Monday, January 10, 2011

ಮಜ್ಜಿಗೆಯಿಂದ ಗಡಿಯಾರ ನಡೆಯುತ್ತೆ


ಲಿಂಬೆ ಹಣ್ಣಿನಿಂದ ಸಣ್ಣ ಬಲ್ಬ್ ಉರಿಯುತ್ತೆ. ಮಜ್ಜಿಗೆಯಿಂದ ಗಡಿಯಾರ ನಡೆಯುತ್ತೆ. ಅಷ್ಟೇ ಏಕೆ ಬದಾಮಿ ಎಣ್ಣೆಯಿಂದ ಹಡಗು ಓಡುತ್ತದೆ.
ಇದೇನಿದು ವಿಚಿತ್ರ ಮಜ್ಜಿಗೆ ಕುಡಿದರೇ ಹೊಟ್ಟೆ ತಣ್ಣಗಾಗುತ್ತದೆ. ಲಿಂಬೆ ಹಣ್ಣಿನಿಂದ ಶರಬತ್ತು ಮಾಡಬಹುದು. ಇಲ್ಲವೇ ಮಾಟ ಮಂತ್ರಕ್ಕೆ ಬಳಸಬಹುದು. ಇದೆಲ್ಲಾ ಬಿಟ್ಟು ಬಲ್ಬ್ ಉರಿಯುತ್ತೆ ಎಂದರೇ ನಂಬುವುದು ಕಷ್ಟ. ಆದರೂ ಇದು ನಿಜ. ಈ ರೀತಿಯ ಅದ್ಬುತ್‌ಗಳನ್ನು ಮಾಡಿ ತೋರಿಸಿರುವವರ ಮಾತ್ರ ಯಾರೋ ದೊಡ್ಡ ವಿಜ್ಞಾನಿಗಳಲ್ಲ. ಬದಲಿಗೆ ಪ್ರೌಢಶಾಲೆಯ ಪುಟಾಣಿ ವಿದ್ಯಾರ್ಥಿಗಳು.
ಈ ರೀತಿಯ ಪವಾಡಗಳನ್ನು ನೋಡಬೇಕಾದರೆ ನೀವು ಬೈಲಹೊಂಗಲದಲ್ಲಿ ನಡೆಯುತ್ತಿರುವ ಪ್ರೌಢಶಾಲೆಗಳ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಬರಬೇಕು. ಆದರೆ ಇಲ್ಲಿರುವುದು ಲಿಂಬೆ ಹಣ್ಣನ ಪವಾಡವಲ್ಲ. ಬದಲಿಗೆ ಲಿಂಬೆ ಹಣ್ಣನಿಂದಲೂ ಸಹ ಶಕ್ತಿಯನ್ನು ಉತ್ಪಾದಿಸಿ ಒಂದು ಬಲ್ಪ್ ಉರಿಸಬಹುದು ಎನ್ನುವುದರ ಜೊತೆಗೆ ಹಲವು ವಿಶೇಷತೆಗಳನ್ನು ಸಂಶೋಧಿಸಿದ್ದಾರೆ ಪುಟಾಣಿ ವಿಜ್ಞಾನಿಗಳು.
ಬೈಲಹೊಂಗಲದ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಗಂಗಾಧರ ಸ್ವಾಮೀಜಿ ವಿರಕ್ತಮಠ ಆಯುರ್ವೇದಿಕ ವೈದಕೀಯ ಆವರಣದಲ್ಲಿ ನಡೆಯುತ್ತಿರುವ ಈ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯದ ಒಟ್ಟು ೩೪ ಶೈಕ್ಷಣಿಕ ಜಿಲ್ಲೆಗಳಿಂದ ಆಗಮಿಸಿರುವ ೨೦೪ ಮಾದರಿಗಳು ಇವೆ. ಇದರಲ್ಲಿ ಒದಕ್ಕಿಂತ ಒಂದು ಮಾದರಿಗಳು ಗಮನ ಸೆಳೆಯುತ್ತಿದ್ದು, ಅದರಲ್ಲಿಯೂ ಕೆಲವೊಂದು ವಿದ್ಯಾರ್ಥಿಗಳು ಯಾವುದೇ ಆಡಂಬರವಿಲ್ಲದೇ ಆಕರ್ಷನೆಗೆ ಬೆಲೆ ಕೊಡುವುದಕ್ಕಿಂತ ಸಿಂಪಲ್ ಆಗಿ ತಯಾರಿಸಿ ಹೆಚ್ಚು ಬುದ್ದಿಗೆ ಕೆಲಸ ಕೊಡುವ ಮೂಲಕ ತಮ್ಮ ಪ್ರತಿಭೆಯತ್ತ ಜನರನ್ನು ಸೆಳೆಯುತ್ತಿದ್ದಾರೆ.
ಪರಿಸರ ಶಕ್ತಿ ವಿಭಾಗದಲ್ಲಿ ಗದಗ ಪಾರ್ಶ್ವನಾಥ ಆಂಗ್ಲ ಮಾಧ್ಯಮ ಶಾಲೆಯ ೧೦ನೇ ತರಗತಿಯ ಶಿವಕುಮಾರ ಹಾಗೂ ರಕ್ಷಿತಾ ಜೈನ್ ಲಿಂಬೆ ಹಣ್ಣಿನಿಂದಲೂ ಸಹ ವಿದ್ಯುತ್ ಬಲ್ಬ್‌ಗಳನ್ನು ಉರಿಸಬಹುದು ಎನ್ನುವುದನ್ನು ಸಂಶೋಧಿಸಿದ್ದಾರೆ. ಒಂದೊಂದು ತಾಮ್ರದ ತಂತಿ ಹಾಗೂ ಪಿನ್‌ಗಳನ್ನು ಒಟ್ಟು ಆರು ಲಿಂಬೆ ಹಣ್ಣುಗಳಿಗೆ ಚುಚ್ಚಿ ಅದಕ್ಕೆ ೧.೫ ವೋಲ್ಟ್ ಸಾಮರ್ಥ್ಯದ ಸಣ್ಣ ಬಲ್ಬ್ ಅಳವಡಿಸಲಾಗಿದ್ದು, ಅದು ಉರಿಯುತ್ತಿದೆ. ಲಿಂಬೆ ಹಣ್ಣಿನಲ್ಲಿಯೂ ವಿದ್ಯುತ್‌ಚ್ಛಕ್ತಿಯಿದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.


ಈ ವಿದ್ಯಾರ್ಥಿಗಳು ಪರಿಸರದಲ್ಲಿರುವ ಕೆಲವೊಂದು ಶಕ್ತಿಗಳನ್ನು ಬಳಿಸಿಕೊಂಡರೇ ಯಾವುದೇ ಪರಿಸರ ಮಾಲಿನ್ಯವೂ ಆಗುವುದಿಲ್ಲ ಎನ್ನುವುದರ ಅರಿವು ಮೂಡಿಸಿದ್ದಾರೆ. ಹಸಿ ಬಾದಾಮಿ ಎಣ್ಣೆಯನ್ನು ಹಡಗುಗಳನ್ನು ನಡೆಸಲು ಇಂಧನವನ್ನಾಗಿ ಬಳಸಬಹುದು. ಸೌರಶಕ್ತಿಯಿಂದ ಹೆಲಿಕ್ಯಾಫ್ಟರ್ ಸಹ ನಡೆಸಬಹುದು ಎನ್ನುವುದನ್ನು ಪುಟಾಣಿ ಹೆಲಿಕ್ಯಾಫ್ಟರ್‌ನ್ನು ಸೌರಶಕ್ತಿಯ ಮೂಲಕ ಚಲಿಸಿಯೂ ತೋರಿಸುತ್ತಿದ್ದಾರೆ. ಬಯೋಗ್ಯಾಸ್, ಮಾರುತ ಶಕ್ತಿಗಳ ಬಗ್ಗೆ ಉತ್ತಮ ರೀತಿಯ ಮಾದರಿಗಳನ್ನು ತೋರಿಸಿದ್ದಾರೆ. ಇವರಿಗೆ ಶಿಕ್ಷಕ ಎಂ.ಎಚ್. ಸವದತ್ತಿ ಮಾರ್ಗದರ್ಶನ ನೀಡಿದ್ದಾರೆ.
