
ಡಿ.ವಿ. ಕಮ್ಮಾರ
ಬೆಳಗಾವಿ, ೨೧- ವಿಶ್ವ ಕನ್ನಡ ಸಮ್ಮೇಳನದ ಯಶಸ್ವಿಯ ಹೆಮ್ಮೆಯೊಂದಿಗೆ ಬೆಳಗಾವಿಯಷ್ಟೇ ಅಲ್ಲದೇ ಈಡೀ ಕರ್ನಾಟಕವೇ ಬೀಗುತ್ತಿದ್ದರೇ ಮತ್ತೊಂದೆಡೆ ಫೇಸಬುಕ್ ಜಾಲತಾಣದಲ್ಲಿ ಕನ್ನಡ ವಿರೋಧಿ ಕೃತ್ಯವೊಂದು ಆರಂಭಗೊಂಡಿದೆ.
`ಬೆಳಗಾವಿ ಮಹಾರಾಷ್ಟ್ರದ್ದೇ' ಎಂಬರ್ಥವನ್ನು ನೀಡುವಂತೆ `ಬೆಳಗಾಮ್ ಬಿಲಾಂಗ್ಸ್ ಟು ಮಹಾರಾಷ್ಟ್ರ' ಎಂಬ ಫೇಸಬುಕ್ ಕಮ್ಯೂನಿಟಿಯೊಂದು ಆರಂಭಗೊಂಡಿದೆ. ಬೆಳಗಾವಿಯಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ತಪ್ಪು ಪ್ರಚಾರದೊಂದಿಗೆ ಫೇಸ್‌ಬುಕ್ ಮೂಲಕ ಬೆಳಗಾವಿಯಲ್ಲಿ ಮರಾಠಿಗರದ್ದೇ ಪ್ರಾಬಲ್ಯವಿದೆ. ಆದರೆ ಇಲ್ಲಿ ರಾಜ್ಯ ಮಾಡುತ್ತಿರುವ ಕರ್ನಾಟಕ ಸರ್ಕಾರ ಅಮಾನವೀಯ ರೀತಿಯಲ್ಲಿ ಶಿಕ್ಷೆ ನೀಡುತ್ತಿದೆ ಎಂದು ತಿಳಿಸಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಚಿತ್ರಗಳನ್ನು, ಮರಾಠಿ ಪತ್ರಿಕೆಗಳಲ್ಲಿನ ಲೇಖನಗಳ ಪ್ರತಿ ಹಾಗೂ ಕೆಲವೊಂದು ವಿಡಿಯೋ ತುಣಕುಗಳ ಮೂಲಕ ಮರಾಠಿಗರನ್ನು ಪ್ರಚೋದಿಸುವ ಕಾರ್ಯ ಇದರಲ್ಲಿ ನಡೆಯುತ್ತಿದೆ.
ಬೆಳಗಾವಿ ಮಹಾರಾಷ್ಟ್ರದ್ದೇ ಎಂದು ದೊಡ್ಡದಾಗಿ ಇಲ್ಲಿ ಜಂಭ ಕೊಚ್ಚಿಕೊಳ್ಳಲಾಗಿದೆ. ಸರ್ವೋಚ್ಛ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ಕರ್ನಾಟಕ ಪರವಾಗಿ ಅಫಿಡವಿಡ್ ಸಲ್ಲಿಸಿರುವುದನ್ನು ವಿರೋಧಿಸಿ ಎಂಇಎಸ್, ಶಿವಸೇನೆ ಹಾಗೂ ಇತರೆ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಯ ಎದುರಿನ ಕನ್ನಡ ಧ್ವಜ ತೆಗೆಯಲು ಮುಂದಾದಾಗ ಲಾಠಿ ಪ್ರಹಾರ ಮಾಡಲಾಗಿತ್ತು. ಇದೇ ವಿಡಿಯೋ ಚಿತ್ರಣವನ್ನು ತೆಗೆದುಕೊಂಡು ಒಟ್ಟು ೩.೦೯ ನಿಮಿಷದಲ್ಲಿ ಸಂಕಲನ ಮಾಡಿ ಇದಕ್ಕೆ ಹಿನ್ನೆಲೆ ಧ್ವನಿ ಸೇರಿಸಲಾಗಿದೆ. `ನೋಡಿ ಕರ್ನಾಟಕದ ಪೊಲೀಸರು ಯಾವ ರೀತಿಯ ಅಮಾನವೀಯ ದೌರ್ಜನ್ಯ ಮಾಡುತ್ತಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಕೇಸರಿ ಧ್ವಜ ಹಾರಿಸುವುದನ್ನೇ ವಿರೋಧಿಸಿ ಮರಾಠಿಗರ ತಲೆ ಒಡೆಯುವಂತೆ ಲಾಠಿ ಬೀಸಿದ್ದಾರೆ' ಎಂದು ಹೇಳಲಾಗಿದೆ. ಆದರೆ ಇದರಲ್ಲಿ ಕನ್ನಡ ಧ್ವಜ ತೆಗೆದ ದೃಶ್ಯವಿಲ್ಲ. ಬದಲಿಗೆ ಕೇಸರಿ ಧ್ವಜ ಹಾಕುವ ದೃಶ್ಯ ಮಾತ್ರವಿದೆ.
