
ಬೆಳಗಾವಿ, ೧- ಹಣದುಬ್ಬರ ಹಾಗೂ ಬೆಲೆ ಏರಿಕೆ ಮಧ್ಯೆ ಈಗ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಚಿಲ್ಲರೆ ನಾಣ್ಯಗಳ ಅಭಾವ ಸೃಷ್ಟಿಯಾಗಿದ್ದು, ಇದನ್ನು ಕೆಲವರು ದಂಧೆಯನ್ನಾಗಿಯೂ ಮಾಡಿಕೊಂಡಿದ್ದಾರೆ. ನೂರು ರೂ. ಚಿಲ್ಲರೆ ನಾಣ್ಯಗಳಿಗೆ ೧೦ರೂ. ದಂತೆ ಕಮೀಷನ್ ತೆಗೆದುಕೊಂಡು ಚಿಲ್ಲರೆ ನಾಣ್ಯ ಮಾರಾಟ ಮಾಡುವ ಅಕ್ರಮ ದಂಧೆಯೊಂದು ಅವ್ಯಾಹತವಾಗಿ ನಡೆಯುತ್ತಿದೆ.
ದಿನನಿತ್ಯದ ಬದುಕಿಗೆ ಚಿಲ್ಲರೆ ನಾಣ್ಯವೂ ಸಹ ಅಗತ್ಯವಾಗಿದೆ. ಆದರೆ ಬೆಳಗಾವಿಯಲ್ಲಿ ಇದು ಸಾರ್ವಜನಿಕರಲ್ಲಿ ಲಭ್ಯವಿಲ್ಲ. ಇದೇ ರೀತಿ ಅಂಗಡಿ ಮುಗ್ಗಟ್ಟು, ಹೊಟೇಲ್, ಪಾನ್ ಶಾಪ, ಹಾಲಿನ ಅಂಗಡಿ, ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ಗಳಲ್ಲಿ, ಬ್ಯಾಂಕ್ಗಳಲ್ಲಿ, ವಿದ್ಯುತ್ ಬಿಲ್ ಪಾವತಿ ಕೇಂದ್ರ, ಅಷ್ಟೇ ಏಕೆ ಪತ್ರಿಕೆ ತೆಗೆದುಕೊಳ್ಳುವುದಕ್ಕೆ ಹೋದರೂ ಸಹ ಅಲ್ಲಿಯೂ ಚಿಲ್ಲರೆ ಸಮಸ್ಯೆ ಎದುರಾಗುತ್ತಿದೆ.
ನೀವು ಎಲ್ಲಿಯೇ ಹೋಗಿ ಅಲ್ಲಿ ಮೊದಲು ಕೇಳುವುದು `ಚಿಲ್ಲರೆ ಇದ್ದರೇ ಕೊಡಿ ಇಲ್ಲದೇ ಹೋದಲ್ಲಿ ನೀವು ಕೇಳುವ ವಸ್ತು ಸಿಗುವುದಿಲ್ಲ' ಎಂಬ ಪ್ರಶ್ನೆ ಎದುರಾಗುತ್ತದೆ.
ಮಾಮೂಲಾಗಿ ನಾವು ಎಲ್ಲಿಯೇ ಖರೀದಿಗೆ ಹೋಗಿರುತ್ತೇವೆಯೋ ಅಲ್ಲಿನ ಖರೀದಿಗೆ ಇಂತಿಷ್ಟು ಎಂದು ಹೇಳಿದ ಮೇಲೆ ನಾವು ಹಣ ಕೊಟ್ಟ ಮೇಲೆ ಅದಕ್ಕೆ ಅಂಗಡಿಯವರು ವಾಪಸ್ಸು ಚಿಲ್ಲರೆ ಕೊಡುವುದು ರೂಢಿ. ಆದರೆ ಈಗ ಬೆಳಗಾವಿಯಲ್ಲಿ ಅಂಗಡಿಗೆ ಹೋದ ತಕ್ಷಣ ಏನು ಕೊಳ್ಳುವಿರಿ ಎಂದು ಕೇಳಲಾಗುತ್ತದೆ. ಅದಕ್ಕೆ ಇಷ್ಟು ಬೆಲೆಯಾಗುತ್ತದೆ. ಚಿಲ್ಲರೆ ಇದ್ದರೆ ಮಾತ್ರ ಕೊಡಿ ಇಲ್ಲದೇ ಹೋದರೇ ಇಲ್ಲ ಎಂದು ಅಂಗಡಿಕಾರರು ಕಡ್ಡಿ ತುಂಡು ಮಾಡಿದಂತೆ ಹೇಳುತ್ತಿದ್ದಾರೆ.
