Thursday, June 20, 2013

ಸುಳ್ಳುಗಾರ ಹೊರತು... ಮಾಟಗಾರನಲ್ಲವೇ ಹುಡುಗಿ..

(ಹಾಗೇ ಸುಮ್ಮನೆ ಬರೆದಿದ್ದು ಹೊರತು ನಿಜವಲ್ಲ... ಕಲ್ಪನಾ ಲೇಖನ...) ನಾನು ಸುಳ್ಳುಗಾರ ಒಪ್ಪಿಕೊಳ್ಳುತ್ತೇನೆ. ಆದರೆ ಮಾಟಗಾರನಂತೂ ಅಲ್ಲವೇ ಅಲ್ಲ. ಅದೂ ಒಂದು ಹೆಣ್ಣು ಒಲಿಸಿಕೊಳ್ಳುವುದಕ್ಕೆ ಛೇ... ವಿಚಾರ ಮಾಡುವುದಕ್ಕೂ ಆಗದಂತಹ ಮಾತು. ಆದರೆ ಅವಳ ಬಾಯಿಂದ ಆ ಮಾತು ಏಕೆ ಬಂತೋ. ನಾ ಕೊಟ್ಟ ಪ್ರಸಾದ ಮಲಪ್ರಭೆಯ ಮಡಿಲು ಸೇರಿತೆಕೋ!? ಇಂದಿಗೂ ಗೊತ್ತಿಲ್ಲ. ಗೊತ್ತು ಮಾಡಿಕೊಳ್ಳುವುದಕ್ಕೂ ನಾನು ಹೋಗಲಿಲ್ಲ. ಅಂದು ನಾನು ಪುಣ್ಯ ಕ್ಷೇತ್ರಗಳ ದರ್ಶನ ಮಾಡಿಕೊಂಡು ಬಂದಿದ್ದೆ. ಎಲ್ಲ ಸ್ನೇಹಿತರಿಗೂ ಪ್ರಸಾದ ಕೊಡುತ್ತಿದ್ದೆ. ನನ್ನ ಸ್ನೇಹಿತೆ ಅಲ್ವಾ ಎಂದುಕೊಂಡು ‘ಭೇಟಿಯಾಗುವುದು ಇದೇ ಮಲಪ್ರಭೆ ದಂಡೆಯ ಕಡೆ ಬಂದರೆ ಸಿಗು’ ಅಂದೆ. ಅದಕ್ಕೆ ಅವಳು ‘ಸಂಜೆ ನಾನು ಬಟ್ಟೆ ವಾಷ್ ಮಾಡೋದಕ್ಕೆ ಬರುವವಳಿದ್ದೇನೆ. ಅಲ್ಲಿ ಸಿಗು’ ಎಂದಳು. ಓಕೆ ಎಂದುಕೊಂಡು ನಾನು ಸಂಜೆ 4ರ ಹೊತ್ತು ಕೈಯಲ್ಲಿ ಒಂದು ಬ್ಯಾಗ್ ಹಿಡಿದುಕೊಂಡು (ಬಹುಷಃ ಅದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಸಾದದ ಜೊತೆ ಕೊಟ್ಟ ಬಟ್ಟೆಯ ಹಳದಿ ಚೀಲ ಇರಬಹುದು) ಅಲ್ಲಿ ಹೋದೆ. ಅವಳು ಬಟ್ಟೆಯ ಬುಟ್ಟಿ ಹೊತ್ತುಕೊಂಡು ಮನೆಯಿಂದ ಬಂದಳು. ಆಗ ಅವಳ ಕೈಗೆ ಪ್ರಸಾದದ ಚೀಲ ಕೊಟ್ಟೆ. ಅದರಲ್ಲಿ ಚಿಕ್ಕ ಚಿಕ್ಕ ಸಕ್ಕರೆ ತುಂಡಿನ ಪ್ರಸಾದ, ಕುಂಕುಮ, ಲಾಡು, ಕಜ್ಜಾಯ ಹಾಗೂ ತೀರ್ಥವೂ ಇತ್ತು. ಅದನ್ನು ಕೈಗೆ ತೆಗೆದುಕೊಂಡು ನೋಡಿದ ಅವಳಿಗೆ ಮೊದಲು ಕಂಡಿದ್ದೇ ಕುಂಕುಮ ಮತ್ತು ಲಾಡು ಚೀಟಿ ಅದನ್ನು ಆಕೆ ಏನೆಂದು ತಿಳಿದುಕೊಂಡಳೋ ಗೊತ್ತಿಲ್ಲ. ತೆಗೆದುಕೊಂಡವಳೇ ಮಲಪ್ರಭಾ ನದಿಗೆ ಎಸೆದು ಬಿಟ್ಟಳು. ಅಷ್ಟಕ್ಕೆ ಸುಮ್ಮನಾಗದ ಅವಳು ‘ಏನೋ ನನ್ನ ಜೊತೆ ಇದೆಲ್ಲಾ ಇಟ್ಟುಕೊಳ್ಳಬೇಡ. ನೀನು ಒಳ್ಳೆಯ ಸ್ನೇಹಿತ ಆಗಿ ಇರ್ತಿಯಾ ಅಂದುಕೊಂಡಿದ್ದೆ. ಆದರೆ ಈಗ ನೋಡಿದರೆ ನನನ್ನು ಒಲಿಸಿಕೊಳ್ಳಬೇಕು ಎಂದುಕೊಂಡು ಮಾಟ ಮಂತ್ರ ಮಾಡಿಕೊಂಡು ಬಂದಿರುವೇ ಏನೋ ಮಾಟಗಾರ. ಮಾಡಕಿ (ವಾಮಾಚಾರ) ಮಾಡಿಸ್ತೀಯಾ. ಪಾಪಿ. ಕುಂಕುಮ-ಲಿಂಬೆಕಾಯಿ ಮಂತ್ರಿಸಿಕೊಂಡು ಬಂದೀ ಏನು’ ಎಂದವಳು ಮುಖದ ಮೇಲೆ ಉಗಿದು ಭರ ಭರ ಹೋಗಿಯೇ ಬಿಟ್ಟಳು. ನಾನು ಅಲ್ಲಿ ನಿಲ್ಲಲಾಗದೇ ಕಟ್ಟಿಗೆ ಫೈಡಲ್‌ನ ನನ್ನ ಬ್ರೇಕ್ ಇಲ್ಲದ ಸೈಕಲ್ (ಬಹುಷಃ ನನ್ನ ಲೈಫ್‌ಗೂ ಆವಾಗ ಯಾವುದೇ ಬ್ರೇಕ್ ಸಿಕ್ಕಿರಲಿಲ್ಲ) ತುಳಿಯುತ್ತಾ ಮನೆ ಕಡೆಗೆ ಬಂದೆ. ನಾನು ಇವತ್ತಿಗೂ ಅವಳಿಗೆ ಅದೇ ಹೇಳೊದು. ನಾನು ಸುಳ್ಳು ಹೇಳುತ್ತೇನೆ. ನಿಜ ಕೆಲವೊಂದು ವಿಷಯದಲ್ಲಿ ಶುದ್ಧ ಶಕುನಿಯೂ ಆಗಿ ಬಿಡುತ್ತೇನೆ. ನಾನು ಇಷ್ಟ ಪಟ್ಟ ವಸ್ತು ನನಗೆ ಸಿಗದೇ ಹೋದರೆ ಬೇರೆಯವರೆಗೂ ಸಿಗದೇ ಕೂಡದೂ ಎನ್ನುವ ಒಂದು ಪಾಲಿಸಿಯೂ ನನ್ನಲ್ಲಿ ಇದೆ. ಇನ್ನು ಸುಳ್ಳಿನ ವಿಷಯದಲ್ಲಿ ಕೆಲವರು ನನಗೆ ‘ಹುಕ್ಕೇರಿ ಬಾಳಪ್ಪ ಸಾವಿರ ಹಾಡಿನ ಸರದಾರ ಆಗಿದ್ರ... ಮಗನೇ ನೀನು ಸಾವಿರ ಸುಳ್ಳಿನ ಸರದಾರ ಬೀಡಲೇ...!’ ಎಂದು ಲೇವಡಿಯೂ ಮಾಡುತ್ತಾರೆ. ಅದನ್ನೆಲ್ಲಾ ಒಪ್ಪಿಕೊಳ್ಳುತ್ತೇನೆ. ಆದರೆ ಯಾವತ್ತಿಗೂ ಮಾಟ-ಮಂತ್ರದಂತಹ ಹೊಲಸು ಕೆಲಸಕ್ಕೆ ನಾನು ಹೋಗಲಾರೆ. ಅವಳು ಅಷ್ಟಕ್ಕೆ ಆ ವಿಷಯ ಬಿಡಲಿಲ್ಲ. ನನಗೆ ಅವಾ ಮಾಡಕಿ ಮಾಡಿಸಿದಾನ’ ಅಂತಾ ತನ್ನ ಸೋದರನೊಬ್ಬನಿಗೆ ಆಕೆ ಹೇಳಿ ಬಿಟ್ಟಿದ್ದಳು. ಬಂತಲ್ಲ ಆ ಕಡೆಯಿಂದ ಫೋನು ಅವನು ನನಗೆ ಅವಾಜು ಹಾಕಿದ್ದೆ ಹಾಕಿದ್ದು.... ಕೊನೆಗೂ ನಾನು, ಇದು ಬೆಳೆಯುತ್ತಾ ಹೋದರೆ... ನಾನು ಮಾಡದ ತಪ್ಪಿಗೆ ಏನೋ ಅನುಭವಿಸಬೇಕಾಗುತ್ತದೆ. ಮೊದಲೆ ಗಡಿಗೆಯ ಬಾಯಿ ಮುಚ್ಚಬಹುದು. ಅದು ಕಿವಿಯಿಂದ ಕಿವಿಗೆ ಬಾಯಿಂದ ಬಾಯಿಗೆ ಹರಡಿ ಬಿಟ್ರೆ ಗತಿ ಏನು? ಎಂದುಕೊಂಡು ಆ ಊರು ಬಿಟ್ಟೆ. ನನ್ನ ಕಟ್ಟಿಗೆ ಫೈಡಲಿನ ಬ್ರೇಕ್ ಇಲ್ಲದ ಸೈಕಲ್ಲೂ ಬಿಟ್ಟೆ. ನಂತರ ನನ್ನ ಲೈಫ್‌ಗೊಂದು ಬ್ರೇಕ್ ಸಿಕ್ಕಿತ್ತು....

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...