Sunday, October 20, 2013

ಜೀವನ ಸಂಧ್ಯಾ ಕಾಲದ ಪ್ರೀತಿಯ ತಳಮಳ ‘ಅನುಮತಿ’

ಜೀವನದ ಸಂಧ್ಯಾಕಾಲದವರೆಗೂ ತುಂಬಾ ಪ್ರೀತಿಸದ ಹೆಂಡತಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದಾಳೆ. ಅವಳು ಬದುಕಿ ಉಳಿಯಬಹುದು. ಇಲ್ಲದೆಯೋ ಇರಬಹುದು. ಆದರೂ ಪ್ರೀತಿಸುವ ಜೀವಕ್ಕೆ ಬದುಕಿಸಿಕೊಳ್ಳಬೇಕೆಂಬ ತವಕ. ಇತ್ತ ತಾನೇ ಹುಟ್ಟಿಸಿ, ಬೆಳೆಸಿದ ಮಗ ವ್ಯರ್ಥ ಹಣ ಖರ್ಚು ಮಾಡುವುದೆಕೆ? ಎಂದು ತನಗೆ ಜನ್ಮ ನೀಡಿದ ತಾಯಿಗೆ ಅಳವಡಿಸಿದ ವೆಂಟಿಲೇಟರ್ ತೆಗೆದು ಹಾಕುವಂತೆ ವೈದ್ಯರಿಗೆ ಹೇಳುತ್ತಾನೆ. ಆದರೂ ಈ ವೃದ್ಧ ಜೀವ ಅಲ್ಲಿ ಇಲ್ಲಿ ಅಲೆದಾಡಿ ಹಣ ತರುತ್ತದೆ. ಕೊನೆಗೆ ವೆಂಟಲೇಟರ್ ತೆಗೆಯುವ ಅನುಮತಿ ಪತ್ರಕ್ಕೆ ಸಹಿ ಹಾಕಿದ ತಕ್ಷಣವೇ ತಾನೂ ಪ್ರಾಣಬಿಟ್ಟು ಹೋಗುತ್ತಾನೆ. ಇದು ನ್ಯೂಯಾರ್ಕ್ ಚಲನಚಿತ್ರೋತ್ಸವದಲ್ಲಿ ಉತ್ತಮ ಚಲನಚಿತ್ರವಾಗಿ ಹೊರಹೊಮ್ಮಿದ ಹಾಗೂ ಹಿರಿಯ ನಟ ವಿಕ್ರಮ ಗೋಖಲೆಯವರಿಗೆ ನಟನೆಗಾಗಿ ಫಿಲ್ಮ್ ಫೇರ್ ಅವಾರ್ಡ್ ತಂದುಕೊಟ್ಟ ಮರಾಠಿಯ ‘ಅನುಮತಿ’ ಚಿತ್ರದ ಬಗ್ಗೆ ಹೇಳಬಹುದಾದ ಎರಡು ಸಾಲು. ವೃದ್ಧ ಜೀವಿ ರತ್ನಾಕರ ತನ್ನ ಪಿಂಚಣಿಯ ಹಣದಲ್ಲಿ ಅಮೇರಿಕಾ ಸುತ್ತಿ ಬರಲು ಹೆಂಡತಿ, ಮಗ, ಸೊಸೆ, ಮಗಳು, ಅಳಿಯ ಹಾಗೂ ಮೊಮ್ಮಕ್ಕಳೊಂದಿಗೆ ತಯಾರಾಗುತ್ತಾನೆ. ಇನ್ನೇನೂ ವಿಮಾನ ಏರಬೇಕು. ಅಷ್ಟೊತ್ತಿಗೆ ಪತ್ನಿ ಮಾಧವಿಗೆ ಬ್ರೇನ್ ಹ್ಯಾಮರೇಜ್ ಆಗಿ ಬಿಡುತ್ತದೆ. ಆಸ್ಪತ್ರೆ ಸೇರುವ ಹೆಂಡತಿಯನ್ನು ಉಳಿಸಿಕೊಳ್ಳಲು ಹೆಣಗಾಡುವ ಪಾತ್ರದಲ್ಲಿ ವಿಕ್ರಮ ಗೋಖಲೆ ನಟನೆ, ಜೀವನದ ಸಂಧ್ಯಾ ಕಾಲದಲ್ಲಿ ಹಣ ಕೂಡಿಸಲು ಮಾಡುವ ಕಸರತ್ತುಗಳನ್ನು ನೋಡುತ್ತಾ ಎಷ್ಟೋ ಸಲ ನಮಗೆ ತಿಳಿಯದಂತೆಯೇ ಕಣ್ಣುಗಳು ತೇವವಾಗುತ್ತದೆ. ಭಾವನೆ ಮೌನವಾಗುತ್ತದೆ. ಕೆಲಸಕ್ಕೆ ಬಾರದ ಮಗನಾಗಿ ಸ್ನೇಹಿತ ಸುಬೋದ ಭಾವೆ (ಬಾಲಗಂಧರ್ವ ಫೇಮ್) ಪಾತ್ರ ಸ್ಪಲ್ವವೇ ಇದ್ದರೂ ನ್ಯಾಯ ಒದಗಿಸಿದ್ದಾರೆ. ಭಾವೆ ಪತ್ನಿಯಾಗಿ ಸಾಯಿ ತಮನ್ಹಕರ ಪಾತ್ರ ಅಷ್ಟಕಷ್ಟೆ. ರತ್ನಾಕರ ಅಜ್ಜನ ಹೆಂಡತಿ ಮಾಧವಿ ಚಿತ್ರದೊಳಗೆ ಫ್ಲಾಷ್‌ಬ್ಯಾಕ್‌ನಲ್ಲಿ ಒಂದಿಷ್ಟು ಸನ್ನಿವೇಶದಲ್ಲಿ ಬರುತ್ತಾರಾದರೂ ಆಸ್ಪತ್ರೆಯ ಹಾಸಿಗೆಯ ಮೇಲೆ ನಿಶಬ್ದವಾಗಿ ಮಲಗಿದರೂ ಅವರಿಲ್ಲದೇ ಚಿತ್ರವಿಲ್ಲ. ಮಗ ಸಹಾಯಕ್ಕೆ ಬರದೇ ಇದ್ದಾಗ ಅನಿವಾರ್ಯವಾಗಿ ಮಗಳ ಮನೆ ಬಾಗಿಲಿಗೆ ಹೋಗುತ್ತಾರೆ. ುಗಳು ತಾನು ಸಂಗೀತ ಕ್ಲಾಸ್, ಅದು ಇದು ಅಂತಾ ಉಳಿಸಿದ ಹಣ ಕೊಡತ್ತಾಳೆ. ಅಳಿಯ ಅಸಹಾಯಕತೆ ಪ್ರದರ್ಶಿಸುತ್ತಾನೆ. ಇತ್ತ ಮೊಮ್ಮಕ್ಕಳು ತಾವು ಕೂಡಿಟ್ಟ ಹಣದ ಸಣ್ಣ ಗಲ್ಲೆಗಳನ್ನು ತಂದು ಕೊಡುವಾಗಲಂತೂ ಅಜ್ಜನ ಕಣ್ಣುಗಳಲ್ಲಿ ತೇವವಾಗುತ್ತದೆ. ಆಗ ‘ಲಹಾನ ಮುಲೆ ಕಧೀ ಮೋಟೋ ಹೊವು ನಹೆತ್‌‘ (ಸಣ್ಣಮಕ್ಕಳು ಯಾವಾಗಲೂ ದೊಡ್ಡವರಾಗಲೇಬಾರದು) ಎಂದು ಹೇಳುವಾಗ ನಿಮ್ಮ ಕಣ್ಣಲ್ಲಿ ನೀರು ಕಾಣದಿದ್ದರೇ ಹೇಳಿ...! ತಾನಿದ್ದ ಮನೆ, ಪಟ್ಟಣದಲ್ಲಿದ್ದ ಸಹೋದರನೊಂದಿಗಿನ ಮನೆಯ ಭಾಗ ಎಲ್ಲವರನ್ನೂ ಮಾರುತ್ತಾನೆ ರತ್ನಾಕರ ಅಜ್ಜ. ಆದರೂ ಆಸ್ಪತ್ರೆಯ ಹಣದ ದಾಹ ತೀರುವುದಿಲ್ಲ. ಕೊನೆಗೆ ತನ್ನ ಹಳೆ ಕಾಲದ ಗೆಳತಿಯ ಮನೆಗೆ ಹೋದರೆ ಅಲ್ಲಿ ಆಕೆ ತೋರಿಸುವ ಪ್ರೀತಿಯ ಮುಂದೆ ತನ್ನ ಕಷ್ಟ ಹೇಳಿಕೊಳ್ಳಲು ಆಗುವುದೇ ಇಲ್ಲ. ಮಧ್ಯರಾತ್ರಿ ಎದ್ದು ಹೋಗಿ ಬಿಡುತ್ತಾನೆ. ಆದರೂ ಆಕೆ ಈತನ ಬ್ಯಾಗ್ ನೋಡಿ ತಿಳಿದುಕೊಳ್ಳುತ್ತಾಳೆ. ಅವಳು ಆಸ್ಪತ್ರೆಗೆ ಹಣ ನೀಡಲು ಬರುವ ಹೊತ್ತಿಗೆ ಇತ್ತ ರತ್ನಾಕರ ಅಸುನೀಗಿ ಬಿಡುತ್ತಾನೆ. ನೀವೊಮ್ಮೆ ನೋಡಲೇಬೇಕಾದ ಚಿತ್ರವಿದು. ಗಜೇಂದ್ರ ಅಹಿರೆ ನಿರ್ದೇಶನಕ್ಕೆ ಹ್ಯಾಟ್ಸ್ ಆಫ್. ಯುಟ್ಯೂಬ್‌ನಲ್ಲಿಯೂ ಚಿತ್ರವಿದೆ ತಪ್ಪದೇ ನೋಡಿ.

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...