Tuesday, March 29, 2011

ಬೆಳಗಾವಿ ಮೇಸ್‌ಗಳಲ್ಲೀಗ ಗುಂಡಿನ ಗಮ್ಮತ್ತು


ಡಿ.ವಿ. ಕಮ್ಮಾರ
ಬೆಳಗಾವಿಯಲ್ಲಿ ಈಗ ಮದ್ಯ ಕುಡಿಯಬೇಕಾದರೆ ಬಾರ್‌ಗಳಿಗೆ ಹೋಗಬೇಕಾಗಿಲ್ಲ. ಸಣ್ಣದೊಂದು ಮೆಸ್‌ಗೆ ಹೋದರೂ ಸಾಕು ಅಲ್ಲಿ ಆರಾಮಾಗಿ ಕುಳಿತು ಪೆಗ್ ಏರಿಸಬಹುದು.
ಹೌದು ಬೆಳಗಾವಿಯಲ್ಲಿ ಸಣ್ಣಪುಟ್ಟ ಮೆಸ್ ಹಾಗೂ ಊಟದ ಹೊಟೇಲ್‌ಗಳು ಬಾರ್‌ಗಳಾಗಿ ಪರಿವರ್ತನೆ ಹೊಂದಿವೆ. ನಗರದ ಪ್ರಮುಖ ಪ್ರದೇಶಗಳಲ್ಲಿರುವ ಹಲವಾರು ಮಾಂಸಾಹಾರಿ ಮೆಸ್ ಹಾಗೂ ಮಾಂಸಾಹಾರಿ ಊಟದ ಖಾನಾವಳಿಗಳಲ್ಲಿ ರಾಜಾರೋಷವಾಗಿ ಪಾನಗೋಷ್ಠಿಗಳು ನಡೆಯುತ್ತಿದ್ದು, ಇದನ್ನು ತಡೆಯಬೇಕಾದ ಪೊಲೀಸರೇ ಇಲ್ಲಿ ಬಂದು ಗುಂಡು ಹಾಕುತ್ತಿದ್ದಾರೆ.
ಬೆಳಗಾವಿಯಲ್ಲಿ ಮೊದಲು ಹೀಗೆಲ್ಲಾ ಇರಲಿಲ್ಲ. ಆದರೆ ಈ ರೀತಿಯ ಒಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ಅಪಕೀರ್ತಿ ಪೊಲೀಸರಿಗೆ ಸಲ್ಲಬೇಕು. ಕಾರಣ ರಾತ್ರಿ ಗಸ್ತು ತಿರುಗುವ ಕೆಲವು ಪೊಲೀಸರೇ ಇಂತಹ ಹೊಟೇಲ್‌ಗಳನ್ನು ಬಾರ್‌ಗಳನ್ನಾಗಿ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇಲ್ಲಿನ ಕಿರ್ಲೋಸ್ಕರ ರಸ್ತೆಯಲ್ಲಿ ಕಾರವಾರ ಮೂಲದ ಒಂದು ಮೀನಿನ ಊಟದ ಹೊಟೇಲ್ ಆರಂಭವಾದಾಗ ಬೆಳಗಾವಿಗೆ ಕಾರವಾರ ಪ್ರದೇಶದಿಂದ ಬಂದು ನೆಲೆಸಿದ ಜನರಷ್ಟೇ ಅಲ್ಲದೇ ಬೆಳಗಾವಿ ಜನರೂ ಸಹ ಮೀನಿನ ಊಟ ಸವಿಯುವುದಕ್ಕೆ ಆಗಮಿಸುತ್ತಿದ್ದರು. ಆದರೆ ಇದು ಯಾವಾಗ ರಾತ್ರಿ ಗಸ್ತು ತಿರುಗುವ ಪೊಲೀಸರ ಕಣ್ಣಿಗೆ ಬಿತ್ತೋ ಆವಾಗಿನಿಂದ ಈ ಹೊಟೇಲ್ ಸ್ವರೂಪವೇ ಬದಲಾಗಿ ಹೋಯಿತು.
