Thursday, August 8, 2013
ಮಲಪ್ರಭೆ ಮಡಿಲು ಸೇರುವ ಮುನ್ನ ಬಂದು ಬಿಡೋ...!
ಪ್ರಿಯ ಪಾಪಿ,
ಈಗ ಬರೊಬ್ಬರಿ ಮೂರು ವರ್ಷಗಳ ಹಿಂದೆ ಅಲ್ವಾ ಅದು, ಹಸೆದ ಹೊಟ್ಟೆಯನ್ನು ಕಟ್ಟಿಕೊಂಡು, ಡಾಂಬರು ತುಳಿಯುತ್ತಾ ಕಾಲೇಜಿನಿಂದ ಮನೆಯೆಡೆಗೆ ಹೊರಟ ನನ್ನನ್ನು ಊರ ಹೊರಗಿನ ಮಾವಿನ ತೋಟದ ಕ್ರಾಸ್‌ನಲ್ಲಿ ತಡೆದು, ನಿನ್ನ ಬೆವರು ಕೈಯಿಂದ, ಎಷ್ಟೋ ದಿನದಿಂದ ಬರೆದು ಜೇಬಿನಲ್ಲಿಟ್ಟಿದ್ದ ಮುದುಡಿಯಾಗಿ ಜೇಬಿನ ಮೂಲೆಯಲ್ಲಿ ಮಲಗಿದ್ದ ಚೀಟಿಯನ್ನು ಎಬ್ಬಿಸಿ ನನ್ನ ಕೈಗೆ ಇಟ್ಟು ಓಡಿ ಹೋಗಿದ್ದು, ಆ ರೀತ ನೀನು ಓಡು ಹೋಗುವಾಗೊಮ್ಮೆ ನನ್ನತ್ತ ತಿರುಗಿ ನೋಡಿ ಮತ್ತೆ ಕಾಲಿಗೆ ಚಕ್ರ ಏರಿಸಿಕೊಂಡಿದ್ದೆ... ಆಗ ನಾನು ನೋಡಿದ್ದೇ ನಿನ್ನ ಆ ಕಂಗಳನ್ನು... ಆ ಕಂಗಳಲ್ಲಿ ಆವತ್ತು ಕನಸುಗಳ ಹಂದರ ಮಿಂಚುತಿತ್ತು. ಆ ಹಂದರಕ್ಕೆ ನಾನು ತೋರಣವಾಗಲು ನೀನು ಬಯಸಿದ್ದೆ ಅಂತಾ ನನಗೆ ಗೊತ್ತಿತ್ತು ಹುಡುಗಾ, ನೆನಪಿರಲಿ, ನೀನು ಅವತ್ತು ಓಡಿ ಹೋಗದೆ ಇದ್ದಿದ್ದರೇ ನಾನು ಹುಡುಗಿ ಅನ್ನೊದನ್ನು ಮರೆತು ನಾನೇ ಹುಡುಗನಾಗಿ, ನೀನು ಕೊಟ್ಟ ಆ ಬೆವರು ಲೇಪಿತ ಚೀಟಿನಾ ಅಲ್ಲೆ ಓದಿ, ತಕ್ಷಣವೇ ನಿನ್ನ ತುಟಿಗಳನ್ನು ನನ್ನ ತುಟಿಗಳ ಮಧ್ಯೆ ಬಂಧಿಸಿ ಬಿಡುತ್ತಿದೆ.
ಆದರೆ... ಹೆದರು ಪುಕ್ಕಳ ಪುಟ್ಯಾ ನೀನು... ನೀನೇ ಹುಡುಗಿಯಂತೆ ಓಡಿ ಹೋಗಿದ್ದೆ. ಆಗ ನನ್ನ ಕೈಗೆ ಪತ್ರ ಕೊಟ್ಟು ಓಡಿ ಹೋಗಿದ್ದೆ. ಈಗ ನೋಡಿದರೇ ಮತ್ತೆನನ್ನೋ ಗರ್ಭದೊಳಗಿಟ್ಟು, ನೀನ್ಯಾವ ಪಾತಾಳ ಗರ್ಭ ಸೇರಿರಿಯೋ ಪಾಪಿ....!
