`ಬೆಳಗಾವಿ' ಈಗ ಕನ್ನಡ ಚಿತ್ರರಂಗದ ಪಾಲಿಗೆ ಚಿನ್ನದ ಮೊಟ್ಟೆಯಿಡುವ ಕೋಳಿ. ಚಿತ್ರದ ಕಥೆ ಏನೇ ಇದ್ದರೂ ಬೆಳಗಾವಿಯ ಪ್ರಸ್ತಾಪವಿದ್ದರೇ ಸಾಕು ತಮ್ಮ ಚಿತ್ರ ಗೆದ್ದೆ ಗೆಲ್ಲುತ್ತದೆ ಎನ್ನುವ ವಿಶ್ವಾಸ ಈಗ ಗಾಂಧಿನಗರದವರ ಕಣ್ಣು ಕುಂದಾನಗರದ ಮೇಲೆ ಬೀಳುವಂತೆ ಮಾಡಿದೆ.
ಈ ಹಿಂದೆ ಬೆಳಗಾವಿ ಯಾವತ್ತೂ ಚಿತ್ರರಂಗದವರ ಕಣ್ಣಿಗೆ ಬಿದ್ದಿರಲಿಲ್ಲ. ಅಲ್ಲದೇ ಇಲ್ಲಿನ ಕಲಾವಿದರನ್ನು ಸಹ ಗಾಂಧಿನಗರದ ಜನ ದೂರವೇ ಇಟ್ಟಿದ್ದರು. ಜಿಲ್ಲೆಯವರಾದ ಚರಣರಾಜ್, ಶಿವರಂಜನ್, ಸದಾಶಿವ ಬ್ರಹ್ಮಾವರ, ದಿವಗಂತ ರೇಣುಕಮ್ಮ ಮುರಗೋಡ ಸೇರಿದಂತೆ ಕೊನೆ ಕೊನೆಗೆ ಏಣಗಿ ಬಾಳಪ್ಪನವರನ್ನು ಬಿಟ್ಟರೇ ಬೆಳಗಾವಿಯವರ್‍ಯಾರು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲಿಲ್ಲ ಎನ್ನುವುದಕ್ಕಿಂತ ಇಲ್ಲಿನವರೆಗೆ ಅವಕಾಶಗಳು ಕೊಡಲಿಲ್ಲ ಎನ್ನುವುರದಲ್ಲಿ ಎರಡು ಮಾತಿಲ್ಲ. ಇನ್ನು `ಜಯಂ' ಬೆಡಗಿ ಲಕ್ಷಿ ರೈ ಹೆಸರಿನ ಹಿಂದೆ ಬೆಳಗಾವಿಯವರು ಎಂದು ಹೇಳಲಾಗುತ್ತದೆಯಾದರೂ ಅದರ ಮೂಲ ಇನ್ನು ಬಹಿರಂಗವಾಗಿಲ್ಲ.
ಹೀಗಿರಬೇಕಾದರೆ ಬೆಳಗಾವಿಯವರೇ ಕೆಲವೊಂದು ಜನ ಸ್ವತಹ ಚಿತ್ರಗಳನ್ನು ನಿರ್ಮಿಸುವ ಸಾಹಸ ಮಾಡಿ ಆರಂಭದಲ್ಲಿ ಯಶಸ್ಸು ಗಳಿಸಿದರಾದರೂ ಆ ಬಳಿಕ ಮತ್ತೆ ಅತ್ತ ಕಡೆ ತಿರುಗಿ ನೋಡಲಿಲ್ಲ. ಹೀಗಾಗಿ ಗಡಿ ಜಿಲ್ಲೆ ಬೆಳಗಾವಿಗರ ಪಾಲಿಗೆ ಕನ್ನಡ ಚಿತ್ರರಂಗ ಹಾಗೂ ನಟರು ಗಗನಕುಸುಮವಾಗಿದ್ದರು. ಆದರೆ ಈಗ ಅದೆಲ್ಲವೂ ಸಾಮಾನ್ಯವಾಗಿ ಬಿಟ್ಟಿದೆ ಇದಕ್ಕೆ ಕಾರಣ ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಬೆಳಗಾವಿ ಮೋಹ ಅಂಟಿಕೊಂಡು ಬಿಟ್ಟಿದೆ.
