ಪೊಲೀಸ ದಾಖಲೆಗಳ ಪ್ರಕಾರ ಈತ ಪಕ್ಕಾ ೪೨೦. ಆದರೆ ನ್ಯಾಯಾಲಯದ ಮೆಟ್ಟಿಲು ಹತ್ತಿದರೇ ಪೊಲೀಸರನ್ನೇ ತಪ್ಪಿನಲ್ಲಿ ಸಿಲುಕಿಸಿಬಲ್ಲ ನುರಿತ ವಕೀಲ. ಅಲ್ಲದೇ ಕೈದಿಗಳ ಪಾಲಿಗೆ ಅವರ ಮನಪರಿವರ್ತನೆ ಮಾಡುವ ಪ್ರೀತಿಯ ಕವಿಹೃದಯದ ಅಣ್ಣ.
ಆತನ ಮೇಲೆ ಭರ್ತಿ ಕರ್ನಾಟಕದಲ್ಲಿ ೫೪ ಹಾಗೂ ಮಹಾರಾಷ್ಟ್ರದಲ್ಲಿ ೩೦ ಪ್ರಕರಣಗಳಿದ್ದವು. ಆ ಎಲ್ಲ ಪ್ರಕಗಳಿಂದ ನಿರ್ದೋಷಿಯಾಗಿರುವ ಆತ ನಿಜಕ್ಕೂ ಮತ್ತೊಬ್ಬ ಚಾರ್ಲ್ಸ್ ಶೋಭರಾಜನೇ ಹೌದು. ಆದರೆ ಆ ಶೋಭರಾಜನಂತೆ ಭಿಕನಿ ಕಿಲ್ಲರ ಮಾತ್ರ ಈತ ಅಲ್ಲ. ಬದಲಿಗೆ ನಕಲಿ ವೈದ್ಯನೆಂಬ ಆರೋಪ ಎದುರಿಸುವ ವ್ಯಕ್ತಿ.
ಹೌದು ಒಂದು ಕಾಲದಲ್ಲಿ ಪೊಲೀಸ್ ದಾಖಲೆಗಳ ಪ್ರಕಾರ ನಕಲಿ ವೈದ್ಯ ಎಂದು ಗುರುತಿಸಲಾಗಿರುವ ಹಾಗೂ ಈಗ ಸಮಾಜ ಸೇವೆಯ ಜಪ ಮಾಡುತ್ತಿರುವ ವ್ಯಕ್ತಿಯ ಹೆಸರು ಮನೋಜ ಪವಾರ ಎಂದು. ಇವರ ಮೂಲ ಊರು ಹುಕ್ಕೇರಿ ತಾಲೂಕಿನ ಪಾಶ್ಚಾಪುರ. ಈಗ ನೆಲೆ ನಿಂತಿರುವುದು ಬೆಳಗಾವಿಯಲ್ಲಿ.
ಕೊನೆಯದಾಗಿ ೧೫ ತಿಂಗಳು ಬೆಳಗಾವಿಯ ಕೇಂದ್ರ ಕಾರಾಗೃಹದಲ್ಲಿ ವಿಚಾರಾಧೀನ ಕೈದಿಯಾಗಿದ್ದ ಇವರ ಮೇಲೆ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಒಂದು ಹಾಗೂ ಉದ್ಯಮಬಾಗ ಮತ್ತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ತಲಾ ಎರಡು ಪ್ರಕರಣಗಳನ್ನು ಎದುರಿಸುತ್ತಿದ್ದರು. ಕೊನೆಯ ಒಟ್ಟು ಐದು ಪ್ರಕರಣಗಳಲ್ಲಿಯೂ ಸಹ ದೋಷಮುಕ್ತರಾಗಿ ಹೊರಗೆ ಬಂದಿರುವ ಇವರು ಈಗ ಮನಪರಿವರ್ತನೆಗೊಂಡಿರುವ ಕೈದಿಗಳ ಬಿಡುಗಡೆ ಆಗ್ರಹಿಸಿ ಹೋರಾಟಕ್ಕೆ ಮುಂದಾಗುವ ಮೂಲಕ ಕೈದಿಗಳ ಸೇವೆಯೊಂದಿಗೆ ಸಮಾಜ ಸೇವಕನಾಗುವುದಾಗಿ ಹೇಳುತ್ತಿದ್ದಾರೆ.