ಋತುಚಕ್ರದ ಜತೆ ತಿರುಗುತ್ತಾ 3 ವರ್ಷ ಕಳೆದ ಬಳಿಕ ನನ್ನ ಜತೆ ಪ್ರೇಮ ಸಂಗ ಬೆಳೆಸಿದ ನೀನು, ಈಗ ಋತುಚಕ್ರ ನಿಂತು ಮೂರು ತಿಂಗಳಾಗಿವೆ, ಆಗಲೇ ಕಾಣೆ...! ನೀನು ನನ್ನನ್ನು ನಿಜವಾಗಿಯೂ ಪ್ರೀತಿಸಿದ್ದೆಯಾ? ಅನ್ನೊ ಭಾವನೆ-ತಳಮಳ ಮನದ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೇ, ಗುಂಗಿಹುಳವಾಗಿ ಬಿಟ್ಟಿದೆ. ಮರಭೂಮಿಯಾಗಿದ್ದ ನನ್ನ ಜೀವನದಲ್ಲಿ ಕಾಲಿಟ್ಟು, ಆ ಮರಭೂಯಲ್ಲಿ ಕನಸುಗಳ ಸುರಿಮಳೆ ಸುರಿಸಿ, ನನ್ನದೆಯಾಳದ ಬರಡು ಭೂಯಲ್ಲಿ ಕನಸುಗಳ ಒಯಾಸಿಸ್ ಬೆಳೆಸಿದವನು ನೀನೆ ಅಲ್ವಾ? ಜತೆಗೆ ನಾ ಕಂಡ ಕನುಸುಗಳೀಗ ಗರ್ಭ ಧರಿಸಿವೆ. ಅದಕ್ಕೂ ನೀನೆ ಕಾರಣ. ಆದರೀಗ ಭರ್ತಿ ಮೂರು ತಿಂಗಳಾಯಿತು. ರಜೆ ಮುಗಿಸಿಕೊಂಡು ಬರುವೆ ಅಂತಾ ಹೇಳಿ ಹೋದವನು. ಈತ್ತ ಕಡೆ ಸುಳಿವೂ ಇಲ್ಲ. ಆದರಿತ್ತ ನನ್ನದೆಯಾಳದ ಕನಸುಗಳ ಗರ್ಭ ಹೆರಿಗೆಯಾಗುವುದಕ್ಕಿಂತ ಮುಂಚೆ ಗರ್ಭಪಾತವಾಗಿ ಬಿಟ್ಟಿದೆ. ನಿನಗೆ ಅರ್ಥವಾಗುವುದಿಲ್ಲವೇ ಪಾಪಿ. ನಮ್ಮೂರ ಕಾಡುಮಲ್ಲಿಗೆಯ ತಾಣದ ಬೆಟ್ಟ ಕಾರ್ತಿಕ ಅಮಾವಾಸ್ಯೆಯ ಆ ಲಕ್ಷ ದೀಪೋತ್ಸವದ ಮಧ್ಯೆ ಆಕಾಶವಾಗಿ, ದ್ವೀಪಗಳು ನಕ್ಷತ್ರಗಳಂತೆ ಕಾಣುತ್ತಿದ್ದವು. ಅಂದಿನ ಆ ನೀರವ ರಾತ್ರಿ, ನಾವಿಬ್ಬರು ನಮ್ಮ ಪ್ರೀತಿ ಫಲಸಲಿ ಅಂತಾ ಆ ಬೆಟ್ಟದ ದೇವರಲ್ಲಿ ಹರಕೆ ಹೊತ್ತು ದಿನಡಿ ಉಪವಾಸ ಮಾಡಿ, ಮಧ್ಯರಾತ್ರಿ ಕಾಲಲ್ಲಿ ಚಪ್ಪಲಿನೂ ಹಾಕದೇ ನಡೆದಿದ್ದು, ಅಂತಹ ಆಯಾಸದ ಮಧ್ಯೆ ಕಾಡುಮಲ್ಲಿಗೆಯ ಸುವಾಸನೆ ಢಾಳವಾಗಿ ರಾಚಿದಾಗ ಕಾಡಗಿ ಕತ್ತಲನ್ನು ಲೆಕ್ಕಿಸದೇ ಓಡಿ ಹೋಗಿ ಕಾಡುಮಲ್ಲಿಗೆ ತಂದ ನೀನು ನನ್ನ ಮುಡಿಗೇರಿಸಿದ್ದೆ. ಆವತ್ತು ನಾನು ನೋಡಿದ್ದು ಗೊಲ್ಡನ್ ಫ್ರೇಮ್ ಕನ್ನಡಕದ ಹಿಂದೆ ಚಿತ್ರ ಬರೆದಂತಿದ್ದ ನಿನ್ನ ಆ ಕಡುಗಪ್ಪು ಕಂಗಳನ್ನೇ ಆ ಕಂಗಳಲ್ಲಿ ಆವತ್ತು ಸಹ ನಮ್ಮಿಬ್ಬರ ಪ್ರೇಮಲೋಕದ ಕನಸುಗಳ ಸಾಮ್ರಾಜ್ಯದ ಛಾಯೆ ಕಣ್ಣಿನಿಂದ ಹೊರಬಂದು ಕನ್ನಡಕದ ಗಾಜಿನಲ್ಲಿ ಪ್ರತಿಬಿಂಬ ಮೂಡಿಸಿತ್ತು. ಆವತ್ತೇ ಅಲ್ವಾ ನೀನು ನನ್ನಲ್ಲಿ ಮುಂಗಾರು ಮಳೆ ಬರೆಸಿದ್ದು. ನೆನಪಿದೆಯಾ ಪಾಪಿ? ಆ ಬಳಿಕವೇ ಅಲ್ವೆ ನಿನ್ನ ಮುಂಗಾರು ಮಳೆಯಿಂದ ನನ್ನೆದೆ ನೆಲದಲ್ಲಿ ಒಂದು ಹೂವು ಅರಳಲಾರಂಭಿಸಿದ್ದು, ಆ ರಾತ್ರಿಯ ಕಾಡಿಗೆ ಕತ್ತಲ ಮಧ್ಯೆಯೇ ಅಲ್ವಾ ನಾವು ಬೆಳಕಿಲ್ಲದ ಪ್ರೇಮ ಸಾಮ್ರಾಜ್ಯದಲ್ಲಿ ಮಿಂದೆದ್ದಿದ್ದು, ಆಚೆ ದ್ವೀಪಗಳು ಆಕಾಶದಲ್ಲಿ ಮಿಣುಗುವ ನಕ್ಷತ್ರದಂತೆ ಕಾಣುತ್ತಿದ್ದವು. ಇತ್ತ ಕನಸುಗಳ ತೋರಣ ಕಟ್ಟಿಕೊಂಡಿದ್ದ ನನ್ನ ಕಣ್ಣುಗಳನ್ನು ನಿನ್ನ ಕಣ್ಣುಗಳು, ಸಿಹಿ ಜೇನು ತುಂಬಿದ್ದ ನನ್ನ ತುಟಿಗಳನ್ನು ನಿನ್ನ ತುಟಿಗಳು ಅಂದಿಸಿಕೊಂಡಿದ್ದು ಆವತ್ತೆ...