ರಾತ್ರಿ ಗಸ್ತು ತಿರುಗುವ ಪೊಲೀಸರು ಇಲ್ಲಿಗೆ ಬಾಟಲಿಗಳನ್ನು ತೆಗೆದುಕೊಂಡು ಬಂದು ಗುಂಡು ಏರಿಸುವುದಕ್ಕೆ ಆರಂಭಿಸಿದ ಬಳಿಕ ಇಲ್ಲಿ ಕುಟುಂಬ ಸಮೇತ ಊಟ ಮಾಡುವವರೂ ದೂರವೇ ಉಳಿಯಬೇಕಾಯಿತು. ಬದಲಿಗೆ ಇದು ಕುಡುಕರ ಪಾಲಾಯಿತು. ಹೊಟೇಲ್‌ದವರು ಇದನ್ನು ವಿರೋಧಿಸುವಂತೆಯೂ ಇಲ್ಲ. ಕಾರಣ ಅಲ್ಲಿ ಪೊಲೀಸರು ಕುಡಿಯುವುದಕ್ಕೆ ಬರುತ್ತಾರೆ. ಹೀಗಾಗಿ ಅವರು ಸುಮ್ಮನಾಗಿ ಬಿಟ್ಟರು. ಪರಿಣಾಮವಾಗಿ ಇಂದು ಈ ಬೃಹತ್ ಹೊಟೇಲ್‌ನಲ್ಲಿ ರಾತ್ರಿ ೧೨ರ ವರೆಗೂ ಗುಂಡಿನ ಗಮ್ಮತ್ತು ನಡೆಯುತ್ತಿರುತ್ತದೆ.
ಇನ್ನು ಇದರ ಆಸುಪಾಸಿನಲ್ಲಿಯೇ ಕೊಲ್ಲಾಪುರಿ ಸ್ವಾದಿಷ್ಟವನ್ನು ಹೊಂದಿದ ಮಾಂಸಾಹಾರಿ ಹೊಟೇಲ್‌ವೊಂದು ಇದೆ. ಇಲ್ಲಿಯೂ ಸಹ ಸಾಕಷ್ಟು ಜನ ಕುಡಿಯುವುದಕ್ಕೆ ಬರುತ್ತಾರೆ. ಇದರೊಂದಿಗೆ ಪಾಟೀಲಗಲ್ಲಿಯಿಂದ ಮುಖ್ಯ ಅಂಚೆ ಕಚೇರಿವರೆಗಿನ ರೆಲ್ವೆ ನಿಲ್ದಾಣ ರಸ್ತೆಯಲ್ಲಿರುವ ಮಾಂಸಹಾರಿ ಹೊಟೇಲ್‌ಗಳ ಪೈಕಿ ಬಹುತೇಕ ಕಡೆ ರಾಜಾರೋಷವಾಗಿ ಮದ್ಯ ಸಿಗುತ್ತದೆ. ಅಲ್ಲಿಯೇ ಕುಳಿತು ಗುಂಡು ಹಾಕಿ ಊಟ ಮಾಡಿ ಹೋಗುತ್ತಾರೆ.
ಬಾಪಟಗಲ್ಲಿಯ ಪೂರ್ವಭಾಗದ ಮೂಲೆಯಲ್ಲಿ ಇತ್ತೀಚೆಗಷ್ಟೇ ಆರಂಭಗೊಂಡಿರುವ ಬಿರ್ಯಾನಿ ಹೊಟೇಲ್ ತುಂಬಾ ಖ್ಯಾತಿ ಪಡೆದುಕೊಂಡಿತ್ತು. ಇದು ಎಗ್ಗ ಬಿರ್ಯಾನಿ ಹಾಗೂ ಮಟನ್ ಬಿರ್ಯಾನಿಗೆ ಫೇಮಸ್ಸ್. ಹೀಗಾಗಿ ಇಲ್ಲಿ ಸಾಕಷ್ಟು ಜನ ಊಟಕ್ಕೆ ಬರುತ್ತಾರೆ. ಹೊಸದರಲ್ಲಿ ಈ ಹೊಟೇಲ್ ಸಹ ಚೆನ್ನಾಗಿಯೇ ಇತ್ತು. ಆದರೆ ಇಲ್ಲಿ ಅದೇ ಪ್ರದೇಶದ ಕೆಲವು ವ್ಯಕ್ತಿಗಳು ಹಾಗೂ ಮಪ್ತಿಯಲ್ಲಿರುವ ಪೊಲೀಸರು ಇದನ್ನು ಬಾರ್‌ನ್ನಾಗಿ ಪರಿವರ್ತಿಸಿದ್ದಾರೆ.