ಮಜ್ಜಿಗೆ ಶಕ್ತಿ:
ಇನ್ನು ಎಮ್ಮೆ ಅಥವಾ ಆಕಳ ಹಾಲಿನ ಮೊಸರು ಕಡಿದು ತಯಾರಿಸುವ ಮಜ್ಜಿಗೆಯಲ್ಲಿಯೂ ಸಹ ಒಂದು ಶಕ್ತಿಯಿದೆ ಎನ್ನುವುದನ್ನು ಚಿಕ್ಕಮಗಳೂರ ಜಿಲ್ಲೆಯ ಮುಡಿಗೆರಿಯ ಸರ್ಕಾರಿ ಪ್ರೌಢಶಾಲೆಯ ಸೂಜಿತ ಹಾಗೂ ಶಶಿಕುಮಾರ ಮಾಡಿ ತೋರಿಸಿದ್ದಾರೆ. ಫ್ಲಾಸ್ಟಿಕ್ ಬಾಟಲಿಯಲ್ಲಿ ಮಜ್ಜಿಗೆ ಹಾಕಿ ಅದರಲ್ಲಿ ತೆಳುವಾದ ತಾಮ್ರ ಹಾಗೂ ಜಿಂಕ್‌ಶೀಟ (ಒಂದು ಪಾಸಿಟಿವ್ ಮತ್ತೊಂದು ನೆಗಟಿವ್ ಹಾಕಿ ಕೆಲಸ ಮಾಡುತ್ತದೆ) ತುಂಡುಗಳನ್ನು ಇಳಿಬಿಟ್ಟು, ಕೆಲವೊಂದು ತಂತಿಗಳನ್ನು ಅಳವಡಿಸಿ ವಯರಿನ ಮತ್ತೊಂದು ತುದಿಯನ್ನು ಗೋಡೆ ಗಡಿಯಾರಕ್ಕೆ ಹಾಕಬೇಕು. ಇದರಿಂದ ಆರಾಮವಾಗಿ ಗಡಿಯಾರ ನಡೆಸಬಹುದು. ಪ್ರತಿದಿನ ಮಜ್ಜಿಗೆಯನ್ನು ಮಾತ್ರ ಬದಲಿಸಬೇಕು.
ಅಲ್ಲದೇ ಇದೇ ರೀತಿಯಲ್ಲಿ ಗೋಮೂತ್ರ ಹಾಗೂ ಸಗಣಿಯಿಂದಲೂ ಸಹ ಗಡಿಯಾರವನ್ನು ನಡೆಸಬಹುದಾಗಿದ್ದು, ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರೈತರ ದಸರಾ ಸಂದರ್ಭದಲ್ಲಿಯೂ ಈ ರೀತಿಯ ಮಾದರಿಯನ್ನು ಪ್ರದರ್ಶನಕ್ಕೆ ಈಡಲಾಗಿತ್ತು. ವಿದ್ಯಾರ್ಥಿಗಳ ಈ ಸಂಶೋಧನೆಗೆ ಶಿಕ್ಷಕ ನಂಜುಂಡಸ್ವಾಮಿ ಮಾರ್ಗದರ್ಶನ ನೀಡಿದ್ದಾರೆ.