೨೦೦೪ರಲ್ಲಿ ಕಂಠಿ ಚಿತ್ರ ಸಂಪೂರ್ಣವಾಗಿ ಇಲ್ಲಿಯೇ ಚಿತ್ರೀಕರಣಗೊಂಡಿತು. ಆದರೆ ಆ ಬಳಿಕ ಯಾರೂ ಇತ್ತಕಡೆ ಸುಳಿಯಲೇ ಇಲ್ಲ. ಆದರೆ ಯಾವಾಗ ಬೆಳಗಾವಿಯಲ್ಲಿ ವಿಶೇಷ ಅಧಿವೇಶನವನ್ನು ರಾಜ್ಯ ಸರ್ಕಾರ ನಡೆಸಿತೋ ಆ ಬಳಿಕ ಚಿತ್ರರಂಗದವರ ಪಾಲಿಗೆ ಬೆಳಗಾವಿ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಯಿತು. ಹೀಗಾಗಿ ಈಗ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಲೆಕ್ಕವಿಲ್ಲದಷ್ಟು ಚಿತ್ರಗಳ ಚಿತ್ರೀಕರಣ ನಡೆದಿದೆ.
`ಕಂಠಿ'ಗಿಂತ ಮುಂಚಿತವಾಗಿ ಜಿಲ್ಲೆಯ ಹಲವು ತಾಣಗಳಲ್ಲಿ ಕೆಲವೊಂದು ಚಿತ್ರಗಳು ಚಿತ್ರೀಕರಣಗೊಂಡಿದ್ದವು. ಅದರಲ್ಲಿ ವಿಷ್ಣುವರ್ಧನ ಅಭಿನಯದ ವೀರಪ್ಪನಾಯ್ಕ ಚಿತ್ರ ಬೈಲಹೊಂಗಲ ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಚಿತ್ರೀಕರಣಗೊಂಡಿತ್ತು. ಈಗ ಅದೇ ಚಿತ್ರ ನಿರ್ದೇಶಿಸಿದ್ದ ಎಸ್. ನಾರಾಯಣ ಹೊಸದಾಗಿ ಸುದೀಪ, ಅಂಬರೀಷ ಹಾಗೂ ಐಂದ್ರಿತಾ ರೇಯನ್ನು ಹಾಕಿಕೊಂಡು `ವೀರ ಪರಂಪರೆ' ಚಿತ್ರ ನಿರ್ದೇಶಿಸಲಿದ್ದು, ಅದರ ಬಹುತೇಕ ಚಿತ್ರೀಕರಣ ಬೆಳಗಾವಿ ಹಾಗೂ ಗೋಕಾಕನಲ್ಲಿ ನಡೆಯಲಿದೆ.
ತೆಗೆದುಕೊಂಡಿದ್ದೆ ಹೆಚ್ಚು:
ಕನ್ನಡ ಚಿತ್ರರಂಗದ ಜನ ಬೆಳಗಾವಿಯಿಂದ ತೆಗೆದುಕೊಂಡಿದ್ದೆ ಹೆಚ್ಚು ಹೊರತು ಅವರು ಇಲ್ಲಿಗೆ ಬಂದು ಬೆಳಗಾವಿಗಾಗಲಿ ಇಲ್ಲಿಯ ಕಲಾವಿದರಿಗಾಗಲಿ ಯಾವುದೇ ಸಹಾಯ ಮಾಡಿಲ್ಲ ಎನ್ನುವುದು ಇಲ್ಲಿ ಉಲ್ಲೇಖನೀಯ.
