Monday, April 14, 2014

ವೋಟ್‌ನಾಥ ಈ ಭೂತನಾಥ

ದೇಶದಲ್ಲೀಗ ಚುನಾವಣೆ ಕಾವು ಏರಿರುವ ಸಂದರ್ಭದಲ್ಲಿಯೇ ಭೂತವೊಂದು ಮತದಾರರನ್ನು ಕಾಡಲು ಆರಂಭಿಸಿದೆ. ಆ ಭೂತದ ಪ್ರಭಾವ ದೇಶದ ಜನತೆಯ ಮೇಲೆ ಎಷ್ಟಾಗುತ್ತಿದೆ ಎಂದರೆ ತಾನೂ ಚುನಾವಣೆಗೆ ನಿಂತು ಗೆಲ್ಲಬಲ್ಲೇ ಎನ್ನುವುದನ್ನು ಸಾಬೀತು ಪಡಿಸಿರುವ ಆ ಭೂತದ ಪ್ರೇರಣೆಯಿಂದಾಗಿಯೇ ದೇಶದಲ್ಲಿ ಇನ್ನೊಂದಿಷ್ಟು ಪ್ರತಿಶತ ಮತದಾನ ಹೆಚ್ಚಾದರೂ ಅಚ್ಚರಿಪಡಬೇಕಾಗಿಲ್ಲ. ಇಷ್ಟಕ್ಕೂ ಆ ಭೂತ ಬೇರಾರೂ ಅಲ್ಲ. ಅದೇ ಕಣ್ರಿ ಭೂತನಾಥ ಯಾನೆ ಅಮಿತಾಬ್ ಬಚ್ಚನ್. ‘ಭೂತನಾಥ’ ಚಿತ್ರದ ಸಿಕ್ವೆಲ್ ಆಗಿರುವ ‘ಭೂತನಾಥ ರಿಟನ್ಸ್ ರ್’ ಒಂದು ಹಾಸ್ಯಪ್ರಧಾನ ಚಿತ್ರವಾಗಿದ್ದರೂ ದೇಶದ ಪರಿಸ್ಥಿತಿ, ನಮ್ಮ ನೇತಾಗಳು ಜನರನ್ನು ಹುಚ್ಚು ಮಾಡುವ ರೀತಿ, ಕಡುಭ್ರಷ್ಟ ವ್ಯವಸ್ಥೆಯನ್ನು ನೋಡಿ ಜಿಡ್ಡುಗಟ್ಟಿರುವ ಜನರ ಮನಸ್ಥಿತಿ, ಹಣ ಹಾಗೂ ತೋಳ್ಬಲದಿಂದಲೇ ಕೂಡಿರುವ ಚುನಾವಣೆ ವ್ಯವಸ್ಥೆ, ಅರಾಜಕತೆಯ ರಾಜಕೀಯ ವ್ಯವಸ್ಥೆ... ಹೀಗೆ ಎಲ್ಲ ನೂನ್ಯತೆಗಳಿಗೂ ಕನ್ನಡಿಯಾಗಿದೆ.
ಚಿತ್ರದಲ್ಲಿನ ಪ್ರತಿಯೊಂದು ಸಂಭಾಷಣೆಯೂ ದೇಶದ ವ್ಯವಸ್ಥೆಗೆ ಸಂಬಂಧಿಸಿದಂತೆ ಒಂದೊಂದು ಅರ್ಥ ಕೊಡುತ್ತವೆ. ಅಲ್ಲದೇ ಚಿತ್ರ ಮುಗಿಸಿ ಹೊರಬರುವ ಪ್ರತಿಯೊಬ್ಬರು ಕಡ್ಡಾಯ ಮತದಾನದ ಸಂಕಲ್ಪ ಮಾಡಿಯೇ ಮಾಡುತ್ತಾರೆ. ಏಕೆಂದರೆ ಆ ರೀತಿ ಪ್ರೇಕ್ಷಕರನ್ನು ಭೂತನಾಥ ಆವರಿಸಿಕೊಂಡು ಬಿಡುತ್ತಾನೆ. ‘ಜನತಾ ಸೋ ರಹಿ ಹೈ-ದೇಶ ಮರ ರಹಾ ಹೈ’, ‘ಇಸ್ ದೇಶ ಮೇ ಕ್ಲರ್ಕ್ ಬನ್ ನೇ ಕೇ ಲಿಯೇ ಲಾಯಕ್ ನಹಿ-ಲೇಖಿನ ವೋ ದೇಶ ಚಲಾ ಸಕ್ತಾ ಹೈ..’ ‘ಎಲೆಕ್ಷನ್ ಸರ್ಕಸ್ ಕೀ ತರಹ ಹೈ.. ಇದರ ಜೋಕರ್ ಥೋ ಟೈಮ್ ಪಾಸ್ ಕೀ ಛೀಜ್ ಹೋತಿ ಹೈ, ಔರ್ ಟಿಕೇಟ್ ಖರೀದಾ ಸಕ್ತಾ ಹೈ’ ಈ ರೀತಿಯ ಸಂಭಾಷಣೆಗಳು ಚಿತ್ರದುದಕ್ಕೂ ಇವೆ. ‘ಹರ್ ದಿಲ್ ಜೋ ಪ್ಯಾರ್ ಕರೇಗಾ ಸಾಹೀಬಾ... ಸಾಹೀಬಾ...’ ಗೀತೆಯಂತೂ ಪ್ರೇಕ್ಷಕರನ್ನು ಮೌನಕ್ಕೆ, ದೇಶದ ಬಗೆಗಿನ ವಿಚಾರಕ್ಕೆ ತಳ್ಳುತ್ತದೆ. ಭೂತನಾಥ ಚುನಾವಣೆಗೆ ನಿಲ್ಲುವ ಸಂದರ್ಭದಲ್ಲಂತೂ ದೇಶದ ರಾಜಕಾರಣಿಗಳ ನಿಜರೂಪವನ್ನು ಬಯಲಿಗೆಳೆಯಲಾಗಿದೆ. ಏನೆಲ್ಲಾ ಮಾಡಿದವರು ಚುನಾವಣೆಗೆ ನಿಲ್ಲಬಲ್ಲರು. ಆದರೆ ಸತ್ತ ವ್ಯಕ್ತಿ ನಿಲ್ಲಬಾರದೆ? ಎಂದು ಪ್ರಶ್ನಿಸುತ್ತಲೇ ಭೂತನಾಥನನ್ನು ಚುನಾವಣೆಗೆ ನಿಲ್ಲಿಸುವ ಧೀರ ಬಾಲಕನೋರ್ವ ಯಾವ ರೀತಿ ಅದರಲ್ಲಿ ಯಶಸ್ಸು ಗಳಿಸುತ್ತಾನೆ ಎನ್ನುವುದನ್ನು ನೋಡಬೇಕಾದರೆ ನೀವು ಚಿತ್ರಮಂದಿರಕ್ಕೆ ಹೋಗಿಯೇ ನೋಡಬೇಕು. ಆದರೆ ಚಿತ್ರ ನೋಡುವಾಗ ಎಲ್ಲಿಯೂ ಮಿಸಕಾಡ ಬೇಡಿ. ಏಕೆಂದರೆ ಒಂದೇ ಒಂದು ಸಂಭಾಷಣೆಯನ್ನೂ ಮಿಸ್ ಮಾಡಿಕೊಳ್ಳುವಂತಿಲ್ಲ. ಚುನಾವಣೆಗೆ ನಿಲ್ಲುವ ಭೂತನಾಥ ‘ಪರಿವರ್ತನ ರ‌್ಯಾಲಿ’ಗೂ ಮುಂದಾಗುತ್ತಾನೆ. ಆದರೆ ಅಲ್ಲಿ ತನ್ನ ಪರ ಮತ ಕೇಳುವ ಬದಲಿಗೆ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳೂ ಭ್ರಷ್ಟರಾಗಿದ್ದರೆ ‘ನೋಟಾ’ ಮತ ಹಾಕಿ ಎಂದು ಸಾರಿ ಹೇಳುತ್ತಾನೆ. ಅಲ್ಲದೇ ಈ ದೇಶದಲ್ಲಿ ಮತದಾನ ಮಾಡದವನು ಹಾಗೂ ಮತದಾನ ಗುರುತಿನ ಚೀಟಿ ಹೊಂದಿರದ ವ್ಯಕ್ತಿ ಇದ್ದೂ ಇಲ್ಲದಂತೆ. ಆತನಿಗೆ ಬಾಯಿಯಿದ್ದರೂ ಆತನ ಧ್ವನಿ ಯಾರಿಗೂ ಕೇಳುವುದಿಲ್ಲ ಎನ್ನುವುದನ್ನು ‘ಹಾಸ್ಯ ಸನ್ನಿವೇಶದ ಮೂಲಕ’ ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ.
