Sunday, February 14, 2010

ಚೀನಾ ಹ್ಯಾಂಡಸೆಟ್ ಅಬ್ಬರ

ಆ ಚೀನಾಗೂ ಈ ಚೀನಾಗೂ ಎತ್ತೆಂದೆತ್ತ ಸಂಬಂಧ. ಆ ಚೀನಾದ ಕಿರಿಕಿರಿ ಒಂದಾದರೆ. ಬೆಳಗಾವಿಯ ಚೀನಾದ ಕಿರಿಕಿರಿ ಮತ್ತೊಂದು ರೀತಿ. ಈ ಕಿರಿಕಿರಿಗೆ ಬೇಸತ್ತವರೇ ಬಹಳ ಜನ. ಇದು ಯಾವುದೇ ಚೀನಾದ ಕತೆಯಲ್ಲ. ಬೆಳಗಾವಿಯ `ರಸ್ತೆ ಕಾ ಮಾಲ್ ಸಸ್ತೆ ಮೇ' ಎನ್ನಲಾಗುತ್ತಿರುವ ಚೀನಾ ಮೊಬೈಲ್ ಸೆಟ್‌ಗಳ ಕತೆಯಿದು.ಈ ಸೆಟ್‌ಗಳನ್ನು ದೂರದಿಂದ ನೋಡಿದರೆ ಬಾರೀ ಬೆಲೆಯಿರಬಹುದು ಎನ್ನಲಾಗುತ್ತದೆ. ಆದರೆ ದುಬಾರಿ ಬೆಲೆಯ ಸೆಟ್‌ಗಳನ್ನು ಮೀರಿಸುವಷ್ಟು ಅಂದವುಳ್ಳ ಈ ಸೆಟ್‌ಗಳು ಮಾಡುವ ಕಿರಿಕಿರಿ ಮಾತ್ರ ಥರ್ಟ ದರ್ಜೆಯದು.ಈ ಚೀನಾ ಮಾಡೆಲ್ ಮೊಬೈಲ್‌ಗಳಿಂದ ಸಾರ್ವಜನಿಕರ ಸ್ಥಳಗಳಲ್ಲಿಯೇ ಮಹಿಳೆಯರ ಅಪಮಾನವಾಗುತ್ತಿದ್ದರೂ ಇದನ್ನು ನೋಡಿಕೊಂಡು ಪುರುಷ ಸಮಾಜ ಸುಮ್ಮನೆ ಕುಳಿತುಕೊಳ್ಳುತ್ತಿದೆ. ಇಷ್ಟಕ್ಕೂ ಈ ಕೆಲಸ ಮಾಡುತ್ತಿರುವುದೂ ಸಹ ಪುರಷರೇ ಎನ್ನುವುದು ವಿಪರ್ಯಾಸವಾದರೂ ಸತ್ಯ.ಚೀನಾ ಮೊಬೈಲ್‌ಗಳಲ್ಲಿ ಮಹಿಳೆಯರ ಚಿತ್ರೀಕರಣ ಮಾಡಿಕೊಂಡು ಅವುಗಳನ್ನು ಒಂದೇ ಕ್ಷಣದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಎಂಎಂಎಸ್ ಮೂಲಕ ರವಾನಿಸುವ ದೃಶ್ಯಗಳು ಇತ್ತೀಚೆಗೆ ನಗರ ಸಾರಿಗೆ ಬಸ್‌ಗಳಲ್ಲಿ ಸಾಮಾನ್ಯವಾಗಿ ಹೋಗಿದೆ. ಯುವತಿಯರು ಅಥವಾ ಮಹಿಳೆಯರು ಕುಳಿತುಕೊಳ್ಳಲು ಸೀಟ್ ಇಲ್ಲದೇ ಇದ್ದಾಗ ನಿಂತುಕೊಂಡು ಪ್ರಯಾಣಿಸುವುದು ಅನಿವಾರ್ಯ. ಇದೇ ಸಂದರ್ಭದ ಲಾಭ ಪಡೆದುಕೊಳ್ಳುವ ಕೆಲವು ಬೀದಿಕಾಮಣ್ಣರು ಅರೆಕ್ಷಣದಲ್ಲಿ ಜೇಬಿನಿಂದ ತಮ್ಮ ಮೊಬೈಲ್‌ಗಳನ್ನು ಹೊರತೆಗೆದು ನಿಂತುಕೊಂಡು ಪ್ರಯಾಣಿಸುವ ಯುವತಿಯರ ವಿಡಿಯೋ ಮಾಡಿ ತಕ್ಷಣವೇ ಬೇರೆಯವರಿಗೆ ಎಂಎಂಎಸ್ ಮಾಡುತ್ತಿದ್ದಾರೆ.ಈ ರೀತಿ ಕೃತ್ಯ ಬಹುದಿನಗಳಿಂದ ನಡೆಯುತ್ತಿದೆಯಾದರೂ ಈ ಬಗ್ಗೆ ಯಾರೂ ಧ್ವನಿ ಎತ್ತುವ ಗೋಜಿಗೆ ಹೋಗಿಲ್ಲ. ಮಹಿಳೆಯರು ತಮ್ಮ ಪಾಡಿಗೆ ತಾವು ಪ್ರಯಾಣಿಸುವ ಸಂದರ್ಭದಲ್ಲಿ ಈ ರೀತಿ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುವುದನ್ನು ಹಿಂದಿನ ಸೀಟಿನಲ್ಲಿ ಕುಳಿತುಕೊಂಡ ಭೂಪರು ಅದನ್ನು ನೋಡಿ ತಡೆಯುವುದು ಬಿಟ್ಟು `ನೋಡೋ ಎಷ್ಟ ಚಲೋ ಸೂಟಿಂಗ್ ಮಾಡಾತಾನೂ' ಎಂದು ಹಲ್ಲು ಕಿರಿಯುತ್ತಾರೆ. ಹೀಗಾಗಿ ತನ್ನ ಚಿತ್ರೀಕರಣ ಮಾಡಿಕೊಳ್ಳುತ್ತಿರುವುದು ಗೊತ್ತಾದರೂ ಸಹ ಮಾನಕ್ಕೆ ಹೆದರಿ ಮಹಿಳೆಯರು ಸುಮ್ಮನೆ ಇರಬೇಕಾಗಿದೆ.