
ಡಿ.ವಿ. ಕಮ್ಮಾರ
ಬೆಳಗಾವಿ, ೨೮- ಉದ್ಯೋಗದಲ್ಲಿದ್ದು ವಿದ್ಯಾವಂತರಾಗಿ ಪದವೀಧರರಾಗಬೇಕು ಎನ್ನುವ ಮಹತ್ವಾಕಾಂಕ್ಷೆಯೊಂದಿಗೆ ಮುಕ್ತ ವಿಶ್ವವಿದ್ಯಾಲಯಗಳ ಮೊರೆ ಹೋಗಿದ್ದ ಬಹುತೇಕರು ಈಗ ಮಾಹಿತಿ ಕೊರತೆಯಿಂದಾಗಿ ಗೊಂದಲಕ್ಕಿಡಾಗಿದ್ದಾರೆ.
ರಾಜ್ಯದಲ್ಲಿ ಹಲವಾರು ಮುಕ್ತ ವಿಶ್ವವಿದ್ಯಾಲಯಗಳು ವಯಸ್ಸಿನ ನಿರ್ಬಂಧವಿಲ್ಲದೇ ಪದವಿ ನೀಡುತ್ತಿವೆ. ಅದರಲ್ಲಿ ಮೈಸೂರಿನ ಮಾನಸಗಂಗೋತ್ರಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರಮುಖ ಸ್ಥಾನ ಹೊಂದಿದೆ. ಆದರೆ ಈಗ ಈ ವಿವಿ ಅಡಿಯಲ್ಲಿ ಪದವಿಗೆ ಅರ್ಜಿ ಹಾಕಿದವರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ಪರೀಕ್ಷೆ ಹತ್ತಿರಕ್ಕೆ ಬಂದರೂ ಸಹ ವಿದ್ಯಾರ್ಥಿಗಳು ಗೊಂದಲದಿಂದ ಹೊರ ಬಂದಿಲ್ಲ.
ಈ ವಿಶ್ವವಿದ್ಯಾಲಯದಿಂದ ಪದವಿ ಪರೀಕ್ಷೆಗೆ ಅರ್ಜಿ ಹಾಕುವವರೂ ಬಹುತೇಕ ಉದ್ಯೋಗಿಗಳು. ಹೀಗಾಗಿ ಅವರಿಗೆ ಅಂಚೆ ಮೂಲಕ ಮಾಹಿತಿ ಕಳುಹಿಸಬೇಕು. ಆದರೆ ಈಗ ರಾಜ್ಯದಲ್ಲಿ ಬಹುತೇಕ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಯಾವುದೇ ಮಾಹಿತಿ ಬಂದಿಲ್ಲ. ಪ್ರವೇಶ ಅರ್ಜಿಗಳನ್ನು ತುಂಬಿಕೊಳ್ಳುವ ಸಂದರ್ಭದಲ್ಲಿ ಅಂಚೆ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಈ ಮೇಲೆ ವಿಳಾಸವನ್ನು ಸಹ ಪಡೆದುಕೊಳ್ಳಲಾಗುತ್ತದೆ. ಇಷ್ಟೆಲ್ಲಾ ಪಡೆದುಕೊಂಡರೂ ಯಾವುದಕ್ಕೂ ಮಾಹಿತಿ ಬಂದಿಲ್ಲ.
ಚಲನ್‌ಗಳೇ ಇಲ್ಲ:
ಈ ವರ್ಷದ ಬಿಎ ಹಾಗೂ ಬಿಕಾಂ ಪರೀಕ್ಷೆಗಳು ಎಪ್ರಿಲ್ ೨೧ ರಿಂದ ಪ್ರಾರಂಭಗೊಳ್ಳುತ್ತಿದ್ದು, ಈ ಬಗ್ಗೆ ಕೆಲವು ವಿದ್ಯಾರ್ಥಿಗಳಿಗೆ ಇನ್ನು ಮಾಹಿತಿ ಲಭಿಸಿಲ್ಲ. ಹಾಗೂ ಹೀಗೂ ಪರೀಕ್ಷೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಸೋಮವಾರ (ಮಾರ್ಚ್ ೨೮) ಪರೀಕ್ಷಾ ಶುಲ್ಕ ತುಂಬುವ ಕೊನೆಯ ದಿನಾಂಕ ಮುಗಿದು ಮಂಗಳವಾರದಿಂದ ೨೦೦ರೂ. ದಂಡ ಸಹಿತ ಪಾವತಿ ಮಾಡಬೇಕಾಗಿದ್ದರೂ ಪರೀಕ್ಷಾ ಶುಲ್ಕದ ಚಲನ್‌ಗಳು ಲಭ್ಯವಾಗುತ್ತಿಲ್ಲ.
