ಇಲ್ಲಿ ಸರ್ಕಾರದ ಸಂಬಳ ಪಡೆದುಕೊಂಡು ಕೆಲಸ ಮಾಡಬೇಕಾದ ಅಧಿಕಾರಿಗಳು ಹೊರಗೆ ಸುತ್ತಾಡುತ್ತಿದ್ದರೇ ಅವರ ಸ್ಥಾನದಲ್ಲಿ ಬೇರೆ ಖಾಸಗಿ ವ್ಯಕ್ತಿಗಳು ಬಂದು ಸರ್ಕಾರಿ ದಾಖಲೆಗಳನ್ನು ಪಡೆದುಕೊಂಡು ತಮಗೆ ಬೇಕಾದವರ ಕೆಲಸ ಮಾಡಿಕೊಡುತ್ತಾರೆ. ಅಷ್ಟೇ ಏಕೆ ಆ ಅಧಿಕಾರಿಗಳ ಆಸನದ ಮೇಲೆ ಕುಳಿತುಕೊಳ್ಳುವ ಮೂಲಕ ತಾವೇ ಅಧಿಕೃತ ಅಧಿಕಾರಿಗಳೆಂಬಂತೆ ನಡೆದುಕೊಳ್ಳುತ್ತಾರೆ.
ಈ ರೀತಿ ಅಧಿಕಾರಿಗಳ ಜಾಗದಲ್ಲಿ ಕುಳಿತುಕೊಂಡು ಕೆಲಸ ಮಾಡುವವರೇನೂ ಜನಸೇವಕರಲ್ಲ. ಬದಲಿಗೆ ಜನರಿಂದ ಹಣ ಸುಲಿಗೆ ಮಾಡುವ ಮಧ್ಯವರ್ತಿಗಳು. ಬೆಳಗಾವಿ ಸರ್ಕಾರಿ ಕಚೇರಿಗಳಲ್ಲಿ ಈಗ ಮಧ್ಯವರ್ತಿಗಳ ಹಾವಳಿ ಯಾವ ಮಟ್ಟಕ್ಕೆ ಬಂದಿದೆ ಎನ್ನುವುದಕ್ಕೆ ಇದೊಂದು ನಿದರ್ಶನ.
ನಿನ್ನೆ ಮೊನ್ನೆಯವರೆಗೆ ಸರ್ಕಾರಿ ಕಚೇರಿಗಳ ಗೇಟ್‌ನಲ್ಲಿ ನಿಂತು ವ್ಯವಹಾರ ಮಾಡುತ್ತಿದ್ದ ಮಧ್ಯವರ್ತಿಗಳು ಈಗ ಸರ್ಕಾರಿ ಅಧಿಕಾರಿಗಳ ಆಸನದಲ್ಲಿಯೇ ಕುಳಿತುಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಮಟ್ಟದಲ್ಲಿ ಬೆಳಗಾವಿಯಲ್ಲಿ ಮಧ್ಯವರ್ತಿಗಳು ಬೆಳೆದಿದ್ದಾರೆಯೋ ಅಥವಾ ಅವರನ್ನು ಅಧಿಕಾರಿಗಳೇ ಬೆಳೆಸುತ್ತಿದ್ದಾರೆಯೋ? ಎನ್ನುವುದೀಗ ಬೆಳಗಾವಿ ಜನರನ್ನು ಕಾಡುತ್ತಿರುವ ಯಕ್ಷಪ್ರಶ್ನೆ.
ಸರ್ಕಾರಿ ಕೆಲಸ ದೇವರ ಕೆಲಸ ಎಂದು ತಿಳಿದುಕೊಳ್ಳಬೇಕಾದ ಅಧಿಕಾರಿಗಳು ಕಚೇರಿ ಬಿಟ್ಟು ಹೊರಗೆ ಸುತ್ತಾಡುತ್ತಿದ್ದರೇ ಇತ್ತ ಅದೇ ಅಧಿಕಾರಿಗಳ ಆಸನದಲ್ಲಿ ಮಧ್ಯವರ್ತಿಗಳು ರಾಜಾರೋಷವಾಗಿ ಕುಳಿತುಕೊಂಡು ಜನರಿಂದ ಹಣ ಸುಲಿಗೆ ಮಾಡುವ ಕೆಲಸ ಬೆಳಗಾವಿ ಕೇಂದ್ರ ಸ್ಥಾನದಲ್ಲಿರುವ ಕೆಲವೊಂದು ಕಚೇರಿಗಳಲ್ಲಿ ನಿತ್ಯವೂ ನಡೆಯುತ್ತಿದೆ. ಹೀಗಾಗಿ ಇಲ್ಲಿ ಸರ್ಕಾರಿ ಅಧಿಕಾರಿ ಯಾರು? ಮಧ್ಯವರ್ತಿಗಳು ಯಾರು? ಎಂಬ ಗೊಂದಲ ಉಂಟಾಗುತ್ತಿದೆ.
ಲೋಕಾಯುಕ್ತ ಎಸ್ಪಿ ಕಚೇರಿಯ ಕೂಗಳತೆ ದೂರದಲ್ಲಿಯೇ ಇರುವ ನಗರ ಭೂಮಾಪನ ಇಲಾಖೆಯಲ್ಲಿ ಅಧಿಕಾರಿಗಳು ಕಚೇರಿ ಬಿಟ್ಟು ಹೊರಗೆ ಸುತ್ತಾಡುತ್ತಿದ್ದರೇ ಇತ್ತ ಈಡೀ ಕಚೇರಿಯನ್ನು ನಿರ್ವಹಿಸುವವರು ಇಬ್ಬರು ಏಜೆಂಟರು. ಅದು ಯಾವ ಮಟ್ಟಿಗೆ ಅಂದರೆ ತಾವೇ ಅಧಿಕಾರಿಗಳ ಕುರ್ಚಿ ಮೇಲೆ ಕುಳಿತುಕೊಂಡು ಮಹತ್ವದ ದಾಖಲೆಗಳನ್ನು ತಾವೇ ಪಡೆದುಕೊಂಡು ಸಾರ್ವಜನಿಕರ ಸೇವೆಗೆ ನಿಂತು ಬಿಡುತ್ತಾರೆ. ಆದರೆ ಇವರೇನೂ ಉಚಿತವಾಗಿ ಸಾರ್ವಜನಿಕರ ಕೆಲಸ ಮಾಡಿಕೊಡುವುದಿಲ್ಲ. ಇಂತಹ ಅರ್ಜಿಗೆ ಇಂತಿಷ್ಟು ಎಂಬ ಮೇನು ಕಾರ್ಡ್ ಸಹ ಇವರ ಬಳಿಯಿದೆ.
ಅದರಲ್ಲಿಯೂ ಇದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೊಬ್ಬರ ಸಂಬಂಧಿಕರೊಬ್ಬರು ಇಲ್ಲಿ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಚಕಾರವೆತ್ತಬೇಕಾದ ಉಳಿದ ಸಿಬ್ಬಂದಿಯೂ ಮೌನ ವಹಿಸಿರುವ ಹಿಂದೆ ಹಲವು ಸಂಶಯಗಳು ಮೂಡುತ್ತಿವೆ.
ಈ ಕಚೇರಿಯ ಪರಿಸ್ಥಿತಿ ಹೀಗಿರಬೇಕಾದರೆ ಗುರುವಾರ ಲೋಕಾಯುಕ್ತ ಎಸ್ಪಿ ಕೆ.ಎಸ್. ನಾಯಕ ತಮ್ಮ ಅಧಿಕಾರಿಗಳೊಂದಿಗೆ ದಾಳಿ ಮಾಡಿದಾಗ ಇಬ್ಬರು ಮಧ್ಯವರ್ತಿಗಳು ಸರ್ಕಾರಿ ಸಿಬ್ಬಂದಿಯಂತೆ ರಾಜಾರೋಷವಾಗಿ ಕುಳಿತುಕೊಂಡಿದ್ದರು. ಆರಂಭದಲ್ಲಿ ಇವರನ್ನು ಸರ್ಕಾರಿ ಸಿಬ್ಬಂದಿಯೇ ಎಂದು ಲೋಕಾಯುಕ್ತರು ತಿಳಿದುಕೊಂಡಿದ್ದರು. ಒಂದು ವೇಳೆ ಇವರನ್ನು ಸರಿಯಾಗಿ ವಿಚಾರಿಸದೇ ಹೋದರೆ ಈ ಸತ್ಯ ಬಹಿರಂಗಗೊಳ್ಳುತ್ತಿರಲಿಲ್ಲ. ಆದರೆ ಅಷ್ಟೊಂದು ಸಲೀಸಾಗಿ ಲೋಕಾಯುಕ್ತರ ಕೈಯಿಂದ ತಪ್ಪಿಸಿಕೊಳ್ಳಲಾಗದೇ ಸಿಕ್ಕಿಬಿದ್ದಿದ್ದಾರೆ.