ಕಳೆದ ಸಂಕ್ರಾಂತಿಯೇ ಅಲ್ವಾ ಅದು, ನಾನು ನೀನು ಮಲಪ್ರಭೆ ನದಿ ದಡದಲ್ಲಿ ಯಾರೂ ಇಲ್ಲದ ಕಡೆ ಹೋಗಿ ಮಲಪ್ರಭೆಯ ಮರಳ ಮಡಿಲಿನಲ್ಲಿ ಆ ಇಡೀ ದಿನ ಕಳೆದಿದ್ವಿ. ಇದಾದರೂ ನೆನಪಿದೆಯಾ ಪಾಪಿ? ನೀನು ಸಿಗುವುದಕ್ಕಿಂತ ಮುಂಚೆ ನಾನು ಯಾವ ಗಂಡಸನ್ನೂ ಒಳ್ಳೆಯವರು ಅಂತಾ ತಿಳಿದಿರಲಿಲ್ಲ. ನೀನು ನನ್ನಲ್ಲಿ ಒಂದಾದ ಬಳಿಕ, ನೀನು ತುಂಬಾ ಒಳ್ಳೆಯವನು ಅಂತಾ ತಿಳಿದುಕೊಂಡಿದ್ದೆ ! ಆದರೆ ಈಗ ಗಂಡಸರ ನೆರಳು ಕಂಡರೂ ಆಗುತ್ತಿಲ್ಲ. ಇಂತಹದರಲ್ಲಿಯೇ ಮದುವೆ ಮಾತುಗಳು ಮನೆಯ ಜಗುಲಿಯಲ್ಲಿ ಕೇಳಿ ಬರುತ್ತಿವೆ. ಆದರೆ ಈ ಸಂದರ್ಭದಲ್ಲಿಯೇ ನೀನು ಕೆಲಸದ ರಜೆ ಅಂತಾ ದೂರ ಹೋಗಿ ಬಿಟ್ಟಿರುವೆ. ಇನಿಯ ನೀ ಬರಲಾರೆಯಾ? ನೀನು ಬರದೆ ಹೋದರೆ ನಾನು ನೊಂದು ನೀರಾಗಿ ಅದೇ ಮಲಪ್ರಭೆಯ ಮಡಿಲಿಗಿಳಿದು ಬಿಡಲಾ? ಈಗ ಆಕೆಯ ಮಡಿಲಿನಲ್ಲಿ ಭರ್ತಿ ನೀರೂ ಇದೆ. ನಾನೇನೂ ಇಳಿಯಬಲ್ಲೇ ನೀನು ನನ್ನಲ್ಲಿ ಚಿಗುರಿಸಿರುವ ಈ ಆಶೆಯ ಬಳ್ಳಿ ಇನ್ನು ಈ ಪ್ರಪಂಚವನ್ನೇ ಕಂಡಿಲ್ಲ. ಅದನ್ನು ಚಿವುಟಿ ಹಾಕುವುದಾದರೂ ಹೇಗೆ ಕಣೊ, ದಯವಿಟ್ಟು ಬೇಗ ಬಂದು ಬಿಡು, ಸಾಕು ಇನ್ನು ಈ ವೇದನೆ.
ನಿನ್ನ ನೀರಿಕ್ಷೆಯಲ್ಲಿ ನಿನ್ನ ಪ್ರೀತಿಯ ಹುಡುಗಿ...
Subscribe to:
Post Comments (Atom)
ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ
Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...
.jpeg)
-
ನನಗೆ ಇರುವ ಚಟಗಳಲ್ಲಿ ಟಿವಿ ನೋಡುವುದು ದೊಡ್ಡ ಚಟ. ಹೀಗಾಗಿ ಮನೆ ಹಾಗೂ ಕಚೇರಿಯಲ್ಲಿದ್ದರೂ ಸಹ ಸದಾ ಟಿವಿಯನ್ನು ನೋಡುತ್ತಲೇ ಇರುತ್ತೇನೆ. ಇನ್ನು ಹೊರಗಡೆ ಸುತ್ತಾಡುವಾಗಲೂ ...
-
ಬೆಳಗಾವಿ, ೧- ಹಣದುಬ್ಬರ ಹಾಗೂ ಬೆಲೆ ಏರಿಕೆ ಮಧ್ಯೆ ಈಗ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಚಿಲ್ಲರೆ ನಾಣ್ಯಗಳ ಅಭಾವ ಸೃಷ್ಟಿಯಾಗಿದ್ದು, ಇದನ್ನು ಕೆಲವರು ದಂಧೆಯನ್ನಾಗಿಯೂ ...
-
ರಾಜ್ಯದಲ್ಲಿ ತನ್ನ ಖಜಾನೆ ತುಂಬಿಸಿಕೊಳ್ಳುತ್ತಿರುವ ಮಲ್ಟಿಪ್ಲೆಕ್ಸ್ಗಳು, ಒಂದಲ್ಲ ಒಂದು ರೀತಿಯಲ್ಲಿ ಕನ್ನಡ ಚಿತ್ರಗಳಿಗೆ ಧಕ್ಕೆ ಮಾಡುತ್ತಲೇ ಬರುತ್ತಿವೆ. ಕನ್ನಡ ಸಿನಿಮಾ...
No comments:
Post a Comment