Friday, June 21, 2013
ಹಳ್ಳಿ ಗಮಾರನೊಬ್ಬನ ಪ್ರೇಮ ಪತ್ರ
ಇದು ಹಳ್ಳಿ ಗಮಾರನೊಬ್ಬನ ಪ್ರೇಮ ಕತೆ. ಅರ್ಧಬರ್ಧ ಅಕ್ಷನ ಜ್ಞಾನ ಬಲ್ಲವನಾಗಿದ್ದ ಆತ ತನ್ನ ಪ್ರೇಯಸಿಯನ್ನು ಬೆಳ್ಳಿಚುಕ್ಕೆಗೆ ಹೋಲಿಸಿದ್ದ. ಆದರೆ ಕೊನೆಗೆ ಆತನ ಕೈಗೆ ಸಿಕ್ಕಿದ್ದು, ಗೊಬ್ಬರಿ ಚಿಪ್ಪು. ಹೌದು, ಈತನ ಪ್ರೀತಿಯನ್ನು ತಿರಸ್ಕರಿಸಿದವಳು ಅವನೂರಿನ ಗೌಡನ ಮಗಳು. ಅವಳ ಪ್ರೀತಿ ಪಾಶದ ಮೋಹದಲೆಯಲ್ಲಿ ಬೆಂದು ಹೋಗಿದ್ದ ಆತನನ್ನು ಸುಧಾರಿಸಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಕೊನೆಗೊಂದು ದಿನ ಆತ ಅವಳಿಗೆ ಬರೆದಿದ್ದ ಪ್ರೇಮ ಪತ್ರವೊಂದರ ಜೆರಾಕ್ಸ್ ಪ್ರತಿಯನ್ನು ನನ್ನ ಕೈಗಿತ್ತು. ನನಗೆ ಹೈದ್ರಾಬಾದ್‌ನಲ್ಲಿ ಎಂಆರ್ ಕೆಲಸ ಸಿಕ್ಕಿದೆ ಎಂದು ಬಸ್ ಹತ್ತುತ್ತಿದ್ದರೆ ಒಂದು ಕಾಲದಲ್ಲಿ ಊರ ಗೌಡನ ಮಗಳ ಬೆನ್ನ ಹಿಂದೆ ಬಿದ್ದು ಹಾಳಾಗಿ ಹೋದವ ಈತನೇನಾ ಅಂದುಕೊಂಡೆ. ಆತ ನನ್ನ ಕೈಗಿಟ್ಟಿದ್ದ ಪ್ರೇಮ ಪತ್ರದಲ್ಲಿನ ಹಳ್ಳಿ ಭಾಷೆಯ ಮುಗ್ಧ ಮನಸ್ಸಿನ ಮಾತುಗಳು ಇಲ್ಲಿವೆ.
---------------------------
ಮುಗಿಲಿನ್ಯಾಗ ನೂರಾರು ಚುಕ್ಕಿಗಳಿದ್ದರೇನು,
ಬೆಳ್ಳಿ ಚುಕ್ಕಿ ಬೆಳಕ ಬ್ಯಾರೇ
ಅದರಂಗ ಊರಾಗ ನೂರಾರು ಹುಡುಗಿಯರಿದ್ದರೇನು
ನನ್ನ ಹುಡುಗಿ ಕಳಾನ (ರೂಪ) ಬ್ಯಾರೇ