ಬೆಳಗಾವಿಗೆ ತಮ್ಮ ಚಿತ್ರದ ಚಿತ್ರೀಕರಣಕ್ಕೆ ಬರುವ ಬಹುತೇಕರು ಮೊದಲಿಗೆ ಹೇಳುವುದು `ನಾವು ಇಲ್ಲಿನ ಪ್ರತಿಭೆಗಳಿಗೆ ತಮ್ಮ ಚಿತ್ರದ ಮೂಲಕ ಅವಕಾಶ ಕಲ್ಪಿಸಿಕೊಡುತ್ತೇವೆ' ಎಂದು. ಆದರೆ ಅಸಲಿಗೆ ಅದು ನಡೆಯುವುದೇ ಇಲ್ಲ.
ಬೆಳಗಾವಿ ಇತ್ತೀಚೆಗೆ ಭಾಷೆ ಹಾಗೂ ಗಡಿ ವಿವಾದದಿಂದಾಗಿ ರಾಜ್ಯಮಟ್ಟದಲ್ಲಿ ಹೆಚ್ಚಿಗೆ ಪ್ರಚಾರವಿರುವ ಕೇಂದ್ರವಾಗಿದೆ. ಹೀಗಾಗಿ ಬೆಳಗಾವಿಯನ್ನು ಬಳಸಿಕೊಂಡು ತಮ್ಮ ಚಿತ್ರಗಳಿಗೆ ಹೆಚ್ಚಿನ ಪ್ರಚಾರ ಗಿಟ್ಟಿಸಿಕೊಳ್ಳುವ ಗಿಮಿಕ್ ಮಾಡುತ್ತಿದ್ದಾರೆ ಎಂದು ಇಲ್ಲಿನ ಸಿನಿ ರಸಿಕರು ಆರೋಪಿಸುತ್ತಿದ್ದಾರೆ.
ಈ ಹಿಂದೆ ತೆರೆಕಂಡ `ಮೋಹಿನಿ' ಚಿತ್ರದಲ್ಲಿ ಬೆಳಗಾವಿ ಕುರಿತಾದ ಒಂದು ಹಾಡನ್ನು ಅಳವಡಿಸಲಾಗಿತ್ತು. ಚಿತ್ರ ಬಿಡುಗಡೆಗೂ ಮುಂಚೆ ಈ ಹಾಡಿನ ಕುರಿತು ದೊಡ್ಡದಾಗಿ ಪ್ರಚಾರ ಮಾಡಿದಾಗ ಇದನ್ನು ಕೇಳಿ ಚಿತ್ರಮಂದಿರಕ್ಕೆ ಹೋದರೆ ಅದು ಐಟಮ್ ಸಾಂಗ್ ಆಗಿತ್ತು. ಇದೇ ರೀತಿ ಅನೇಕ ಚಿತ್ರಗಳಲ್ಲಿ ಇಲ್ಲಿನ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಂಡು ಹೋಗಿ ಅದರ ವಿಷಯದಲ್ಲಿ ದೊಡ್ಡದಾಗಿ ಪ್ರಚಾರ ಗಿಟ್ಟಿಸಿಕೊಂಡು ಆ ಬಳಿಕ ಆ ಸನ್ನಿವೇಶಗಳನ್ನು ಬಳಸಿಕೊಳ್ಳದಿರುವ ಸಾಕಷ್ಟು ಉದಾಹರಣೆಗಳಿವೆ. ಇತ್ತೀಚೆಗೆ ಬೆಳಗಾವಿ ಸಮೀಪದ ಬಾಳೆಕುಂದ್ರಿ ಹಳ್ಳಿಯಿಂದ ಆರಂಭವಾಗುವ ಚಿತ್ರ ಎಂದು ಹೇಳಿಕೊಂಡು ಪ್ರಚಾರ ಪಡೆದಿದ್ದ `ಕ್ರೇಜಿ ಕುಟುಂಬ' ಚಿತ್ರದಲ್ಲಿ ಎಲ್ಲಿಯೂ ಬಾಳೆಕುಂದ್ರಿಯಿದ್ದರಲಿಲ್ಲ.
