Thursday, June 2, 2011

ಪತ್ರಿಕೋದ್ಯಮದ ಆ ಆದರ್ಶ ಎಲ್ಲಿ ಹೋಯಿತು...?

ಒಂದು ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ಆದರ್ಶಯುತ ಸಮಾಜದಲ್ಲಿ ಬದುಕಬೇಕು ಎನ್ನುವ ಮಹಾತ್ವಾಕಾಂಕ್ಷೆಯೊಂದಿಗೆ ನಾನು ಪತ್ರಿಕೋದ್ಯಮಕ್ಕೆ ಬಂದೆ. ಅಂದರೆ ಈ ಪತ್ರಕರ್ತ ವೃತ್ತಿ ಆರಿಸಿಕೊಂಡೆ. ಆದರೆ ಈಗ ಈ ವೃತ್ತಿಗೆ ಬಂದು ತಪ್ಪು ಮಾಡಿಬಿಟ್ಟೆ ಅನಿಸುತ್ತಿದೆ.
ಹೌದು ಮನೆಯಲ್ಲಿ ಕಿತ್ತು ತಿನ್ನುವ ಬಡತನವನ್ನು ಓಡಿಸಬೇಕಾದ ಜವಾಬ್ದಾರಿ ನನ್ನ ಮೇಲೆಯೇ ಇತ್ತು. ಏಕೆಂದರೆ ನನ್ನ ತಂದೆಗೆ ನಾನೊಬ್ಬನೇ ಗಂಡು ಸಂತಾನ. ಆ ಜವಾಬ್ದಾರಿ ಈಗಲೂ ಇದೆ. ಆದರೆ ನಾನು ಬೇರೆ ಯಾವುದಾದರೂ ವೃತ್ತಿ ಆಯ್ದುಕೊಂಡಿದ್ದರೇ ಇಂದು ಆರಾಮಾಗಿ ಇರಬಹುದಿತ್ತು. ಆದರೆ ಸ್ವಾತಂತ್ರ್ಯ ಹೋರಾಟಗಾರನಾಗಿದ್ದರೂ ಸರ್ಕಾರದ ಪಿಂಚಣಿಗೆ ಕೈಯೊಡ್ಡದ ಸ್ವಾಭಿಮಾನಿ ಅಜ್ಜ, ಊರಲ್ಲಿ ಖಡಕ್ ಗೌಡ ಅನ್ನಿಸಿಕೊಂಡಿದ್ದ ನಮ್ಮ ದೊಡ್ಡಪ್ಪನ ಆದರ್ಶಗಳು ನನ್ನನ್ನು ಈ ವೃತ್ತಿಗೆ ಬರುವಂತೆ ಮಾಡಿದ್ದವು.
ಆದರೆ ನಾನು ಆದರ್ಶ ಹುಡುಕುತ್ತಾ ಹೋದಂತೆ. ಇಲ್ಲಿ ಏನು ಸಿಗುತ್ತಿಲ್ಲ. ಹೌದು ಪತ್ರಿಕೋದ್ಯಮದಲ್ಲಿ ಇಂದು ಅಂದಿನ ಆದರ್ಶಗಳು ಇಲ್ಲವೇ ಇಲ್ಲ. ಎಲ್ಲವೂ ಹಣ ಗಳಿಸುವ ದಂಧೆಗಳಾಗಿವೆ. ತನಿಖಾ ವರದಿಯಂತೂ ಈಗ ಸಂಪೂರ್ಣ ಮಕಾಡೆ ಮಲಗಿ ಬಿಟ್ಟಿದೆ. ಇದಕ್ಕೆ ಕಾರಣ ಎಲ್ಲ ಸುದ್ದಿಗಳ ಹಿಂದೆಯೂ ಹಣ ಮಾತಾಡುತ್ತಿದೆ. ಯಾವನಾದರೂ ಬಗ್ಗ ಬರೆಯಬೇಕಾದರೆ ಆತ ನಮಗೆ ಜಾಹೀರಾತು ಕೊಟ್ಟವ, ತುಂಬಾ ಹತ್ತಿರದವ, ಎನ್ನುವ ಮಾತುಗಳು ಬರುತ್ತವೆ.
ಇತ್ತೀಚೆಗೆ ಆರ್.ಎಚ್. ಕುಲಕರ್ಣಿ ಪತ್ರಿಕಾ ಪ್ರಶಸ್ತಿ ಪಡೆದುಕೊಂಡು ನನ್ನ ಗುರು ಸಮಾನರಾದ ವಿಜಯಕುಮಾರ ಅವರ ತಂದೆ ವಿಶ್ವನಾಥ ಅವರು ಹೇಳಿದ್ದು ಇನ್ನು ನನಗೆ ನೆನಪಿದೆ `ಪತ್ರಕರ್ತ ವೃತ್ತಿ ಹೊಟ್ಟೆಪಾಡಿಗಾಗಿ ಮಾಡೋದು ಅಲ್ಲ. ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಸಾಕಷ್ಟು ಕ್ಷೇತ್ರಗಳಿವೆ. ಆದರೆ ಪತ್ರಿಕೋದ್ಯಮ ವೃತ್ತಿ ಅಲ್ಲ ಒಂದು ಸಮಾಜ ಸೇವೆ. ಇದನ್ನು ಸಮಾಜ ಸೇವೆಯನ್ನಾಗಿಸಿಕೊಳ್ಳಬೇಕು ಹೊರತು. ಇದರಿಂದಲೇ ಸೇವೆ ಮಾಡಿಸಿಕೊಳ್ಳುವುದಾಗಬಾರದು.' ಎಂದಿದ್ದರು. ಆ ಮಾತು ಸದಾ ನನ್ನ ಕಿವಿಯಲ್ಲಿ ಗುಂಗಿ ಹುಳದಂತೆ ಕಾಡುತ್ತಲೇ ಇದೆ.
ಯಾರದೇ ಮುಲಾಜಿಗೆ ಒಳಗಾಗದೇ ರಾಜಾರೋಷವಾಗಿ ಯಾವುದಾದರೂ ಯಾವುದೇ ವ್ಯಕ್ತಿಯ ಕೆಟ್ಟ ಮುಖವನ್ನು ಬಿಚ್ಚಿಡುವ ಸ್ವಾತಂತ್ರ್ಯ ಹೊಂದಿದ್ದ ವರದಿಗಾರರಲ್ಲಿ ಇಂದು ಸಂರ್ಪೂಣವಾಗಿ ಸ್ವಾತಂತ್ರ್ಯ ಹರಣವಾಗಿ ಬಿಟ್ಟಿದೆ. ಇಲ್ಲ ನಾವೇ ನಮ್ಮ ಸ್ವಾತಂತ್ರ್ಯ ಹರಣ ಮಾಡಿಕೊಂಡಿದ್ದೇವೆ. ನಾನು ಇದನ್ನೆಲ್ಲಾ ನೋಡಿದಾಗ ಮಹಾತ್ಮಾ ಗಾಂಧಿಜೀ ಹಾಗೂ ಲೋಕಮಾನ್ಯ ಟಿಳಕರು ಇದೇ ಪತ್ರಿಕಾ ರಂಗದಿಂದ ಸ್ವಾತಂತ್ರ್ಯ ಹೋರಾಟ ಮಾಡಿದ್ದರಾ? ಎಂಬ ಆಶ್ಚರ್ಯ ಹುಟ್ಟುತ್ತದೆ.
ಅಂದು ಈ ರಂಗಕ್ಕೆ ಒಂದು ಆದರ್ಶವಿತ್ತು. ಆದರೆ ಇಂದು ಅದೆಲ್ಲಾ ಏನು ಇಲ್ಲ. ನಾನು ಚಿಕ್ಕವನಿದ್ದಾಗ ಅಂದರೆ ೩ನೇ ತರಗತಿಯಲ್ಲಿದ್ದಾಗಿನಿಂದ ಈ ಪತ್ರಿಕೋದ್ಯಮದ ಗೀಳು ಹಚ್ಚಿಕೊಂಡಿದ್ದೆ. ಆಗ ನಮ್ಮ ಪಕ್ಕದ ಮನೆಗೆ `ಕನ್ನಡಮ್ಮ' ಪತ್ರಿಕೆ ಬರುತ್ತಿತ್ತು. ಅದರಲ್ಲಿನ ಲೇಖನಗಳನ್ನು ಓದಿ ನಾನು ಶಾಲಾ ದಿನಗಳಲ್ಲಿ ಭಾಷಣ ಮಾಡುವುದನ್ನು ಕಲಿತೆ.
