Saturday, February 26, 2011

ಚರಣರಾಜ್ ಮಾವ ಮರಳಿ ಬಂದ




ಅಂದೊಂದು ಕಾಲದಲ್ಲಿ ಟಿವಿಯಲ್ಲಿ ಆತನ ಚಲನಚಿತ್ರ ಬರ್ತಾ ಇದ್ದರೇ. ಹೆಮ್ಮೆಯಿಂದ ನೋಡುತ್ತಿದ್ದೇವು. ಆತ ಖಳನಾಯಕನ ಪಾತ್ರ ಮಾಡಿದಾಗ ಹಿರೋ ಆತನನ್ನು ಹೊಡೆಯುತ್ತಿದ್ದರೇ ಸ್ನೇಹಿತರೆಲ್ಲಾ ನನ್ನನ್ನು `ನೋಡಲೇ ಅಲ್ಲಿ ನಿಮ್ಮ ಮಾವನ್ ಹೆಂಗ ಹೊಡ್ಯಾತಾರು. ಪಾಪ ನೀ ಹೋಗಿ ಬಿಡಿಸಿಕೊಳ್ಳಲೇ' ಎಂದು ಛೇಡಿಸುತ್ತಿದ್ದರು. ಆದರೂ ನಮಗೆ ಬೇಸರ ಆಗಿರಲಿಲ್ಲ. ಆದ್ರೆ ಆ ಮಾವ್ ಯಾವಾಗ ಕನ್ನಡ ಚಿತ್ರರಂಗದಿಂದ ಮರೆಯಾಗಿ ಬಿಟ್ಟನೋ ಅದೇ ರೀತಿ ನಮ್ಮ ಕುಟುಂಬ ಸದಸ್ಯರಿಂದಲೂ ಮರೆಯಾಗಿಬಿಟ್ಟಿದ್ದ.
ಆತ ಬೇರೆ ಯಾರೂ ಅಲ್ಲ ಒಂದು ಕಾಲದಲ್ಲಿ ಮುಗಿಲ ಮಲ್ಲಿಗೆಯೋ ಕಾಡಿನ ಮೂಲಕ ಖ್ಯಾತನಾಮ ನಟರ ಸಾಲಿಗೆ ಸೇರಿ ಇಂದು ತಮಿಳು ಚಿತ್ರರಂಗದಲ್ಲಿ ಮಿಂಚಿ ಮತ್ತೆ ಮರಳಿ ಕನ್ನಡ ಚಿತ್ರರಂಗಕ್ಕೆ ಮರುಪ್ರವೇಶ ಮಾಡಿರುವ ನಟ ಚರಣರಾಜ್.
ನಮ್ಮ ಕುಟುಂಬಕ್ಕೆ ಆತ ತುಂಬಾ ಹತ್ತಿರದ ಸಂಬಂಧಿ ಅವರ ತಾಯಿ ಹಾಗೂ ನಮ್ಮ ಅವ್ವನ ಅವ್ವ ಇಬ್ಬರೂ ಅಕ್ಕತಂಗಿಯರು. ಅಂದರೆ ಆತ ನಮ್ಮ ಅಜ್ಜಿಯ ತಂಗಿಯ ಮಗ. ಹೀಗಾಗಿ ತನ್ನ ದೊಡ್ಡಮ್ಮನ ಮಕ್ಕಳಾದ ನಮ್ಮ ಅವ್ವ ಹಾಗೂ ನಮ್ಮ ಸೋದರ ಮಾವಂದಿರೊಂದಿಗೆ ಆತ ಕೂಡಿ ಬೆಳೆದಿದ್ದ.
ಇತ್ತೀಚೆಗೆ ಆತನ ತಂದೆ-ತಾಯಿ ಹಾಗೂ ಇಬ್ಬರೂ ಸೋದರರೂ ಸಹ ಇಹಲೋಕ ತ್ಯಜಿಸಿದರು. ಆಗಿನಿಂದ ಆತ ಬೆಳಗಾವಿಯನ್ನು ಮರತೇ ಬಿಟ್ಟಿದ್ದ. ಆದರೆ ಕನ್ನಡ ಹಾಗೂ ತಮ್ಮವರು ಎನ್ನುವುದು ಆತನನ್ನು ಮತ್ತೆ ಈ ಕಡೆ ಕರೆದಿದೆ. ಹೌದು ಈಗ ಕನ್ನಡದಲ್ಲಿ ಒಂದೇರಡು ಚಿತ್ರಗಳಲ್ಲಿ ಪಾತ್ರ ಮಾಡುತ್ತಿರುವ ಚರಣರಾಜ್ ಮಾವ್ ಮೊನ್ನೆ ನಾವು ಕಟ್ಟಿಸಿರುವ ಹೊಸ ಮನೆಯ ಗೃಹ ಪ್ರವೇಶಕ್ಕೆ ಬಂದಾಗ ಸೌಜನ್ಯದಿಂದ ಎಲ್ಲರೊಂದಿಗೆ ಸುಮಾರು ೨ ಗಂಟೆಗಳ ಕಾಲ ಕಳೆದು ಹೋಗಿದ್ದಾನೆ.
ಹಾಗೇ ನೋಡಿದರೆ ಆತ ಆಗಲೇ ಬರಬೇಕಿತ್ತು. ಕಾರಣ ಆತನ ಪ್ರೀತಿಯ ದೊಡ್ಡಮ್ಮ ಹಾಗೂ ನಮ್ಮ ಅಜ್ಜಿ ಕಳೆದ ಮೂರು ತಿಂಗಳ ಹಿಂದೆ ತೀರಿಕೊಂಡಿದ್ದರು. ಆದರೆ ಬ್ಯುಜಿ ಶೆಡ್ಯೂಲ್‌ನಿಂದಾಗಿ ಆತ ಬರಲು ಆಗಲೇ ಇಲ್ಲ. ಈಗ ಬಂದಿದ್ದಾನೆ. ನಮ್ಮ ಸೋದರ ಮಾವ ಹೊಸದಾಗಿ ಗಣೇಶಪುರದಲ್ಲಿ ಕಟ್ಟಿಸಿರುವ ಮನೆಗೆ ಬಂದಿದ್ದ ಚರಣರಾಜ್ ಮಾವ ತನ್ನ ದೊಡ್ಡಮ್ಮನನ್ನು ನೆನೆದೂ ಕಣ್ಣೀರು ಹಾಕಿದ.