ಅದರಲ್ಲಿಯೂ ಇತ್ತೀಚೆಗೆ ಈ ರೀತಿ ವಿಡಿಯೋ ಚಿತ್ರೀಕರಣ ತೆಗೆಯುವ ಕೃತ್ಯ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಹೆಚ್ಚು ನಡೆಯುತ್ತಿದೆ. ಬೆಳಗಿನ ಹೊತ್ತು ಶಾಲಾ-ಕಾಲೇಜು ಸಮಯದಲ್ಲಿ ಬಸ್‌ನಲ್ಲಿ ನಿಂತುಕೊಂಡೆ ಪ್ರಯಾಣಿಸುವಷ್ಟು ರಷ್ ಇರುತ್ತದೆ. ಈ ಸಂದರ್ಭದಲ್ಲಿ ಈ ರೀತಿಯ ಕೃತ್ಯ ಮಾಡುವವರಿಗೆ ಇದು ಒಳ್ಳೆಯ ಅವಕಾಶ ಒದಗಿ ಬಂದಂತೆ ಆಗುತ್ತದೆ. ಎಂಎಂಎಸ್ ಹಾವಳಿ ಚೀನಾ ಮೊಬೈಲ್‌ಗಳಿಂದಲೇ ಹೆಚ್ಚಾಗುತ್ತಿದೆ ಎನ್ನುವುದಕ್ಕೆ ಕಾರಣವೂ ಇವೆ. ಕೈಗೆಟುವ ಬೆಲೆಯಲ್ಲಿ ಚೀನಾ ಮೊಬೈಲ್‌ಗಳು ಸಿಗುತ್ತಿರುವುದರಿಂದ ಯಾರೂ ಬೇಕಾದರೂ ಈ ಸೆಟ್‌ಗಳನ್ನು ಖರೀದಿಸುತ್ತಿದ್ದಾರೆ. ಈ ಬಗ್ಗೆ ಧ್ವನಿ ಎತ್ತಬೇಕಾದ ಮಹಿಳಾ ಸಂಘಟನೆಗಳೂ ಸಹ ಮೌನ ವಹಿಸಿವೆ.ಮತ್ತೊಂದು ಕಿರಿಕಿರಿ:ನಗರ ಸಾರಿಗೆ ಬಸ್‌ಗಳಲ್ಲಿ ಈ ರೀತಿ ಮಹಿಳೆಯರನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿರುವುದು ಒಂದೇಡೆಯಾದರೆ ಮತ್ತೊಂದೆಡೆ ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಚೀನಾ ಸೆಟ್ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೂ ಅತಿದೊಡ್ಡ ತಲೆನೋವಾಗಿ ಪರಿಣಮಿಸಿದೆ.ಒಂದೇಡೆ `ಪ್ರೀತಿಯ ಪಾರಿವಾಳ ಹಾರಿಹೋತೋ ಗೆಳೆಯ' ಇನ್ನೊಂದೆಡೆ `ಬಾಜು ಮನ್ಯಾಗ್ ಬಾರಿ ಐತಿ ಕೆಂಪನ್ನ ಪಡ್ಡಿ' ಹೀಗೆ ಒಂದೋ ಎರಡೋ. ಒಂದೇ ಬಸ್‌ನಲ್ಲಿ ನಾಲ್ಕೈದು ಕಡೆಯಿಂದ ಅಶ್ಲೀಲ ಪದಗಳ ಹಾಡುಗಳು ಕೇಳಿ ಬರುತ್ತವೆ. ಅದು ಸಹ ಕರ್ಕಶ ಸ್ವರದಲ್ಲಿ. ಈ ರೀತಿ ಅಶ್ಲೀಲ ಪದಗಳ ಹಾಡುಗಳನ್ನು ಮೊಬೈಲ್‌ಗಳಲ್ಲಿ ಹಾಕಿಕೊಂಡು ಮತ್ತೊಬ್ಬರಿಗೆ ಕಿರಿಕಿರಿ ಕೊಡುವವರು ಯಾರೋ ಅಜ್ಞಾನಿಗಳಲ್ಲ. ಬದಲಿಗೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಎನ್ನುವುದು ವಿಪರ್ಯಾಸ.ಇದಕ್ಕೆಲ್ಲಾ ಕಡಿವಾಣ ಯಾವಾಗ. ಎನ್ನತ್ತಾ. ಕಿವಿ ಮುಚ್ಚಿಕೊಂಡು ಪ್ರಜ್ಞಾವಂತ ನಾಗರಿಕರು ಬಸ್‌ಗಳಲ್ಲಿ ಪ್ರಯಾಣಿಸಬೇಕಾದ ಸ್ಥಿತಿ ಇದೆ.

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...