Monday, July 2, 2012


2702 ಬಹಳ ಹಿಂದೊಮ್ಮೆ ದಮ್ಮು ಬಿಡುಗಡೆಗೊಂಡಾಗ ಬರದಿದ್ದು,...... ಕನ್ನಡ ಚಿತ್ರ ನೋಡೋರಿಲ್ಲ: ತೆಲುಗು ಚಿತ್ರಗಳಿಗೆ ಟಿಕೆಟ್ ಸಿಗುತ್ತಿಲ್ಲ ಹುಬ್ಬಳ್ಳಿ : ಅದೊಂದು ಕಾಲವಿತ್ತು. ಉತ್ತರ ಕರ್ನಾಟಕವನ್ನು ಕನ್ನಡ ಚಿತ್ರರಂಗದ ಪಾಲಿನ ಅಕ್ಷಯಪಾತ್ರೆ ಎನ್ನಲಾಗುತ್ತಿತ್ತು. ಡಾ. ರಾಜಕುಮಾರರಂತಹ ನಟರೂ ಸಹ ತಮ್ಮ ಚಿತ್ರಗಳಿಗೆ ಹೆಚ್ಚು ನಂಬಿಕೊಂಡಿದ್ದು ಉತ್ತರ ಕರ್ನಾಟಕದ ಅಭಿಮಾನಿಗಳನ್ನೇ. ಆದರೆ ಇಂದು ಅದೆಲ್ಲವೂ ಬದಲಾಗಿ ಹೋಗಿದ್ದು, ಉತ್ತರ ಕರ್ನಟಕದ ಬಹುತೇಕ ಕಡೆ ಕನ್ನಡ ಚಿತ್ರಗಳಿಗೆ ಚಿತ್ರಮಂದಿರವೇ ಸಿಗದಂತಾಗಿವೆ. ಹೌದು ಇಂದು ಕನ್ನಡದ ಬಹುತೇಕ ಚಿತ್ರಗಳು ಉತ್ತರ ಕರ್ನಾಟಕದಲ್ಲಿ ಪ್ರದರ್ಶನವೇ ಆಗುತ್ತಿಲ್ಲ. ಆದರೆ ತೆಲುಗು ಮತ್ತು ತಮಿಳು ಚಿತ್ರಗಳು ಮಾತ್ರ ದೂರದ ಆಂಧ್ರ ಹಾಗೂ ತಮಿಳುನಾಡಿನೊಂದಿಗೆ ಈ ಭಾಗದ ಹೋಬಳಿ ಪ್ರದೇಶಗಳಲ್ಲಿನ ಚಿತ್ರಮಂದಿರಗಳಲ್ಲಿಯೂ ಏಕಕಾಲಕ್ಕೆ ಬಿಡುಗಡೆಗೊಳ್ಳುತ್ತಿವೆ. ಕನ್ನಡದಲ್ಲಿ ಯಾವುದೇ ಆದ್ಧೂರಿ ಚಿತ್ರಬಂದರೂ ಸಹ ಅದು ಜಿಲ್ಲಾ ಕೇಂದ್ರಗಳಲ್ಲಿ ಕೆಲವೊಂದಿಷ್ಟು ದಿನ ಓಡಿದ ಬಳಿಕವೇ ತಾಲೂಕು ಕೇಂದ್ರಗಳಲ್ಲಿರುವ ಸಣ್ಣಪುಟ್ಟ ಚಿತ್ರಮಂದಿರಗಳಲ್ಲಿ ಬರುತ್ತಿತ್ತು. ಆದರೆ ಇಂದು ಅಂತಹ ಸಣ್ಣಪುಟ್ಟ ಚಿತ್ರಮಂದಿರಗಳಲ್ಲಿಯೂ ಜಿಲ್ಲಾಕೇಂದ್ರಗಳೊಂದಿಗೆ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ಕನ್ನಡ ಚಿತ್ರಗಳಲ್ಲ. ಬದಲಿಗೆ ತೆಲುವು ಚಿತ್ರಗಳು. ಇನ್ನು ಬಹುತೇಕ ಕನ್ನಡ ಚಿತ್ರಗಳು ಜಿಲ್ಲಾ ಕೇಂದ್ರಕ್ಕೂ ಬರುತ್ತಿಲ್ಲ. ಇನ್ನು ತಾಲೂಕು ಕೇಂದ್ರಗಳಲ್ಲಿ ಕಾಣುವುದು ದೂರದ ಮಾತು. ಈ ಹಿಂದೆ ತೆಲುಗು ಚಿತ್ರಗಳು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಪಟ್ಟಣಗಳಲ್ಲಿ ಹಾಗೂ ತಮಿಳು ಚಿತ್ರಗಳು ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಪಟ್ಟಣಗಳಲ್ಲಿ ಮಾತ್ರ ಬಿಡುಗಡೆಯಾಗುತ್ತಿದ್ದವು. ಆದರೆ ಇಂದು ಅದು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿಯವರೆಗೂ ಬಂದಿದೆ. ಶುಕ್ರವಾರ ಬಿಡುಗಡೆಗೊಂಡಿರುವ ಜೂನಿಯರ್ ಎನ್‌ಟಿಆರ್ ಅಭಿನಯದ ತೆಲುಗು ಚಿತ್ರ ‘ದಮ್ಮು’ ಗಡಿಜಿಲ್ಲೆ ಬೆಳಗಾವಿಯೊಂದರಲ್ಲಿಯೇ ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅದರಲ್ಲಿಯೂ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದಕ್ಕೆ ಹಿಂದೇಟು ಹಾಕುವ ಹಾಗೂ ಇನ್ನುವರೆಗೆ ಒಂದೂ ಕನ್ನಡ ಚಿತ್ರ ಪ್ರದರ್ಶಿಸಿದ ಬೆಳಗಾವಿಯ ಮಲ್ಪಿಫ್ಲೆಕ್ಸ್‌ವೊಂದರಲ್ಲಿಯೂ ದಮ್ಮು ಬಂದಿದೆ. ಇನ್ನು ಹುಬ್ಬಳ್ಳಿಗೆ ಹೋಲಿಸಿದರೆ ಶುಕ್ರವಾರವೇ ಬಿಡುಗಡೆಗೊಂಡ ಮೂರು ಜನ ಪದ್ಮಶ್ರಿ ಪುರಸ್ಕೃತರು ಅಭಿನಯಿಸಿರುವ ಹಾಗೂ ಬಾಲಿವುಡ್‌ನಲ್ಲಿ ಪ್ರಿಮಿಯರ್ ಪ್ರದರ್ಶನ ಕಂಡ ‘ಪರಿ’ ಚಿತ್ರಕ್ಕೆ ಅಷ್ಟೊಂದು ಸ್ವಾಗತ ಸಿಕ್ಕಿಲ್ಲ. ಆದರೆ ಅದೇ ‘ದಮ್ಮು’ ಚಿತ್ರಕ್ಕೆ ಆದ್ದೂರಿ ಆರಂಭ ದೊರೆತಿದೆ. ಈ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರದ ಎದುರು ಶುಕ್ರವಾರ ಬೆಳಗ್ಗೆ 9 ರಿಂದಲೇ ಅಭಿಮಾನಿಗಳು ಜಮಾಯಿಸಿದ್ದರು. ಬ್ಲಾಕ್‌ನಲ್ಲಿ ಟಿಕೆಟ್ ಬೆಲೆಯಂತೂ 150ರ ಗಡಿ ದಾಟಿತ್ತು. ಅಭಿಮಾನಿಗಳು ಜೂನಿಯರ್ ಎನ್‌ಟಿಆರ್ ದೊಡ್ಡ ಬ್ಯಾನರ್‌ಗೆ ಪೂಜೆ ಸಲ್ಲಿಸಿ, ಪಟಾಕ್ಷಿ ಸಿಡಿಸಿ ತಮ್ಮ ನಟನ ಚಿತ್ರವನ್ನು ಸ್ವಾಗತಿಸಿಕೊಂಡರು. ಆದರೆ ಇತ್ತ ‘ಪರಿ’ಗೆ ಪ್ರೇಕ್ಷಕರ ಕೊರತೆ ಎದುರಾಗಿತ್ತು. ಇಂದು ದಮ್ಮು ಚಿತ್ರ ಉತ್ತರ ಕರ್ನಾಟಕದ ಇಳಕಲ್, ಬನಹಟ್ಟಿ, ಮುಧೋಳದಂತಹ ಊರುಗಳಲ್ಲಿಯೂ ಪ್ರದರ್ಶನಗೊಳ್ಳುತ್ತಿದೆ. ಆದರೆ ‘ಭೀಮಾ ತೀರದಲ್ಲಿ’ ಚಿತ್ರ ಗಡಿಜಿಲ್ಲೆ ಬೆಳಗಾವಿಯಲ್ಲಿ ಪ್ರದರ್ಶನ ಆರಂಭಿಸಿದ್ದು, ಬಿಡುಗಡೆಗೊಂಡ ಮೂರು ವಾರಗಳ ಬಳಿಕ. ಇದು ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲಿ ಸಿಗುತ್ತಿರುವ ಮಾನ್ಯತೆ. ಅಷ್ಟೇ ಅಲ್ಲದೇ ಈ ಹಿಂದೆ ಬಿಡುಗಡೆಗೊಂಡಿರುವ ಎಷ್ಟೋ ತೆಲುಗು ಚಿತ್ರಗಳು ಸಹ ಸಣ್ಣಪುಟ್ಟ ಚಿತ್ರಮಂದಿರಗಳಿಗೂ ಲಗ್ಗೆ ಇಡುತ್ತಿವೆ. ಸಾಲದೆಂಬಂತೆ ಉತ್ತರ ಕರ್ನಾಟಕವನ್ನು ದಾಟಿ ಮಹಾರಾಷ್ಟ್ರದ ಗಡಿಯನ್ನು ತಲುಪುತ್ತಿವೆ. ಆದರೆ ಇತ್ತ ಎಷ್ಟೋ ಕನ್ನಡ ಚಿತ್ರಗಳು ಉತ್ತರ ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿಯೂ ಸಹ ಪ್ರದರ್ಶನಗೊಳ್ಳುವುದಿಲ್ಲ. ಇದಕ್ಕೆ ಕನ್ನಡ ಚಿತ್ರ ಪ್ರೇಕ್ಷಕರು ಇಂದು ಪರಭಾಷಾ ಚಿತ್ರಗಳತ್ತ ವಾಲುತ್ತಿರುವುದು ಕಾರಣವೊ? ಪರಭಾಷಾ ಚಿತ್ರಗಳಲ್ಲಿರುವ ಗಟ್ಟಿತನ ಕಾರಣಗವೊ? ಇಲ್ಲವೇ ಕನ್ನಡ ಚಿತ್ರಗಳೇ ಹಾಗೆ ಬರುತ್ತಿವೆಯಾ? ಎನ್ನುವುದರ ಬಗ್ಗೆ ಚಿಂತನೆಗಳಾಗಬೇಕಿದೆ.

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...