ಹೌದು ಪೋರಿ, ನಿನ್ನನ್ನು ಎಷ್ಟು ನೋಡಿದರೂ ಮತ್ತೇ ಮತ್ತೇ ನೋಡಬೇಕು ಅನಿಸ್ತದ. ಮೊನ್ನೆ ಅಳ್ನಾವರ ಬಸ್ಸಿನಾಗ ನಿದ್ದಿ ಮಾಡ್ತಾ ಊರಿಗೆ ಬರ‌್ತಾ ಇದ್ದೀನಿ. ಆಗ ಗಪಕ್ಕನ ಪಾರಿಶ್ವಾಡಕ್ಕ ಎಚ್ಚರ ಆಯ್ತು. ಕಣ್ಣ ತಗದ ನೋಡತೀನಿ ಗಬ್ಬಕ್ಕನ ಕರೆಂಟ್ ಹೋಡದಂಗ ಆಗಿತ್ತ ನನಗ. ಯಾಕಂದ್ರ ಅಲ್ಲೋಬಾಕಿ ಹುಡ್ಗಿ ನಿನ್ನಂಗ ಇದ್ಲು. ಆಗ ನನ್ನ ದೋಸ್ತ ರಾಜ್ಯಾ ಅಲ್ಲಿ ನೋಡಲೇ ನಿನ್ನ ಪೋರಿ ಕುಂತಾಳು ಅಂದ. ಆದ್ರ ಅವಳ ಕಣ್ಣಾಗ ನಿನ್ನ ಕಣ್ಣಾಗಿನಂಗ ಹೊಳಪ ಇರಲಿಲ್ಲ. ಆಗ ನಾನು ಆಕಿ ನೀ ಅಲ್ಲ ಅಂತ ತಿಳಕೊಂಡಿನೀ. ಏನ ಹೇಳೂ ಪೋರಿ ನೀನು ನಿನ್ನ ರೂಪಾ ಬೆಳ್ಳಿ ಚುಕ್ಕಿ ಬೆಳಕ ಇದ್ದಂಗ ನೋಡ. ನಸುಕಿನ್ಯಾಗ ಬೆಳ್ಳಿ ಚುಕ್ಕಿ ಹೊಳದಾಂಗ ನಿನ್ನ ಕಣ್ಣ ಸದಾ ಹೋಳಿತಿರ್ತಾವ ಅದನ್ನ ನೋಡಕೊಂತ ಈಡೀ ಜನ್ಮ ಕಳೆದು ಬಿಡಬೇಕು ಅಂತ ನಾನು ರುದ್ರಪ್ಪಜ್ಜಗ (ದೇವರು) ಹರಕೆ ಹೊತ್ತೇನಿ.
ಪೋರಿ ನಿಮ್ಮ ಅಪ್ಪ ದೊಡ್ಡ ರಾಜಕಾರಣಿ ಇರಬೌದು. ಆದ್ರ ಅವನೇನ ನಾನು ದಾದ ಮಾಡಾಂಗಿಲ್ಲ. ಇರೋ ಎರಡ ಏಕರೆ ಹೋಲದಾಗ ಬೆಳಿ ಬೆಳೆದ ನಿನ್ನ ಸಾಕೋ ಕುವ್ವತ್ತ (ಶಕ್ತಿ) ನನ್ನ ರೆಟ್ಯಾಗ್ ಐತಿ. ಆ ಕುವ್ವತ್ತಿನಷ್ಟ ನಿನ್ನ ಪ್ರೀತಿ ಮಾಡೋ ಕಕ್ಕುಲತೆನೂ ನನ್ನ ಹೃದಯದಾಗ ತುಂಬೇತಿ.
ಹುಡುಗಿ ನೀನು ಬಾಳ ಸಾಲಿ ಕಲ್ಯಾತಿ. ನಾನು ಎರಡ ಸಲ ಎಸ್‌ಎಸ್‌ಎಲ್‌ಸಿಯೊಳಗ ಡುಬಕಿ ಹೋಡದೀರಬಹುದು. ಅಕ್ಷರ ಜ್ಞಾನ ಕಡಿಮಿನೂ ಇರಬೌದು. ಆದ್ರ ನನ್ನ ಮನಸ್ಸು ರ‌್ಯಾಂಕ್ ಸ್ಟುಡೆಂಟ್ ಇದ್ದಾಂಗ ಐತಿ. ನಿನ್ನ ಪ್ರೀತಿ ಮಾಡೋ ಸಲುವಾಗಿ ನಾನು ಸ್ಪಲ್ವ ಇಂಗ್ಲಿಷ್‌ನೂ ಕಲೀತ್ತೇನೂ. ಅದಕ್ಕ ನಿನಗಾಗಿ ಒಂದು ಇಂಗ್ಲಿಷ್ ಸಿಹಿಮುತ್ತು ಹೇಳತೇನ ಕೇಳು:-
Dear, a copy is not a copy without a cover.
