Monday, June 8, 2015

ಆದರೆ ನಾನು ಮಾತ್ರ.....????

ನಾನು ಒಂದು ಸಲ ನೋಡಿದ ಕೆಲ ಮುಖಗಳನ್ನು ಮರೆಯುವುದು ತುಂಬಾ ಕಷ್ಟ. ಅದರಲ್ಲಿಯೂ ಮನಸ್ಸಿಗೆ ಕಾಡಿದ ಮುಖಗಳನ್ನಂತೂ ಮರೆಯುವುದೇ ಇಲ್ಲ. ಅದು ನನ್ನಲ್ಲಿ ಮೊದಲ ಪ್ರೇಮ (ಅದೇ ಕೊನೆಯೂ-ದುರಂತ ಅಂತ್ಯವೂ ಎನ್ನಬಹುದು) ಹುಟ್ಟುವುದಕ್ಕಿಂತ ಮುಂಚೆ ನಡೆದ ಘಟನೆ ಹೀಗಿದೆ ನೋಡಿ- ಖಾನಾಪುರ-ನಂದಗಡ ರಸ್ತೆಯ ಮಧ್ಯದಲ್ಲಿ ಸಿದ್ಧ ಹಂಡಿ ಭಡಗನಾಥ ಮಠವೊಂದಿದೆ. ಅದು ನಾಥ ಪಂತೀಯ ಮಠ. ಅಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ನಾಗಾ ಸಾಧುಗಳು ಬರುತ್ತಾರೆ. ತಮ್ಮಲ್ಲಿಯೇ ಓರ್ವನಿಗೆ ಪಟ್ಟ ಕಟ್ಟಿ ಹೋಗುತ್ತಾರೆ. ಮರಳಿ 12 ವರ್ಷ ಈ ಕಡೆ ಬರುವುದೇ ಇಲ್ಲ. ಆಗಷ್ಟೇ ನಾನು ಪಿಯುಸಿಯಲ್ಲಿದ್ದೆ, ನನಗೆ ಆಗೆಲ್ಲ ಶಿವ ಭಜನೆ ಹಾಗೂ ವಾರಕರಿ ಭಜನೆಯಲ್ಲಿ ತುಂಬಾ ಆಸಕ್ತಿ ಇತ್ತು. ಒಂದಿಪ್ಪತ್ತು ಮರಾಠಿ ಅಭಂಗಗಳನ್ನು ಹಾಡುತ್ತಿದ್ದೆ(ಈಗಲೂ ಅಭಂಗ ಮರೆತಿಲ್ಲ-ಸ್ವರ ಚೆನ್ನಾಗಿ ಬರುತ್ತಿರಲಿಲ್ಲ ಅದು ಬೇರೆ ಮಾತು) ಆಗ ನಾಗಾ ಸಾಧುಗಳ ಹಿಂಡು ಹಂಡಿ ಭಡಗನಾಥ ಮಠಕ್ಕೆ ಬಂದಿತ್ತು. ನಮ್ಮೂರಿನಿಂದ ಟೆಂಪೋವೊಂದನ್ನು ಮಾಡಿಕೊಂಡು ನಮ್ಮದೊಂದು ಹಿರಿ-ಕಿರಿಯರ ಹಿಂಡು ಹಾಜರ್. ನಮ್ಮೊಂದಿಗೆ ಇದ್ದ ಕೆಲವು ಭಜನಾ ಮಂಡಳಿಗಳ ಗಾಂಜಾವಾಲಾಗಳು ಬಾಯಿಗೆ ಇಡುತ್ತಿದ್ದ ಕಳಸಗಳಿಗಿಂತ (ಗಾಂಜಾ ಸೇದುವ ಕೊಳವೆ) ದೊಡ್ಡದಾದ ಗಾಂಜಾ ಕಳಸಗಳು ಆ ಸಾಧುಗಳ ಕೈಯಲ್ಲಿರುವುದನ್ನು ನೋಡಿ ನಾವೆಲ್ಲಾ ಹೌಹಾರಿದ್ದೇವು! ಅಲ್ಲಿಗೆ ಹೋಗುವ ಹೊತ್ತಿಗೆ ಸಂಜೆಯಾಗಿತ್ತು. ರಾತ್ರಿ ಮಠದಲ್ಲಿ ಊಟ ಮಾಡುತ್ತಿರಬೇಕಾದರೆ ಕರ್ಪೂರದ ಗೊಂಬೆಯಂತಹ ಸುಂದರ ಯುವತಿಯೊಬ್ಬಳು. ಊಟಕ್ಕೆ ಕುಳಿತಿದ್ದಳು. ಅಬ್ಬಾ ಎಂಥಾ ಸುಂದರಿ ಎಂದು ಉದ್ಘಾರ ತೆಗೆದೆ. ಅದು ಅವಳಿಗೆ ಕೇಳಿಸಿತಾ ಗೊತ್ತಿಲ್ಲ. ನನ್ನನ್ನೆ ನೋಡಿ ಮುಸಿ ಮುಸಿ ನಗಲಾರಂಭಿಸಿದಳು. ಅದು ಆಗತಾನೆ ಮೀಸೆ ಚಿಗುರುತ್ತಿದ್ದ ವಯಸ್ಸು ಎದುರಿಗೆ ಕುಳಿತ ಹುಡುಗಿ ನನ್ನನ್ನು ನೋಡಿ ನಗುತ್ತಿರಬೇಕಾದರೆ ಸುಮ್ಮನಿರಬೇಕೆ!?. ‘ಅಲಾ ಇವಳ...’ ಎಂದವಳೇ ನಾನು ನೋಡಲು ಶುರುವಿಟ್ಟುಕೊಂಡೆ. ಆಗ ನನ್ನೊಂದಿಗಿದ್ದ ಸ್ನೇಹಿತ ವಿಠ್ಯಾ... ‘ಕಮ್ಮಾರ ಪಾರ್ ಹಾಳು ಬಾವಿ ಬೀಳಾತಾನ್ರೇಲೆ’ ಅಂತಾ ಹಂಗಿಸಿದ. ‘ಸುಮ್ಮನಿರೋ ಮಾರಯ್ಯ’ ಎಂದವನೇ ನಾನು ಅವಳ ಕಣ್ಣುಗಳಲ್ಲಿ ನನ್ನ ಕಣ್ಣು ಬಂಧಿಸಿದ್ದೆ. ಊಟವಾದ ಮೇಲೆ ನಾವು ಭಜನೆ ಶುರು ಮಾಡಿಕೊಂಡ್ವಿ. ನಮ್ಮೊಂದಿಗೆ ಇನ್ನು ಹತ್ತಾರು ಊರುಗಳ ಭಜನಾ ಮಂಡಳಿಗಳು ಅಲ್ಲಿಗೆ ಬಂದಿದ್ದವು. ಹೀಗಾಗಿ ಭಜನೆ ಜೋರಾಗಿ ನಡೆದಿತ್ತು. ಅದನ್ನು ನೋಡಲು ಆ ಹುಡುಗಿಯೂ ಬಂದಿದ್ದಳು. ಅವಳನ್ನು ನೋಡುತ್ತಾ ನಾನು ತಾಳ ಬಾರಿಸುವ ಗತ್ತು ಮರೆತು ಬಿಟ್ಟೆ. ನಮ್ಮೂರ ಶಾಸ್ತ್ರಿ ‘ಎದ್ದು ನಡಿಲೇ ನೀ ಹೊರಗ ಭಜನಿ ಕೆಡಸ್ಯಾತಿ’ ಅಂದಾ. ನಾನು ಸುಮ್ಮನೆ ಹೊರಗೆ ಬಂದು ಅವಳನ್ನೇ ನೋಡುತ್ತಾ ಕುಳಿತೆ.. ಮರುದಿನ ಬೇಗ ಎದ್ದು ಮತ್ತೆ ಅವಳನ್ನು ಮಠದ ಆವರಣದಲ್ಲಿ ಹುಡುಕುವ ಕಾಯಕ ಶುರುವಾಯಿತು. ಅಂತೂ ನೋಡಿದೆ. ರಾತ್ರಿಗಿಂತ ಬೆಳಗಿನ ಹೊತ್ತು ಇನ್ನೂ ಸುಂದರವಾಗಿ ಕಾಣುತ್ತಿದ್ದಳು. ನಮ್ಮ ಭಜನಾ ದಂಡು ಬಿಟ್ಟು ನಾನು ಅವಳ ಹಿಂದೆ ಹಿಂದೆ ಹೋಗಲು ಶುರುಮಾಡಿದೆ. ಕೊನೆಗೆ ನಾಗಾ ಸಾಧುಗಳ ಮುಂದೆ ಅವಳ ತಂದೆ-ತಾಯಿ ಅವಳನ್ನು