
ಡಿ.ವಿ. ಕಮ್ಮಾರ
ಬೆಳಗಾವಿ, ೨೪- ಮರಾಠಿ ರಂಗಭೂಮಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ನಾರಾಯಣ ಶ್ರೀಪಾದ ರಾಜಹಂಸರ ಜೀವನ ಚರಿತ್ರೆಯನ್ನಾಧರಿಸಿದ `ಬಾಲಗಂಧರ್ವ' ಚಲನಚಿತ್ರ ಮರಾಠಿ ಚಿತ್ರರಂಗದಲ್ಲಿ ಹೊಸ ಕ್ರಾಂತಿ ಮೂಡಿಸಿದೆ.
ಮಹಾರಾಷ್ಟ್ರದ ತುಂಬಾ ಯಶಸ್ವಿಯಾಗಿ ಪ್ರದರ್ಶಿತಗೊಳ್ಳುತ್ತಿರುವ ಈ ಚಿತ್ರದ ಪ್ರದರ್ಶನಕ್ಕೆ ಕನ್ನಡದ ನೆಲದಲ್ಲಿ ಕನ್ನಡದ ನಿರ್ದೇಶಕರೊಬ್ಬರಿಂದ ಚಾಲನೆ ದೊರತಿದ್ದು, ಕಲೆಗೆ ಯಾವುದೇ ಭಾಷೆಯ ಗಡಿಯಿಲ್ಲ ಎನ್ನುವುದು ಸಾಬೀತಾಗಿದೆ.
ಬೆಳಗಾವಿ ನರ್ತಕಿ ಚಿತ್ರಮಂದಿರದಲ್ಲಿ ಕಳೆದ ಶುಕ್ರವಾರ ನಾಗತಿಹಳ್ಳಿ ಚಂದ್ರಶೇಖರ ಹಾಗೂ ಹಿರಿಯ ರಂಗಚೇತನ ನಾಟ್ಯಭೂಷಣ ಡಾ. ಏಣಗಿ ಬಾಳಪ್ಪ ಈ ಮರಾಠಿ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದ್ದು, ಮಹಾರಾಷ್ಟ್ರ ರಾಜ್ಯಾದಂತ ಹಾಗೂ ಬೆಳಗಾವಿಯಲ್ಲಿ ಭರ್ಜರಿ ಪ್ರದರ್ಶನಗೊಳ್ಳುತ್ತಿದೆ.
ಈ ಚಿತ್ರದಲ್ಲಿರುವುದು ಮರಾಠಿ ರಂಗಭೂಮಿಯಲ್ಲಿ ಮಹಿಳಾ ಪಾತ್ರಗಳಿಗೆ ಜೀವಕಳೆ ತುಂಬಿದ್ದ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ನಾರಾಯಣ ಶ್ರೀಪಾದ ರಾಜಹಂಸರ ಜೀವನದ ಕಹಿ ಘಟನೆಗಳು. ಆದರೆ ಆ ಕಹಿ ಘಟನೆಗಳನ್ನು ಬಾಲಗಂಧರ್ವರು ಯಾವತ್ತೂ ತಮ್ಮ ಪ್ರೇಕ್ಷಕರಿಗೆ ತೋರಿಸಲಿಲ್ಲ. ಎಲ್ಲ ಕಹಿ ಅನುಭವಗಳನ್ನು ತಮ್ಮೊಳಗಿಟ್ಟುಕೊಂಡು ಸ್ತ್ರೀ ಪಾತ್ರಗಳಲ್ಲಿ ಚೈತನ್ಯ ತುಂಬುತ್ತಿದ್ದರು. ಅಂದು ಬಾಲಗಂಧರ್ವರು ತಮ್ಮ ನಟನೆಯ ಮೂಲಕ ಪ್ರೇಕ್ಷರನ್ನು ಮಂತ್ರಮುಗ್ಧಗೊಳಿಸಿದ್ದ ಬಗೆಯನ್ನು ಸುಭೋಬ ಭಾವೆ ಅತ್ಯುತ್ತಮವಾಗಿ ಅಭಿನಯಿಸಿ ತೋರಿಸಿದ್ದಾರೆ.