ಪ್ರತಿಭಟನೆ:
ಕನ್ನಡ ಚಿತ್ರರಂಗದವರು ಬೆಳಗಾವಿಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಗೊತ್ತಾದ ತಕ್ಷಣ ಹಾಗೂ ಇತ್ತೀಚೆಗೆ ಜನನಿಬಿಡ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದನ್ನು ಖಂಡಿಸಿ ಜನೇವರಿಯಲ್ಲಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ `ಯಕ್ಷ' ಚಿತ್ರೀಕರಣ ನಡೆದ ಸಂದರ್ಭದಲ್ಲಿ ರಾಜೀವ ಗಾಂಧಿ ಬ್ರಿಗೇಡ್ ಸದಸ್ಯರು ಪ್ರತಿಭಟನೆ ನಡೆಸಿ ಚಿತ್ರೀಕರಣಕ್ಕೆ ಅಡ್ಡಿ ಪಡಿಸಿದ್ದರು. ಅಲ್ಲದೇ ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಟ್ಟಾರೆಯಾಗಿ ಚಿತ್ರರಂಗದ ಜನರಿಂದ ಬೆಳಗಾವಿಗೆ ಯಾವುದೇ ಲಾಭವಿಲ್ಲದೇ ಹೋದರೂ ಸಹ ಅವರನ್ನು ಬೆಳಗಾವಿಯ ಸಿನಿ ರಸಿಕರು ವಿನಮ್ರವಾಗಿಯೇ ಸ್ವಾಗತಿಸಿಕೊಳ್ಳುತ್ತಿದ್ದಾರೆ. ಆದರೆ ಇದಕ್ಕಾದರೂ ಗೌರವ ಕೊಡುವ ಸೌಜನ್ಯವನ್ನು ಚಿತ್ರರಂಗದ ಜನ ಕಲಿಯಬೇಕಿದೆ.
ಕಲಾವಿದರಿಗೆ ಕಿಮ್ಮತ್ತಿಲ್ಲ
ಬೆಳಗಾವಿಯ ಬಗ್ಗೆ ಬಹುತೇಕ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು ಹಾಗೂ ತತ್ರಂಜ್ಞರು ಕೇವಲ ಬಾಯಿಮಾತಿನಲ್ಲಿ ಮಾತ್ರ ಹೊಗಳಿಕೆ ತೋರಿಸುತ್ತಾರೆ ಹೊರತು ಇಲ್ಲಿನ ಕಲಾವಿದರಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ.
ಈ ಹಿಂದೆ ತಮ್ಮ ಸಹಜ ಅಭಿನಯದ ಮೂಲಕ ವಿವಿಧ ಚಿತ್ರಗಳಲ್ಲಿ ಹಾಗೂ ಕಿರುತೆರೆಯಲ್ಲಿ ಅಜ್ಜಿ ಪಾತ್ರಗಳಿಗೆ ಜೀವ ತುಂಬಿದ ರೇಣುಕಮ್ಮ ಮುರಗೋಡರನ್ನು ಚಿತ್ರರಂಗ ನಡೆಸಿಕೊಂಡ ಪರಿಯನ್ನು ಇನ್ನುವರೆಗೂ ಬೆಳಗಾವಿಯ ಜನತೆ ಮರೆತಿಲ್ಲ. ಇವರು ಯಾವತ್ತೂ ಅಷ್ಟು ಇಷ್ಟು ಸಂಭಾವನೆ ಕೇಳಲಿಲ್ಲ. ಕೊಟ್ಟಷ್ಟು ತೆಗೆದುಕೊಂಡಿದ್ದರು. ಆದರೆ ಇವರು ಅನಾರೋಗ್ಯಕ್ಕೆ ತುತ್ತಾದಾಗ ಚಿಕಿತ್ಸೆಗೆ ಹಣವಿಲ್ಲದೇ ಕೊರಗಬೇಕಾಗಿತ್ತು. ಆ ಸಂದರ್ಭದಲ್ಲಿ ಇವರ ಅಭಿನಯದಿಂದ ತಮ್ಮ ಚಿತ್ರಗಳಿಗೆ ಯಶಸ್ಸು ದೊರಕಿಸಿಕೊಂಡವರು ಇವರತ್ತ ಗಮನ ಹರಿಸಲಿಲ್ಲ.