ಅದರಲ್ಲಿಯೂ ನನ್ನೊಂದಿಗೂ ಸಹ ಚೆನ್ನಾಗಿಯೇ ಕಳೆದ. ನನ್ನ ತಾಯಿ ಆತನ ಪ್ರೀತಿಯ ಅಕ್ಕಂದಿರಲ್ಲೊಬ್ಬಳು. ಹೀಗಾಗಿ ನನ್ನನ್ನು ಪ್ರೀತಿಯಿಂದ ಮಾತನಾಡಿಸಿದ ಮಾವ ಬೇಡ ಬೇಡ ಅಂದ್ರೂ ನಾನು ರಿಪೋರ್ಟರ್ ಅನ್ನೊಂದನ್ನು ತಿಳಿದುಕೊಂಡು ಬಹುವಚನದಿಂಲೇ ಮಾತನಾಡಿಸಿದ.
ಆತ ಚಲನಚಿತ್ರಗಳಲ್ಲಿ ಮಾಡುವುದು ನೆಗಟಿವ್ ರೋಲ್. ನೋಡುವುದಕ್ಕೂ ವಿಲನ್ ತರಹವೇ ಕಾಣುತ್ತಾನೆ. ಆದರೆ ನಮ್ಮ ಮಾವ ಮಾತ್ರ ಅಂತವನಲ್ಲ. ತುಂಬಾ ಸೌಜನ್ಯದಿಂದ ಇರುವ ಮನುಷ್ಯ ಅದರಲ್ಲಿಯೂ ಚಿಕ್ಕಮಕ್ಕಳೆಂದರೆ ಆತನಿಗೆ ತುಂಬಾ ಮುದ್ದು.
ಏನೇ ಆಗಲಿ ನಮ್ಮ ಮಾವ ಮತ್ತೆ ಮರಳಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾನೆ. ಅದಕ್ಕಿಂತಲೂ ಹೆಚ್ಚಾಗಿ ಮತ್ತೆ ತನ್ನ ಎಲ್ಲ ಕುಟುಂಬ ಸದಸ್ಯರನ್ನು ಹಾಗೂ ಸಂಬಂಧಿಕರನ್ನು ಭೇಟಿಯಾಗುವ ಮೂಲಕ ಸಂಬಂಧದ ಕೊಂಡಿಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದು, ಸದ್ಯ ಚೆನ್ನೈನಲ್ಲಿ ನೆಲೆ ನಿಂತಿರುವ ಮಾವ ವಿಶ್ವ ಕನ್ನಡ ಸಮ್ಮೇಳನ ಮುಗಿಯುವವರೆಗೂ ಇಲ್ಲಿಯೇ ಇರ್ತಾನೆ.

ಚರಣರಾಜ್ ಬೆಳಗಾವಿದವರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆತನನ್ನು ಮರೆತು ಬಿಟ್ಟಿದೆ. ಒಂದೇರಡು ಚಿತ್ರಗಳಲ್ಲಿ ನಟಿಸಿ ಈಗ ಮನೆ ಸೇರಿರುವ ಖಾಲಿ ಜನರನ್ನು ವಿಶ್ವ ಕನ್ನಡ ಸಮ್ಮೇಳನದ ಸಮಿತಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಆದ್ರೆ ಚರಣರಾಜ್ ಹೆಸರು ಮಾತ್ರ ಎಲ್ಲಿಯೂ ಇಲ್ಲ. ಆದರೆ ಗಡಿನಾಡ ಕನ್ನಡಿಗರ ಹೃದಯದಲ್ಲಿ ಆತನ ಹೆಸರಿದೆ. ನಮ್ಮ ಪ್ರೀತಿಯ ಮಾವನೆಂಬ ಹೆಮ್ಮೆ ನಮಗಿದೆ. ಅಷ್ಟೇ ಸಾಕು ತಾನೇ.

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...