ಕರೆದುಕೊಂಡು ಬಂದಳು. ‘ಹಮ್ಚಿ ಮೂಲಗೀಲಾ ಭೂತ ಪಕಡ್ಲೇತ್. ದೋನ್ ವರ್ಷ ಝಾಲಿ... ಏಕ ವೇಳಿ ಹಸತ್... ಅನಿ ಏಕದಾ ರಡುನ್ ಬಸತಿ(ನಮ್ಮ ಹುಡುಗಿಗೆ ದೆವ್ವ ಹಿಡದೈತಿ. ಎರಡು ವರ್ಷ ಆಯ್ತು. ಒಂದು ಸಲ ನಗತಾ ಇರ್ತಾಳು, ಮಗದೊಮ್ಮೆ ಅಳುತ್ತಾ ಕುಳಿತು ಬಿಡ್ತಾಳು)’ ಹೀಗೆ ಅವಳ ಬಗ್ಗೆ ಮರಾಠಿಯಲ್ಲಿ ಹೇಳುತ್ತಿದ್ದರು. ಅದಕ್ಕೆ ಆ ಸ್ವಾಮೀಜಿ ಹಿಂದಿಯಲ್ಲಿ ಉತ್ತರ ನೀಡುತ್ತಾ ಏನೋ ಭಸ್ಮ ಕೊಟ್ಟ. ಅದನ್ನು ನೋಡಿದ ತಕ್ಷಣವೇ ನಾನು ಅಲ್ಲಿಂದ ಗಾಯಬ್. ಕಾರಣ ಅವಳಿಗೆ ಭೂತ ಹಿಡಿದಿತ್ತು. ಮತ್ತೆ ಮಧ್ಯಾಹ್ನದ ಹೊತ್ತಿಗೆ ಆ ಹುಡುಗಿಯನ್ನು ಮಠದ ಆವರಣದಲ್ಲಿ ಓಡಾಡಿಸಿದರೂ ಆಗಂತೂ ಆಕೆ ಚೀರಾಡುತ್ತಲೇ ಇದ್ದಳು. ನಾನು ಅವಳ ಉಸಾಬರಿ ಬಿಟ್ಟೆ. ನನ್ನ ಸ್ನೇಹಿತರಂತೂ ಕಾಡಿಸುವುದಕ್ಕೆ ಶುರುವಿಟ್ಟುಕೊಂಡರು. ಕೊನೆಗೆ ಭೂತದ ಸಹವಾಸ ತಪ್ಪಿತಪ್ಪ ಎಂದುಕೊಂಡು ನಾನು ನೆಮ್ಮದಿಯ ನಿಟ್ಟುಸಿರು ಬಿಟ್ಟೆ!! ಆದರೆ ಅದೇ ಭೂತದ ಹೆಣ್ಣು ಮೊನ್ನೆ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಪ್ರತ್ಯಕ್ಷವಾಗಿದ್ದಳು. ಅವಳನ್ನು ನೋಡಿದ ತಕ್ಷಣವೇ ಅಬ್ಬಾ... ಇವಳಿಗೆ ಇನ್ನು ದೆವ್ವ ಬಿಟ್ಟಿಲ್ಲವೇ ಸುಮಾರು 12 ವರ್ಷಗಳ ಹಿಂದೆ ನೋಡಿದ ಮುಖವಲ್ಲವೇ! ಎನ್ನುತ್ತಿರುವಾಗಲೇ ಅವಳ ಜೊತೆಗೆ ಎರಡು ಮಕ್ಕಳಿರುವುದು ಕಂಡಿತು. ಜೊತೆಗೆ ಗಂಡ ಬೇರೆ... ಅಬ್ಬಾ...! ಇವಳಿಗೆ ದೆವ್ವ ಬಿಟ್ಟೈತಿ.. ಮದುವೇನೂ ಆಗೈತಿ... ಮಕ್ಕಳು ಆಗಿದಾವೆ...!!! ಆದರೆ ನಾನು ಮಾತ್ರ.....????

2 comments:

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...