ಇನ್ನು ಬೆಳಗಾವಿ ಜಿಲ್ಲೆಯವರೇ ಆದ ಸದಾಶಿವ ಬ್ರಹ್ಮಾವರ ಸಹ ಇವತ್ತು ಯಾವುದೇ ಪಾತ್ರವಿದ್ದರೂ ನಟನೆಯನ್ನು ಕಲಾಸೇವೆ ಎಂದು ತಿಳಿದುಕೊಂಡು ಯಾವತ್ತೂ ಇಷ್ಟೆ ಸಂಭಾವನೆ ಕೊಡಬೇಕು ಎಂದು ಹೇಳಿಕೊಂಡವರಲ್ಲ. ಆದರೆ ಇವರದು ನಟನೆಯಲ್ಲಿ ಎತ್ತಿದ ಕೈಯಾದರೂ ಇಲ್ಲಿಯವರೆಗೆ ಯಾವುದೇ ಪ್ರಶಸ್ತಿ-ಪುರಸ್ಕಾರಗಳನ್ನು ನೀಡುವ ಕಾಳಜಿ ಚಿತ್ರರಂಗಕ್ಕೆ ಇಲ್ಲ. ಇದೇ ರೀತಿ ಇಲ್ಲಿನವರೇಯಾದ ಚರಣರಾಜ್ ಇವತ್ತು ಕನ್ನಡದಲ್ಲಿ ಅವಕಾಶಗಳಿಲ್ಲದೇ ಪರಭಾಷಾ ಚಿತ್ರಗಳಲ್ಲಿ ನಟನೆ ಮಾಡಬೇಕಾಗಿದೆ.
Subscribe to:
Post Comments (Atom)
ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ
Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...
.jpeg)
-
ನನಗೆ ಇರುವ ಚಟಗಳಲ್ಲಿ ಟಿವಿ ನೋಡುವುದು ದೊಡ್ಡ ಚಟ. ಹೀಗಾಗಿ ಮನೆ ಹಾಗೂ ಕಚೇರಿಯಲ್ಲಿದ್ದರೂ ಸಹ ಸದಾ ಟಿವಿಯನ್ನು ನೋಡುತ್ತಲೇ ಇರುತ್ತೇನೆ. ಇನ್ನು ಹೊರಗಡೆ ಸುತ್ತಾಡುವಾಗಲೂ ...
-
ಬೆಳಗಾವಿ, ೧- ಹಣದುಬ್ಬರ ಹಾಗೂ ಬೆಲೆ ಏರಿಕೆ ಮಧ್ಯೆ ಈಗ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಚಿಲ್ಲರೆ ನಾಣ್ಯಗಳ ಅಭಾವ ಸೃಷ್ಟಿಯಾಗಿದ್ದು, ಇದನ್ನು ಕೆಲವರು ದಂಧೆಯನ್ನಾಗಿಯೂ ...
-
ರಾಜ್ಯದಲ್ಲಿ ತನ್ನ ಖಜಾನೆ ತುಂಬಿಸಿಕೊಳ್ಳುತ್ತಿರುವ ಮಲ್ಟಿಪ್ಲೆಕ್ಸ್ಗಳು, ಒಂದಲ್ಲ ಒಂದು ರೀತಿಯಲ್ಲಿ ಕನ್ನಡ ಚಿತ್ರಗಳಿಗೆ ಧಕ್ಕೆ ಮಾಡುತ್ತಲೇ ಬರುತ್ತಿವೆ. ಕನ್ನಡ ಸಿನಿಮಾ...
No comments:
Post a Comment