Thursday, June 13, 2013

ಆವತ್ತೆ ಮರಾಠಿ ಬಂದಿದ್ದರೇ...

ಅವತ್ತು ನಾನು ಅವಳಿಗೆ ‘ಐ ಲವ್ ಯು‘ ಅಂತಾ ಹೇಳಿ ಬಿಟ್ಟಿದ್ದರೇ ಇಷ್ಟೊತ್ತಿಗೆ ನಮ್ಮಿಬ್ಬರ ಮದುವೆಯಾಗಿ ಇಬ್ಬರೂ ಮಕ್ಕಳಾಗುತ್ತಿದ್ದವೆನೊ? ಆದರೆ ನನಗೆ ಹಾಗೆ ಹೇಳಲಿಕ್ಕೆ ಆಗಲಿಲ್ಲ. ಅದಕ್ಕೆ ಕಾರಣ ನನ್ನ ಭಾಷೆ ಅವಳಿಗೆ ಬರುತ್ತಿರಲಿಲ್ಲ. ಅವಳ ಭಾಷೆ ನನಗೆ ಗೊತ್ತಿರಲಿಲ. ಆ ಭಾಷೆಗಳು ಕನ್ನಡ ಹಾಗೂ ಮರಾಠಿ. ಅಂದು ನನಗೆ ಮರಾಠಿ ಬರುತ್ತಿರಲಿಲ್ಲ. ಆಕೆಗೆ ಮರಾಠಿ ಬಿಟ್ಟು ಬೇರೆ ಭಾಷೆ ಗೊತ್ತಿರಲಿಲ್ಲ. ಒಂದು ವೇಳೆ ಬಂದಿದ್ದರೆ, ಕನ್ನಡದ ಹುಡುಗ ಮರಾಠಿ ಹುಡುಗಿಯ ಕೈಹಿಡಿದ ಎಂದು ‘ಭಾಷಾ ದಳ್ಳುರಿಯಲ್ಲಿ ಬೆಂದು’ ಹೋಗುತ್ತಿರುವ ಬೆಳಗಾವಿಗೆ ಬಾಂಧವ್ಯದ ಮಾದರಿಯಾಗಿ ನಾವಿಬ್ಬರೂ ಇರುತ್ತಿದ್ದೆವು. ಆದರೆ ಹಾಗೆ ಆಗಲಿಲ್ಲ. ಆದರೂ ಆಕೆ ಕನ್ನಡದ ಸೊಸೆಯಾದಳು. ನಾನು ಮರಾಠಿಗರ ಅಳಿಯನಾಗಲಿಲ್ಲ. ಈಗ ಅವಳ ಭಾಷೆ ನನಗೆ ಚನ್ನಾಗಿ ಬರುತ್ತದೆ. ಆಕೆಗೂ ನನ್ನ ಭಾಷೆ ಬರುತ್ತದೆ. ಆದರೆ ಏನು ಮಾಡೋದು ಈಗ ಕಾಲ ಮಿಂಚಿ ಹೋಗಿದೆ. ಆಕೆ ಈಗಾಗಲೇ ಎರಡು ಮಕ್ಕಳ ತಾಯಿ. ಮೊನ್ನೆ ಮೊನ್ನೆ ಆಕೆ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಸಿಕ್ಕಾಗ ನಾನು ‘ಕಸೆ ಹಾಯ’ ಅಂತಾ ಮರಾಠಿಯಲ್ಲಿ ಕೇಳೊಕೆ ಬಾಯಿ ತೆರೆಯುತ್ತಿದ್ದಂತೆಯೇ ಆಕೆ ‘ಹ್ಯಾಂಗ ಇದೀರಿ’ ಅಂತಾ ಕನ್ನಡದಲ್ಲಿ ಕೇಳಿಬಿಟ್ಟಳು. ಅಬ್ಬಾ ಇವಳಿಗೆ ಈ ಕನ್ನಡ ಆಗಲೇ ಬರುತ್ತಿದ್ದರೇ, ಇಲ್ಲ ನನಗೆ ಆಗ ಮರಾಠಿ ಬರುತ್ತಿದ್ದರೇ ಹೇಗಾಗುತ್ತಿತ್ತು. ಅಂತಾ ವಿಚಾರ ಮಾಡುತ್ತಿದ್ದಂತೆಯೇ ಮಕ್ಕಳಿಗೆ ಕುರಕುರೆ ತರೋಕೆ ಹೋಗಿದ್ದ ಆಕೆಯ ಗಂಡ ಬಂದಿದ್ದ ‘ಇವರು ನಮ್ಮ ಮನೆಯವರು’ ಎಂದು ನನಗೆ ಪರಿಚಯಿಸಿದ ಆಕೆ ಅವನಿಗೆ ನನ್ನನ್ನು ಪರಚಯಿಸಿದ ಬಗೆ ಮಾತ್ರ ಅಚ್ಚರಿ ಮೂಡಿಸಿತ್ತು. ಎಲ್ಲಿ ಒಂದು ಕಾಲದಲ್ಲಿ ಈತ ನನ್ನ ಹಿಂದೆ ಬೆನ್ನತ್ತಿ ಬರುತ್ತಿದ್ದ, ಎಲ್ಲಿ ಹೋದರೂ ಬಿಡುತ್ತಿರಲಿಲ. ಕಾಲೇಜಿನಿಂದ ಹೊರಗೆ ಬರುತ್ತಿದ್ದಂತೆಯೇ ಕಾಯುತ್ತಾ ಕುಳಿತುಕೊಳ್ಳುತ್ತಿದ್ದ ತುಂಬಾ ಕಾಟ ಕೊಟ್ಟಿದ್ದ ಅಂತಾ ಹೇಳಿ ಬಿಡುತ್ತಾಳೆನೋ ಅಂದುಕೊಂಡಿದ್ದೆ. ಆದರೆ ಆಕೆ ಹಾಗೆ ಹೇಳಲೇ ಇಲ್ಲ. ‘ಇವರೂ ಬೆಳಗಾವಿಯವರೇ, ತುಂಬಾ ಚೆನ್ನಾಗಿ ಬರೆಯುತ್ತಾರೆ. ಇನ್ ಬೆಳಗಾವಿಯಲ್ಲಿ ರಿಪೋರ್ಟರ್ ಇದಾರೆ’ ಎಂದು ಪರಿಚಯಿಸಿದರು. ಬಳಿಕ ನೀವಿಲ್ಲ ಎಂದು ನನ್ನನು ಕೇಳಿದಳು ‘ನಾನು ಈಗ ಇನ್ ಬೆಳಗಾಮ್‌ದಲ್ಲಿ ಇಲ್ಲ. ಬೇರೆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವೆ. ಹುಬ್ಬಳ್ಳಿಯಲ್ಲಿಯೇ ಕೆಲಸ ಮಾಡುತ್ತಿದ್ದೇನೆ ಎಂದೆ..... ಅಷ್ಟೊತ್ತಿಗೆ ಸಾಮ್ರಾಟ್ ಬಸ್ ಹೊರಡುತ್ತಿತ್ತು. ಅವರು ಬಸ್ ಹತ್ತಿ ಹೋದರು. ಆ ಮಕ್ಕಳಿಗೆ ದುಡ್ಡ ಕೊಡೋಣ ಎಂದು ಜೇಬಿಗೆ ಕೈ ಹಾಕಿದೇನಾದರೂ ಯಾಕೋ ಮನಸ್ಸು ಬರಲಿಲ್ಲ...

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...