
ನನಗೆ ಇರುವ ಚಟಗಳಲ್ಲಿ ಟಿವಿ ನೋಡುವುದು ದೊಡ್ಡ ಚಟ. ಹೀಗಾಗಿ ಮನೆ ಹಾಗೂ ಕಚೇರಿಯಲ್ಲಿದ್ದರೂ ಸಹ ಸದಾ ಟಿವಿಯನ್ನು ನೋಡುತ್ತಲೇ ಇರುತ್ತೇನೆ. ಇನ್ನು ಹೊರಗಡೆ ಸುತ್ತಾಡುವಾಗಲೂ ಸಹ ಮೊಬೈಲ್‌ನಲ್ಲಿ ಸದಾ ಯಾವುದಾದರೂ ನ್ಯೂಸ್ ಚಾಲನ್ ಬಡೆದುಕೊಳ್ಳುತ್ತಲೇ ಇರುತ್ತದೆ.
ಹೀಗಾಗಿ ನನಗೆ ಆಗಾಗ ಕೆಲವೊಂದು ಚಾನಲ್‌ಗಳ ಸಣ್ಣತನಗಳ ಬಗ್ಗೆ ಬರೆಯಬೇಕು ಅಂದುಕೊಳ್ಳುತ್ತೇನೆ (ಅದು ಅವರ ದೊಡ್ಡತನ ಇರುಬಹುದು. ನನಗೆ ಅದು ಸಣ್ಣತನ ಅನಿಸುತ್ತೆ). ಆದರೆ ಅಷ್ಟೊತ್ತಿಗಾಗಲೇ ಅಂತಹ ಚಾನಲ್‌ನಲ್ಲಿ ಪ್ರಸಾರವಾಗುವ ಮತ್ತೊಂದು ಉತ್ತಮ ಕಾರ್ಯಕ್ರಮ ಮನಸ್ಸು ಸೆಳೆದು ಬಿಡುತ್ತದೆ. ಹೀಗಾಗಿ ಹಿಂದಿನ ಬೇಸರ ಮಾಯವಾಗಿ ಬಿಡುತ್ತದೆ. ಆದರೆ ಈಗ ಯಾಕೋ ನನ್ನ ಮನಸ್ಸಿಗೆ ಅನ್ನಿಸಿದ್ದನ್ನು ಬರೆಯಲೇಬೇಕು ಅನಿಸಿತು. ಅದಕ್ಕೆ ಬರೆಯುತ್ತಿರುವೆ.
ಇತ್ತೀಚೆಗೆ ಕನ್ನಡದ ನ್ಯೂಸ್ ಚಾನಲ್‌ಗಳು ಕೆಲವೊಂದು ವಿಷಯಗಳಲ್ಲಿ ಲಂಗು ಲಗಾಮು ಇಲ್ಲದೇ ವರ್ತಿಸುತ್ತಿವೆ ಎನ್ನುವುದು ನನ್ನ ಆರೋಪ. ಏಕೆಂದರೆ ಎಲ್ಲಿಯೋ ನಡೆಯುವ ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದಾಗಿ ಮಾಡುತ್ತವೆ. ಆದರೆ ಯಾವ ವಿಷಯ ದೊಡ್ಡದಾಗಬೇಕಿತ್ತೋ ಅದನ್ನು ಮಾಡುವುದೇ ಇಲ್ಲ. ಅದರಲ್ಲಿಯೂ ರಾಷ್ಟ್ರೀಯ ಮಟ್ಟದ ಚಾನಲ್‌ಗಳ ನಕಲು ಮಾಡಲು ಹೋಗುವುದು ಉಂಟು.
ನಿನ್ನೆ ಅಂದರೆ ಮೇ ೨೧ ರಾಜೀವ ಗಾಂಧಿಯವರ ಹತ್ಯೆಯಾಗಿ ೨೦ ವರ್ಷವಾಗಿತ್ತು. ಅದರ ಸ್ಮರಣೆಯನ್ನು ರಾಷ್ಟ್ರಮಟ್ಟದ ಚಾನಲ್‌ಗಳು ಎಷ್ಟೊಂದು ಚನ್ನಾಗಿ ನಡೆಸಿಕೊಟ್ಟರು. ಅದರಲ್ಲಿಯೂ ಸ್ವಾರ್ ನ್ಯೂಸ್‌ನ ವರದಿಗಾರರ ಈಡೀ ಗುಂಪೊಂದು ರಾಜೀವ ಗಾಂಧಿಯವರ ಸಾವಿನ ಕೆಲವು ಗಂಟೆಗಳ ಹಿಂದಿನ ಕ್ಷಣಗಳನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟರು. ಈಡೀ ಒಂದು ತಾಸಿನ ಕಾರ್ಯಕ್ರಮವನ್ನು ಅಲುಗಾಡದೇ ನೋಡಿದೆ. ಇದೇ ಸಂದರ್ಭದಲ್ಲಿಯೇ ಆಜ್ ತಕ್, ಇಂಡಿಯಾ ಟಿವಿ, ಜೀ ನ್ಯೂಸ್ ಸೇರಿದಂತೆ ಬಹುತೇಕ ಎಲ್ಲ ಹಿಂದಿ, ಮರಾಠಿ ಹಾಗೂ ತಮಿಳು ನ್ಯೂಸ್ ಚಾನಲ್‌ಗಳಲ್ಲಿಯೂ ಸಹ ಅದು ಬರುತ್ತಿತ್ತು. ಆದರೆ ಕನ್ನಡದ ಯಾವುದೇ ಚಾನಲ್‌ನಲ್ಲಿಯೂ ಅದು ಬರಲೇಯಿಲ್ಲ.
ಅಂದರೆ ನಮ್ಮ ಕನ್ನಡದ ನ್ಯೂಸ್ ಚಾನಲ್‌ಗಳು ಯಾವುದನ್ನು ಸುದ್ದಿ ಮಾಡಬೇಕಿತ್ತು. ಅದನ್ನು ಮಾಡುತ್ತಿಲ್ಲ. ಬದಲಿಗೆ ಭವಿಷ್ಯ ಎಲ್ಲ ಬುಡಬುಡ್ಕೆ ಎಂದು ಹೇಳಿಕೊಳ್ಳುತ್ತಾ ದೊಡ್ಡದಾಗಿ ವಿಶೇಷ ವರದಿಗಳನ್ನು ಬಿತ್ತಿರಿಸುವ ಚಾನಲ್‌ನಲ್ಲಿ ದಿನ ಬೆಳಗಾದರೇ ಭವಿಷ್ಯದ ಬಗ್ಗೆನೇ ದೊಡ್ಡ ದೊಡ್ಡ ಸುದ್ದಿಗಳು. ಯಾವುದಾದರೂ ದುರಂತ ನಡೆದರೆ ಅಥವಾ ಮುಖ್ಯಮಂತ್ರಿಗೆ ಕಂಟಕ ಬಂದರೆ ಅದರ ಬಗ್ಗೆ ಜಾತಕಗಳನ್ನು ಜಾಲಾಡುವುದು, ಯಾವ್ಯಾವುದೋ ಭವಿಷ್ಯಗಾರರನ್ನು, ಸಂಖ್ಯಾ ಶಾಸ್ತ್ರಜ್ಞರನ್ನು ಕರೆಯಿಸಿ ಚರ್ಚೆ ಮಾಡೋದು. ಇನ್ನು ಎಲ್ಲಿಯೂ ಯಾರೋ ಒಬ್ಬಾತ ಮೇ ೨೧ಕ್ಕೆ ಭೂಕಂಪವಾಗುತ್ತದೆ ಎಂದು ಹೇಳಿದ್ದನ್ನೇ ದೊಡ್ಡದಾಗಿ ಸುದ್ದಿ ಮಾಡುವುದು ಛೇ ಇದೆಲ್ಲಾ ಯಾಕೋ ಬಾಲಿಶ ಅನಿಸುತ್ತದೆ.
ಇದೇ ರೀತಿ ಲಂಡನ್ ರಾಜಕುಮಾರನ ಮದುವೆ ಸುದ್ದಿಯೂ ಅತಿಯಾಗಿತ್ತು. ಜ್ಯೂನಿಯರ್ ಎನ್‌ಟಿಆರ್ ಮದುವೆ ಸುದ್ದಿ ಆಂಧ್ರ ಪ್ರದೇಶದಲ್ಲಿ ಎಷ್ಟು ಸುದ್ದಿಯಾಯಿತೋ ಗೊತ್ತಿಲ್ಲ. ಆದರೆ ಅದನ್ನು ಕನ್ನಡ ಪ್ರೇಕ್ಷಕರ ಮೇಲೆ ಒತ್ತಡದಿಂದ ಹೇರುವ ಪ್ರಯತ್ನವನ್ನು ನಮ್ಮ ಕನ್ನಡದ ನ್ಯೂಸ್ ಚಾಲನಗಳು ಮಾಡಿದವು.