ಚಿತ್ರದ ಕಥೆ ಸುಂದರ ಎನ್ನುವಂತಿದ್ದರೇ, ಚಿತ್ರದಲ್ಲಿನ ಸಂಭಾಷಣೆಗಳಂತೂ ಅತಿ ಸುಂದರ. ಇನ್ನು ಅಮಿತಾಬ್ ನಟನೆಯ ಬಗ್ಗೆಯಂತೂ ಕಿಮ್ಮಕ್ ಅನ್ನುವಂತಿಲ್ಲ. ಮಕ್ಕಳೊಂದಿಗೆ ಹುಚ್ಚಾಟ ಮಾಡುವ ಭೂತನಾಗಿ, ಜನರ ಸಮಸ್ಯೆಗೆ ಕರುಗುವವನಾಗಿ ಹಾಗೂ ಭ್ರಷ್ಟರ ವಿರುದ್ಧ ಸೈಲೆಂಟ್ ಆಗಿಯೇ ಛಾಟಿ ಬೀಸುವ ಅಭಿನಯಕ್ಕೆ ಹಾಗೂ ಅವರಿಂದ ಬರುವ ಒಂದಿಷ್ಟು ಸಂಭಾಷಣೆಗಳಿಗೆ ಚಿತ್ರಮಂದಿರದಲ್ಲಿನ ಪ್ರೇಕ್ಷಕರಿಂದ ಆಗಾಗ ಚಪ್ಪಾಳೆಗಳು ಕೇಳಿ ಬರುತ್ತವೆ. ಆರಂಭದಲ್ಲಿ ಮೂಲ ಚಿತ್ರದಂತೆ ಇದೂ ಸಹ ಮಕ್ಕಳ ಹಾಸ್ಯ ಚಿತ್ರ ಎಂದೇನಿಸುತ್ತದೆಯಾದರೂ ಆ ಬಳಿಕ ಚಿತ್ರ ಗಂಭೀರವಾಗುತ್ತಾ ಹೋಗುತ್ತದೆ. ಇದು ಮಕ್ಕಳಷ್ಟೇ ನೋಡುವ ಚಿತ್ರವಲ್ಲ ಪ್ರಬುದ್ಧರ ಚಿತ್ರ ಅನಿಸಲಾರಭಿಸುತ್ತದೆ. ಅಷ್ಟೇ ಏಕೆ ಆ ಚಿತ್ರದೊಳಗೆ ನಾವೂ ಸಹ ವ್ಯವಸ್ಥೆಯಲ್ಲಿನ ಒಬ್ಬರಾಗಿ, ಒಂದು ಪಾತ್ರವಾಗಿಯೂ ನೋಡಲಾರಂಭಿಸುತ್ತೇವೆ. ಅಷ್ಟೊಂದು ಅದ್ಭುತವಾಗಿದೆ ನಿರ್ದೇಶನ. ಒಟ್ಟಾರೆಯಾಗಿ ಚುನಾವಣೆಗೂ ಮುಂಚೆ ಬಂದಿರುವ ಈ ಚಿತ್ರ ಪ್ರೇಕ್ಷಕರಿಗೆ ಮನರಂಜನೆಯೊಂದಿಗೆ ಮತಜಾಗೃತಿಯನ್ನೂ ನೀಡುತ್ತಿದೆ. ಅದಕ್ಕಾಗಿ ವೋಟಿಂಗ್ ಭೂತ್‌ಗೆ ಹೋಗುವ ಮುಂಚೆ ಒಂದು ಸಲ ನಿಮ್ಮ ಮಕ್ಕಳನ್ನು ಕರೆದುಕೊಂಡು ‘ಭೂತನಾಥ ರಿಟರ್ನ್ಸ್’ ನೋಡಿ ಬನ್ನಿ. ಖಂಡಿತವಾಗಿಯೂ ನೀವು ಮತ್ತೊಬ್ಬರಿಗೆ ಈ ಚಿತ್ರವ್ನು ನೋಡಿ ಎಂದೇ ಹೇಳೇ ಹೇಳುತ್ತೀರಾ? ಅಷ್ಟೇ ಅಲ್ಲ ಚಿತ್ರಮಂದಿರದಲ್ಲಿ ಒಂದು ಸಲವಾದರೂ ಖಂಡಿತ ಚಪ್ಪಾಳೆ ತಟ್ಟೆ ತಟ್ಟುತ್ತಿರಾ!

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...