ನಂತರ ನಾನು ಬೆಳೆದಂತೆಲ್ಲಾ ಈ ಬಗೆಗಿನ ಆಕರ್ಷಣೆ ತುಂಬಾ ಬಂತು. ಅದರಲ್ಲಿಯೂ ಶಂಕರನಾಗ ಅಭಿನಯದ `ಅಕ್ಸಿಟೆಂಡ್' ಚಿತ್ರ ನೋಡಿದ ಬಳಿಕವಂತೂ ನನ್ನಲ್ಲಿನ ವರದಿಗಾರನಾಗಬೇಕೆಂಬ ಕನಸ್ಸು ಮತ್ತಷ್ಟು ಜಾಗೃಗೊಂಡು ಬಿಟ್ಟಿತ್ತು. ಕಾರಣ ಅದರಲ್ಲಿನ ಪತ್ರಕರ್ತ ಪಾತ್ರ ನನ್ನ ಜೀವ ತಿನ್ನುತ್ತಿತ್ತು. ಇದಕ್ಕಾಗಿ ಏನು ಕಲಿಯಬೇಕು ಎನ್ನುವುದೇ ನನಗೆ ಗೊತ್ತಿರಲಿಲ್ಲ. ಹೀಗಾಗಿ ಐಟಿಐ ಸೇರಿದೆ. ಆದರೆ ಅದನ್ನು ಬಿಟ್ಟು ಬಂದೆ. ಬಸ್ ನಿಲ್ದಾಣದಲ್ಲಿ ಪತ್ರಿಕಾ ಬಂಡಲ್‌ಗಳನ್ನು ಬಸ್‌ಗಳಿಗೆ ಹಾಕಿದೆ. ನಿಂತಿರುವ ಬಸ್‌ನಲ್ಲಿ ಪತ್ರಿಕೆಗಳನ್ನು ಮಾರಿದೆ. ಬಸ್ ನಿಲ್ದಾಣದಲ್ಲಿನ ಬುಕ್‌ಸ್ಟಾಲ್‌ನಲ್ಲಿ ತಿಂಗಳಿಗೆ ೫೦೦ರ ಸಂಬಳಕ್ಕೆ ಕೆಲಸ ಮಾಡಿದೆ. ಆ ಬಳಿಕ ರಾಜ್ಯಮಟ್ಟದ ಪತ್ರಿಕೆಯೊಂದರ ವರದಿಗಾರರ ಕೈಯಲ್ಲಿ ಸಹಾಯಕನಾಗಿದ್ದಾಗ ಅದೇ ಕಚೇರಿ ಕಸಗೂಡಿಸಿ, ನೆಲ ಒರೆಸುವ ಕೆಲಸ ಮಾಡಿದೆ. ಆ ಬಳಿಕ ಒಂದು ಪತ್ರಕರ್ತ ಎನ್ನುವ ಹೆಸರು ಗಳಿಸಿಕೊಂಡೆ.
ಆದರೆ ಇಂದು ನನ್ನನ್ನು ಕಾಡುತ್ತಿರುವ ಪ್ರಶ್ನೆ. ಇಲ್ಲಿಯೂ ಆದರ್ಶ ಇಲ್ಲ ಎನ್ನುವುದು. ಹಾಗಾದರೆ ಆ ಆದರ್ಶ ಎಲ್ಲಿ ಹುಡುಕಬೇಕು ಎನ್ನುವುದೇ ತಿಳಿಯದಾಗಿದೆ. ಹೀಗಾಗಿ ಮತ್ತೆ ನಾನು ಹೈಸ್ಕೂಲ್‌ನಲ್ಲಿದ್ದಾಗ ಕೈ ಬರಹ ಪತ್ರಿಕೆ ತೆಗೆಯುತ್ತಿದ್ದೆ ಅದು `ಓ ಹುಣ್ಣಿಮೆ' ಅಂತಾ ಅದನ್ನು ಕೈಯಿಂದ ಬರೆಯುತ್ತಾ ಹೊಲದಲ್ಲಿ ಕೆಲಸ ಮಾಡುತ್ತಾ ತುಂಬಾ ಆರಾಮಾಗಿ ಇದ್ದೆ.
ಹೀಗಾಗಿ ಅದೇ ಚೆನ್ನಾಗಿ ಅನಿಸ್ತಾ ಇದೆ. ಅದಕ್ಕಾಗಿ ಈ ವೃತ್ತಿಗೆ ಕೈ ಮುಗಿದು ಊರಿಗೆ ಹೋಗಿ ಪಿತ್ರಾರ್ಜಿತವಾಗಿರುವ ಎರಡೂವರೆ ಎಕರೆ ಹೊಲದಲ್ಲಿಯೇ ಕೃಷಿ ಮಾಡಬೇಕೆಂಬ ಬಯಕೆ ಕಾಡುತ್ತಿದೆ. ಅದನ್ನೇ ಮಾಡುವುದೇ ಲೇಸು ಏನೋ? ಈ ಪೆನ್ನಿನ ಸಹವಾಸ ಬಿಟ್ಟು ನೇಗಿಲು ಹಿಡಿಯೋದೇ ಲೇಸು ಏನೋ

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...