ಇನ್ನು ಇತ್ತೀಚೆಗೆ ಮತ್ತೊಂದು ನ್ಯೂಸ್ ಚಾನಲ್‌ನಲ್ಲಿ ಒಂದು ಸುದ್ದಿ ಬಂತು ಅದು. ಪುಟಾಣಿ ಸ್ಕೇಟಿಂಗ್ ಪಟುಗಳ ಕುರಿತಾದ ಸುದ್ದಿಯಾಗಿತ್ತು. ಅದರಲ್ಲಿ ಯಾವುದೋ ರಾಷ್ಟ್ರಮಟ್ಟದ ಚಾನಲ್‌ನಲ್ಲಿ ಬಂದ ವರದಿಯನ್ನು ಆಧರಿಸಿ ಸುದ್ದಿ ಮಾಡಲಾಗಿತ್ತು. ಇಂದು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಕೇಟಿಂಗ್‌ನಲ್ಲಿ ದಾಖಲೆ ಮಾಡಿದ ಅಭಿಷೇಕ ನವಲೆ, ಅನಿಕೇತ ಚಿಂಡಕ ಹಾಗೂ ರೋಹಣ ಕೊಕಣೆ ಎಂಬ ಮಕ್ಕಳು ಬೆಳಗಾವಿಯವರು. ಆದರೆ ಒಂದು ದಿನ ಸಂಜೆ ೭.೧೫ ರಿಂದ ೭.೩೦ರ ವರೆಗೆ ಬಂದ ಈ ವರದಿಯಲ್ಲಿ ಈ ಮಕ್ಕಳು ಬೆಂಗಳೂರು ಮೂಲದವರು ಎಂದು ಹೇಳಲಾಯಿತು.
ಇದೇ ರೀತಿಯ ಎಷ್ಟೋ ಹಸಿ ಹಸಿ ಸುಳ್ಳುಗಳು ಬರುತ್ತಲೇ ಇವೆ. ಇನ್ನು ನ್ಯೂಸ್ ಚಾನಲ್‌ಗಳಿಗೂ ಸೆನ್ಸಾರ ಅಳವಡಿಸಬೇಕಾದ ಅಗತ್ಯವೂ ಇದೆ.
ಇನ್ನು ಚಲನಚಿತ್ರಗಳ ಬಗ್ಗೆ ಬರುವ ವರದಿಗಳಲ್ಲಿಯೂ ಸಹ ಅದೇನೋ ನಡೆಯುತ್ತಿದೆ. ತಮಿಳು ಹಾಗೂ ತೆಲುಗು ಚಿತ್ರರಂಗದ ಬಗ್ಗೆ ಅಲ್ಲಿ ಬಿಡುಗಡೆಯಾಗುವ ಚಿತ್ರಗಳ ಬಗ್ಗೆ ದೊಡ್ಡದಾಗಿ ವರದಿ ಮಾಡುತ್ತಾರೆ. ಅದಕ್ಕಾಗಿಯೇ ಫಿಲ್ಮಿ ಎಪಿಸೋಡ್‌ಗಳಲ್ಲಿ ಕೊರೆಯುತ್ತಾರೆ. ಆದರೆ ಅದೇ ತಮಿಳು ಹಾಗೂ ತೆಲುಗು ಚಾನಲ್‌ಗಳನ್ನು ನೋಡಿದರೇ ಅಲ್ಲಿ ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ಯಾವುದೇ ಸುದ್ದಿಯೂ ಕಾಣದು. ನಮ್ಮ ಚಾನಲ್‌ಗಳು ಮಾತ್ರ ಪರಭಾಷಾ ಚಿತ್ರಗಳ ವ್ಯಾಮೋಹ ಬಿಡುತ್ತಿಲ್ಲ.
ಮೆಚ್ಚಲೇಬೇಕು:
ಅದೇನೇ ಇರಲಿ. ಮೇ ೨೨ರ ಮಂಗಳೂರು ವಿಮಾನ ದುರಂತದ ಬಗ್ಗೆ ನಮ್ಮ ಚಾನಲ್‌ಗಳು ಉತ್ತಮವಾಗಿಯೇ ಸುದ್ದಿ ಮಾಡಿವೇ. ಅದನ್ನು ಮೆಚ್ಚಲೇಬೇಕು.
ಏನೋ ನನ್ನ ಬೇಸರವನ್ನು ಇಲ್ಲಿ ತೋಡಿಕೊಂಡಿರುವೇ ಅಷ್ಟೇ.
channagide
ReplyDelete