
ಗೂಗ್ಲಿ ಚಿತ್ರದಲ್ಲಿ ಏನೆಂದರೆ ಏನೂ ಇಲ್ಲ. ನೆನಪಿಟ್ಟುಕೊಳ್ಳಬಹುದಾದ ಕಥೆಯಿಲ್ಲ. ಆದರೂ ಚಿತ್ರ ನೋಡಿದ ಬಳಿಕ ಕಾಡುತ್ತದೆ. ಮತ್ತೊಮ್ಮೆ ಹೋಗಿ ನೋಡಬೇಕು ಅನಿಸುತ್ತದೆ. ಅದಕ್ಕೆ ಕಾರಣ… ಚಿತ್ರದಲ್ಲಿ ತುಂಬಿರುವುದು ಓಬ್ಬ ಪೇಕರ್ ಪೇಕರ್ ಹುಡುಗ… ಇನ್ನೊಬ್ಬಳು ಒಂದೂ ರೀತಿಯ ಸೈಲೆಂಟ್ ಆಗಿದ್ರೂ…. ಹೊಸತನದ ಬಯಸುವ ಹುಚ್ಚನಲ್ಲಿಯೂ ಕೌತುಕ ಕಾಣುವ ಮೂಗುಮ್ಮ ಹುಡುಗಿ…
ಹೌದು… ಒಂದು ಹುಡುಗ-ಹುಡುಗಿಯ ಚಿತ್ರವೆಂದರೆ ಅಲ್ಲಿ ಪ್ರಣಯ ಜೋರು ಎನ್ನುವ ಮಾತು ಇಲ್ಲಿ ಇಲ್ಲ. ಅವರಿಬ್ಬರ ಪ್ರಣಯ ಇರಲಿ. ಪ್ರೀತಿಯಿಂದ ಮಾತನಾಡುವುದರಲ್ಲಿಯೂ ಒಂದು ರೀತಿ ಹೊಸತನವಿದೆ. ಆದರೂ ಚಿತ್ರ ಹಿಡಿಸುತ್ತದೆ. ಕಾರಣ ಎದೆಗೆ ಹೊಡೆದಂತಿವೆ ಡೈಲಾಗ್‌ಗಳು.
ಸುರಿಯುವ ಮಳೆಯ ಮಧ್ಯೆ ನನ್ನ ಸ್ನೇಹಿತರ ತಂಡ ಕಟ್ಟಿಕೊಂಡು ಸೋಮವಾರ ರಾತ್ರಿ ಷೋ ನೋಡಲು ಹೋಗಿದ್ದೆ. ತಾನು ಇಷ್ಟಪಡುವ ಹುಡುಗಿಯೊಬ್ಬಳ ಕೈ ಹಿಡಿದ ಎಂಬ ಕಾರಣಕ್ಕೆ ಶರತ (ಯಶ) ಹುಚ್ಚುಚ್ಚಾಗಿ ವರ್ತಿಸುತ್ತಾನೆ (ಮೊದಲೇ ಅವನು ಹುಚ್ಚ…) ಆತನಿಗೆ ಹೊಡೆಯಲು ಮುಂದಾಗುತ್ತಾನೆ. ಆಗ ಕೃತಿ ಕರಬಂಧ ಯಶ್‌ಗೆ ಹೊಡೆಯುತ್ತಾಳೆ. ತಿರುಗಿ ಇವನು ಹೊಡೆಯುತ್ತಾನೆ.
ಈ ಸನ್ನಿವೇಶ ನಡೆದಾಗ ನಮ್ಮ ಮುಂದೆ ಕುಳಿತ ಯುವಕನೋರ್ವ ಎದ್ದು ನಿಂತು ‘ಶಹಬ್ಬಾಸ್ ಮಗನ… ಹುಡುಗಿಯರನ ಹಿಂಗ್ ಮಾಡಬೇಕು… ನಮಗೆ ಲವ್ ಮಾಡೋ ಹಂಗ ಫೋಜ್ ಕೊಟ್ಟು… ಮತ್ಯಾವನ ಜೊತೆಗೋ ಹಲ್ಲು ಕಿರಿತಾ ಇರ್ತಾರೆ…’ ಎಂದು ಚೀರಾಡಿದ…
ಶಹಬ್ಬಾಸಗಳ ಮೇಲೆ ಶಹಬ್ಬಾಸ ಕೊಟ್ಟ. ಕಾರಣ ಆತನೂ ಅದೇ ರೀತಿಯ ಭಗ್ನ ಪ್ರೇಮಿ ಇರಬಹುದು.