ಉದಯೋನ್ಮುಖ ಕವಿಯಾಗಿರುವ ಇವರು ಇಲ್ಲಿಯವರೆಗೆ ಒಟ್ಟು ೪೦ ಕವನಗಳನ್ನು ನಾಲ್ಕು ಗೋಡೆಯ ಮಧ್ಯೆ ಕುಳಿತು ಬರೆದಿದ್ದಾರೆ. ಅದರಲ್ಲಿ ಕೈದಿಗಳ ನಾಲ್ಕು ಗೋಡೆಯ ಮಧ್ಯದ ಜೀವನದ ಭಾವನೆಗಳನ್ನು ಪ್ರತಿಬಿಂಬಿಸುವ ಕವನಗಳೇ ಹೆಚ್ಚಗಿದ್ದು, ಅದನ್ನು ಕೃತಿಯನ್ನಾಗಿ ಹೊರತರುವ ಪ್ರಯತ್ನ ಮಾಡುತ್ತಿರುವ ಇವರಿಗೆ ಯಾರಾದರೂ ಅದನ್ನು ಮುದ್ರಿಸಲು ಮುಂದೆ ಬರಬೇಕಿದೆ.
ತನ್ನ ಮೇಲಿನ ಒಟ್ಟು ೮೪ ಪ್ರಕರಣಗಲ್ಲಿ ಮುಕ್ತನಾಗಿರುವ ಇವರು ಯಾರೇ ನ್ಯಾಯವಾದಿಗಳ ಸಹಾಯವಿಲ್ಲದೇ ಖುದ್ದು ತಾವೇ ವಕಾಲತ್ತು ವಹಿಸಿ ಎಲ್ಲ ಪ್ರಕರಣಗಳಿಂದ ನಿರ್ದೋಷಿಯಾಗಿದ್ದಾರೆ. ಆದರೆ ಇವರು ಓದಿದ್ದು ಕೇವಲ ಎಸ್‌ಎಸ್‌ಎಲ್‌ಸಿಯಾಗಿದ್ದರೂ ನುರಿತ ವಕೀಲರಂತೆ ವಕಾಲತ್ತು ವಹಿಸಬಲ್ಲ ವಿದ್ವತ್ತು ಹೊಂದಿದ್ದಾರೆ.
೧೯೮೭ ರಿಂದ ಪೊಲೀಸರು ಈತನನ್ನು ಬಂಧಿಸುತ್ತಿದ್ದಾರೆ. ಬಹುತೇಕ ಪ್ರಕರಣಗಳು ನಕಲಿ ವೈದ್ಯನ ಆರೋಪವನ್ನು ಈತನ ಮೇಲೆ ಹೊರಿಸಲಾಗಿದೆ. ರಾಜ್ಯದ ಗೋಕಾಕ, ಜಮಖಂಡಿ, ಬಾಗಲಕೋಟೆ, ದಾವಣಗೇರಿ, ಬೆಳಗಾವಿ, ಬದಾಮಿ ಹಾಗೂ ನವಲಗುಂದ ಹಾಗೂ ಮಹಾರಾಷ್ಟ್ರದ ಇಂಚಲಕರಂಜಿ, ಜಯಸಿಂಗಪೂರ, ಸಾಂಗಲಿಗಳಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಇವರು ಎಲ್ಲ ಪ್ರಕರಣಗಳಲ್ಲಿಯೂ ಪೊಲೀಸರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದಾರೆ.
ತಮ್ಮ ಕೊನೆಯ ೧೫ ತಿಂಗಳ ಜೈಲುವಾಸದ ಅಂತಿಮ ಕ್ಷಣಗಳಲ್ಲಿ ಕಾರಾಗೃಹದಲ್ಲಿದ್ದುಕೊಂಡೆ `ಪರಿವರ್ತನೆ ಜಗದ ನಿಯಮ' ಎಂಬ ಕವನವನ್ನು ರಚಿಸಿದ್ದಾರೆ. ಈ ಕವನದ ಸಾರದಂತೆಯೇ ತಾನೂ ಸಹ ಇನ್ನು ಮುಂದೆ ಪರಿವರ್ತನೆ ಆಗುವುದಾಗಿ ಹೇಳುತ್ತಿದ್ದಾರೆ.