ಕೆಲವೇ ಕೆಲವು ವಿದ್ಯಾರ್ಥಿಗಳಿಗೆ ಮಾತ್ರ ಅಂಚೆ ಮೂಲಕ ಚಲನ್‌ಗಳು ಬಂದಿವೆ. ಇನ್ನು ಬಹುತೇಕ ವಿದ್ಯಾರ್ಥಿಗಳಿಗೆ ಚಲನ್ ಕಳುಹಿಸಿಲ್ಲ. ಚಲನ್ ಸಿಗದ ವಿದ್ಯಾರ್ಥಿಗಳು ಅಧ್ಯಯನ ಕೇಂದ್ರಗಳ ಮೂಲಕ ಚಲನ್ ಪಡೆದುಕೊಳ್ಳಬೇಕು. ಆದರೆ ಅಧ್ಯಯನ ಕೇಂದ್ರಗಳಲ್ಲಿ ಚಲನ್‌ಗಳೇ ಇಲ್ಲ. ಒಂದೇ ಚಲನ್ ಪ್ರತಿಯನ್ನು ಬಹುತೇಕ ಅಧ್ಯಯನ ಕೇಂದ್ರಗಳಲ್ಲಿದ್ದು, ಅದನ್ನೇ ಬಿಇ, ಬಿಕಾಂ. ಎಂಎ ಹಾಗೂ ಇತರೆ ಕೋರ್ಸ್‌ಗಳ ವಿದ್ಯಾರ್ಥಿಗಳು ಝೆರಾಕ್ಸ್ ಮಾಡಿಕೊಂಡು ಶುಲ್ಕ ಪಾವತಿ ಮಾಡುತ್ತಿದ್ದಾರೆ.
ಕೊನೆಯ ದಿನದ ಅವಾಂತರ:
ಇದೇ ರೀತಿ ಬಿಇ/ಬಿಕಾಂ ಪರೀಕ್ಷಾ ಶುಲ್ಕ ತುಂಬುವುದಕ್ಕಾಗಿ ಮೈಸೂರು ವಿಶ್ವವಿದ್ಯಾಲಯ ಹೊರಡಿಸಿರುವ ಸುತ್ತೋಲೆಯೂ ಸಹ ಗೊಂದಲ ಸೃಷ್ಟಿಸಿದೆ. ಮೊದಲ ಸಲ ಜನೇವರಿ ೨೦ ರಂದು ಹೊರಡಿಸಲಾದ ಸುತ್ತೋಲೆಯಲ್ಲಿ (ಸಂ/ಕರಾಮುವಿ/ಪವಿ/ಯುಜಿ-೫/೨೦೧೦-೧೧) ಮಾರ್ಚ್ ೧೮ ಪರೀಕ್ಷಾ ಶುಲ್ಕಕ್ಕೆ ಕೊನೆಯ ದಿನ ಎಂದು ತಿಳಿಸಲಾಗಿದೆ. ಆದರೆ ಮತ್ತೆ ಮಾರ್ಚ್ ೧೮ ರಂದು ಪರಿಷ್ಕೃತ ಸುತ್ತೋಲೆ ಹೊರಡಿಸಲಾಗಿದ್ದು, ಅದರಲ್ಲಿ ಮಾರ್ಚ್ ೨೮ ಕೊನೆಯ ದಿನವಾಗಿದೆ.