ಇದೇ ಕಚೇರಿಯಲ್ಲಿ ಕಳೆದ ಜನೇವರಿ ೨ ರಂದು ದಾಳಿ ಮಾಡಿದ್ದ ಲೋಕಾಯುಕ್ತರು ಇಲ್ಲಿ ಲೋಕೂರ ಎನ್ನುವ ಅಧಿಕಾರಿಯನ್ನು ಲಂಚ ತೆಗೆದುಕೊಳ್ಳುವಾಗ ಹಿಡಿದು ಅಮಾನತುಗೊಳಿಸಿದ್ದರು. ಆ ಬಳಿಕ ಡಿಡಿಎಲ್‌ಆರ್ ಅಧಿಕಾರಿ ಜೆ.ಆರ್. ರೂಗಿ ಕಚೇರಿಯ ಕಾರ್ಯವೈಖರಿಯ ಬಗ್ಗೆ ಎರಡು ಸಲ ನೋಟೀಸ್ ಕಳುಹಿದಾಗ `ನಾವು ಇಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡುತ್ತಿಲ್ಲ. ಒಂದು ವೇಳೆ ಅಂತವರು ಕಂಡು ಬಂದಲ್ಲಿ ಪೊಲೀಸರಿಗೆ ಒಪ್ಪಿಸುವುದಾಗಿ' ಉತ್ತರ ಬರೆದಿದ್ದರಂತೆ. ಆದರೆ ಮಧ್ಯವರ್ತಿಗಳನ್ನು ಪೊಲೀಸರಿಗೆ ಒಪ್ಪಿಸುತ್ತೇನೆ ಎಂದು ಹೇಳಿದ ಅಧಿಕಾರಿಗಳು ಈಗ ತಮ್ಮ ಖರ್ಚಿಯ ಮೇಲೆ ಕುಳಿತುಕೊಳ್ಳಲು ಅವಕಾಶ ನೀಡಿದ್ದರೂ ಎಂದರೆ ಅವರಿಂದ ಇವರಿಗೆಷ್ಟು ಲಾಭ? ಎಂಬ ಪ್ರಶ್ನೆಗಳು ಈಗ ಉದ್ಭವಿಸುತ್ತಿವೆ.
ಬೆಳಗಾವಿ ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಇದೇ ಮೊದಲೇನು ಅಲ್ಲ. ಇಲ್ಲಿನ ತಹಶೀಲ್ದಾರ ಕಚೇರಿ ಮಧ್ಯವರ್ತಿಗಳ ಪಾಲಿಗೆ ಲಕ್ಷ್ಮಿಸ್ಥಾನವಿದ್ದಂತೆ. ಅದರಲ್ಲಿಯೂ ಜನರೂ ಸಹ ಈಗ ನೇರವಾಗಿ ಅಧಿಕಾರಿಗಳ ಬಳಿಗೆ ಹೋಗುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಏಕೆಂದರೆ ಅಧಿಕಾರಿಗಳ ಬಳಿಗೆ ಹೋದರೆ ವಿನಾಕಾರಣ ಓಡಾಡಿಸುತ್ತಾರೆ. ಆದರೆ ಏಜೆಂಟರ ಬಳಿಗೆ ಹೋಗಿ ಅವರು ಕೇಳಿದಷ್ಟು ಹಣ ಕೊಟ್ಟರೆ ಸಾಕು. ಒಂದೇ ದಿನದಲ್ಲಿ ಕೆಲಸ ಮುಗಿಯುತ್ತದೆ. ಹೀಗಾಗಿ ಈಗ ಜನರು ಸಹ ನೇರವಾಗಿ ಸರ್ಕಾರಿ ಕಚೇರಿಗಳಿಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ.
ಒಟ್ಟಾರೆಯಾಗಿ ಬೆಳಗಾವಿಯಲ್ಲಿರುವ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಸ್ಥಾನವನ್ನು ಮಧ್ಯವರ್ತಿಗಳು ಅಕ್ರಮಿಸಿಕೊಳ್ಳುತ್ತಿದ್ದು, ಇದಕ್ಕೆ ಕೆಲವೊಂದು ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ. ಹೀಗಾಗಿ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸದೇ ಹೋದಲ್ಲಿ ಮುಂದೊಂದು ದಿನ ಬೆಳಗಾವಿಯ ಎಲ್ಲ ಕಚೇರಿಗಳು ಮಧ್ಯವರ್ತಿಗಳ ಕಚೇರಿಗಳಾಗಿ ಪರಿವರ್ತನೆ ಹೊಂದಬಹುದು.
No comments:
Post a Comment