ಅಂದು ಸ್ತ್ರೀ ಪಾತ್ರಗಳಿಗೆ ಬಾಲಗಂಧರ್ವರೇ ಬೇಕು ಎನ್ನಲಾಗುತ್ತಿತ್ತು. ಅಲ್ಲದೇ ಕನ್ನಡದ ಸವಾಯಿ ಗಂಧರ್ವರು ಇವರ ದ್ರೌಪದಿ ನಾಟಕದಲ್ಲಿ ಪಾತ್ರಕ್ಕೆ ಮಾರು ಹೋಗಿ ಇವರ ಅಭಿಮಾನಿಯಾಗಿದ್ದರು. ಇದೇ ರೀತಿ ಬಾಲಗಂಧರ್ವರು ಸವಾಯಿ ಗಂಧರ್ವರ ಅಭಿಮಾನಿಯಾಗಿದ್ದರು.
ಕೇವಲ ನಾಟ್ಯ ಸಂಗೀತವಲ್ಲದೇ ಗಜಲ, ಟುಮರಿ ಹಾಗೂ ಭಕ್ತಿಗೀತೆಗಳನ್ನು ಬಾಲಗಂಧರ್ವರು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಆದರೆ ಯಾವತ್ತೂ ತಮ್ಮ ಸುಖ ಬಯಸದೇ ನಟನೆಯನ್ನು ಕಲಾ ಸೇವೆಯನ್ನಾಗಿ ಪೋಷಿಸಿದರು. ಇವರು ಬಾಲ್ಯದಲ್ಲಿದ್ದಾಗ ಬಾಲಗಂಗಾಧರ ಟಿಳಕರ ಮನೆಯಲ್ಲಿ ಸಂಗೀತ ಕಚೇರಿಯಿತ್ತು. ಇವರ ಕಂಠಸಿರಿ ನೋಡಿ ಟಿಳಕರು ಇವರಿಗೆ `ಬಾಲಗಂಧರ್ವ' ಎಂದು ಹೆಸರಿಟ್ಟಿದ್ದರು.
ಬಾಲಗಂಧರ್ವರು ಆರಂಭದಲ್ಲಿ ಕಿರ್ಲೋಸ್ಕರ ನಾಟಕ ಕಂಪನಿಗಳಲ್ಲಿ ಮಹಿಳಾ ಪಾತ್ರ ಮಾಡುತ್ತಿದ್ದರು. ಆ ಬಳಿಕ ಕಂಪನಿಯಿಂದ ಹೊರಬಂದು ಸ್ನೇಹಿತರೊಂದಿಗೆ ಕೂಡಿ ೧೯೧೩ರ ಜುಲೈ ೫ ರಂದು ಗಂಧರ್ವ ನಾಟಕ ಮಂಡಳಿ ಕಟ್ಟಿದರು. ಅದನ್ನು ಕಟ್ಟಿ ಬೆಳೆಸಲು ಅವರು ಪಟ್ಟ ಕಷ್ಟು ಅಷ್ಟಿಷ್ಟಲ್ಲ. ಅಲ್ಲದೇ ಹಲವು ಕಷ್ಟ ಹಾಗೂ ಸಾಲದ ಮಧ್ಯೆಯೂ ಸಹ ಸ್ವಾತಂತ್ರ್ಯ ಹೋರಾಟಕ್ಕೆ ದೇಣಿಗೆ ನೀಡುತ್ತಿದ್ದರು. ರಾಜ್ಯ ಮಹಾರಾಜರಿಂದ ಅಧರಾತಿಥ್ಯ ಸಿಗುತ್ತಿತ್ತಾದರೂ ಅವರು ಕೊಡುತ್ತಿದ್ದ ಹಣವನ್ನು ಎಂದಿಗೂ ಪಡೆದುಕೊಳ್ಳುವುದಕ್ಕೆ ಹೋಗುವುದಿಲ್ಲ.

ಚಿತ್ರದಲ್ಲಿ ಏನಿದೆ:
ಮರಾಠಿ ರಂಗಭೂಮಿಯ ದಂತಕತೆಯಾಗಿರುವ ಬಾಲಗಂಧರ್ವರ ಕಥೆಯನ್ನಾಧರಿಸಿ ನಿತಿನ ದೇಸಾಯಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಗಂಧರ್ವರ ಪಾತ್ರವನ್ನು ಸುಬೋಧ ಭಾವೆ ಚನ್ನಾಗಿ ಅಭಿನಯಿಸಿದ್ದಾರೆ. ಅಲ್ಲದೇ ಸ್ತ್ರೀ ಪಾತ್ರದ ವೇಷಕ್ಕೆ ವಿಕ್ರಮ ಗಾಯಕವಾಡರ ಮೇಕಪ ಕಳಶವಿಟ್ಟಂತಾಗಿದೆ. ಸಂಗೀತವಂತೂ ಅತ್ಯುದ್ಭುತವಾಗಿದೆ. ಕ್ಯಾಮೇರಾ ಕೈ ಚಳಕ ತುಂಬಾ ಚೆನ್ನಾಗಿದೆ.
ಇತ್ತ ಬಾಲಗಂಧರ್ವರು ಹೊಸ ನಾಟಕ ಪ್ರಯೋಗಕ್ಕೆ ಮುಂದಾಗಿರುತ್ತಾರೆ. ಅದು ಬಾಮಿನಿ ಎನ್ನುವ ಪಾತ್ರ. ಎಲ್ಲ ಟಿಕೇಟ್‌ಗಳು ಖರೀದಿಯಾಗಿರುತ್ತವೆ. ಆದರೆ ಇತ್ತ ಗಂಧರ್ವರ ಹೆಣ್ಣು ಮಗು `ಹಿರಾ' ಸಾವನ್ನಪ್ಪುತ್ತದೆ. ಈ ಸಂದರ್ಭದಲ್ಲಿ ಪ್ರದರ್ಶನ ರದ್ಧುಗೊಳಿಸಲು ಮುಂದಾದಾಗ ಗಂಧರ್ವರು ಬಣ್ಣ ಹಚ್ಚಿಕೊಳ್ಳಲು ಮುಂದಾಗುತ್ತಾರೆ. ನಾಟಕದಲ್ಲಿ ಸಂತೋಷದ ಕ್ಷಣದಲ್ಲಿ ಎಲ್ಲರೂ ಗಂಧರ್ವರ ಮಗು ಸತ್ತಿದ್ದಕ್ಕೆ ಅಳುತ್ತಲೇ ಅಭಿನಯಿಸುತ್ತಿರುತ್ತಾರೆ. ಆದರೆ ಗಂಧರ್ವರು ದುಃಖ ಮರೆತು ನಗು ನಗುತ್ತಲೇ ಅಭಿನಯ ಮಾಡುತ್ತಾರೆ.