ಈ ರೀತಿಯ ಹೊಟೇಲ್ ಕಮ್ ಬಾರ್‌ಗಳಿರುವುದು ಖಡೇಬಜಾರ್ ಹಾಗೂ ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೇ ಹೆಚ್ಚು. ಖಡೇಬಜಾರ್‌ನಲ್ಲಿಯೂ ಸಹ ಸಾಕಷ್ಟು ಹೊಟೇಲ್‌ಗಳಲ್ಲಿ ಮಧ್ಯರಾತ್ರಿಯವರೆಗೂ ಕುಳಿತು ಕುಡಿಯಬಹುದು. ಇನ್ನು ಒಂದು ಸಂಗತಿಯೆಂದರೆ ರಾತ್ರಿ ಪಾಳೆಯದಲ್ಲಿ ಸಮವಸ್ತ್ರದಲ್ಲಿಯೇ ಚಿತ್ರಮಂದಿರಗಳಿಗೆ ಹೋಗಿ ಚಲನಚಿತ್ರ ನೋಡುತ್ತಾ ಕುಳಿತುಕೊಳ್ಳುವಂತೆ ಪೊಲೀಸರು ಬಾರ್‌ಗಳಿಗೂ ಸಹ ಸಮವಸ್ತ್ರದಲ್ಲಿಯೇ ಬರುವ ರೂಢಿಯಿದೆ. ಕೊಲ್ಲಾಪುರ ವೃತ್ತದ ಬಳಿ ಮೇಲ್ಮಹಡಿಯಲ್ಲಿರುವ ಬಾರ್ ಹಾಗೂ ಕಿರ್ಲೋಸ್ಕರ ರಸ್ತೆಯಲ್ಲಿ ಕೆಳಮಹಡಿಯನ್ನು ಹೊಂದಿರುವ ಎರಡು ಮಹಡಿಗಳ ಬಾರ್‌ನಲ್ಲಿ ಇದನ್ನು ರಾತ್ರಿ ೧೧ರ ನಂತರ ಕಾಣಬಹುದಂತೆ.
ನಿಯಮಗಳ ಪ್ರಕಾರ ಮಾಂಸಾಹಾರಿ ಹೊಟೇಲ್‌ಗಳಲ್ಲಿ ಗುಂಡು ಏರಿಸುವಂತಿಲ್ಲ. ಅದೇನಿದ್ದರೂ ಬಾರ್‌ಗಳಲ್ಲಿಯೇ ನಡೆಯಬೇಕು. ಆದರೆ ಇಲ್ಲಿ ಯಾವುದೇ ಕಾನೂನು ಇಲ್ಲದಂತಾಗಿದೆ. ಇದರಿಂದಾಗಿ ಉತ್ತಮ ಊಟ ನೀಡುವ ಮಾಂಸಾಹಾರಿ ಹೊಟೇಲ್‌ಗಳಿಗೆ ಊಟಕ್ಕೆ ಬರುತ್ತಿದ್ದ ಕುಟುಂಬಸ್ಥರು ಈಗ ದೂರವೇ ಉಳಿಯಬೇಕಾಗಿದೆ. ಏಕೆಂದರೆ ಇಷ್ಟು ದಿನ ಇಂತಹ ಹೊಟೇಲ್‌ಗಳಲ್ಲಿ ಹೊರಗಿನಿಂದ ಮದ್ಯ ತಂದು ಕುಡಿಯಲಾಗುತ್ತಿತ್ತು. ಆದರೆ ಈಗ ಅಲ್ಲಿಯೇ ಸಿಗುತ್ತಿದೆ. ಕೆಲವೊಂದು ಕಡೆ ಹೊರಗಿನಿಂದ ಬಾಟಲಿ ತೆಗೆದುಕೊಂಡು ಬರುವುದಕ್ಕಾಗಿಯೇ ಪ್ರತ್ಯೇಕ ಹುಡುಗರನ್ನು ಇಟ್ಟಿದ್ದಾರಂತೆ. ಇನ್ನು ಮದ್ಯಕ್ಕೆ ಬೆರೆಸುವ ಸೋಡಾ ಹಾಗೂ ಬಿಯರ್ ಎಲ್ಲ ಮಾಂಸಾಹಾರಿ ಹೊಟೇಲ್‌ಗಳಲ್ಲಿ ಮಾಮೂಲಾಗಿ ಸಿಗುತ್ತಿದೆ.
ಒಟ್ಟಾರೆಯಾಗಿ ಬೆಳಗಾವಿಯಲ್ಲಿ ಯಾರೂ ಕೇಳುವವರೇ ಇಲ್ಲ ಎಂದುಕೊಂಡು ಮಾಂಸಾಹಾರಿ ಹೊಟೇಲ್‌ಗಳಲ್ಲಿ ಜೋರಾಗಿ ಗುಂಡಿನ ಗಮ್ಮತ್ತು ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ.

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...