ಸರ್ವ ಭಾಷಾ ಚತುರ:
೪೧ ವರ್ಷದ ಮನೋಜ ಅವರು ಒಟ್ಟು ೨೭ ವರ್ಷಗಳನ್ನು ಜೈಲಿನಲ್ಲಿಯೇ ಕಳೆದಿದ್ದಾರೆ. ಕನ್ನಡ, ಮರಾಠಿ, ತೆಲುಗು, ತಮಿಳು, ಹಿಂದಿ, ಇಂಗ್ಲೀಷ್, ಕೊಂಕಣಿ ಸೇರಿದಂತೆ ಒಟ್ಟು ೮ ಭಾಷೆಗಳನ್ನು ಮಾತನಾಡಬಲ್ಲವರಾಗಿದ್ದು, ದೇಶದ ಯಾವುದೇ ಮೂಲೆಗೆ ಹೋದರೂ ಅಲ್ಲಿನ ಭಾಷೆಯನ್ನು ನಾನು ಅರಿಯಬಲ್ಲೆ ಎನ್ನುತ್ತಾರೆ.
ಇವರ ಕೊನೆಯ ಪ್ರಕರಣದಲ್ಲಿ ಪವಾರ ಅವರು ಪಾಶ್ವಾಪುರದ ತಮ್ಮ ಮನೆಯಲ್ಲಿ ೨೦೦ ಮೀಟರ್ ಅಡಿಗಳಲ್ಲಿ ಚಿನ್ನಾಭರಣವನ್ನು ಕೊಡದಲ್ಲಿ ಹಾಕಿ ನೆಲೆದಲ್ಲಿ ಅವಿತು ಇಟಿದ್ದಾರೆ ಎಂದು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಆದರೆ ಈ ಆರೋಪದ ವಿರುದ್ಧ ಪ್ರತಿವಾದ ಮಂಡಿಸಿದ ಪವಾರ ಪೊಲೀಸರು ನಾನು ಒಬ್ಬನೇ ಚಿನ್ನಾಭರಗಳನ್ನು ನೆಲದಲ್ಲಿ ಹುಗಿದಿರುವುದಾಗಿ ಹೇಳುತ್ತಾರೆ. ಇವರು ಅದನ್ನು ತೆಗೆಯುವಾಗ ಒಬ್ಬರಿಗೆ ತೆಗೆಯುವುದಕ್ಕೆ ಆಗಿಲ್ಲ ಎನ್ನುವುದಾದರೆ ನಾನು ಒಬ್ಬನೇ ಹೇಗೆ ಅಲ್ಲಿ ಇಟ್ಟೆ ಎಂದಿದ್ದರು. ಅಲ್ಲದೇ ಪಾಶ್ವಾಪುರದಿಂದ ರಹವಾಸಿ ತೆಗಸಿದಾಗ ಅಲ್ಲಿ ಮನೋಜ ಪವಾರ ಎನ್ನುವ ವ್ಯಕ್ತಿ ೨೫ ವರ್ಷಗಳ ಹಿಂದೆ ಇದ್ದರು. ಈಗ ಅವರು ಇಲ್ಲಿನ ರಹವಾಸಿ ಅಲ್ಲ ಎಂದು ಪ್ರಮಾಣ ಪತ್ರ ನೀಡಲಾಗಿತ್ತು. ಹೀಗಾಗಿ ಅದೆಲ್ಲ ಆರೋಪಗಳಿಂದ ಇವರು ಮುಕ್ತರಾಗಿ ಈಗ ಹೊರಗೆ ಬಂದಿದ್ದಾರೆ.
ಕೈದಿಗಳ ಪರ ಹೋರಾಟ:
ಜೈಲಿನಿಂದ ಹೊರಗೆ ಬಂದಿರುವ ಮನೋಜ ಪವಾರ ಈಗ ಮನ ಪರಿವರ್ತನೆಗೊಂಡ ಶಿಕ್ಷಾ ಕೈದಿಗಳ ಪರ ಹೋರಾಟಕ್ಕೆ ನಿಂತಿದ್ದು, ಈ ಸಂಬಂಧ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೂ ಮೊರೆ ಹೋಗಿದ್ದಾರೆ.
