಳೆದುಕೊಂಡು ಬಿಟ್ಟಿದ್ದೇವೆ. ಸಿನಿಮಾ ಮಾಡೋರು... ಜನ ಬಯಸಿದಂತೆ ನಾವು ಚಿತ್ರ ಮಾಡುತ್ತಿದ್ದೇವೆ. ಪ್ರೇಕ್ಷಕರು ಅಭಿರುಚಿ.. ಅದು ಇದು ಎಂದೆಲ್ಲಾ ಹೇಳುತ್ತಾರೆ. ಆದರೆ ಈ ವರ್ಷ ಮೈತ್ರಿಯಿಂದ ಶುರುವಾಗಿ ಗೀತಾ ಬ್ಯಾಂಗಲ್ ಸ್ಟೋರ್‌ವರೆಗೆ ಗೆದ್ದಿರೋದು ದೊಡ್ಡ ನಟರ ಚಿತ್ರಗಳಲ್ಲ. ಹೊಸಬರ, ಹೊಸ ಬಗೆಯ ಅಪ್ಪಟ ಕನ್ನಡತನದ ಚಿತ್ರಗಳು.
ಇನ್ನೂ ಮಹಾರಾಷ್ಟ್ರದ ಸರ್ಕಾರ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರೈಮ್ ಟೈಮ್‌ಗಳಲ್ಲಿ ಮರಾಠಿ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ನಿಯಮ ಮಾಡಿದೆ. ಪೈರಸಿ ಸಿಡಿ ಮಾರಾಟದ ಮೇಲೆ ಗುಂಡಾ ಕಾಯಿದೆ ಜಾರಿಯಾಗಿ ಯಾವುದೋ ವರ್ಷವಾಯಿತು. ಆದರೆ ಕರ್ನಾಟಕದಲ್ಲಿ ಸರ್ಕಾರ ಮಾಡುವವರಿಗೆ ಮಾತ್ರ ಈ ಎದೆಗಾರಿಕೆ ಇಲ್ಲ. ಈ ಹಿಂದೆ ತಾರಾ ಅವರು ಚಲನಚಿತ್ರ ಅಕಾಡೆಮಿ ಅಧ್ಯಕ್ಷೆಯಾದಾಗ ಪೈರಸಿ ವಿರುದ್ಧ ಗುಂಡಾ ಕಾಯಿದೆ ಜಾರಿಗೆ ತುಂಬಾ ಶ್ರಮ ವಹಿಸಿದ್ದರು. ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಒಂದೀನಿತು ಕಾಳಜಿಯೂ ತೋರಿದಂತೆ ಇತ್ತು. ಆದರೆ ಅಷ್ಟೊತ್ತಿಗೆ ಮುಖ್ಯಮಂತ್ರಿ ಬದಲಾದರು. ತಾರಾ ಅವರು ಈಗ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಅವರೊಂದಿಗೆ ಪರಿಷತ್‌ನಲ್ಲಿ ಜಯಮಾಲಾರಂತವರು ಇದ್ದಾರೆ. ಈಗಲಾದರೂ ಗುಂಡಾ ಕಾಯಿದೆ ಬಗ್ಗೆ ಚಿಂತನೆಗಳಾಗಬೇಕಿದೆ. ಕೇವಲ ಸಬ್ಸಿಡಿ ಪಡೆಯಲು ಮಾತ್ರ ಚಿತ್ರ ಮಾಡುವವರ ಮಧ್ಯೆ ಸಬ್ಸಿಡಿಯೊಂದಿಗೆ ಒಂದಿಷ್ಟು ಸಾರ್ವಜನಿಕ ಕಾಳಜಿ ತೋರುವ ಉತ್ತಮ ಚಿತ್ರಗಳೂ ಗೆಲ್ಲಬೇಕಿದೆ. ಅದಕ್ಕಾಗಿ ಏನಾದರೂ ಬದಲಾವಣೆಯಾಗಬೇಕಿದೆ. ಚಿಂತನೆಗಳು ನಡೆಯಬೇಕಿದೆ. *ಡಿವಿಕೆ

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...