Friday, August 5, 2011

ನಾಗರ ಪಂಚಮಿಯಂದ ಸರ್ಪಗಳ ದರ್ಶನ


(ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಗೊಂಡ ವರದಿ)

ಡಿ.ವಿ. ಕಮ್ಮಾರ
ಡೊಲಗರವಾಡಿ(ಮಹಾರಾಷ್ಟ್ರ),
ನಾಗರ ಪಂಚಮಿ ಎಂದಾಕ್ಷಣ ಕಲ್ಲು ನಾಗರ ಇಲ್ಲವೇ ಮನೆಯಲ್ಲಿಯೇ ಮಣ್ಣಿನ ನಾಗರ ಪ್ರತಿಮೆಗೆ ಪೂಜೆ ಮಾಡಿ ಹಾಲು ಎರೆಯುವುದು ರೂಢಿ. ಆದರೆ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ಡೊಲಗರವಾಡಿಯಲ್ಲಿ ನಿಜ ನಾಗರಗಳೇ ದರ್ಶನ ನೀಡುತ್ತವೆ. ಇಂತಹ ಸರ್ಪಗಳ ಪ್ರದರ್ಶನ ಪ್ರತಿವರ್ಷದಂತೆ ನಾಗರ ಪಂಚಮಿ ನಿಮಿತ್ತ ಗುರುವಾರವೂ ನಡೆಯಿತು.
ಡೋಲಗರವಾಡಿಯಲ್ಲಿ ಈ ಮೊದಲು ನಾಗರ ಪಂಚಮಿ ಸಂದರ್ಭದಲ್ಲಿ ಜನ ತಂಡೋಪತಂಡವಾಗಿ ಬಂದು ಇಲ್ಲಿ ಸಿಗುತ್ತಿದ್ದ ವಿವಿಧ ಬಗೆಯ ಹಾವುಗಳನ್ನು ಮೈ ಮೇಲೆ ಹಾಕಿಕೊಂಡು ಫೋಟೋ ತೆಗೆಯಿಸಿಕೊಳ್ಳುತ್ತಿದ್ದರು. ನಾಗರ ಪಂಚಮಿ ಸಂದರ್ಭದಲ್ಲಿ ಇದೊಂದೇ ಗ್ರಾಮದಲ್ಲಿ ಸರ್ಪಗಳು ಏನು ಮಾಡುವುದಿಲ್ಲ. ಆದರೆ ಇದರ ಮೇಲೆ ಮಹಾರಾಷ್ಟ್ರ ಸರ್ಕಾರ ನಿರ್ಬಂಧ ಹಾಕಿದ ಬಳಿಕ ಈ ಗ್ರಾಮವೇ ಸರ್ಪಸ್ನೇಹಿಯಾಯಿತು. ಅಲ್ಲದೇ ಈ ರೀತಿಯ ಅಂಧಶ್ರದ್ಧೆಗೆ ಇತಿಶ್ರೀ ಹಾಡಿದ ಗ್ರಾಮಸ್ಥರು ಈಗ ಪ್ರತಿವರ್ಷವೂ ನಾಗರ ಪಂಚಮಿ ಸಂದರ್ಭದಲ್ಲಿ ಸುಮಾರು ೭೦ ಬಗೆಯ ಸರ್ಪಗಳ ಪ್ರದರ್ಶನ ನಡೆಸುತ್ತಾರೆ. ಇದರೊಂದಿಗೆ ವೀಕ್ಷಣೆಗೆ ಆಗಮಿಸುವ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸರ್ಪಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸ ನೀಡುತ್ತಾರೆ.