ಈ ಹಿಂದೆ ಅಗಷ್ಟ್ ೧೫ ಹಾಗೂ ಜನೇವರಿ ೨೬ ರಂದು ಮನ ಪರಿವರ್ತನೆಗೊಂಡ ಶಿಕ್ಷಾ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಕಳೆದ ೪ ವರ್ಷಗಳಿಂದ ಈ ಅವಕಾಶ ಕಲ್ಪಿಸದ ಕಾರಣ ಜೈಲಿನಲ್ಲಿ ಉತ್ತಮ ನಡೆಯಿಂದ ನಡೆದುಕೊಂಡರೂ ಏನು ಉಪಯೋಗವಿಲ್ಲ ಎನ್ನುವ ಭಾವನೆ ಕೈದಿಗಳಲ್ಲಿ ಮೂಡುತ್ತಿದ್ದು, ಮನ ಪರಿವರ್ತನೆ ಅರ್ಥ ನಿಜವಾಗಿಯೂ ಯಶಸ್ವಿಯಾಗುತ್ತಿಲ್ಲ. ಆದ್ದರಿಂದ ಕಾನೂನಿನಲ್ಲಿ ತಿದ್ದುಪಡಿ ತಂದು ಉತ್ತಮ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೇ ಈ ಮನವಿ ಪ್ರತಿಯನ್ನು ರಾಜ್ಯಪಾಲರು, ಮುಖ್ಯಮಂತ್ರಿಗಳು ಸೇರಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹಾಗೂ ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರಿಗೂ ಸಲ್ಲಿಸಿದ್ದಾರೆ.
ಪರಿವರ್ತನೆ ಜಗದ ನಿಯಮ
ತೀರಿತು ಅಣ್ಣ ತೀರಿತು ತಮ್ಮ ಜೈಲು ಬಂಧನ
ನೆಮ್ಮದಿಯಿಂದ ನಾವುಗಳು ಊರು ಸೆರೋಣ
ನಗು ನಗುತಾ ಬಾಳೋಣ
ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡದೇವು ನಾವು
ಕಳೆದ ಕಹಿ ನೆನಪನ್ನೆಲ್ಲಾ ಕನಸಂತೆ ಮರೆತು ನಾವು ಮುಂದೆ ಸಾಗೋಣ
ಮುಂದಕ್ಕೆ ಸಾಗುತಾ ಗುರಿಯನ್ನು ಮುಟ್ಟುತ್ತಾ
ನಗು ನಗುತಾ ಬಾಳೋಣ
ನಾಳೆ ನಾಳೆ ಅಂತಾ ಕಳೆದೇವು ೧೦ ವರ್ಷ
ಈ ನಾಳೆಗಳೆಲ್ಲಾ ನಮಗೆ ತಂದವು ಇಂದು ಹರುಷ
ದೇವರ ನಂಬೋಣ ಜೈಲು ಅಲ್ಲ
ದೇವರ ಮನೆಯಂತೆ ಭಾವಿಸಿ ನಡೆಯೋಣ
ಹಿಂದೆ ನಾವು ಇದ್ದನ್ನು ಬಂಧಿಖಾನೆಯಲ್ಲ
ಈಗ ನಾವು ಸೇರುವುದು ಬಂಗಾರದ ಮನೆಯಣ್ಣ
ಎಲ್ಲರೂ ಕೂಡೋಣ ಅಪ್ಪ, ಅಮ್ಮ, ಹೆಂಡತಿ, ಮಕ್ಕಳ
ಜೊತೆಯಲ್ಲಿ ಬಾಳೋಣ
ಅಕ್ಕಿಂದಿರೆ ಅಣ್ಣಂದಿರೆ ನಿಮಗೊಂದು ಕಿವಿಮಾತು
ಮಾಡದಿರಿ ನೀವು ಕಾನೂನಿಗೆ ಅಪಚಾರ
ಒಳ್ಳೆಯ ನಡತೆಯಿಂದ ಶಿಕ್ಷೆಯನ್ನು ತೀರಿಸಿ
ಕಾನೂನಿಗೆ ಗೌರವ ನೀಡಿ ಪಡೆಯಿರಿ ಬಿಡುಗಡೆ
ಈ ಕವನದಲ್ಲಿ ಮನೋಜ ಪವಾರ ಅವರು ಜೈಲು ಹಕ್ಕಿಗಳ ಬಿಡುಗಡೆಯ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
No comments:
Post a Comment