Monday, January 24, 2011

ಪತ್ರಕರ್ತರ ಪರಿಸ್ಥಿತಿ ಎತ್ತ ಸಾಗಿದೆ

ಇಂದು ಪತ್ರಿಕೋದ್ಯಮ ಎತ್ತ ನಡೆದಿದೆ? ಎಂಬುದರ ಬಗ್ಗೆ ಎಲ್ಲರೂ ಮಾತನಾಡುವವರೇ ಆಗಿದ್ದಾರೆ. ಇದರ ಅರ್ಥ ಪತ್ರಕರ್ತರು ಹಾದಿ ಬಿಡುತ್ತಿದ್ದಾರೆ ಎಂದಾಗುತ್ತಿದೆ. ಹೀಗೆಂದ ಮಾತ್ರಕ್ಕೆ ಎಲ್ಲ ಪತ್ರಕರ್ತರೂ ಅವರೇ ಅಲ್ಲ ಎನ್ನುವುದೂ ಸತ್ಯ.
ಈಗ ನನ್ನ ತಲೆ ತಿನ್ನುತ್ತಿರುವ ವಿಚಾರ ಇತ್ತೀಚೆಗೆ ಪತ್ರಕರ್ತರ ಪರಿಸ್ಥಿತಿ ಎತ್ತ ಸಾಗಿದೆ ಎನ್ನುವುದರ ಬಗ್ಗೆ. ಒಂದು ಕಚೇರಿಯ ಆಯಾಗಿಂತಲೂ ಕಡೆಯಾದ ಸ್ಥಿತಿಯಲ್ಲಿ ಇಂದು ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎನ್ನುವುದು ನನ್ನ ಅಭಿಪ್ರಾಯ. ಕಾರಣ ಇತ್ತೀಚೆಗೆ ಸಣ್ಣಪುಟ್ಟದಕ್ಕೂ ಪತ್ರಿಕಾಗೋಷ್ಠಿಗಳು ನಡೆಯುತ್ತಿವೆ. ಶಾಲೆಯೊಂದರ ವಾರ್ಷಿಕೋತ್ಸವದಿಂದ ಹಿಡಿದು ರಸ್ತೆ ದುರಸ್ತಿಯ ಚಾಲನೆ ವಿಷಯದವರೆಗೂ ಎಲ್ಲದಕ್ಕೂ ಇಂದು ಪತ್ರಿಕಾಗೋಷ್ಠಿ ಕರೆಯಲಾಗುತ್ತಿದೆ.
ಇಂತಹ ಪತ್ರಿಕಾಗೋಷ್ಠಿಗಳಿಗೆ ಹೋಗುವುದಕ್ಕೆ ಕೆಲವು ಪತ್ರಕರ್ತರಿಗೆ ಮನಸ್ಸೂ ಇರುವುದಿಲ್ಲ. ಆದ್ರೆ ಬೇರೆ ಪತ್ರಿಕೆಯವರೂ ಹೋಗುತ್ತಾರಲ್ಲ. ಅವರು ಹೋಗಿ ಸುದ್ದಿ ಬರೆದರೇ ನಾಳೆ ನಮ್ಮ ಪತ್ರಿಕೆಯಲ್ಲಿ ಆ ಸುದ್ದಿ ಬರದೇ ಹೋದರೆ ನಮ್ಮ ಓದುಗರೂ ಏನು ಅನ್ನುತ್ತಾರೆ. ನಮ್ಮ ಮೇಲಿನ ಹಿರಿಯ ವರದಿಗಾರರು ನಮ್ಮನ್ನು ಬೈಯುತ್ತಾರೆ ಎಂದುಕೊಂಡು ಎಲ್ಲರೂ ಸಹ ಪತ್ರಿಕಾಗೋಷ್ಠಿಗಳಿಗೆ ಹೋಗುತ್ತಿದ್ದೇವೆ. ಇದರ ಪರಿಣಾಮವಾಗಿ ಇಂದು ವಿಶ್ವವಿದ್ಯಾಲಯಮಟ್ಟದ ಕಾಲೇಜಿನಿಂದ ಹಿಡಿದೂ ನರ್ಸರಿವರೆಗೆ ಎಲ್ಲರೂ ಪತ್ರಿಕಾಗೋಷ್ಠಿ ಕರೆದು ಅರ್ಧ ಗಂಟೆ ತಲೆ ತಿನ್ನುತ್ತಲೇ ಇದ್ದಾರೆ.
