ಈತ ಹೊರಗೆ ಬಂದರೆ ನಕಲಿ ವೈದ್ಯ. ಆದರೆ ನಾಲ್ಕು ಗೋಡೆಯ ಮಧ್ಯೆ ಬಂಧಿಯಾದರೆ ಮೈ ನವಿರೇಳಿಸುವಂತೆ ಕವನಗಳನ್ನು ಬರೆಯಲ್ಲ ಉದಯೋನ್ಮುಖ ಕವಿ.
ಈಂತಹ ಅಪರೂಪದ ಕವಿ ಇರುವುದು ರಾಷ್ಟ್ರಕವಿ ದ.ರಾ. ಬೇಂದ್ರೆ ೩ ತಿಂಗಳ ಕಾಲ ಸೆರೆಮನೆವಾಸ ಅನುಭವಿಸಿರುವ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ. ಉದ್ಯಮಬಾಗ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ನಕಲಿ ವೈದ್ಯನೆಂಬ ಆರೋಪದಲ್ಲಿ ಸೆರೆಸಿಕ್ಕು ಈಗ ಕಳೆದ ೧೧ ತಿಂಗಳಿನಿಂದ ಇಲ್ಲಿ ವಿಚಾರಾಧೀನ ಕೈದಿಯಾಗಿರುವ ಮೂಲತ ಪಾಶ್ಚಾಪುರದ ಮನೋಜ್ ಪವಾರ ಎಂಬುವವರು ಈಗ ಜೈಲಿನಲ್ಲಿದ್ದುಕೊಂಡೇ ಒಟ್ಟು ೪೦ ಕವನಗಳನ್ನು ರಚಿಸಿದ್ದಾರೆ.
೧೯೯೨ ರಿಂದ ಇಲ್ಲಿಯವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳನ್ನು ಸುತ್ತಿ ಅಲ್ಲಿ ನಕಲಿ ವೈದ್ಯನಾಗಿ ಪೊಲೀಸರಿಗೆ ಸಿಕ್ಕು ಬಿದ್ದಿರುವ ಈತನ ಮೇಲೆ ಇಲ್ಲಿಯವರೆಗೆ ೪೮ ಪ್ರಕರಣಗಳು ದಾಖಲಾಗಿದ್ದವು. ವಿಶೇಷವೆಂದರೇ ಯಾವುದೇ ವಕೀಲರನ್ನು ಇಟ್ಟುಕೊಳ್ಳದೇ ತಾನೇ ಸ್ವಂತಹ ವಕಾಲತ್ತು ನಡೆಸಿರುವ ಈತ ಅಷ್ಟೂ ಕೇಸುಗಳಿಂದ ಖುಲಾಸೆಯಾಗಿದ್ದಾನೆ. ಈಗ ಉದ್ಯಮಬಾಗ ಪೊಲೀಸ್ ಠಾಣೆಯ ಕೇಸ್ ಸೇರಿದಂತೆ ಒಟ್ಟು ಮೂರು ಕೇಸ್‌ಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ.
ಇದೇ ಮನೋಜ ಪವಾರ ಈ ಹಿಂದೆ ಜಮಖಂಡಿಯಲ್ಲಿ ಸೆರೆ ಸಿಕ್ಕಾಗ `ಕರ್ನಾಟಕದಲೊಬ್ಬ ಚಾರ್ಲ್ಸ್ ಶೋಭರಾಜ್' ಎಂದು ಸಂಯುಕ್ತ ಕರ್ನಾಟಕದಲ್ಲಿ ವರದಿಯೂ ಪ್ರಕಟಗೊಂಡಿತ್ತು. ಇಂತಿಪ್ಪ ಕನ್ನಡದ ಚಾರ್ಲ್ಸ್ ಶೋಭರಾಜ್ ಓದಿದ್ದು ಕೇವಲ ಎಸ್‌ಎಸ್‌ಎಲ್‌ಸಿ. ಎಸ್‌ಎಸ್‌ಎಲ್‌ಸಿ ಓದಿಕೊಂಡು ಅನಾಮತ್ತು ೪೮ ಕೇಸ್‌ಗಳಿಂದ ಖುಲಾಸೆಯಾಗಿ ಈಗ ಮೈಮೇಲಿರುವ ಕೇಸ್‌ಗಳನ್ನು ಸಹ ಖುಲಾಸೆ ಮಾಡಿಕೊಳ್ಳುವ ಅರ್ಧ ಶತಕದ ಹೊಸ್ತಿಲಲ್ಲಿರುವಾಗಲೇ ಈತನಲ್ಲಿ ಕವಿಯೊಬ್ಬ ಉದ್ಭವಿಸಿದ್ದಾನೆ.
ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿ ವಿಚಾರಾಧೀನ ಕೈದಿಯಾಗಿ ಸೇರಿದ ಬಳಿಕ ಅದೇಕೋ ಒಂದು ದಿನ ಹೆಂಡತಿಯ ನೆನಪಾಯಿತು. ತನ್ನ ಧರ್ಮಪತ್ನಿ ಗೀತಾಳನ್ನು ಅಪಾರವಾಗಿ ಪ್ರೀತಿಸುವ ಈತನಲ್ಲಿ ಆಕೆಯ ಬಗ್ಗೆ ಕಲ್ಪಿಸಿಕೊಂಡಿದ್ದ ವಿರಹ ವೇದನೆಯ ಕನವರಿಕೆಯನ್ನು ಬರೆಯುವ ಆಸೆ ಮೂಡಿತು. ತಕ್ಷಣವೇ ಈತ ಹಾಳೆಯೊಂದನ್ನು ತೆಗೆದುಕೊಂಡು ಕೈಯಲ್ಲಿ ಪೆನ್ನು ಹಿಡಿದಾಗ ಈತನಿಂದ ಸೃಷ್ಟಿಯಾದ ಪ್ರಥಮ ಕವನದ ಹೆಸರು `ಹೃದಯ ವೇದನೆ'. ತನ್ನ ಚೊಚ್ಚಲ ಕವನದಲ್ಲಿ ಹೆಂಡತಿಯಿಂದ ದೂರವಿದ್ದು ಯಾವ ರೀತಿಯ ವೇದನೆಯನ್ನು ಅನುಭವಿಸುತ್ತಿರುವೇನು ಎನ್ನುವುದನ್ನು ವಿವರಿಸಿದ್ದಾನೆ. ಇದೇ ರೀತಿ ಮಗಳನ್ನು ಸಹ ನೆನೆಸಿಕೊಂಡು ಕವನಗಳನ್ನು ಬರೆದಿದ್ದಾನೆ.
ಆ ಬಳಿಕ ಈತನಲ್ಲಿ ಕವನಗಳನ್ನು ಬರೆಯುವ ಉತ್ಸಾಹ ಮೂಡಲಾರಂಭಿಸಿತು. ಹೀಗಾಗಿ ಸಾಮಾನ್ಯವಾಗಿ ಈತನನ್ನು ಆಕರ್ಷಿಸಿದ್ದು, ಕಾರಾಗೃಹದ ಗ್ರಂಥಾಲಯದಲ್ಲಿನ ಪುಸ್ತಕಗಳು. ಪ್ರತಿನಿತ್ಯದ ದಿನಪತ್ರಿಕೆಗಳನ್ನು ಓದುವ ಜೊತೆಗೆ ಗೀತಾ ನಾಗಭೂಷಣ ಹಾಗೂ ಇತರರ ಕಾದಂಬರಿಗಳನ್ನು ಓದಿಕೊಂಡು ನಡುನಡುವೆ ನ್ಯಾಯಾಲಯಕ್ಕೆ ಹೋಗಿ ತನ್ನ ಮೇಲಿನ ಆರೋಪದ ವಿಚಾರಣೆ ಹಾಗೂ ವಕಾಲತ್ತು ವಹಿಸುವುದು ನಡದೇ ಇತ್ತು.
ತನ್ನ ಹೆಂಡತಿಯ ನೆನಪಿನಲ್ಲಿ ಹೃದಯ ವೇದನೆಯ ಕವನ ಬರೆದ ಬಳಿಕ ನಾಲ್ಕು ಗೋಡೆಯ ಮಧ್ಯೆ ತನ್ನಂತೆಯೇ ಇರುವ ಕೈದಿಗಳ ವೇದನೆಯ ಬಗ್ಗೆ ಈತನಲ್ಲಿನ ಕವಿಯಲ್ಲಿ ಹೆಚ್ಚು ಆಸಕ್ತಿ ಸೃಷ್ಟಿಯಾಯಿತು. ಹೀಗಾಗಿ ತದನಂತರ ಕೈದಿಗಳ ಕುರಿತಾಗಿಯೇ ಹಲವಾರು ಕವನಗಳನ್ನು ಬರೆದಿದ್ದು, ಯಾವ ರೀತಿ ಕವನಗಳನ್ನು ಬರೆಯುತ್ತಾರೆಯೋ ಅಷ್ಟೇ ಸುಂದರವಾಗಿ ಹಾಡುವುದು ಸಹ ಇವರಿಗೆ ಗೊತ್ತು. ಇವರ `ನಾಲ್ಕು ಗೋಡೆಯ ಬಂಧಿಗಳು' ಎಂಬ ಕವನದಲ್ಲಿ ಕೈದಿಗಳು ಹೊರಬಂದ ತಕ್ಷಣ ಯಾವ ರೀತಿ ಮನಪರಿವರ್ತಿತರಾಗಿ ಜೀವನ ಸಾಗಿಸಬೇಕು ಎನ್ನುವುದರ ಸಾರವಿದೆ. ಇದೇ ರೀತಿ ಇನ್ನೊಂದು ಕವನವನ್ನು ಕೇಳಿದರೆ ಎಲ್ಲರ ಮನ ಕಲಕುತ್ತದೆ. ಅದು `ಓ ಬಾರಯಾ ನನ್ನಯ ಹೃದಯಾಲಯಕ್ಕೆ, ನನ್ನೊಳಗೆ ನೆಲೆಸು ಬಾ ಅಖಂಡ ಬೆಳಕೆ' ಎಂಬ ಕವನದಲ್ಲಿ ಕೈದಿಗಳ ಯಾತನೆಯ ಸಾರ ಹಾಗೂ ಕತ್ತಲೆಯಿಂದ ಬೆಳಕನ್ನು ಅರಿಸುವ ತುಡಿತವನ್ನು ಮನಮಟ್ಟುವಂತೆ ಸೃಷ್ಟಿಸಿದ್ದಾರೆ.