ಜೀವವೈವಿಧ್ಯ ವಿಭಾಗದಲ್ಲಿ ಹಿಂದೆ ನಮ್ಮ ಪರಿಸರ ಹೇಗಿತ್ತು. ಈಗಿನ ಪರಿಸ್ಥಿತಿ ಹೇಗೆ ನಡೆದಿದೆ. ಪರಿಸರವನ್ನು ಇದೇ ರೀತಿ ದೋಚುತ್ತಿದ್ದರೇ ಮುದೊಂದು ದಿನ ನಮ್ಮ ಭೂಮಿಯ ಸ್ಥಿತಿ ಹೇಗಾಗುತ್ತದೆ ಎಂಬ ಚಿತ್ರವಣವನ್ನು `ಅಂದು-ಇಂದು-ಮುಂದೆ' ಎಂಬ ಮೂರು ಹಂತದಲ್ಲಿ ಮೈಸೂರು ಜಿಲ್ಲೆಯ ಕೇತಪುರದ ಸರ್ಕಾರಿ ಪ್ರೌಢಶಾಲೆಯ ತನುಶ್ರೀ ಹಾಗೂ ಅರ್ಷಿತಾ ತೋರಿಸಿ ಆಕರ್ಷಕವಾಗಿ ಚಿತ್ರಿಸಿದ್ದಾರೆ. ಅಲ್ಲದೇ ಹಸಿರು ಶಕ್ತಿ ವಿಭಾಗದಲ್ಲಿ ತುಮಕೂರ ಜಿಲ್ಲೆಯ ಗಂಗಾಪುರದ ಎಪಿಸಿ ಜೆಜಿ ಹೈಸ್ಕೂಲ್‌ನ ಉಮಾಪತಿ ಮತ್ತು ಕಿರಣ ಮಾರುತ, ಜಲಶಕ್ತಿಯ ಬಳಕೆಯ ಬಗ್ಗೆ ಆಕರ್ಷಕವಾದ ಮಾದರಿ ಸಿದ್ಧಪಡಿಸಿದ್ದಾರೆ.
ಆಯುರ್ವೇದ ದರ್ಶನ:
ಇಂದು ದೇಶಿ ಔಷಧಿ ಪದ್ಧತಿಯಾದ ಆಯುರ್ವೇದ ತನ್ನದೇಯಾದ ವಿಶೇಷತೆ ಹೊಂದಿದ್ದು, ಅದರ ಬಗ್ಗೆ ಇಂದಿನ ವಿದ್ಯಾರ್ಥಿಗಳಿಗೆ ಎಷ್ಟರ ಮಟ್ಟಿಗೆ ಅರಿವು ಇದೆ ಎನ್ನುವುದನ್ನು ಯಶವಂತಪುರದ ಬಾಪು ಹೈಸ್ಕೂಲ್‌ನ ದಿಪ್ಸಿತಾ ಮತ್ತು ಹೇಮಾ ಉತ್ತಮವಾದ ಮಾದರಿ ಮೂಲಕ ತೋರಿಸಿಕೊಟ್ಟಿದ್ದಾರೆ. ಯಾವ ಸಸ್ಯದಿಂದ ಯಾವ ರೋಗ ಉಪಶಮನವಾಗುತ್ತದೆ. ಯಾವುದು ಯಾವುದಕ್ಕೆ ಉತ್ತಮ ಎನ್ನುವುದನ್ನು ಆಯಾ ಗಿಡಮೂಲಿಕೆ ಹಾಗೂ ವಸ್ತುಗಳೊಂದಿಗೆ ಒಂದು ದೊಡ್ಡ ಆಯುರ್ವೇದ ದರ್ಶನವನ್ನೇ ತೆರೆದಿಟಿದ್ದಾರೆ. ಇದು ಸಮುದಾಯಿಕ ಆರೋಗ್ಯ ವಿಭಾಗದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಇನ್ನು ಗಣಿತ ಮಾದರಿ ವಿಭಾಗ, ಸಾರಿಗೆ ಮತ್ತು ಸಂಪರ್ಕ ವಿಭಾಗ, ಕೃಷಿ ಮತ್ತು ತಂತ್ರಜ್ಞಾನ ವಿಭಾಗಗಳಲ್ಲಿಯೂ ಸಹ ಆಕರ್ಷಕವಾದ ಮಾದರಿಗಳು ಗಮನ ಸೆಳೆಯುತ್ತಿವೆ.

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...