ಈ ಒಂದು ದೃಶ್ಯ ಚಿತ್ರಮಂದಿರದಲ್ಲಿ ಕುಳಿತ ಪ್ರೇಕ್ಷಕರ ಕಣ್ಣುಗಳನ್ನು ತೇವಗೊಳಿಸಿತ್ತು. ಅಷ್ಟೊಂದು ಅದ್ಭುತವಾಗಿ ಈ ದೃಶ್ಯ ಮೂಡಿ ಬಂದಿದೆ. ಇದೇ ರೀತಿಯ ಭಾವುಕಗೊಳ್ಳುವ ದೃಶ್ಯಗಳು ಚಿತ್ರದ ತುಂಬವೂ ಇವೆ. ಕಾರಣ ಬಾಲಗಂಧರ್ವರ ಜೀವನವೇ ಹಾಗಿತ್ತು.
ಚಿತ್ರದ ಕೊನೆಯಲ್ಲಿ ಬಾಲಗಂಧರ್ವರ ಕೊನೆಯ ಮಾತು `ರಂಗಭೂಮಿಯಲ್ಲಿ ನಡೆಯೋದಷ್ಟೇ ನಾಟಕವಲ್ಲ, ಈ ಜಗತ್ತೇ ಒಂದು ರಂಗಭೂಮಿ. ಸುಖ ಮತ್ತು ದುಃಖ ಎರಡೂ ನಿಜವಲ್ಲ. ಯಶಸ್ಸು ನಮ್ಮದಲ್ಲ. ಅಪಯಶಸ್ಸು ನಮ್ಮದಲ್ಲ. ಇಲ್ಲಿ ಮನಷ್ಯನದು ಎನ್ನುವುದು ಏನೂ ಇಲ್ಲ. ಕೊನೆಗೆ ನಿನ್ನ ದೇಹವೂ ನಿನ್ನದಾಗುವುದಿಲ್ಲ." ಇದು ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಚಿರಸ್ಥಾಯಿಯಾಗುವಂತಿದೆ.

ಭಾಷಾ ಬಾಂಧವ್ಯ:
ಮರಾಠಿ ಚಿತ್ರರಂಗದಲ್ಲಿ ಈಗಷ್ಟೇ ಒಂದು ವರ್ಷದ ಹಿಂದೆ ರಂಗಭೂಮಿಯ ಹಿನ್ನೆಲೆಯನ್ನೇ ಮುಖ್ಯ ಕೇಂದ್ರವಾಗಿಟ್ಟುಕೊಂಡು ತಯಾರಿಸಲಾಗಿದ್ದ `ನಟರಂಗ' ಚಿತ್ರವೂ ಕನ್ನಡ ಹಾಗೂ ಮರಾಠಿ ಪ್ರೇಕ್ಷಕರ ಮನ ಗೆದ್ದಿತ್ತು. ಈಗ ಅದೇ ಮಾರ್ಗದಲ್ಲಿ `ಬಾಲ ಗಂಧರ್ವ' ಚಿತ್ರ ಮೂಡಿ ಬಂದಿದೆ. ಅಲ್ಲದೇ ಬೆಳಗಾವಿಯಲ್ಲಿ ಕನ್ನಡ-ಮರಾಠಿಗರಲ್ಲಿ ಬಾಂಧವ್ಯ ಬೆಸೆಯುವಲ್ಲಿ ಈ ಚಿತ್ರ ಯಶಸ್ವಿಯಾಗಿದೆ.

No comments:
Post a Comment