ಕಪ್ಪು ಮಸಿ ಬಳೆಯಿರಿ:
ಈ ಕಮ್ಯೂನಿಟಿಯನ್ನು ಸುಮಾರು ೨೫೦ ಜನ ಇಷ್ಟಪಟ್ಟು ಇದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಪ್ರತಿಯೊಬ್ಬರು ಬೆಳಗಾವಿಯವರೇ ಹೊರತು ಮಹಾರಾಷ್ಟ್ರದಲ್ಲಿನ ಯಾರೂ ಇದಕ್ಕೆ ಸ್ಪಂದಿಸಿಲ್ಲ. ಅದರಲ್ಲಿಯೂ ಹೋಳಿ ಹುಣ್ಣಿಮೆಗಿಂತ ಮೊದಲು ಕೆಲವರು ತಮ್ಮ ಅಭಿಪ್ರಾಯದಲ್ಲಿ `ಈಗ ಹೋಳಿ ಹುಣ್ಣಿಮೆ ಮರಾಠಿಗರಿಗೆ ಒಳ್ಳೆಯ ಅವಕಾಶ ಒದಗಿಸಿದೆ. ಎಲ್ಲರೂ ಕಪ್ಪು ಮಸಿಯನ್ನೇ ತೆಗೆದುಕೊಳ್ಳಿ ಕನ್ನಡಿಗರ ಮುಖಕ್ಕೆ ಹೋಳಿಯನ್ನು ನೆಪವಾಗಿಟ್ಟುಕೊಂಡು ಮಸಿ ಬಳೆಯಿರಿ. ಅಲ್ಲದೇ ನಿಮ್ಮ ಅಕ್ಕ ಪಕ್ಕ ಕಾಣುವ ಕನ್ನಡ ಫಲಕಗಳಿಗೂ ಕಪ್ಪು ಮಸಿ ಬಳೆಯಿರಿ' ಎಂದು ಹೇಳಲಾಗಿದೆ. ಇದಕ್ಕೆ ಕೆಲವರು ತಾವು ಅದೇ ರೀತಿ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಮರಾಠಿ ಸಮ್ಮೇಳನವಾಗಲಿ:
ವಿಶ್ವ ಕನ್ನಡ ಸಮ್ಮೇಳನ ಅದೇನೋ ದೊಡ್ಡದಲ್ಲ. ಮರಾಠಿಗರ ಸಮ್ಮೇಳನ ನಡೆದರೇ ಈಡೀ ಬೆಳಗಾವಿಯಲ್ಲಿ ಕಾಲಿಡುವುದಕ್ಕೂ ಜಾಗವಿರುವುದಿಲ್ಲ. ಅದಕ್ಕಾಗಿ ಬೆಳಗಾವಿಯಲ್ಲಿ ಅಖಿಲ ಭಾರತ ಮರಾಠಿ ಸಮ್ಮೇಳನ ನಡೆಯಲೇ ಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದೆಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ನಾಮಕರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಕಳಿಸುವ ಬಗ್ಗೆ ತಿಳಿಸಿರುವುದನ್ನು ತೀವ್ರವಾಗಿ ಖಂಡಿಸಲಾಗಿದೆ.
ಒಟ್ಟಾರೆಯಾಗಿ ಈ ಫೇಸಬುಕ್ ಕಮ್ಯೂನಿಟಿಯ ಮುಖ್ಯ ಉದ್ದೇಶ ಕನ್ನಡಿಗರ ವಿರುದ್ಧ ಮರಾಠಿಗರನ್ನು ಪ್ರಚೋದಿಸುವುದು ಹಾಗೂ ಹೊರಗಡೆಯವರಿಗೆ ಬೆಳಗಾವಿಯಲ್ಲಿ ಮರಾಠಿಗರ ಮೇಲೆ ದೊಡ್ಡ ದೌರ್ಜನ್ಯವಾಗುತ್ತಿದೆ ಎಂಬ ತಪ್ಪು ಮಾಹಿತಿ ನೀಡುವುದೇ ಆಗಿದೆ. ಹೀಗಾಗಿ ಇದರ ವಿರುದ್ಧ ಈಗಾಗಲೇ ಫೇಸ್‌ಬುಕ್‌ನಲ್ಲಿಯೇ ಕನ್ನಡದ ಯುವಕರು ಸಮರ ಆರಂಭಿಸಿದ್ದಾರೆ. ಹೀಗಾಗಿ ಇದನ್ನು ಬ್ಲಾಕ್ ಮಾಡಬೇಕಾದ ಅಗತ್ಯವಿದೆ.
No comments:
Post a Comment