ಗುರುವಾರ ನಡೆದ ಈ ನಾಗರ ಪಂಚಮಿ ವಿಶೇಷ ಕಾರ್ಯಕ್ರಮ ವಿವಿಧ ಬಗೆಯಾಗಿ ಕಂಡು ಬಂತು. ಗ್ರಾಮದ ಶೇತ್ಕರಿ ಶಿಕ್ಷಣ ಮಂಡಳಿಯ ಮಾಮಾಸಾಹೇಬ ಲಾಡ್ ವಿದ್ಯಾಲಯದ ಆವರಣದಲ್ಲಿ ಸರ್ಪಗಳ ಮಧ್ಯೆ ಮಕ್ಕಳ ಕಲರವ ಇತ್ತು. ಸಣ್ಣಪುಟ್ಟ ಹುಳಗಳಿಗೂ ಮಕ್ಕಳು ಹೆದರುತ್ತಾರೆ. ಆದರೆ ಈ ಗ್ರಾಮದ ಪುಟ್ಟ ಪುಟ್ಟ ಮಕ್ಕಳು ಸಹ ಗಾಜಿನ ಪೆಟ್ಟಿಗೆಗಳಲ್ಲಿ ದೊಡ್ಡ ದೊಡ್ಡ ಸರ್ಪಗಳನ್ನಿಟ್ಟು ಪ್ರದರ್ಶನದಲ್ಲಿ ಆಗಮಿಸಿದವರಿಗೆ ಆಯಾ ಸರ್ಪದ ಬಗ್ಗೆ ಮಾಹಿತಿ ನೀಡಿದರು.
ಒಂದೇಡೆ ಇದು ನಾಗರ ಪಂಚಮಿ ಜಾತ್ರೆಯಂತೆ ಕಂಡರೇ, ಮತ್ತೊಂದೆಡೆ ಸರ್ಪ ಪ್ರದರ್ಶನವಾಗಿತ್ತು. ಇನ್ನೊಂದೆಡೆ ಸರ್ಪಗಳ ಚಿತ್ರಕಲಾ ಪ್ರದರ್ಶನ, ವಿಜ್ಞಾನ ಪ್ರದರ್ಶನವೂ ಸಹ ನಡೆಯಿತು. ಅದರಲ್ಲಿಯೂ ಮಳೆ ಬಿಡುವು ಪಡೆದುಕೊಂಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರ. ಈಡೀ ಗ್ರಾಮದ ಜನತೆ ಹಾಗೂ ಶಾಲಾ ವಿದ್ಯಾರ್ಥಿಗಳು ಹೊರಗಡೆಯಿಂದ ಬರುವವರಿತಗೆ ತೊಂದರೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಸರ್ಪಗಳ ವಿವಿಧ ಬಗೆಗಳ ಬಗ್ಗೆ ಮಾಹಿತಿವುಳ್ಳ ಕೈಪಿಡಿಯನ್ನು ಸಹ ಇಲ್ಲಿಗೆ ಬಂದವರಿಗೆ ನೀಡಲಾಗುತ್ತಿತ್ತು.

ಉರಗ ತಜ್ಞ ಹಾಗೂ ಕಳೆದ ೫೦ ವರ್ಷಗಳಿಂದ ಸರ್ಪಗಳ ರಕ್ಷಣೆ ಮಾಡುತ್ತಿರುವ ಬಾಬುರಾವ್ ಠಕ್ಕೇಕರ ನೇತೃತ್ವದಲ್ಲಿ ನಡೆದ ಈ ಸರ್ಪಗಳ ಪ್ರದರ್ಶನಕ್ಕೆ ಕೊಲ್ಲಾಪುರದ ವಲಯ ಅರಣ್ಯಾಧಿಕಾರಿ ಸೂರ್ಯಕಾಂತ ಕಾಟ್ಕರ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಉದ್ಘಾಟನೆ ಕಾರ್ಯಕ್ರಮದ ಬಳಿಕ ಜನ ಸಾಲುಗಟ್ಟಿ ನಿಂತು ವಿದ್ಯಾಲಯದ ಹಿಂಬದಿಯಲ್ಲಿ ಹೊಂಡಗಳಲ್ಲಿ ಹೆಡೆ ಬಿಚ್ಚಿ ಆಡುತ್ತಿದ್ದ ಸರ್ಪಗಳನ್ನು ನೋಡಿ ಕೈ ಮುಗಿದರು.
ಚಂದಗಡ, ಗೋವಾ, ಕೊಲ್ಲಾಪುರ, ಸಾವಂತವಾಡಿ, ಮುಂಬಯಿ, ಬೆಳಗಾವಿ ಸೇರಿದಂತೆ ದೂರದ ಊರುಗಳಿಂದ ಜನ ತಂಡೋಪ ತಂಡವಾಗಿ ಬಂದು ದರ್ಶನ ಪಡೆದರು. ಅಲ್ಲದೇ ಫ್ರಾನ್ಸ್ ದೇಶದ ಉರಗ ತಜ್ಞರ ತಂಡವೊಂದು ಇಲ್ಲಿಗೆ ಭೇಟಿ ನೀಡಿ ಜಾಗತಿಕ ಮಟ್ಟದಲ್ಲಿ ಈ ರೀತಿ ಸರ್ಪಗಳ ಶಾಲೆ ಇರುವುದು ಇಲ್ಲಿ ಮಾತ್ರ ಎಂದು ಶ್ಲಾಘಿಸಿದರು.