ಚಿಲ್ಲರೆ ಇಲ್ಲದ ಕಾರಣ ಗ್ರಾಹಕರಿಗೆ ವಾಪಸ್ಸು ನಾಣ್ಯ ಕೊಡುವುದಕ್ಕೆ ಆಗುತ್ತಿಲ್ಲ ಎನ್ನುತ್ತಾರೆ ಹೊಟೇಲ್ ಮಾಲೀಕರು ಹಾಗೂ ಅಂಗಡಿಕಾರರು. ಇದಕ್ಕಾಗಿಯೇ ೧ರೂ ದಿಂದ ೫ರೂ. ಮುಖಬೆಲೆಯ ಕೂಪನ್ಗಳನ್ನು ನೀಡುತ್ತಿದ್ದಾರೆ. ಇವುಗಳನ್ನು ಹೊಟೇಲ್ ಹೆಸರಿನೊಂದಿಗೆ ಮುದ್ರಿಸಲಾಗಿದ್ದು, ಹೊಟೇಲ್ನ ಮದ್ರೆಯೂ ಸಹ ಇರುತ್ತದೆ.
ಇನ್ನೊಂದೆಡೆ ಕೃತಕ ಚಿಲ್ಲರೆ ಅಭಾವ ಸೃಷ್ಟಿಸುವ ಮೂಲಕ ಅಗತ್ಯವಿರುವವರಿಗೆ ಚಿಲ್ಲರೆ ಹಣವನ್ನು ಮಾರುವ ಮೂಲಕ ಕಮೀಷನ್ ಹೊಡೆಯುವ ದಂಧೆಯೊಂದು ಬೆಳಗಾವಿ ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದು, ಒಂದೇಡೆ ಜನ ಚಿಲ್ಲರೆಯಿಲ್ಲದೇ ಪರದಾಡುತ್ತಿದ್ದರೇ ಇನ್ನೊಂದೆಡೆ ಇದನ್ನೇ ಕೆಲವರು ಲಾಭದ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಈ ರೀತಿ ಚಿಲ್ಲರೆ ನಾಣ್ಯ ಮಾರುವುದರಿಂದ ನೂರಕ್ಕೆ ಹತ್ತು ರೂ. ಸಿಗುತ್ತಿರುವುದರಿಂದ ಭಿಕ್ಷುಕರಿಗೆ ಈಗ ತುಂಬಾ ಬೇಡಿಕೆ ಬಂದಿದೆ. ಅಲ್ಲದೇ ಕೆಲವರು ಪಾನ್ ಅಂಗಡಿಗಳಲ್ಲಿ ೫ರೂ. ಕಮೀಷನ್ ನೀಡಿ ೧೦೦ರೂ. ನಾಣ್ಯ ಪಡೆದುಕೊಂಡು ಅದನ್ನು ೧೦ ರೂ. ದಿಂದ ೧೫ರೂ. ವರೆಗೆ ಕಮೀಷನ್ ಪಡೆದುಕೊಂಡು ಹೊಟೇಲ್ಗಳಿಗೆ ನೀಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇದಕ್ಕಾಗಿಯೇ ಸುಮಾರು ೧೦ ಜನರ ಗುಂಪು ಇದೆ. ಅವರು ಎಲ್ಲ ಹೊಟೇಲ್ಗಳಿಗೂ ತಮ್ಮ ಮೊಬೈಲ್ ಸಂಖ್ಯೆ ನೀಡಿದ್ದು, ಫೋನ್ ಮಾಡಿದಾಕ್ಷಣ ಚಿಲ್ಲರೆ ನಾಣ್ಯ ತಂದು ಕೊಡುತ್ತಾರೆ ಎನ್ನಲಾಗಿದೆ.
ಒಟ್ಟಾರೆಯಾಗಿ ಬೆಳಗಾವಿ ಜಿಲ್ಲೆಯಲ್ಲಿ ಜನ ಚಿಲ್ಲರೆ ನಾಣ್ಯವಿಲ್ಲದೇ ಪರದಾಡುತ್ತಿದ್ದರೇ ಇನ್ನೊಂದೆಡೆ ಇದು ಕೆಲವರಿಗೆ ದಿನವೊಂದಕ್ಕೆ ಸಾವಿರಾರೂ ರೂ. ಗಳಿಸಿಕೊಡುವ ಲಾಭದ ದಂಧೆಯಾಗಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಬಂಧಿಸಿದವರು ಚಿಲ್ಲರೆ ಅಭಾವವನ್ನು ನಿಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.
hi good
ReplyDelete