Saturday, September 12, 2015

ನೈಜ ಅನುಭವ ನೀಡುವ ಗೀತಾ ಬ್ಯಾಂಗಲ್ ಸ್ಟೋರ್...

ಸಾಮಾನ್ಯವಾಗಿ ಮರಾಠಿ ಚಿತ್ರದಂತೆ ಗ್ರಾಮೀಣ ಸೊಗಡು ಹಾಗೂ ಜನಜೀವನವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಬಲ್ಲ ಸಮರ್ಥ ಚಾತುರ‌್ಯ ಕನ್ನಡ ಚಿತ್ರರಂಗಕ್ಕೆ ಬಂದಿಲ್ಲ ಎಂದುಕೊಂಡೇ ಇದ್ದೆ ನಾನು. ಆದರೆ ‘ಗೀತಾ ಬ್ಯಾಂಗಲ್ ಸ್ಟೋರ್’ ನೋಡಿದ ಬಳಿಕ ಆ ನಿಲುವು ಇಂದಿಗೆ ಬದಲಾಗುವಂತೆ ಮಾಡಿದ್ದಾರೆ ಮಂಜುಮಿತ್ರ. ನಿಜಕ್ಕೂ ಮಂಜು ಮಿತ್ರ ಕನ್ನಡ ಚಿತ್ರರಂಗದಲ್ಲಿ ಬೀಸಿರುವ ಹೊಸಬರ ಬದಲಾವಣೆಯ ಪರ್ವಕ್ಕೆ ಆಪ್ತಮಿತ್ರನಾಗಬಲ್ಲಂತ ನಿರ್ದೇಶಕ ಎಂದು ಹೇಳದಿದ್ದರೇ, ನಾನು ಮೊದಲ ದಿನ, ಮೊದಲ ಷೋ ನೋಡಿರುವ ಉತ್ಸಾಹಕ್ಕೆ ಅಪವಾದ ಮಾಡಿದಂತಾಗುತ್ತದೆ. ಸಾಮಾನ್ಯವಾಗಿ ಗ್ರಾಮೀಣ ಪರಿಸರದ ಕಥೆಯ ಹೆಸರು, ಸೋಗಡಿನ ಸೋಗಿನಲ್ಲಿ ಬರುವ ಸಿನಿಮಾಗಳಲ್ಲಿ ನಗರೀಕರಣ ತುಂಬಿಕೊಂಡೇ ಇರುತ್ತದೆ. ಆದರೆ ‘ಗೀತಾ ಬ್ಯಾಂಗಲ್ ಸ್ಟೋರ್’ನಲ್ಲಿ ನಟಿಯ ಕಲ್ಪನಾ ಭಾವದ ಹಾಡಿನಲ್ಲಿ ಗ್ಲಾೃಮರಸ್ಸೆಗೆ ತಕ್ಕಂತೆ ಒಂದಿಷ್ಟು ಹೊಸತನದ ಸ್ಪರ್ಶ ಇದ್ದದ್ದು (ಎಷ್ಟೇ ಆಗಲಿ ಅದು ಕಲ್ಪನೆ)ಬಿಟ್ಟರೇ, ಇಡೀ ಚಿತ್ರ ನೋಡುತ್ತಾ ನೋಡುತ್ತಾ ನಾವು ಆ ಹಳ್ಳಿಗೆ ಹೋಗಿ ಬಿಡುತ್ತೇವೆ. ಎಲ್ಲವೂ ನಮ್ಮ ಪಕ್ಕದ ಮನೆಯಲ್ಲಿ ನಡೆಯುತ್ತಿದೆ ಏನೋ ಎನ್ನುವಂತಹ ನೈಜ ಅನುಭವ ಕೊಡುವಂತಿದೆ. ಇದಕ್ಕೆ ನಿರ್ದೇಶಕನ ಆಶಯಕ್ಕೆ ಸಂಕಲನಕಾರ ಮತ್ತು ಎಲ್ಲಕ್ಕಿಂತ ಮೇಲಾಗಿ ಛಾಯಾಗ್ರಾಹಕ ನೀಡಿರುವ ಸಮರ್ಥ ಸಾಥ್ ಸಹ ಕಾರಣ ಎನ್ನಲೇಬೇಕು. ಅಬ್ಬಬ್ಬಾ ಎಂದರೆ ಚಿತ್ರ ಹಳ್ಳಿ ಬಿಟ್ಟು ಹೋಬಳಿಗೆ ಹೋಗುತ್ತದೆಯಷ್ಟೇ. ಆ ಹೋಬಳಿಯ ಕಾಲೇಜ್ ನಮ್ಮಂತಹ ಹಳ್ಳಿ ಹುಡುಗರಿಗೆ ಅಮಾವಾಸ್ಯೆ, ಹುಣ್ಣಿಮೆಗೊಮ್ಮೆ ಪಿಯುಸಿ ಕ್ಲಾಸ್‌ಗೆ ಹೋಗುತ್ತಿದ್ದ ನಮ್ಮ ನಮ್ಮ ಹೋಬಳಿ ಪ್ರದೇಶದ ಅನುದಾನಿತವೋ,, ಅನುದಾನ ರಹಿತವೋ ಆಗಿರುವ ಕಾಲೇಜ್ ಜೀವನ ನೆನಪಿಸದೇ ಇರಲಾರದು. ಆ ಹಳ್ಳಿ.. ಆ ಹಳ್ಳಿಯ ಮುರಕಲು ಮನೆಗಳು.. ಆ ಕೆರೆ.... ಮನೆ ಮೇಲಿನ ಕಪ್ಪು ಹೆಂಚಿನ ಛಾವಣಿ, ಅರ್ಧಂಬರ್ಧ ಬಿದ್ದು ಹೋಗಿರುವ ಮನೆ ಗೋಡೆಗಳು..., ಮಣ್ಣು ಹೆಂಟೆಗಳು, ಗೋಡೆಯ ಆಧಾರವಿಲ್ಲದೇ ವಾಲಿಕೊಂಡಿರುವ ಮನೆಯ ಬೆಲಗುಗಳು, ಹೊಲ-ಗದ್ದೆ, ಅಡುಗೆ ಮನೆಯ ಒಲೆ.. ಹೀಗೆ ಎಲ್ಲಿಯೂ ಸಹ ಎಡವಿಲ್ಲ ಎನ್ನುವಂತೆ ಹಳ್ಳಿಯ ಜೀವನ ಕಟ್ಟಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಪಾತ್ರಗಳನ್ನು ತೆಗೆಸಿದ್ದಾರೆ. ವಿನಯಾ ಪ್ರಕಾಶ ಹಳ್ಳಿಯೊಂದರ ಮಹಿಳೆಯಾಗಿ ತುಂಬಾ ಇಷ್ಟವಾಗುತ್ತಾರೆ. ಇನ್ನು ವೀರಭದ್ರನ ಪಾತ್ರ ಮಾಡಿರುವ ಪಂಜು ಕನ್ನಡಕ್ಕೆ ಮತ್ತೋರ್ವ ಗಟ್ಟಿ ಧ್ವನಿಯ, ಸಮರ್ಥ ಅಭಿನಯದ ನಟ ಸಿಕ್ಕಂತಾಗಿದೆ. ವೀರೂ ಪಾತ್ರಧಾರಿಯ ಧ್ವನಿಯಷ್ಟೇ ನಟನೆಯೂ ಅದ್ಭುತ. ಎಲ್ಲವನ್ನೂ ಬರೆದ ಮೇಲೆ ನಮ್ಮ ಸಹೃದಯಿಗಳಾದ ಗಿರಿರಾಜ್ ಬಿ.ಎಂ. ಅವರ ಬಗ್ಗೆ ಬರಿಯದೇ ಹೋದರೆ ಮತ್ತೊಂದು ಅಪವಾದವಾದೀತು. ಅಬ್ಬಾ ಏನ್ರಿ ಇವರು ಸೈಲೆಂಟ್ ವಿಲನ್. ಪಂಚಾಗ ಸ್ವಾಮಿ... ಈ ಹಿಂದೆ ಗಿರಿರಾಜ್‌ರನ್ನು ಕೆಲವು ಚಿತ್ರಗಳಲ್ಲಿ ನಟಿಸಿದ್ದನ್ನು ನೋಡಿದ್ದೆ. ಆದರೆ ಈ ಚಿತ್ರದ ವಿಲನ್ ಪಾತ್ರದ ಮೂಲಕ ಅವರು ತುಂಬಾ ಇಷ್ಟವಾಗುತ್ತಾರೆ. ಸಣ್ಣದೊಂದು ದೃಶ್ಯದಲ್ಲಿ ಗುರುಪ್ರಸಾದ ಸಹ ಬಂದು ಹೋಗುತ್ತಾರೆ. ಚಿತ್ರ ಸುಖಾಂತ್ಯ ಕಾಣುತ್ತದೆ ಎಂದು ಎಲ್ಲ ಪ್ರೇಕ್ಷಕರು ಭಾವಿಸಿರುವಾಗ, ಉಹಿಸಿರುವಾಗಲೇ, ಅದಕ್ಕೊಂದು ಟರ್ನ್ ಕೊಟ್ಟಿರುವುದನ್ನು ಮೆಚ್ಚಲೇಬೇಕು. ಸುಖಾಂತ್ಯ ದುಃಖಾಂತ್ಯವಾಗುತ್ತದೆ. ಕರ್ಚಿಪು ಕೈಗೆ ಬರುತ್ತದೆ. ಕನ್ನಡದಲ್ಲಿ ಮತ್ತೊಂದು ಹೊಸಬರ ಚಿತ್ರ ಯಶಸ್ವಿಯಾಗಿದೆ ಬನ್ನಿ ಬೆಂಬಲಿಸುವಾ.... * ಡಿವಿಕೆ

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...