ಮಾಮಾಸಾಹೇಬ ಲಾಡ್ ವಿದ್ಯಾಲಯದಲ್ಲಿಯೇ ಸರ್ಪ ಶಾಲೆಯನ್ನೂ ಸಹ ನಡೆಸಲಾಗುತ್ತಿದೆ. ಠಕ್ಕೇಕರ ಅವರ ಪುತ್ರ, ಸೋದರ ಸೇರಿದಂತೆ ಈಡೀ ಕುಟುಂಬದ ಸದಸ್ಯರು ಹಾಗೂ ಅವರ ಸ್ನೇಹಿತರ ದೊಡ್ಡದೊಂದು ತಂಡವೇ ಇಲ್ಲಿ ಮಕ್ಕಳಿಗೆ ಸರ್ಪಗಳ ಬಗ್ಗೆ ಹೇಳಿಕೊಡುತ್ತಿದೆ. ಅಲ್ಲದೇ ಈ ಸರ್ಪ ಶಾಲೆಗೆ ರಾಷ್ಟ್ರೀಯ ಪ್ರಾಣಿಸಂಗ್ರಾಲಯ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ ಅನುಮತಿ ಇದ್ದು, ಒಟ್ಟು ೭೦ ಬಗೆಯ ವಿವಿಧ ಹಾವುಗಳನ್ನು ಇಲ್ಲಿ ಸಾಕಲಾಗುತ್ತಿದೆ.
ಪ್ರತ್ಯೇಕವಾಗಿ ಹಾವುಗಳಿಗಾಗಿಯೇ ಶಾಲೆ ಇರುವುದು ದೇಶದಲ್ಲಿಯೇ ಇದೊಂದು ಮಾತ್ರ ಎನ್ನಲಾಗುತ್ತಿದ್ದು, ೧ನೇ ತರಗತಿಯಿಂದ ಪಿಯುಸಿವರೆಗಿನ ಈ ವಿದ್ಯಾಲಯದಲ್ಲಿ ಪ್ರತಿಷರ್ವ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉರಗ ತಜ್ಞರಾಗಿ ಹೊರಹೊಮ್ಮುತ್ತಿದ್ದಾರೆ. ಅಲ್ಲದೇ ಹೊಲ ಗದ್ದೆಗಳಲ್ಲಿ ಹಾವುಗಳು ಕಂಡರೇ ಈ ಗ್ರಾಮದ ಮಹಿಳೆಯರು ಹೆದರುವುದೇ ಇಲ್ಲವಂತೆ. ಕಾರಣ ಇಲ್ಲಿ ಮಹಿಳೆಯರಿಗೂ ಸಹ ಉರಗಗಳನ್ನು ಹಿಡಿಯುವುದನ್ನು ಕರಗತ ಮಾಡಿಕೊಡಲಾಗಿದ್ದು, ಅವುಗಳನ್ನು ಹಿಡಿದು ತಂದು ಶಾಲೆಗೆ ಒಪ್ಪಿಸುತ್ತಾರೆ.
ಗುರುವಾರ ನಡೆದ ಸರ್ಪಗಳ ಪ್ರದರ್ಶನವನ್ನು ಹಿರಿಯರ ಮಾರ್ಗದರ್ಶನದಲ್ಲಿಯೇ ಶಾಲಾ ಮಕ್ಕಳು ನಡೆಸಿಕೊಟ್ಟರು. ದೊಡ್ಡ ದೊಡ್ಡ ಸರ್ಪಗಳ ಮಧ್ಯೆ ಚಿಕ್ಕ ಮಕ್ಕಳು ಇಳಿದು ಅವುಗಳನ್ನು ನಿರ್ವಹಣೆ ಮಾಡುತ್ತಿರುವುದನ್ನು ನೋಡಿದಾಗ ಪ್ರೇಕ್ಷಕರ ಎದೆಯಲ್ಲಿ ನಡುಕ ಆಗುತ್ತಿತ್ತು. ಆದರೆ ಇಲ್ಲಿನ ಮಕ್ಕಳಲ್ಲಿ ಮಾತ್ರ ಯಾವುದೇ ಭಯ ಕಂಡು ಬರಲಿಲ್ಲ.

ಇಷ್ಟೆಲ್ಲಾ ಹಿನ್ನೆಲೆಯಿರುವ ಈ ಸರ್ಪಗಳ ಶಾಲೆಯನ್ನು ರೈತರ ಹೆಸರಿನಲ್ಲಿರುವ ರೈತರೇ ಸದಸ್ಯರಾಗಿರುವ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು, ಮಹಾರಾಷ್ಟ್ರ ಸರ್ಕಾರದಿಂದ ಯಾವುದೇ ಸಹಾಯ ಸೌಲಭ್ಯ ಮಾತ್ರ ದೊರೆಯುತ್ತಿಲ್ಲ.