ಪರಿಷ್ಕೃತ ಸುತ್ತೋಲೆ ಪ್ರಕಟಗೊಂಡ ಬಳಿಕ ಹಿಂದಿನ ಸುತ್ತೋಲೆಯನ್ನು ರದ್ಧು ಪಡಿಸಲಾಗಿಲ್ಲ. ದಿ. ೧೮ ಕ್ಕಿಂತ ಮುಂಚೆ ಅಂತರಜಾಲದಲ್ಲಿ ಸುತ್ತೋಲೆ ನೋಡಿದ ಬಹುತೇಕ ವಿದ್ಯಾರ್ಥಿಗಳು ೨೮ ಕೊನೆಯ ದಿನವಾಗಿದ್ದರೂ ೨೦೦ರೂ. ದಂಡ ಸಹಿತ ಶುಲ್ಕ ತುಂಬಿದ್ದಾರೆ. ಅದರೆ ಅದು ದಿ. ೨೮ ರ ಬಳಿಕ ಎಪ್ರಿಲ್ ೫ರ ವರೆಗೆ ದಂಡ ಅನ್ವಯವಾಗಬೇಕಿತ್ತು. ಈ ಸಂಬಂಧ ವಿವಿ ಯಾವ ವಿದ್ಯಾರ್ಥಿಗಳಿಗೂ ಅಂಚೆ ಹಾಗೂ ಇತರೆ ಮೂಲಕ ಮಾಹಿತಿ ನೀಡಿಲ್ಲ. ಅಧ್ಯಯನ ಕೇಂದ್ರಗಳಲ್ಲಿಯೂ ಈ ಬಗ್ಗೆ ತಿಳಿಸುತ್ತಿಲ್ಲ. ದಿ. ೧೮ ಕೊನೆಯೋ ಅಥವಾ ೨೮ ಎಂದು ಅಧ್ಯಯನ ಕೇಂದ್ರಗಳಲ್ಲಿ ಕೇಳಿದರೆ ಅಲ್ಲಿ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ. ಅಂತರಜಾಲದಲ್ಲಿಯೇ ನೋಡಿಕೊಳ್ಳಿ ಎಂಬ ಸಮಜಾಯಿಸಿ ಅಧ್ಯಯನ ಕೇಂದ್ರಗಳಲ್ಲಿ ನೀಡುತ್ತಿದ್ದಾರೆ.
ದಿ. ೧೮ ಕೊನೆಯ ದಿನ ಎಂದು ನಂಬಿ ಕೆಲವರು ದಿ. ೨೮ಕ್ಕಿಂತ ಮುಂಚೆಯೇ ೨೦೦ರೂ. ದಂಡ ಸಹಿತ ಬಿಎ ಹಾಗೂ ಬಿಕಾಂ ಪ್ರಥಮ ಮತ್ತು ದ್ವಿತೀಯ ವರ್ಷಕ್ಕೆ ೯೫೦, ತೃತೀಯ ವರ್ಷಕ್ಕೆ ೧೧೫೦ರೂ. ತುಂಬಿದ್ದಾರೆ. ಇದರಿಂದಾಗಿ ಹಲವಾರು ವಿದ್ಯಾರ್ಥಿಗಳಿಂದ ೨೦೦ರೂ. ಹೆಚ್ಚಿಗೆ ಶುಲ್ಕ ಪಾವತಿಯಾಗಿದ್ದು, ಅದು ಮರಳಿ ಬರುವುದಿಲ್ಲ.
ಒಟ್ಟಾರೆಯಾಗಿ ಮಾನಸ ಗಂಗೋತ್ರಿಯ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸುತ್ತೋಲೆ ಅವಾಂತರ ಹಾಗೂ ಚಲನ್‌ಗಳು ಸಿಗದೇಯಿರುವ ಕಾರಣ ವಿದ್ಯಾರ್ಥಿಗಳು ಪರದಾಡಬೇಕಾಗಿದ್ದು, ಇನ್ನಾದರೂ ಅಧ್ಯಯನ ಕೇಂದ್ರಗಳ ಮೂಲಕ ಸರಿಯಾದ ಮಾಹಿತಿ ಹಾಗೂ ಚಲನ್‌ಗಳು ಲಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.
No comments:
Post a Comment