ಇದಕ್ಕೊಂದು ದಿನ ಬ್ರೇಕ್ ಬೀಳಲೇ ಬೇಕಾಗಿದೆ. ಕಾರಣ ಈ ಹಿಂದೆ ಯಾವುದಾದರೂ ಕಾರ್ಯಕ್ರವಿದ್ದರೇ ಆಯಾ ಸಂಸ್ಥೆಯ ಆಫೀಸ್ ಬಾಯ್‌ಗಳು ಅಥವಾ ಸಂಬಂಧಿಸಿದವರು ಬಂದು ಪ್ರೇಸ್ ನೋಟ್ ಇಲ್ಲವೇ ಆಮಂತ್ರಣ ಪತ್ರಿಕೆ ಕೊಟ್ಟು ಹೋಗುತ್ತಿದ್ದರು. ಅದರೆ ಈಗ ನಾವೇ ಅಲ್ಲಿಗೆ ಪತ್ರಿಕಾಗೋಷ್ಠಿಗೆಂದು ಹೋಗಿ ಆಮಂತ್ರಣ ಪತ್ರಿಕೆ ತೆಗೆದುಕೊಂಡು ಬಂದು ಸುದ್ದಿ ಬರೆಯಬೇಕಾಗಿದೆ. ಅಂದರೆ ಇದರರ್ಥ ನನ್ನ ಅಭಿಪ್ರಾಯದ ಪ್ರಕಾರ ನಾವು ಆ ಆಫೀಸ್ ಬಾಯ್‌ಗಳಂತೆಯೇ ಆದೇವು ತಾನೇ. ಅವರೇ ಪತ್ರಿಕಾ ಕಚೇರಿಗಳನ್ನು ಅಲೆಯುವುದನ್ನು ಬಿಟ್ಟು ನಮ್ಮನ್ನೆಲ್ಲಾ ಅಲ್ಲಿಗೆ ಕರೆಯಿಸಿ ಆಮಂತ್ರಣ ಪತ್ರಿಕೆ ಕೊಟ್ಟು ಅರ್ಧ ಬೆಂದ ಉಪ್ಪಿಟೋ ಇಲ್ಲ ಚಿಪ್ಸೋ ಕೊಟ್ಟು ಅರ್ಧ ಕಪ್ ಚಹಾ ಕುಡಿಸಿ ಕಳುಹಿಸುತ್ತಾರೆ.
ಆದರೆ ಇದು ನನ್ನ ಅಭಿಪ್ರಾಯದ ಪ್ರಕಾರ ಮಾತ್ರ ಯಾಕೋ ಸರಿ ಅನಿಸುತ್ತಿಲ್ಲ. ನಾನು ಈ ರೀತಿ ಅಭಿಪ್ರಾಯ ಪಡುತ್ತಿರುವುದು ತಪ್ಪು ಸಹ ಆಗಿರಬಹುದು. ಏಕೆಂದರೆ ನಾನು ಸಣ್ಣ ಮಟ್ಟದ ವರದಿಗಾರ. ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ಹಿರಿಯ ವರದಿಗಾರರೂ ಸಹ ಒಂದೂ ಮಾತೂ ಸಹ ಆಡಿಲ್ಲ. ಕೆಲವರು ಆಡಿರಬಹುದು. ಆದ್ರೆ ನಾನು ಮಾತ್ರ ಈ ರೀತಿ ತಪ್ಪು ತಿಳಿವಳಿಕೆ ಹೊಂದಿರಬೇಕು.
ಏನೇ ಇದ್ದರೂ ನನ್ನ ಮನಸ್ಸಿಗೆ ಅನ್ನಿಸಿದ್ದನ್ನು ಅಲ್ಲಿಯೇ ಇಟ್ಟುಕೊಳ್ಳಬಾರದು ಎಂದು ಕೊಂಡು ನನ್ನ ಬ್ಲಾಗ್‌ಗೆ ಇಳಿಸಿದ್ದೇನೆ. ಇದು ನನ್ನ ತಪ್ಪು ಅಭಿಪ್ರಾಯವಾಗಿದ್ದರೆ ದಯವಿಟ್ಟು ಕ್ಷಮಿಸಿ. ಸರಿಯೇ ಇದ್ದರೇ ನೀವು ಇದಕ್ಕೆ ಬ್ರೇಕ್ ಹಾಕುವ ಬಗ್ಗೆ ದಯವಿಟ್ಟು ಚಿಂತೆ ಮಾಡಿ. ನಮ್ಮ ಸಿದ್ಧಾಂತ ಹಾಗೂ ನಿಷ್ಠೆಗಳನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸೋಣ.
ಹೀಗೆಂದ ಮಾತ್ರಕ್ಕೆ ನನ್ನ ಬೈಯಬೇಡಿ ತಪ್ಪಾಗಿದ್ದರೇ ಏನೋ ಸಣ್ಣ ಹುಡುಗ ಗೊಣಗುಡುತ್ತಿದ್ದಾನೆ ಎಂದುಕೊಂಡು ಹೊಟ್ಟೆಗೆ ಹಾಕಿಕೊಳ್ಳಿ.

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...