As a girl is not a girl without a lover.
ಪೋರಿ ಈ ಪತ್ರ ನಿನಗ ಓದಕ್ಕಾಗದೀರ ಒಂದು ಸಲ ಕಿವಿ ಇಟ್ಟ ಕೇಳು ಇದರೋಳಗ ನನ್ನ ಹೃದಯದ ಮಾತುಗಳು ಅಡಗ್ಯಾವ್ ಅವು ನಿನಗಷ್ಟ ಕೇಳಿಸುವಂತಹ ಪಿಸುಮಾತು ಆಗಿದಾವ... ಹುಡ್ಗಿ ನೀನು ಏನ ಬೇಕಾದ್ದ ಕೇಳ ನಾನು ಕೊಡಾಕ ತಯ್ಯರ ಅದೇನು. ಆದ್ರ ಪ್ರೀತಿ ಮಾಡೋದಿಲ್ಲ ಅಂತ ಮಾತ್ರ ಹೇಳಾಕ ಹೋಗಬೇಡ. ಯಾಕಂದ್ರ ನಾ ನಿನ್ನ ಮ್ಯಾಲ್ ಪಂಚ ಪ್ರಾಣಾನ ಇಟ್ಟೀನಿ. ನೀನು ಎಷ್ಟ ಓದತಿ ಓದು ಅದಕ್ಕ ನಾ ಅಡ್ಡಿ ಮಾಡಾಂಗಿಲ್ಲ. ಆದ್ರ ನನ್ನ ಬಿಟ್ಟ ಬ್ಯಾರೆ ಯಾರನ್ನರ ಪ್ರೀತಿ ಮಾಡದಿ ಅಂದ್ರ ನಾ ಮಾತ್ರ ಉಳ್ಯಾಂಗಿಲ್ಲ.
ನಿನ್ನ ಪ್ರೀತಿಯ- ಪರಶು
ಈ ಪತ್ರ ಓದಿ ಮುಗಿಸುತ್ತಿದ್ದಂತೆ ಪರಶುರಾಮ ಕುಳಿತ್ತಿದ್ದ ಬಸ್ ಹೋಗಲಾರಂಭಿಸಿತ್ತು. ಮಾತೆತ್ತಿದರೆ ನಾನು ಐಎಎಸ್ ಮಾಡತೀನಿ ಅಂತಿದ್ದ ಆ ಪಾಪದ ಹುಡುಗಿ. ಈತನ ಜೀವನದಲ್ಲಿ ಆಡಬಾರದ ಆಟವನ್ನಾಡಿ ಬಿಟ್ಟಳು. ಅಲ್ಲದೇ ಪಿಯುಸಿಗೆ ಶಿಕ್ಷಣ ನಿಲ್ಲಿಸಿ ತನ್ನ ಸೋದರ ಮಾವನ ಮಡದಿಯಾದಳು. ಇತ್ತ ಪರಶು ಅದೇ ಚಿಂತೆಯಲ್ಲಿ ತನ್ನನ್ನೆ ತಾನು ಮರೆತು ಹೋದ. ಹುಚ್ಚನೂ ಆದ. ಕೊನೆಗೊಂದು ಸಲ ಆತನ ಸ್ನೇಹಿತರು ನನ್ನ ಬಳಿ ಕರೆದುಕೊಂಡು ಬಂದರು. ನಾನೂ ನನ್ನ ಪರಿಚಯದ ಸ್ವಾಮೀಜಿಯೊಬ್ಬರ ಮಠದಲ್ಲಿ ಪರಶುರಾಮನ್ನಿಟ್ಟು ಸುಧಾರಣೆಯತ್ತ ತಂದೆ ಮೂರು ತಿಂಗಳಲ್ಲಿ ಮತ್ತ ಮೊದಲಿನಂತಾದ ಪರಶುರಾಮ ಈಗ ಹೈದ್ರಾಬಾದ್‌ನ ಪ್ರತಿಷ್ಠಿತ ಕಂಪನಿಯೊಂದರ ಪ್ರತಿನಿಧಿಯಾಗಿ ಬೆಳಗಾವಿಯಲ್ಲಿಯೇ ಕೆಲಸ ಮಾಡುತ್ತಿದ್ದಾನೆ. ಆತ ಎದುರಿಗೆ ಸಿಕ್ಕಾಗ ಆತ ಬರೆದು ನನ್ನ ಬಳಿ ಬಿಟ್ಟು ಹೋಗಿದ್ದ ಈ ಓಲೆ ಇನ್ನು ನನ್ನ ಬಳಿಯೇ ಇದೆ. ಹಳೆಯದನ್ನು ನೆನಪಿಸಿಕೊಳ್ಳುವುದು ಆತನಿಗೆ ಆಗದು. ಆದರೆ ಈತನನ್ನು ತಿರಸ್ಕರಿಸ ಹೋದ ಆ ಹೆಣ್ಣು ಈಗ ಹಳ್ಳಿಯೊಂದರಲ್ಲಿ ಇದ್ದಾಳೆ. ಅವಳ ಬೆನ್ನು ಬಿದ್ದು ಇಂಗ್ಲಿಷ್ ಕಲಿತಿದ್ದ ಪರಶುರಾಮ ಅದರಿಂದಲೇ ಒಳ್ಳೆಯ ಕಂಪನಿ ಕೆಲಸ ಹಿಡಿದಿದ್ದಾನೆ. ಇದು ಹುಡುಗಿಯರ ಹಿಂದೆ ಬಿದ್ದು ಹಾಳಾಗುವ ಹುಡುಗರ ಗಮನಕ್ಕೆ ಬರಬೇಕು. ಹುಡುಗಿ ಹೋದರೆ ಹೋಗಲಿ. ತಮ್ಮ ಜೀವನ ಏನೆಂಬುದನ್ನು ಮರೆಯಬಾರದು.
Subscribe to:
Post Comments (Atom)
ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ
Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...
.jpeg)
-
ನನಗೆ ಇರುವ ಚಟಗಳಲ್ಲಿ ಟಿವಿ ನೋಡುವುದು ದೊಡ್ಡ ಚಟ. ಹೀಗಾಗಿ ಮನೆ ಹಾಗೂ ಕಚೇರಿಯಲ್ಲಿದ್ದರೂ ಸಹ ಸದಾ ಟಿವಿಯನ್ನು ನೋಡುತ್ತಲೇ ಇರುತ್ತೇನೆ. ಇನ್ನು ಹೊರಗಡೆ ಸುತ್ತಾಡುವಾಗಲೂ ...
-
ಬೆಳಗಾವಿ, ೧- ಹಣದುಬ್ಬರ ಹಾಗೂ ಬೆಲೆ ಏರಿಕೆ ಮಧ್ಯೆ ಈಗ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಚಿಲ್ಲರೆ ನಾಣ್ಯಗಳ ಅಭಾವ ಸೃಷ್ಟಿಯಾಗಿದ್ದು, ಇದನ್ನು ಕೆಲವರು ದಂಧೆಯನ್ನಾಗಿಯೂ ...
-
ರಾಜ್ಯದಲ್ಲಿ ತನ್ನ ಖಜಾನೆ ತುಂಬಿಸಿಕೊಳ್ಳುತ್ತಿರುವ ಮಲ್ಟಿಪ್ಲೆಕ್ಸ್ಗಳು, ಒಂದಲ್ಲ ಒಂದು ರೀತಿಯಲ್ಲಿ ಕನ್ನಡ ಚಿತ್ರಗಳಿಗೆ ಧಕ್ಕೆ ಮಾಡುತ್ತಲೇ ಬರುತ್ತಿವೆ. ಕನ್ನಡ ಸಿನಿಮಾ...
No comments:
Post a Comment