
ಆಟಗಾರ ಪ್ರತಿಯೊಬ್ಬ ಪತ್ರಕರ್ತನೂ ನೋಡಲೇಬೇಕಾದ ಸಿನಿಮಾ ಎಂದೆನಿಸಿದೆ ನನಗೆ. ಕಾರಣ ಈ ಚಿತ್ರ ಮುಗಿಯುವ ಹೊತ್ತಿಗೆ ಚಿತ್ರಮಂದಿರದಿಂದ ಹೊರಗೆ ಬರುತ್ತಾ ಓರ್ವ ಪತ್ರಕರ್ತನಾಗಿ ನನಗೆ ನಾನೇ ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮಾಡಿತು.
ಇಂದು ಮಾಧ್ಯಮ ಲೋಕದಲ್ಲಿ ನಡೆಯುತ್ತಿರುವ ಕೆಲ ಮಸಲತ್ತುಗಳನ್ನು ಇತರೆ ಕ್ಷೇತ್ರಗಳ ಮಸಲತ್ತಿನೊಂದಿಗೆ ತುಂಬಾ ಚೆನ್ನಾಗಿ ಜೋಡಿಸಿದ್ದಾರೆ ಮತ್ತು ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ.
ಹಣ ಮತ್ತು ಇಂಪ್ಲಿಯೆನ್ಸ್‌ನಿಂದ ಏನ ಬೇಕಾದರೂ ಕೊಂಡುಕೊಳ್ಳಬಲ್ಲೆ. ನನ್ನ ಪ್ರತಿಷ್ಠೆ ನನಗೆ, ದಿನಾ ಸಾಯೋರಿಗೆ ಅಳೋರ ಯಾರು? ಅನ್ನೊರಿಗೆಲ್ಲಾ... ಅಂಥವರ ಹುಳುಕು, ಅನ್ಯಾಯಗಳನ್ನು ಸಮಾಜದ ಮುಂದೆ ಬೆತ್ತಲೆ ಮಾಡಿಸಬೇಕಾದವರೇ ಆ ಪಾಪಿಗಳ ಮುಂದೆ ಬೆತ್ತಲಾಗುತ್ತಿರುವ ಬಗ್ಗೆ. ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಜೊತೆ ಹೋಲಿಸುವ ಮಾಧ್ಯಮ ರಂಗವೂ ಇವತ್ತು ಯಾವ ರೀತಿ ನಿಷ್ಕ್ರೀಯವಾಗುತ್ತಾ ಹೋಗುತ್ತಿದೆ. ಟಿಆರ್‌ಪಿ ಅಬ್ಬರದ ಮಧ್ಯೆ ಸಮಾಜಮುಖಿ ಅಳಲು ಮರೆಯಾಗಿ ಹೋಗುತ್ತಿರುವ ಬಗ್ಗೆ.... ಹೀಗೆ ಎಲ್ಲವನ್ನು ತಮ್ಮ ತಮ್ಮ ಮನಸ್ಸನ್ನು ಮುಟ್ಟಿ ನೋಡಿಕೊಳ್ಳುವಂತೆ ಆಟವಾಡಿದ್ದಾರೆ ಕಥೆಗಾರರು ಮತ್ತು ನಿರ್ದೇಶಕರು. 0
ಹೀಗೆ ಹಲವಾರು ಆಯಾಮಗಳಲ್ಲಿ ಚಿಂತಿಸುವಂತೆ ಮಾಡುತ್ತದೆ ಆಟಗಾರ. ಹಾಗಂತೆ ಮಾಧ್ಯಮದ ಬಗ್ಗೆ ಸಂಪೂರ್ಣವಾಗಿ ಕೆಟ್ಟದಾಗಿಯೂ ತೋರಿಸಿಲ್ಲ. ಮಾಧ್ಯಮ ಕ್ಷೇತ್ರದಲ್ಲಿ ಒಳ್ಳೆಯದನ್ನು ಮಾಡುವವರೂ ಇದಾರೆ ಎಂಬುದೂ ಸಹ ಚಿತ್ರದಲ್ಲಿದೆ.
ಸಿನಿಮಾ ನಿರೂಪಣೆ ತುಂಬಾ ಬಿಗಿಯಾಗಿದೆ. ಯಾವ ರೀತಿ ಎಂದರೆ ಪ್ರೇಕ್ಷಕ ಅಳುಗಾಡದೆ ಸಿಟಿಗೆ ಬಿಗಿಯಾಗಿ ಕುಳಿತುಕೊಂಡು ಬಿಡುವಂತೆ. ಚಿತ್ರ ಎಲ್ಲೋ ಒಂದು ಕಡೆ ಹಿಂದಿಯ ಟೇಬಲ್ ನಂ. 21 ಅನ್ನು ಹೋಲುವಂತಿದೆ. ಅಲ್ಲಿಯಂತೆಯೇ ಇಲ್ಲಿಯೂ ರಿಯಾಲಿಟಿ ಶೋನ್ ಆಟದ ಗಮ್ಮತ್ತು ಇದೆ. ಆದರೆ ಟೇಬಲ್ ನಂ. 21ರಲ್ಲಿ ಕೊನೆಗೆ ರಹಸ್ಯ ಗೊತ್ತಾಗುತ್ತದೆ. ಆದರೆ ಇಲ್ಲಿ ಚಿತ್ರದ ಮಧ್ಯದಲ್ಲಿಯೇ ರಹಸ್ಯದ ಒಂದು ಎಳೆ ಗೊತ್ತಾದರೂ ಸಹ, ಒಂದಾದ ನಂತರ ಒಂದರಂತೆ ರಹಸ್ಯಗಳು ಕುತೂಹಲ ಕೆರಳಿಸುತ್ತವೆ.
ಆಟಗಾರದಲ್ಲಿ ಹಲವು ಆಟಗಳ ಎಳೆ ಇದೆ. ಪ್ರತಿಯೊಬ್ಬರ ಜೀವನದ, ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಇರುವ ಓರ್ವ ಆಟಗಾರನ ಚಿತ್ರಣವಿದೆ. ಗೋವಾದ ಐಸ್‌ಲ್ಯಾಂಡ್‌ನಲ್ಲಿ ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಈ ಹಿಂದಿನ ಎಲ್ಲ ಚಿತ್ರಗಳಿಗಿಂತಲೂ ಪಾರುಲ್ ಯಾದವ್ ಅಭಿನಯ ಮೆಚ್ಚುವಂತಿದೆ. ಕೆ.ಎಂ. ಚೈತನ್ಯರ ನಿರ್ದೇಶನದ ಬಗ್ಗೆ ಏನೂ ಹೇಳಬೇಕಾಗಿಲ್ಲ. ಚಿತ್ರದಲ್ಲಿಯೇ ಅದನ್ನು ನೋಡಬೇಕು.
* ಡಿವಿಕೆ
No comments:
Post a Comment