Friday, November 1, 2013

ದೀಪಾವಳಿ ಮತ್ತು ಹೊಸ ಬಟ್ಟೆ

ಅಂದು ದೀಪಾವಳಿ. ಎಲ್ಲೆಡೆ ದೀಪಗಳ ಸಂಭ್ರಮ. ಅಕ್ಕಪಕ್ಕದ ಮನೆಯವರೆಲ್ಲಾ ಹೊಸ ಬಟ್ಟೆ ಹಾಕಿಕೊಂಡು ಸುತ್ತಾಡುತ್ತಿದ್ದಾರೆ. ಆದರೆ ನಾನೂ ಮಾತ್ರ ಹರಿದು ಹೋಗಿದ್ದ ನನ್ನ ಅಂಗಿಗೆ ಬೇಗ ಹೊಲಿಗೆ ಹಾಕಿಕೊಡು ಎಂದು ಅಕ್ಕನನ್ನು ಕಾಡುತ್ತಿದೆ. ಪಕ್ಕದ ಮನೆಯಿಂದ ದಾರ ತರಲು ಹೋದ ಅಕ್ಕ ಖಾಲಿ ಕೈಯಿಂದ ಬಂದಳು. ಕೊನೆಗೆ ಬೀದಿಯಲ್ಲಿ ಯಾವುದೋ (ಬಹುಷಃ ಪಾರಿಶ್ವಾಡ ಸಂತೆಯಿಂದ ಭಜ್ಜಿ ಕಟ್ಟಿಸಿಕೊಂಡು ಬಂದಿದ್ದ ಪೊಟ್ಟಣದ) ದಾರ ಬಿದ್ದಿತ್ತು. ಅದನ್ನು ತೆಗೆದುಕೊಂಡು ಬಂದು ತೊಳೆದು ಅಕ್ಕನಿಗೆ ಕೊಟ್ಟೆ. ಹೊಲಿಗೆ ಹಾಕಿಸಿಕೊಂಡು... ನಸಿದು ಹೋಗಿದ್ದ ಆ ಅಂಗಿಯನ್ನು ಹಾಕಿಕೊಂಡು ಬೀದಿಗೆ ಬಂದೆ ಆದರೆ ಆಟ ಆಡುವಾಗ ಸೋಮ್ಯಾ ಎಳೆದು ಬಿಟ್ಟ ಮತ್ತೆ ಅಂಗಿ ಹರಿದು ಹೋಯಿತು. ಅಳುತ್ತಾ ಮನೆಗೆ ಬಂದೆ... ದೇವರ ಮನೆಯಲ್ಲಿ ಕುಳಿತು ದೇವರನ್ನೇ ಬೈಯುತ್ತಾ ಸಂಜೆಯವರೆಗೂ ಕುಳಿತುಬಿಟ್ಟೆ. ನಮಗೆ ತಿನ್ನಲೂ ಇರಲಿ... ದೇವರಿಗೆ ನೈವೇದ್ಯ ಮಾಡುವುದಕ್ಕೂ ಸಿಹಿ ಮಾಡುವ ಶಕ್ತಿ ಇರಲಿಲ್ಲ. ಹೀಗಾಗಿ ರಾತ್ರಿಯವರೆಗೂ ದೇವರನ್ನೇ ಬೈಯುತ್ತಾ ದೇವರ ಮನೆಯಲ್ಲಿ ಕುಳಿತುಬಿಟ್ಟೆ. ಇಂದು ಪ್ರತಿ ವರ್ಷ ದೀಪಾವಳಿಗೆ ಹೊಸ ಬಟ್ಟೆ ತೆಗೆದುಕೊಳ್ಳಬೇಕೆಂದು ಹೋದಾಗ ಈ ಘಟನೆ ನೆನಪಿಗೆ ಬರುತ್ತಿದೆ. ಅಂದು ಬಟ್ಟೆ ಹಾಕಿಕೊಳ್ಳುವ ಉಮೇದಿ ಇದ್ದಾಗಲೇ ಸಿಗಲಿಲ್ಲ. ಈಗೇಕೆ ಹಬ್ಬಕ್ಕೆ ಬಟ್ಟೆ ಎಂದು ಮರಳಿ ಬಂದು ಬಿಡುತ್ತೇನೆ. ‘ಬಾಡ್ಯಾ ಇನ್ನು ಆ ಹಳಿದೆಲ್ಲಾ ಬಿಟ್ಟೆಯಿಲ್ಲಾ ನೀನು.. ಆಗ ಇರಲಿಲ್ಲ. ಈಗ ಒಂದಿಷ್ಟು ಕೈಯಲ್ಲಿ ಹಣವಿದೆ. ಈಗಲಾದರೂ ಹಬ್ಬದಲ್ಲಿ ಹೊಸ ಬಟ್ಟೆ ಹಾಕಿಕೊಳ್ಳೊ...!’ ಪ್ರತಿ ವರ್ಷ ದೀಪಾವಳಿಯಂದು ಬೈಯುತ್ತಲೇ ಇರುತ್ತಾಳೆ.

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...