ಎಲ್ಲವೂ ಸೇರಿ ಇಲ್ಲಿಯವರೆಗೆ ಒಟ್ಟು ೪೦ ಕವನಗಳನ್ನು ಬರೆದಿದ್ದಾರೆ. ಇನ್ನು ೧೦ ಕವನಗಳನ್ನು ಬರೆದು ೫೦ ಕವನಗಳ ಸಂಕಲನವೊಂದನ್ನು ಹೊರತರುವ ಬಯಕೆ ಹೊಂದಿರುವ ಈತ ಈಗಿರುವ ಪ್ರಕರಣಗಳಿಂದ ಹೊರ ಬಂದ ತಕ್ಷಣವೇ ಯಾರಲ್ಲಾದರೂ ಸಹಾಯ ಕೇಳಿ ತನ್ನ ಕವನ ಸಂಕಲನವನ್ನು ಹೊರತರುವುದಾಗಿ `ಸಂಯುಕ್ತ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.
ಪ್ರತಿಭೆ ಎಲ್ಲಿಯಾದರೂ ಇರುತ್ತದೆ ಎನ್ನುವುದಕ್ಕೆ ಮನೋಜ ಪವಾರ ಉತ್ತಮ ನಿದರ್ಶನವಾಗಿದ್ದಾನೆ. ಇಲ್ಲಿಯವರೆಗೆ ತಾನು ತನ್ನ ಕವನಗಳನ್ನು ಕೇವಲ ಪುಸ್ತಕದಲ್ಲಿಯೇ ಇಟ್ಟುಕೊಂಡಿದ್ದ ಮನೋಜನಿಗೆ ಇಂದು ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನಡೆದ ದ.ರಾ. ಬೇಂದ್ರೆ ಸಾಹಿತ್ಯ ಪ್ರತಿಷ್ಠಾನದ ಕಾರ್ಯಕ್ರಮ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿತ್ತು. ೧೯೩೨ರಲ್ಲಿ ದ.ರಾ. ಬೇಂದ್ರೆಯವರು ಇದೇ ಕಾರಾಗೃಹದಲ್ಲಿದ್ದರು ಎಂಬ ವಿಷಯ ತಿಳಿದ ತಕ್ಷಣ ಮತ್ತಷ್ಟು ಮೈನವೀರೆಳೆಸಿಕೊಂಡ ಮನೋಜ `ಬೇಂದ್ರೆಯವರು ಓಡಾಡುತ್ತಿದ್ದ ಸ್ಥಳದಲ್ಲಿಯೇ ಇದ್ದುಕೊಂಡೇ ನಾನು ಕವಿಯಾಗಿದ್ದೇನೆ ಎಂದರೆ ಅದು ಹೆಮ್ಮೆಯ ಸಂಗತಿ. ಇನ್ನು ಮುಂದೆ ಬೇಂದ್ರೆಯವರು ಇಲ್ಲಿದ್ದರು ಎನ್ನುವುದೇ ನನಗೆ ಸ್ಪೂರ್ತಿಯಾಗಲಿದೆ. ಈ ಸ್ಪೂರ್ತಿಯಲ್ಲಿಯೇ ಹೊರಬಂದು ಬೇಂದ್ರೆಯವರಂತೆ ಆಗದೇ ಹೋದರೂ ಸಣ್ಣ ಕವಿಯಾಗಿಯಾದರೂ ಹೊರಹೊಮ್ಮುತ್ತೇನೆ' ಎಂದು ಹೇಳಿದ್ದಾನೆ.
ಒಟ್ಟಾರೆಯಾಗಿ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿ ಇರುವವರಲ್ಲಿಯೂ ಸಾಮಾನ್ಯ ಜನರಂತೆ ಕನಸು, ಕಲ್ಪನೆಗಳಿರುತ್ತವೆ. ಅವುಗಳಿಗೆ ರೆಕ್ಕೆ ಬಂದಾಗ ಅವರು ಸಾಹಿತ್ಯ ಲೋಕದಲ್ಲಿ ಹಕ್ಕಿಯಾಗಿ ಹಾರಬಲ್ಲರು ಎಂಬುದನ್ನು ಮನೋಜ್‌ನಿಂದ ತಿಳಿದುಕೊಳ್ಳಬಹುದು.
No comments:
Post a Comment