ಆದರೆ ಅದೇ ಯಶ್ ಆ ಬಳಿಕ ಅವಳಿಗೆ ಹೊಡೆದದಕ್ಕೆ ಪಶ್ಚಾತಾಪ ಪಟ್ಟುಕೊಂಡು,,, ನಟಿಯ ಬೆನ್ನು ಹತ್ತಿ ಪ್ರೀತಿ ನಿವೇದನೆ ಮಾಡಿಕೊಳ್ಳುತ್ತಿದ್ದಾಗ ಮಾತ್ರ ನಮ್ಮು ಮುಂದೆ ಕುಳಿತ ಅದೇ ಯುವಕ ಅಯ್ಯೋ ಅಣ್ಣತಮ್ಮ (ಕಿರಾತಕದಲ್ಲಿನ ಯಶ್ ಡೈಲಾಗ್) ಹಂಗ್ ಮಾಡಾಬ್ಯಾಡ್‌ಪ ನಮ್ಮ ಹುಡುಗರ ಮರ್ಯಾದೆ ಕಳೀತಿ ನೀ…ಎಂದು ಗೋಳು ಹೊಯ್ದುಕೊಳ್ಳುತ್ತಿದ್ದನ್ನು- ನೋಡಿ ಹುಬ್ಬಳ್ಳಿಯ ಸುಧಾ ಟಾಕೀಸ್‌ದಲ್ಲಿನ ಜನರೆಲ್ಲಾ ನಕ್ಕಿದ್ದೆ ನಕ್ಕಿದ್ದು…
ಆದರೂ ಚಿತ್ರ ಸುಪರ್ ಆಗಿದೆ. ಹುಡುಗಿಯರ ವಿಷಯದಲ್ಲಿ ಆರ್ಥಿಕವಾಗಿ ಹುಡುಗರಿಗೆ ಲಾಸ್ ಜಾಸ್ತಿ. ಹುಡುಗಿ ಸಿಕ್ಕರೇ ಅವಳಿಗಾಗಿ ಖರ್ಚು ಮಾಡಬೇಕು. ಹುಡುಗಿ ಕೈ ಕೊಟ್ಟರೇ ನೋವು ಮರೆಯಲು ಖರ್ಚು ಮಾಡಬೇಕು.
‘ಲವ್ ಸ್ಟಾರ್ಟ್ ಆದಾಗ ಹುಡುಗರ ಬಾಳು ಜಾಕಿ.
ಲವ್ ಕೈಕೊಟ್ಟಾಗ ತಿರಬೋಕಿ…’
‘ಅವಳು ನಂಗೆ ಸಿಗೋಲ್ಲ
ನಾನು ಅವಳ ಮರಿಯೋಲ್ಲ’
‘ಈ ಹಾಳಾದ ಹುಡುಗೀರು ಹುಡುಗನ್ನ ಮರಿಬೇಕು ಅಂತಾ ಒಮ್ಮೆ ಫಿಕ್ಸ್ ಆಗಿ ಬಿಟ್ಟರೇ ಆ ಬ್ರಹ್ಮ ಬಂದ್ರೂ ಅವರ ಮನಸ್ಸು ಚೇಂಚ್ ಮಾಡೋಕೆ ಆಗೋಲ್ಲ ಕಣ್ರಿ’
ಅದರಲ್ಲಿಯೂ ಮುಸ್ತಾಫ ಆಗಿರುವ ಸಾಧು ಮಹಾರಾಜರು ತನ್ನ ಹಳೇ ಡವ್ ಎದುರಿಗೆ ‘ಕಲ್ಪಿ ನಾನು ಕೊಡಿಸಿರಲಿಲ್ಲವೇ ಅಂದು ನಿನಗೆ ಕುಲ್ಪಿ’ ಎನ್ನುವ ಡೈಲಾಗ್ ಫುಲ್ ಕಾಮಿಡಿ…
ಚಿತ್ರದ ಆರಂಭದಲ್ಲಿ ಯಶ್ ಹುಚ್ಚ ಎನ್ನುವುದನ್ನು ತೋರಿಸಲಾಗಿದೆ. ಕಾಲೇಜ್ ಕಾರ್ಯಕ್ರಮಕ್ಕೆ ಪೊಲೀಸ್ ಡ್ರೇಸ್‌ನಲ್ಲಿ ಬರುವುದು ಇದೆ. ಆದರೆ ಚಿತ್ರ ಸಾಗಿದಂತೆ ಈ ರೀತಿ ಹುಚ್ಚಾಟ ಎಲ್ಲಿಯೂ ಕಂಡು ಬರುವುದಿಲ್ಲ. ಆದರೆ ಆರಂಭದಲ್ಲಿ ಆತನನ್ನು ಹುಚ್ಚನಂತೆ ತೋರಿಸಿದ್ದು… ಯಾಕೋ….!?
ಚಿತ್ರದಲ್ಲಿ ಯಶ್ ಯುವ ಉದ್ಯಮಿ ಎಂದು ತೋರಿಸಲಾಗಿದೆ. ಆದರೆ ಆತ ಬಿಸಿನೆಸ್ ಮಾಡುತ್ತಿದ್ದ ಕ್ಷೇತ್ರ. ಯಾವುದು. ಏನು ಉದ್ಯಮ ಎನ್ನುವುದು ಇಲ್ಲವೇ ಇಲ್ಲ…
ಈ ರೀತಿ ಇದು ಯಾಕೋ? ಹೀಗ್ಯಾಕೋ? ಎನ್ನುವ ಕೆಲ ಪ್ರಶ್ನೆಗಳ ಮಧ್ಯೆಯೂ ಚಿತ್ರ ಇಷ್ಟವಾಗುತ್ತದೆ.
ಅಂತೂ ಕನ್ನಡ ಚಿತ್ರಗಳು ಗೆಲ್ಲುತ್ತಿವೆಯಲ್ಲ….!
No comments:
Post a Comment