ಕೈಯಲ್ಲಿ ಕಾಣುವ ನಾಗರ
ನಾಗರ ಪಂಚಮಿ ಹಿಂದೂಗಳ ಪವಿತ್ರ ಹಬ್ಬ. ಆದರೆ ದೇವರಿಗೆ ಯಾವುದೇ ಜಾತಿಯಿಲ್ಲ ಎನ್ನುವುದಕ್ಕೆ ನಿದರ್ಶನವಾಗಿ ಬೆಳಗಾವಿಯಲ್ಲಿ ಮುಸ್ಲಿಂ ಮಹಿಳೆಯೊಬ್ಬರ ಎಡಗೈಲ್ಲಿ ಸರ್ಪದ ಆಕೃತಿ ಮೂಡಿದೆ.
ಇಲ್ಲಿನ ಸಹ್ಯಾದ್ರಿ ನಗರ ಪೊಲೀಸ್ ಕಾಲನಿಯ ನಿವಾಸಿ ಮುನೀರಾ ಅಲ್ಲಾಭಕ್ಷ ಜಕಾತಿ ಎಂಬುವವರ ಎಡಗೈ ಮೇಲೆ ಹಾವಿನ ಛಾಯೆ ಮೂಡಿದ್ದು, ಇದು ಐದು ದಿನಗಳ ಬಳಿಕ ಮಾಯವಾಗುತ್ತದೆಯಂತೆ. ಮುನೀರಾ ಅವರ ಎಡಗೈಯಲ್ಲಿ ಪ್ರತಿವರ್ಷ ನಾಗರ ಪಂಚಮಿ ಸಂದರ್ಭದಲ್ಲಿ ಈ ರೀತಿ ಹಾವಿನ ಆಕೃತಿ ಮೂಡತ್ತದೆ. ಪಂಚಮಿ ಹಿಂದನ ದಿನ ರಾತ್ರಿ ಅಚ್ಚು ಒತ್ತಿದಂತೆ ನಾಗರ ಮೂಡುತ್ತದೆ. ಐದು ದಿನಗಳ ಬಳಿಕ ತಾನಾಗಿಯೇ ಅದು ಮಾಯವಾಗುತ್ತದೆ.
ಮುನೀರಾ ಅವರ ಕೈಯಲ್ಲಿ ಪ್ರತಿವರ್ಷ ಈ ರೀತಿ ನಾಗರ ಮೂಡುವುದರಿಂದ ಜನ ಅವರನ್ನು ಮನೆಗೆ ಕರೆಯಿಸಿ ಕೈಯಲ್ಲಿ ಮೂಡಿರುವ ನಾಗರಕ್ಕೆ ಕುಂಕುಮ-ಅರಿಷಿನ ಹಚ್ಚಿ ಪೂಜೆ ಮಾಡುತ್ತಾರೆ. ಇದರಿಂದ ನಾಗರಾಜನ ಕೃಪೆಗೆ ಪಾತ್ರರಾಗುತ್ತೇವೆ ಎಂಬ ನಂಬಿಕೆ ಜನರಲ್ಲಿದೆ. ಅಲ್ಲದೇ ಮುನೀರಾ ಅವರು ಇದು ಮೂಡಿದ ನಂತರ ಕುಕ್ಕೆ ಸುಬ್ರಹ್ಮಣ್ಯಕ್ಕೂ ಸಹ ಹೋಗಿ ಬರುತ್ತಾರೆ.
ಹಿನ್ನೆಲೆ:
ಮುನೀರಾ ಅವರು ತಾಯಿಯ ಗರ್ಭದಲ್ಲಿದ್ದಾಗ ಅವರ ಮನೆಯ ಪಕ್ಕದಲ್ಲಿ ಹಾವಿನ ಮೊಟ್ಟೆಗಳು ಕಾಣಿಸಿದ್ದವಂತೆ ಅವುಗಳನ್ನು ಮುನೀರಾರವರ ತಾಯಿ ಜೋಪಾನವಾಗಿಟ್ಟಿದ್ದರು. ಅಲ್ಲದೇ ಹಾವಿನ ಮರಿಗಳು ಆಗುವವರೆಗೂ ಮೊಟ್ಟೆಗಳನ್ನು ಜಾಗರೂಕವಾಗಿ ನೋಡಿಕೊಂಡಿದ್ದರಂತೆ. ಇದಾದ ಬಳಿಕ ಮುನೀರಾ ಹುಟ್ಟಿದ್ದಾರೆ. ಬಾಲ್ಯದಿಂದ ಇಲ್ಲಿಯವರೆಗೂ ಪ್ರತಿವರ್ಷ ತಪ್ಪದೇ ಈ ರೀತಿ ನಾಗರ ಮೂಡುತ್ತದೆಯಂತೆ.

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...